ಬೀದರ್ ಜಿಲ್ಲಾ ಕಾಂಗ್ರೆಸ್ ಸಮಿತಿಯ ನೂತನ ಅಧ್ಯಕ್ಷರಾಗಿ ಅಬ್ದುಲ್ ಮನ್ನಾನ್ ಸೇಠ್ ಅವರು ಶುಕ್ರವಾರ ಅಧಿಕಾರ ಸ್ವೀಕರಿಸಿದರು. ನಿರ್ಗಮಿತ ಅಧ್ಯಕ್ಷ ಬಸವರಾಜ ಜಾಬಶೆಟ್ಟಿ ಅವರಿಗೆ ಬೀಳ್ಕೊಡುಗೆ ನೀಡಲಾಯಿತು.
ಬೀದರ್ ನಗರದ ಖಾಸಗಿ ಕಲ್ಯಾಣ ಮಂಟಪದಲ್ಲಿ ಪದಗ್ರಹಣ ಹಾಗೂ ಬೀಳ್ಕೊಡುಗೆ ಸಮಾರಂಭ ಭವ್ಯವಾಗಿ ನಡೆಯಿತು. ಕಾರ್ಯಕ್ರಮಕ್ಕೂ ಮುನ್ನ ನಗರದಲ್ಲಿ ಕಾಂಗ್ರೆಸ್ ಕಾರ್ಯಕರ್ತರಿಂದ ಬೈಕ್ ರ‍್ಯಾಲಿ ಹಾಗೂ ನೂತನ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅಬ್ದುಲ ಮನ್ನಾನ್ ಸೇಠ್ ಅವರ ಭವ್ಯ ಮೆರವಣಿಗೆ ನಡೆಯಿತು. ರ‍್ಯಾಲಿಯುದ್ದಕ್ಕೂ ಕಾರ್ಯಕರ್ತರು ಪಕ್ಷದ ಧ್ವಜ ಹಿಡಿದು ಘೋಷಣೆಗಳನ್ನು ಕೂಗಿದರು.
ಬೀದರ್ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ. ಖಂಡ್ರೆ ಮಾತನಾಡಿ, “ಅರ್ಹ ಮತದಾರರ ಮತ ಹಕ್ಕನ್ನು ಕಸಿಯುವ ಅಪರಾಧ ಕೆಲಸ ಭಾರತೀಯ ಜನತಾ ಪಕ್ಷ ಮಾಡುತ್ತಿದೆ. ಹೇಗಾದರೂ ಮಾಡಿ ಅಧಿಕಾರಕ್ಕೆ ಬರಬೇಕೆಂದು ಕೆಳಮಟ್ಟದಲ್ಲಿ ಓಟ್ ಚೋರಿ ಮಾಡಲು ಹೊರಟಿದ್ದಾರೆ. ಭಾಲ್ಕಿ ಕ್ಷೇತ್ರದಲ್ಲಿ ಸುಮಾರು 3,200ಕ್ಕೂ ಅಧಿಕ ಮತದಾರರ ಹೆಸರುಗಳನ್ನು ಮತಪಟ್ಟಿಯಿಂದ ಅಳಿಸಬೇಕೆಂದು ಫಾರಂ-7 ಸಲ್ಲಿಸಿದ್ದರು. ಅದನ್ನು ತಿರಸ್ಕಾರ ಮಾಡಿಸಿ ನಮೂನೆ-7 ಸಲ್ಲಿಸಿದವರ ಬಿಜೆಪಿ ಕಾರ್ಯಕರ್ತರ ಮೇಲೆ ಕ್ರಿಮಿನಲ್ ಕೇಸ್ ದಾಖಲಿಸಲಾಗಿದೆ” ಎಂದು ಹೇಳಿದರು.
