ಚಿಕ್ಕಬಳ್ಳಾಪುರ: ಮತದಾರರ ವಿಶೇಷ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಯಲ್ಲಿ ಇರುವ ನ್ಯೂನತೆಗಳನ್ನು ಸರಿಪಡಿಸಬೇಕು ಹಾಗೂ ಯಾವುದೇ ಕಾರಣಕ್ಕೂ ನೈಜ ಮತದಾರರ ಹೆಸರನ್ನು ಮತದಾರರ ಪಟ್ಟಿಯಿಂದ ಕೈಬಿಟ್ಟು ಅವರ ಮೂಲಭೂತ ಮತದಾನದ ಹಕ್ಕನ್ನು ಕಸಿದುಕೊಳ್ಳಬಾರದು ಎಂದು ಆಗ್ರಹಿಸಿ ಎದ್ದೇಳು ಕರ್ನಾಟಕ ಹಾಗೂ ವಿವಿಧ ಪ್ರಗತಿಪರ ಸಂಘಟನೆಗಳು ರಾಜ್ಯವ್ಯಾಪಿ ಜನಜಾಗೃತಿ ಅಭಿಯಾನ ಆರಂಭಿಸಿವೆ. ಅದರ ಮುಂದುವರಿದ ಭಾಗವಾಗಿ ಎಸ್‌ಐಆರ್ ವಿರೋಧಿ ಕರ್ನಾಟಕ ಮತ್ತು ಎದ್ದೇಳು ಕರ್ನಾಟಕ ಸಂಘಟನೆಗಳ ವತಿಯಿಂದ ಜೂನ್ 13ರಿಂದ 18ರವರೆಗೆ ರಾಜ್ಯದ ಐದು ಮಾರ್ಗಗಳಲ್ಲಿ ಜನಜಾಗೃತಿ ಜಾಥಾ ಆಯೋಜಿಸಲಾಗಿದ್ದು, ಚಿಕ್ಕಬಳ್ಳಾಪುರದಲ್ಲಿ ಜೂನ್ 15ರಂದು ಜನಜಾಗೃತಿ ಕಾರ್ಯಕ್ರಮ ನಡೆಯಲಿದೆ.
ನಗರದ ಪತ್ರಕರ್ತರ ಭವನದಲ್ಲಿ ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಎದ್ದೇಳು ಕರ್ನಾಟಕ ಜಿಲ್ಲಾ ಸಂಯೋಜಕ ಶಾಮೀರ್ ಹಾಗೂ ಕೆಪಿಸಿಸಿ ಅಲ್ಪಸಂಖ್ಯಾತರ ವಿಭಾಗದ ಚಿಕ್ಕಬಳ್ಳಾಪುರ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮೊಹಮ್ಮದ್ ನೂರ್ ಉಲ್ಲಾ, ಈ ಕಾರ್ಯಕ್ರಮದಲ್ಲಿ ಕಲಾವಿದರು, ಹಿರಿಯ ಸಾಹಿತಿಗಳು, ಹೋರಾಟಗಾರರು ಹಾಗೂ ದಲಿತ ಮುಖಂಡರು ಭಾಗವಹಿಸಲಿದ್ದು, ಭಾಷಣ, ಹಾಡು ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಎಸ್‌ಐಆರ್ ಕುರಿತು ಜನರಲ್ಲಿ ಜಾಗೃತಿ ಮೂಡಿಸಲಾಗುತ್ತದೆ ಎಂದು ಹೇಳಿದರು.
ರಾಜ್ಯ ಚುನಾವಣಾ ಆಯೋಗದ ವಿಶೇಷ ಮತದಾರರ ಪರಿಷ್ಕರಣೆ ಪ್ರಕ್ರಿಯೆಗೆ ಸಂಬಂಧಿಸಿದಂತೆ ನಾಗರಿಕರು ವ್ಯಕ್ತಪಡಿಸಿರುವ ಆಕ್ಷೇಪಣೆಗಳು ಮತ್ತು ಪ್ರಶ್ನೆಗಳಿಗೆ ಸಮರ್ಪಕ ಪ್ರತಿಕ್ರಿಯೆ ದೊರೆತಿಲ್ಲ ಎಂದು ಆರೋಪಿಸಿದ ಅವರು, ಆಯೋಗದ ನಿರ್ಲಕ್ಷ್ಯ ಧೋರಣೆಯನ್ನು ಖಂಡಿಸಿ ಈ ಅಭಿಯಾನ ರೂಪಿಸಲಾಗಿದೆ ಎಂದು ತಿಳಿಸಿದರು.
