ಯಾದಗಿರಿ ಜಿಲ್ಲೆಯ ಶಹಾಪುರ ನಗರದಲ್ಲಿ ಮೇ 18ರಂದು ಆಯೋಜಿಸಲಾದ ʼಬಸವಾದಿ ಶರಣರ ಹಿಂದೂ ಸಮಾವೇಶʼ ಎಂಬ ಕೋಮುವಾದಿ ಕಾರ್ಯಕ್ರಮ ನಡೆಸುತ್ತಿರುವುದು ಖಂಡನೀಯವಾಗಿದೆ. ಬಸವಾದಿ ಶರಣರನ್ನು ಕೋಮುವಾದಿ ವೃತ್ತದೊಳಗೆ ತೆಗೆದುಕೊಳ್ಳಲು ಹವಣಿಸುತ್ತಿರುವ ದುಷ್ಟ ಯೋಜನೆಯಾಗಿದೆ ಎಂದು ಪ್ರಗತಿಪರ ಚಿಂತಕಿ ಡಾ.ಮೀನಾಕ್ಷಿ ಬಾಳಿ ಹೇಳಿದರು.
ಮಂಗಳವಾರ ಬೀದರ್ ಪತ್ರಿಕಾಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ʼಬಸವಾದಿ ಶರಣರ ಹಿಂದೂ ಸಮಾವೇಶದ ಮೂಲಕ ಶರಣರ ಸಮಾನತೆಯ ತತ್ವಗಳಿಗೆ ವಿರುದ್ಧವಾದ ಹಿಂದುತ್ವದ ವಿಚಾರಧಾರೆಗಳನ್ನು ಸೇರಿಸುವ ಷಡ್ಯಂತ್ರ ನಡೆಯುತ್ತಿದ್ದು, ಇದಕ್ಕೆ ಪರ್ಯಾಯವಾಗಿ ವಿವಿಧ ಸಂಘಟನೆಗಳ ನೇತ್ರತ್ವದಲ್ಲಿ ಮೇ 15ರಂದು ಶಹಾಪುರದಲ್ಲಿ ʼಬಸವಾದಿ ಶರಣರ ಜಾಗೃತಿ ಸಮಾವೇಶʼ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ʼ12ನೇ ಶತಮಾನದಲ್ಲಿಯೇ ವೈದಿಕ ಪ್ರಣಿತ ಮೂಲಗಳಾಗಿದ್ದ ವೇದ, ಆಗಮ, ಪುರಾಣ ಇತ್ಯಾದಿಗಳನ್ನು ಖಂಡಿಸಿ ಬಹುದೊಡ್ಡ ತಾತ್ವಿಕ ಆಂದೋಲನ ಕೈಗೊಂಡಿದ್ದ ಶರಣರಿಗೆ ಈಗ ಮತ್ತೆ ವೈದಿಕರ ಉರುಳನ್ನು ಅವರ ಕೊರಳಿಗೆ ಹಾಕಲು ಹೆಣಗುತ್ತಿರುವುದು ಅತ್ಯಂತ ಹೇಯ ಕೃತ್ಯ. ಕರ್ನಾಟಕದ ಸಾಂಸ್ಕೃತಿಕ ನಾಯಕ ಎಂದು ಅಧಿಕೃತವಾಗಿಯೇ ಸರ್ಕಾರ ಘೋಷಿಸಿ ಬಸವಣ್ಣನವರನ್ನು ನಮ್ಮ ನಾಡಿನ ಸಾಂಸ್ಕೃತಿಕ ಪ್ರತಿನಿಧಿಯನ್ನಾಗಿ ಮಾಡಲಾಗಿದೆ. ಇಂತಹ ಬಸವಣ್ಣ ಮತ್ತು ಬಸವಾದಿ ಶರಣರನ್ನು ಹಿಂದುತ್ವದ ಕುಟಿಲ ಆವರಣದೊಳಗೆ ಸೆಳೆದುಕೊಳ್ಳಲು ಮತ್ತು ಇಡೀ ನಾಡನ್ನು ಕೋಮುವಾದಿಕರಿಸಲು ಹೆಣಗುತ್ತಿರುವ ಈ ಯೋಜನೆಯನ್ನು ನಾವು ತೀವ್ರವಾಗಿ ವಿರೋಧಿಸುತ್ತೇವೆʼ ಎಂದರು.