ದೇಶದ ಸಂವಿಧಾನ ಹಾಗೂ ಪ್ರಜಾಪ್ರಭುತ್ವ ಉಳಿಸುವ ಪಕ್ಷ ಕಾಂಗ್ರೆಸ್ ಆಗಿದೆ. ಆದರೆ ಬಿಜೆಪಿ ಪಕ್ಷದವರು ಚುನಾವಣೆ ಆಯೋಗ, ಇಡಿ, ಸಿಬಿಐ ಸೇರಿದಂತೆ ಎಲ್ಲ ಸ್ವಾಯತ್ತ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಂಡು ಪ್ರತಿಪಕ್ಷಗಳ ಮೇಲೆ ಸವಾರಿ ನಡೆಸಿ ಪ್ರಜಾಪ್ರಭುತ್ವ ಬುಡಮೇಲು ಮಾಡುತ್ತಿದ್ದಾರೆ. ಬಿಜೆಪಿಯವರಿಗೆ ಸಂವಿಧಾನ ಮೇಲೆ ನಂಬಿಕೆಯಿಲ್ಲ. ನೀಟ್ ಅಕ್ರಮ ವಿರುದ್ಧ ನಡೆಸಿದ ಜೆನ್ ಝೀ ಹೋರಾಟ ಬಿಜೆಪಿಯವರ ನಿಜಬಣ್ಣ ಬಯಲು ಮಾಡಿದರು ಎಂದು ಹೇಳಿದರು.
ಬೀದರ್ ಜಿಲ್ಲೆ ಯಾವತ್ತಿಗೂ ಕಾಂಗ್ರೆಸ್ ಭದ್ರಕೋಟೆಯಾಗಿದೆ. ಕಳೆದ ಬಾರಿ ನಮ್ಮ ಪಕ್ಷದ ನಾಲ್ಕು ಜನ ಅಭ್ಯರ್ಥಿಗಳು ವಿಧಾನಸಭೆ ಚುನಾವಣೆಯಲ್ಲಿ ಅಲ್ಪಸ್ವಲ್ಪ ಮತಗಳಿಂದ ಸೋಲು ಕಂಡರೂ ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಿದ್ದಾರೆ. ಮುಂದೆ ಡಿಸೆಂಬರ್ ತಿಂಗಳಲ್ಲಿ ಜಿಲ್ಲಾ,ತಾಲೂಕು ಪಂಚಾಯತ್ ಹಾಗೂ ಜನವರಿಯಲ್ಲಿ ಗ್ರಾಮ ಪಂಚಾಯತ್ ಚುನಾವಣೆ ಮಾಡುತ್ತೇವೆ. ಎಲ್ಲಾ ಚುನಾವಣೆಯಲ್ಲಿ ಬಿಜೆಪಿ ಸೋಲಿಸಿ ಕಾಂಗ್ರೆಸ್ ಪಕ್ಷ ಗೆಲ್ಲಲೇಬೇಕು. ನಂತರದಲ್ಲಿ ಬರುವ ಲೋಕಸಭಾ, ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಗೆಲ್ಲಿಸಲು ನೂತನ ಅಧ್ಯಕ್ಷರು ಪಣ ತೊಡಬೇಕು. ನೂತನ ಅಧ್ಯಕ್ಷರಿಗೆ ಎಲ್ಲ ರೀತಿಯ ಸಹಕಾರ ನೀಡುತ್ತೇವೆ” ಎಂದರು.

ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳು ಜನರಿಗೆ ತಲುಪಿದ್ದು, ಜನಸೇವೆ ಹಾಗೂ ಸಾಮಾಜಿಕ ನ್ಯಾಯ ಸರ್ಕಾರದ ಮೂಲಮಂತ್ರವಾಗಿದೆ. ಬೂತ್ ಮಟ್ಟದಿಂದ ಪಕ್ಷವನ್ನು ಬಲಪಡಿಸುವುದರ ಜೊತೆಗೆ ಸರ್ಕಾರದ ಜನಪರ ಯೋಜನೆಗಳನ್ನು ಮನೆ-ಮನೆಗೆ ತಲುಪಿಸುವ ಜವಾಬ್ದಾರಿ ಕಾರ್ಯಕರ್ತರ ಮೇಲಿದೆ. ಪ್ರತಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಭಾರತ ಜೋಡೊ ಯುವಕ ಸಂಘಗಳನ್ನು ರಚಿಸಬೇಕಿದೆ. ಕಾಂಗ್ರೆಸ್ ಪಕ್ಷದ ಅಸ್ಮಿತೆ ವಿಚಾರದಲ್ಲಿ ನಾವೆಲ್ಲರೂ ನಮ್ಮ ಭಿನ್ನತೆಗಳನ್ನು ಬದಿಗೊತ್ತು ಒಗ್ಗೂಡಬೇಕಾಗಿದೆ. ಮುಂದಿನ ಎಲ್ಲ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸುತ್ತೇವೆ” ಎಂದು ತಿಳಿಸಿದರು.