ಇದೇ ವೇಳೆ ಮೊಹಮ್ಮದ್ ನೂರ್ ಉಲ್ಲಾ ಮಾತನಾಡಿ, ಕೇಂದ್ರ ಸರ್ಕಾರ ಚುನಾವಣೆ ಆಯೋಗವನ್ನು ಬಳಸಿಕೊಂಡು ಕೆಲವು ರಾಜ್ಯಗಳಲ್ಲಿ ರಾಜಕೀಯ ಲಾಭಕ್ಕಾಗಿ ಮತದಾರರ ಪಟ್ಟಿಯಿಂದ ಹೆಸರುಗಳನ್ನು ಕೈಬಿಡುವ ಪ್ರಯತ್ನ ನಡೆಸುತ್ತಿದೆ ಎಂಬ ಆರೋಪಗಳು ಕೇಳಿಬರುತ್ತಿದ್ದು, ಇಂತಹ ಪ್ರಕ್ರಿಯೆಗಳ ವಿರುದ್ಧ ಬೀದಿಗಿಳಿದು ಹೋರಾಟ ನಡೆಸಲಾಗುತ್ತಿದೆ ಎಂದು ಹೇಳಿದರು.ರಾಜ್ಯವ್ಯಾಪಿ ಜನಜಾಗೃತಿ ಅಭಿಯಾನದ ಮೂಲಕ ಮತದಾರರ ಹಕ್ಕುಗಳ ರಕ್ಷಣೆಗೆ ಒತ್ತಾಯಿಸಲಾಗುತ್ತಿದೆ ಎಂದರು.
ಎದ್ದೇಳು ಕರ್ನಾಟಕದ ಹಕ್ಕೋತ್ತಾಯಗಳು:
- ಜನವಿರೋಧಿ ಎಸ್‌ಐಆರ್ ಪ್ರಕ್ರಿಯೆ ಸ್ಥಗಿತಗೊಳಿಸಬೇಕು.
- ಜನಸ್ನೇಹಿ ಮತದಾರರ ಪಟ್ಟಿ ಪರಿಷ್ಕರಣೆ ಜಾರಿಗೆ ತರಬೇಕು.
- ಯಾವುದೇ ಕಾರಣಕ್ಕೂ ಲಾಜಿಕಲ್ ಡಿಸ್ಕ್ರಿಪೆನ್ಸಿ ಸಾಫ್ಟ್‌ವೇರ್ ಬಳಕೆ ಮಾಡಬಾರದು.
- ಮತದಾರರ ಪಟ್ಟಿಯನ್ನು ಕಡ್ಡಾಯವಾಗಿ ಮೆಷಿನ್ ರೀಡಬಲ್ ಫಾರ್ಮ್ಯಾಟ್‌ನಲ್ಲಿ ಬಿಡುಗಡೆ ಮಾಡಬೇಕು.
- ಕರಡು ಪಟ್ಟಿ ಬಳಿಕ ಗ್ರಾಮಸಭೆ ಹಾಗೂ ವಾರ್ಡ್ ಸಭೆಗಳ ಮೂಲಕ ಸಾರ್ವಜನಿಕ ಪರಿಶೀಲನೆ ನಡೆಸಬೇಕು.
- ಆಕ್ಷೇಪಣೆ ಸಲ್ಲಿಕೆ ಹಾಗೂ ಪರಿಶೀಲನೆಗೆ ಕನಿಷ್ಠ ಆರು ತಿಂಗಳ ಕಾಲಾವಕಾಶ ನೀಡಬೇಕು.
ಇದನ್ನು ಓದಿದ್ದೀರಾ..? ಚಿಂತಾಮಣಿ | ಸರ್ಕಾರಿ ಬಂಜರು ಭೂಮಿ ರಕ್ಷಿಸಲು ಹೋದ ಅಧಿಕಾರಿಗಳ ಮೇಲೆ ದರ್ಪ; ಜೆಸಿಬಿ ಕಾರ್ಯಾಚರಣೆಗೆ ಸ್ಥಳೀಯರ ತಡೆ!
ಸುದ್ದಿಗೋಷ್ಠಿಯಲ್ಲಿ ಜೀವಿಕ ಸಂಘಟನೆ ಜಿಲ್ಲಾ ಸಂಚಾಲಕ ನಾರಾಯಣಸ್ವಾಮಿ,ನಾರಾಯಣಪ್ಪ,ನಾರಾಯಣಮ್ಮ, ಸೌಭಾಗ್ಯಮ್ಮ,ಶ್ರೀನಿವಾಸ್,ಅಪ್ಸರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.