ʼಪ್ರಾದೇಶಿಕವಾಗಿ ಇಲ್ಲಿರುವ ಎಲ್ಲ ಮತ, ಪಂಥ, ಪರಂಪರೆಯವರು ಹಿಂದೂಸ್ಥಾನಿಗಳೆ, ಹಿಂದೂ ಎಂಬುದು ಪ್ರದೇಶವಾಚಕವೆ ಹೊರತು ಧರ್ಮ ಅಥವಾ ಸಂಸ್ಕೃತಿ ವಾಚಕವಲ್ಲ. ಹೀಗಿರುವಾಗಲೂ ಬಹುಸಂಖ್ಯಾತ ದುಡಿಯುವ ಜನಸಮುದಾಯಗಳನ್ನು ತನ್ನ ರಾಜಕೀಯ ಅಜಿಂಡಾಕ್ಕೆ ಬಳಸಿಕೊಳ್ಳಲೆಂದು ಕೋಮುವಾದಿಗಳು ಇತ್ತೀಚೆಗೆ ಹಿಂದೂ ಹೆಸರಿನಲ್ಲಿ ವರ್ಣಾಶ್ರಮ ಪದ್ಧತಿಯನ್ನು ಪುನಃ ಪ್ರತಿಷ್ಠಾಪಿಸಲು ಹೊರಟಿದ್ದಾರೆ. ಅದರ ಭಾಗವಾಗಿಯೆ ಶಹಾಪೂರದಲ್ಲಿ ಬಸವಾದಿ ಶರಣ ಹಿಂದೂ ಸಮಾವೇಶ ಮಾಡಲು ಹೊರಟಿದ್ದಾರೆ. ಅಸಲಿಗೆ ಅವರಿಗೆ ಬಸವಣ್ಣನವರ ಅಥವಾ ಶರಣರ ಬಗೆಗೆ ಭಕ್ತಿಯೂ ಇಲ್ಲ. ಅಭಿಮಾನವಂತೂ ಮೊದಲೇ ಇಲ್ಲ. ಇಂತಹ ಸಮಾವೇಶಗಳ ಮುಖಾಂತರ ಶರಣರ ಅಯಾಯಿಗಳಾಗಿರುವ ಅಸಂಖ್ಯ ದುಡಿಯುವ ಜನರನ್ನು ತಮ್ಮತ್ತ ಸೆಳೆದುಕೊಳ್ಳುವ ಹುನ್ನಾರವಾಗಿದೆ. ಶರಣರು ಪುರಾತನರೆ ಹೊರತು ಸನಾತನಿಗಳಲ್ಲʼ ಎಂದು ಹೇಳಿದರು.
ಕಲಬುರಗಿಯ ಜಾಗತಿಕ ಲಿಂಗಾಯತ ಮಹಾಸಭಾ ಜಿಲ್ಲಾಧ್ಯಕ್ಷ ಆರ್.ಜಿ.ಶೆಟಗಾರ ಮಾತನಾಡಿ, ʼಲಿಂಗ ತಾರತಮ್ಯ, ಜಾತೀಯತೆ ಮತ್ತು ಮೌಡ್ಯ ಕಂದಾಚಾರಗಳಿಂದಾಗಿ ಹಾಗೂ ಪುರೋಹಿತ ವರ್ಗವು ದೇವರ ಹೆಸರಿನಲ್ಲಿ ನಡೆಸುತ್ತಿದ್ದ ಶೋಷಣೆಯನ್ನು ಮನಗಂಡಿದ್ದ ಶರಣರು ದೇವಾಲಯಗಳನ್ನು ಧಿಕ್ಕರಿಸಿ ದೇಹವೇ ದೇವಾಲಯ, ಅಂತರಂಗದಲ್ಲಿನ ಚೈತನ್ಯವೆ ದೇವರು ಎಂದು ಘೋಷಿಸಿದರು. ಕರ್ಮ ಸಿದ್ಧಾಂತದ ಬದಲಿಗೆ ಕಾಯಕ ಸಿದ್ಧಾಂತ ಜಾರಿಗೊಳಿಸಿ ಸಮ ಸಮಾಜಕ್ಕಾಗಿ ಶರಣರು ಶ್ರಮಿಸಿದರು. ಇದೀಗ ಕೋಮುವಾದಿ ಶಕ್ತಿಗಳು ಮತ್ತೆ ಚಾತುರ್ವಣ ಧರ್ಮವನ್ನು