ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಯನ್ನು ವಿರೋಧಿಸಿ ರಾಜ್ಯಾದ್ಯಂತ ಜನಜಾಗೃತಿ ಮೂಡಿಸುವ ಉದ್ದೇಶದಿಂದ “SIR ವಿರೋಧಿ ಕರ್ನಾಟಕ” ವೇದಿಕೆಯ ನೇತೃತ್ವದಲ್ಲಿ ಜೂನ್ 20ರಂದು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಬೃಹತ್ ಪ್ರತಿಭಟನಾ ಸಮಾವೇಶ ನಡೆಯಲಿದ್ದು, ಇದರ ಪ್ರಯುಕ್ತ ನಾಳೆ (ಜೂ.13) ಬೆಳಗ್ಗೆ 10.30ಕ್ಕೆ ಬೀದರ ನಗರದ ಡಾ. ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಜನಜಾಗೃತಿ ಜಾಥಾ ವಾಹನಕ್ಕೆ ಚಾಲನೆ ನೀಡಲಾಗುತ್ತಿದೆ ಎಂದು ಎದ್ದೇಳು ಕರ್ನಾಟಕ ಜಿಲ್ಲಾ ಸಂಯೋಜಕ ಓಂಪ್ರಕಾಶ ರೊಟ್ಟೆ ತಿಳಿಸಿದ್ದಾರೆ.
ಜಾಗೃತಿ ಜಾಥಾ ನಗರದ ಬಸವೇಶ್ವರ ವೃತ್ತ, ಭಗತ್ ಸಿಂಗ್ ವೃತ್ತ, ಶಿವಶರಣ ಹರಳಯ್ಯ ವೃತ್ತ ಹಾಗೂ ಮಡಿವಾಳ ಮಾಚಿದೇವರ ವೃತ್ತದ ಮಾರ್ಗವಾಗಿ ನೌಬಾದ್ ಪ್ರಥಮ ದರ್ಜೆ ಕಾಲೇಜು ಹಾಗೂ ನಂತರ ಭಾಲ್ಕಿ ಕರಡ್ಯಾಳದ ಚನ್ನಬಸವೇಶ್ವರ ಗುರುಕುಲದ ವಿದ್ಯಾರ್ಥಿಗಳಿಗೆ ಮತದಾರರ ಪಟ್ಟಿಯಲ್ಲಿ ಹೆಸರು ನೋಂದಣಿ ಮಾಡಿಸಿಕೊಳ್ಳುವ ಕುರಿತು ಜನಜಾಗೃತಿ ಮೂಡಿಸಲಿದೆ. ಬಳಿಕ ಜಾಥಾ ಬಸವಕಲ್ಯಾಣದತ್ತ ತೆರಳಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಗತಿಪರ ಸಂಘಟನೆಗಳು, ಜಾತ್ಯತೀತ ರಾಜಕೀಯ ಪಕ್ಷಗಳು, ಸಾಹಿತಿಗಳು, ಚಿಂತಕರು, ಕಲಾವಿದರು ಹಾಗೂ ವಿವಿಧ ಸಾಮಾಜಿಕ ಸಂಘಟನೆಗಳ ಒಕ್ಕೂಟವಾದ “SIR ವಿರೋಧಿ ಕರ್ನಾಟಕ” ವೇದಿಕೆ ಈ ಹೋರಾಟವನ್ನು ಸಂಘಟಿಸುತ್ತಿದೆ. ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ ಪ್ರಕ್ರಿಯೆಯು ಅಸಂವಿಧಾನಿಕ, ಅವೈಜ್ಞಾನಿಕ, ದೋಷಪೂರಿತ ಹಾಗೂ ದುರುದ್ದೇಶಪೂರಿತವಾಗಿದ್ದು, ಸಮಾಜದ ದುರ್ಬಲ ವರ್ಗಗಳು, ಮಹಿಳೆಯರು ಹಾಗೂ ಅಲ್ಪಸಂಖ್ಯಾತರ ಮತದಾನದ ಹಕ್ಕಿಗೆ ಧಕ್ಕೆ ಉಂಟುಮಾಡುವ ಸಾಧ್ಯತೆ ಇದೆ ಎಂದು ವೇದಿಕೆ ಆರೋಪಿಸಿದೆ.
