ಬೀದರ್ ನಗರದ ಬೀದರ್ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಬ್ರಿಮ್ಸ್)ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಯುವ ವೈದ್ಯ ತುಕರಾಮ ಅವರ ಮೇಲೆ ಯುವಕರ ಗುಂಪೊಂದು ಹಲ್ಲೆ ನಡೆಸಿದ ಘಟನೆಗೆ ಭಾಲ್ಕಿ ವೈದ್ಯರ ಸಂಘ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.
ಹಲ್ಲೆಕೋರರ ವಿರುದ್ಧ ಕಠಿಣ ಕ್ರಮ ಜರುಗಿಸುವಂತೆ ಆಗ್ರಹಿಸಿ ಜಿಲ್ಲಾಧಿಕಾರಿಗಳಿಗೆ ಬರೆದ ಮನವಿ ಪತ್ರವನ್ನು ಭಾಲ್ಕಿ ತಹಸೀಲ್ದಾರ್ ಮೂಲಕ ರವಾನಿಸಿದರು.
ಭಾಲ್ಕಿ ಡಾಕ್ಟರ್ ಅಸೋಸಿಯೇಷನ್ (ಬಿಡಿಎ) ಅಧ್ಯಕ್ಷ ಡಾ.ಆರ್.ಎನ್.ಜಾಧವ ಮಾತನಾಡಿ, “ಬ್ರಿಮ್ಸ್ ಆಸ್ಪತ್ರೆಯ ಕ್ಯಾಶುವಲ್ಟಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಡಾ.ತುಕಾರಾಮ ಅವರ ಮೇಲೆ ಮಧ್ಯರಾತ್ರಿ ಚಿಕಿತ್ಸೆ ಕೊಡಿಸುವ ನೆಪದಲ್ಲಿ ಬಂದ ಪುಂಡರ ಗುಂಪು ಏಕಾಏಕಿ ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿರುವುದು ಅತ್ಯಂತ ಖಂಡನೀಯ ಕೃತ್ಯವಾಗಿದೆ” ಎಂದು ಹೇಳಿದರು.
“ವೈದ್ಯ ತುಕರಾಮ್ ಅವರ ಮೇಲೆ ಹಲ್ಲೆಗೈದವರನ್ನು ತಕ್ಷಣ ಬಂಧಿಸಿ ಕಠಿಣ ಶಿಕ್ಷೆಗೆ ಒಳಪಡಿಸಬೇಕು. ಇಂತಹ ಘಟನೆಗಳು ಮರುಕಳಿಸದಂತೆ ಜಿಲ್ಲಾಡಳಿತ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು” ಎಂದು ಒತ್ತಾಯಿಸಿದರು.
ಡಾ.ಅಮೀತ ಅಷ್ಟೂರೆ ಮಾತನಾಡಿ, “ವೈದ್ಯರನ್ನು ಎರಡನೇ ದೇವರು ಎಂದು ಗೌರವಿಸುವ ಸಮಾಜದಲ್ಲಿ ವೈದ್ಯರ ಮೇಲೆಯೇ ಹಲ್ಲೆ ನಡೆಯುತ್ತಿರುವುದು ಅಮಾನವೀಯ ಕೃತ್ಯ. ವೈದ್ಯರಿಗೆ ಸೂಕ್ತ ಭದ್ರತೆ ಇಲ್ಲದಿದ್ದರೆ ರಾತ್ರಿ ಪಾಳಿಯಲ್ಲಿ ಸೇವೆ ಸಲ್ಲಿಸಲು ವೈದ್ಯರು ಹಿಂಜರಿಯುವ ಪರಿಸ್ಥಿತಿ ಉಂಟಾಗುತ್ತದೆ” ಎಂದು ಆತಂಕ ವ್ಯಕ್ತಪಡಿಸಿದರು.
“ಡಾ.ತುಕಾರಾಮ ಮೇಲಿನ ಹಲ್ಲೆಯನ್ನು ಗಂಭೀರವಾಗಿ ಪರಿಗಣಿಸಿ, ತಪ್ಪಿತಸ್ಥರು ಯಾರೇ ಆಗಿರಲಿ ಅವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಂಡು ಗಡಿಪಾರು ಮಾಡಬೇಕು” ಎಂದು ಆಗ್ರಹಿಸಿದರು.
ಇದನ್ನೂ ಓದಿ : ಬೀದರ್ | ಮೂರು ದಿನಗಳ ಬಸವ ಸಂಸ್ಕೃತಿ ಚಿಂತನ ಶಿಬಿರಕ್ಕೆ ಚಾಲನೆ
ಈ ಸಂದರ್ಭದಲ್ಲಿ ಪ್ರಮುಖರಾದ ವೈದ್ಯರಾದ ವಸಂತ ಪವಾರ, ಶೈಲಜಾ ತಳವಾಡೆ, ನಿತೀನ ಪಾಟೀಲ್, ಯುವರಾಜ ಜಾಧವ, ಧನರಾಜ ಹುಲಸೂರೆ, ವಿಕ್ರಮ ದೇವಪ್ಪ, ವಿಲಾಸ ಕನಸೆ, ಸಜ್ಜಲ ಬಳತೆ, ಶರತ ತುಕದೆ, ಡಾ. ಗುಂಡೇರಾವ ಶೆಡೋಳೆ, ಡಾ. ಮಂಜುನಾಥ ಸ್ವಾಮಿ, ಡಾ. ಶಿವಾಜಿ ಗುರ್ದಾಳೆ, ಡಾ. ಉದ್ಧವ ಕನಸೆ, ಡಾ. ಲೋಕರೆ, ಡಾ. ಲಕ್ಷ್ಮೀಕಾಂತ ಐನಾಪೂರೆ, ಡಾ. ಸಂಗಮಕರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.