ಖಾಯಂಗೊಳಿಸಿ ಶರಣ ಧರ್ಮವನ್ನು ನಿರ್ನಾಮ ಮಾಡಲು ಹೊರಟಿದ್ದಾರೆ. ಬಸವಣ್ಣನವರನ್ನು ಹಿಂದುತ್ವದ ಖೆಡ್ಡಾಕ್ಕೆ ಬೀಳಿಸಿ ಸಾಂಸ್ಕೃತಿಕ ನಾಯಕತ್ವವನ್ನು ವಿಕೃತಿಗೊಳಿಸಲು ಯತ್ನಿಸುತ್ತಿವೆ. ಹಿಂದೂ ಸಮಾವೇಶದ ಹೆಸರಿನಲ್ಲಿ ಶರಣರ ಅನುಯಾಯಿಗಳಿಗೆ ದ್ವಂದ್ವಕ್ಕೆ ಸಿಲುಕಿಸುವ ಪ್ರಯತ್ನ ನಡೆಸುತ್ತಿದ್ದಾರೆʼ ಎಂದು ಆರೋಪಿಸಿದರು.

ʼವೈದಿಕ ಕೋಮುವಾದಿಗಳ ಕಪಟ ಕುತಂತ್ರವನ್ನು ತಿಳಿಸಿ ಹೇಳಲು ಮೇ 15ರಂದು ಸಂಜೆ 3 ಗಂಟೆಯಿಂದ ಶಹಾಪೂರ ನಗರದ ಹಳೆಯ ಬಸ್ ನಿಲ್ದಾಣ ಎದುರಿನ ಶಾಲಾ ಮೈದಾನದಿಂದ ವಚನ ಗಾಯನದೊಂದಿಗೆ ಮೆರವಣಿಗೆ ಹೊರಟು, ಸಂಜೆ 5 ಗಂಟೆಗೆ ಸಮಾವೇಶಗೊಳ್ಳಲಿದ್ದೇವೆ. ಜಾಗತಿಕ ಲಿಂಗಾಯತ ಮಹಾಸಭಾ, ಸೌಹಾರ್ದ ಕರ್ನಾಟಕ, ಬಸವಪರ ಸಂಘಟನೆಗಳ ಒಕ್ಕೂಟ, ದಲಿತಪರ ಸಂಘಟನೆಗಳು, ಕಾಯಕಜೀವಿಗಳ ಒಕ್ಕೂಟ, ರೈತ, ಮಹಿಳಾ, ವಿದ್ಯಾರ್ಥಿ, ಕಾರ್ಮಿಕ ಸಂಘಟನೆಗಳು ನೇತ್ರತ್ವದಲ್ಲಿ ಸಮಾವೇಶ ನಡೆಯಲಿದೆ. ಕಲ್ಯಾಣ ಕರ್ನಾಟಕ ಸೇರಿದಂತೆ ನಾಡಿನ ವಿವಿಧ ಜಿಲ್ಲೆಗಳ ಮಠಾಧೀಶರು, ಬಸವತತ್ವ ಚಿಂತಕರು, ಬಸವಾಭಿಮಾನಿಗಳು ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆʼ ಎಂದು ಮಾಹಿತಿ ನೀಡಿದರು.
ಜಾಗತಿಕ ಲಿಂಗಾಯತ ಮಹಾಸಭಾದ ಸಂಚಾಲಕ ರವೀಂದ್ರ ಶಾಬಾದಿ ಮಾತನಾಡಿ, ʼಬಸವಾದಿ ಶರಣರ ಜಾಗೃತಿ ಸಮಾವೇಶದಲ್ಲಿ ನಾಡಿನ ಬಸವಪರ ಮಠಾಧೀಶರು, ವಿಚಾರವಾದಿಗಳು ಮಾತನಾಡಲಿದ್ದಾರೆ. ಶರಣ ತತ್ವಗಳ ಕುರಿತು ಜಾಗೃತಿ ಮೂಡಿಸುವುದು ಹಾಗೂ ವೈದಿಕರ ಮುಖವಾಡ ಕಳಚುವುದೇ ಸಮಾರಂಭದ ಮುಖ್ಯ ಉದ್ದೇಶವಾಗಿದೆ.