ರಾಜ್ಯಾದ್ಯಂತ ‘ಎದ್ದೇಳು ಕರ್ನಾಟಕ’ ಅಭಿಯಾನದಡಿ ಐದು ಮಾರ್ಗಗಳಲ್ಲಿ ಜನಜಾಗೃತಿ ಜಾಥಾ ನಡೆಯಲಿದ್ದು, ಬೆಂಗಳೂರಿನಲ್ಲಿ ʼನಮ್ಮ ಮತ ನಮ್ಮ ಹಕ್ಕುʼ ವೇದಿಕೆ ಪ್ರಚಾರಾಂದೋಲನದ ಜವಾಬ್ದಾರಿಯನ್ನು ವಹಿಸಿಕೊಂಡಿದೆ. ಜಾಥಾಗೆ ಸಾರ್ವಜನಿಕರು, ಸಾಮಾಜಿಕ ಕಾರ್ಯಕರ್ತರು, ರಾಜಕೀಯ ಪಕ್ಷಗಳ ಮುಖಂಡರು ಹಾಗೂ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಬೆಂಬಲ ನೀಡುವಂತೆ ಕರೆ ನೀಡಲಾಗಿದೆ. ಜೂ.20ರಂದು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ನಡೆಯಲಿರುವ ಬೃಹತ್ ಪ್ರತಿರೋಧ ಸಮಾವೇಶದಲ್ಲಿ ರಾಜ್ಯದ ವಿವಿಧ ಜಿಲ್ಲೆಗಳ ಪ್ರತಿನಿಧಿಗಳು ಭಾಗವಹಿಸಿ ಚುನಾವಣಾ ಆಯೋಗಕ್ಕೆ ತಮ್ಮ ವಿರೋಧದ ಸಂದೇಶ ರವಾನಿಸಲಿದ್ದಾರೆ.
ಇದನ್ನೂ ಓದಿ : ಬೀದರ್ | ಕನೇರಿ ಶ್ರೀ ಪ್ರವೇಶ ನಿಷೇಧಿಸದಿದ್ದರೆ ಬಸವಕಲ್ಯಾಣ ಬಂದ್ : ಎಚ್ಚರಿಕೆ
ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಜನತಾಂತ್ರಿಕ ಹಕ್ಕುಗಳ ರಕ್ಷಣೆಗೆ ಬೆಂಬಲ ನೀಡುವಂತೆ ಎದ್ದೇಳು ಕರ್ನಾಟಕ ಜಿಲ್ಲಾ ಘಟಕದ ಸದಸ್ಯರಾದ ನಿಜಾಮೊದ್ದಿನ್, ಜಗದೀಶ್ವರ ಬಿರಾದಾರ, ಸಂದೀಪ್ ಮುಕಿಂದೆ, ಎಸ್‌ಐಆರ್ ವಿರೋಧಿ ಜನಾಂದೋಲನ ಸಮಿತಿ ಜಿಲ್ಲಾ ಸಂಚಾಲಕ ಶ್ರಿಕಾಂತ ಸ್ವಾಮಿ, ಆಮ್ ಆದ್ಮಿ ಪಕ್ಷದ ಜಿಲ್ಲಾಧ್ಯಕ್ಷ ಸಿದ್ದು ಫುಲಾರೆ, ಸಿಪಿಐ ಮುಖಂಡ ಬಾಬುರಾವ ಹೊನ್ನಾ, ಕಲ್ಯಾಣ ಕರ್ನಾಟಕ ಪ್ರತಿಷ್ಠಾನದ ಅಧ್ಯಕ್ಷ ಬಸವಕುಮಾರ ಪಾಟೀಲ್, ಲಿಂಗಾಯತ ಮಹಾಸಭಾ ಉಪಾಧ್ಯಕ್ಷ ಶಿವರಾಜ ಪಾಟೀಲ್ ಅತಿವಾಳ ಹಾಗೂ ಆರ್‌ಪಿಐ ಮುಖಂಡ ಮಹೇಶ್ ಗೋರನಾಳಕರ್ ಜಾಥಾ ಹಾಗೂ ಸಮಾವೇಶಕ್ಕೆ ಬೆಂಬಲ ವ್ಯಕ್ತಪಡಿಸಿದ್ದಾರೆ.