“ವೇದಕ್ಕೆ ಒರೆಯ ಕಟ್ಟುವೆ, ಶಾಸ್ತ್ರಕ್ಕೆ ನಿಗಳವನಿಕ್ಕುವೆ, ತರ್ಕದ ಬೆನ್ನ ಬಾರನೆತ್ತುವೆ, ಆಗಮದ ಮೂಗ ಕೊಯ್ಯುವೆ, ನೋಡಯ್ಯ ಮಹಾದಾನಿ ಕೂಡಲಸಂಗಮ ದೇವ ಮಾದಾರ ಚನ್ನಯ್ಯನ ಮನೆಯ ಮಗ ನಾನಯ್ಯ” ಎಂದು ವೈದಿಕರನ್ನು ಧಿಕ್ಕರಿಸಿದ ಬಸವಾದಿ ಶರಣರನ್ನು ವೈದಿಕ ಚಾತುರ್ವರ್ಣ ವ್ಯವಸ್ಥೆಯ ವಿಷ ವರ್ತುಲದಲ್ಲಿ ಸಿಲುಕಿಸುವ ಅವರ ಹುನ್ನಾರವನ್ನು ನಾವು ತಿಳುವಳಿಕೆ ಮೂಡಿಸುವ ಕಾರ್ಯಕ್ರಮದ ಮೂಲಕವೆ ಉಗ್ರವಾಗಿ ಖಂಡಿಸುತ್ತೇವೆʼ ಎಂದರು.
ಜಾಗತಿಕ ಲಿಂಗಾಯತ ಮಹಾಸಭಾದ ರಾಷ್ಟ್ರೀಯ ಉಪಾಧ್ಯಕ್ಷ ಬಸವರಾಜ ಬುಳ್ಳಾ ಮಾತನಾಡಿ, ʼಕರ್ನಾಟಕ ಸರ್ಕಾರದ ಸಾಂಸ್ಕೃತಿಕ ನಾಯಕ ವಿಶ್ವಗುರು ಬಸವಣ್ಣ ಮತ್ತು ಬಸವಾದಿ ಶರಣರನ್ನು ಹಿಂದುತ್ವದ ಕುಟಿಲ ಆವರಣದೊಳಗೆ ಸೆಳೆದುಕೊಳ್ಳಲು ಪ್ರಚೋದನೆ ನೀಡುತ್ತಿರುವ ಕನೇರಿ ಶ್ರೀಗಳನ್ನು ರಾಜ್ಯದಿಂದ ಗಡಿಪಾರು ಮಾಡಬೇಕುʼ ಎಂದು ಆಗ್ರಹಿಸಿದರು.
ಜನವಾದಿ ಮಹಿಳಾ ಸಂಘಟನೆ ಜಿಲ್ಲಾಧಕ್ಷೆ ರೇಷ್ಮಾ ಕುಂದನ್, ಮುಖಂಡ ಅಲ್ಲಮಪ್ರಭು ನಾವದಗೇರಿ ಮಾತನಾಡಿದರು.
ಇದನ್ನೂ ಓದಿ : ಬೀದರ್ | ಕೆಕೆಆರ್‌ಟಿಸಿ-ಬೈಕ್ ಡಿಕ್ಕಿ : ಇಬ್ಬರು ಬೈಕ್ ಸವಾರರು ಸಾವು
ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಶಾಂತಪ್ಪ ಪಾಟೀಲ, ಹಣಮಂತರಾಯ ಪಾಟೀಲ, ಜಗದೀಶ್ವರ ಬಿರಾದರ್, ಪ್ರಭು ಸಂತೋಷಕರ್, ಶಶಿಕಾಂತ ಡಾಂಗೆ, ಗೌಸೊದ್ದೀನ್, ಆರ್.ಪಿ.ರಾಜು ಮತ್ತಿತರರಿದ್ದರು.