ಸಂಸದ ಸಾಗರ ಖಂಡ್ರೆ ಮಾತನಾಡಿ, “ಕಾಂಗ್ರೆಸ್ ಪಕ್ಷವು ಪ್ರಜಾಪ್ರಭುತ್ವ ಮತ್ತು ಸಂವಿಧಾನದ ಮೌಲ್ಯಗಳನ್ನು ಎತ್ತಿಹಿಡಿಯುತ್ತಾ ಬಂದಿದೆ. ಮುಂಬರುವ ತಾಲೂಕು, ಜಿಲ್ಲಾ ಪಂಚಾಯಿತಿ ಚುನಾವಣೆಗಳಲ್ಲಿ ಎಲ್ಲರೂ ಒಗ್ಗಟ್ಟಿನಿಂದ ಕಾರ್ಯನಿರ್ವಹಿಸಬೇಕು. ನೂತನ ಅಧ್ಯಕ್ಷರ ನೇತೃತ್ವದಲ್ಲಿ ಪಕ್ಷದ ಸಂಘಟನೆ ತಳಮಟ್ಟದಲ್ಲಿ ಮತ್ತಷ್ಟು ಬಲಗೊಳ್ಳಬೇಕು ಎಂದರು. ಪಕ್ಷ ವಿರೋಧಿ ಚಟುವಟಿಕೆಗಳಲ್ಲಿ ತೊಡಗುವವರ ವಿರುದ್ಧ ಯಾವುದೇ ತಾರತಮ್ಯವಿಲ್ಲದೆ ಸೂಕ್ತ ಕ್ರಮ ಕೈಗೊಳ್ಳಬೇಕು. ನೂತನ ಅಧ್ಯಕ್ಷ ಅಬ್ದುಲ್ ಮನ್ನಾನ್ ಸೇಠ ಅವರು ಕನ್ನಡ ಭಾಷೆ ಕಲಿತು, ಕನ್ನಡದಲ್ಲಿಯೇ ಮಾತಾಡಬೇಕು” ಎಂದು ಸಲಹೆ ನೀಡಿದರು.
ವಿಧಾನ ಪರಿಷತ್ ಸದಸ್ಯ ಡಾ.ಚಂದ್ರಶೇಖರ್ ಪಾಟೀಲ್ ಮಾತನಾಡಿ, “ಕಾಂಗ್ರೆಸ್‌ಗೆ ಸುದೀರ್ಘ ಇತಿಹಾಸವಿದ್ದು, ಎಲ್ಲ ಸಮುದಾಯಗಳಿಗೂ ಸಮಾನತೆ ಮತ್ತು ಗೌರವ ನೀಡುವ ಪಕ್ಷವಾಗಿದೆ. ಕಾರ್ಯಕರ್ತರ ಶ್ರಮವೇ ಪಕ್ಷದ ನಿಜವಾದ ಶಕ್ತಿ. ಬೂತ್ ಮಟ್ಟದಿಂದ ಸಂಘಟನೆಯನ್ನು ಬಲಪಡಿಸಲು ಎಲ್ಲರೂ ಒಗ್ಗೂಡಿ ಕಾರ್ಯನಿರ್ವಹಿಸಬೇಕು” ಎಂದರು.
ಮಾಜಿ ಸಚಿವ ರಾಜಶೇಖರ ಪಾಟೀಲ ಮಾತನಾಡಿ, “ಬೀದರ್ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸುದೀರ್ಘ ಇತಿಹಾಸ ಮತ್ತು ಗಟ್ಟಿ ನೆಲೆ ಇದೆ. ನಾಯಕರಲ್ಲಿ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳಿದ್ದರೂ ಪಕ್ಷದ ಹಿತ ಹಾಗೂ ಜಿಲ್ಲೆಯ ಅಭಿವೃದ್ಧಿಯ ವಿಚಾರದಲ್ಲಿ ಎಲ್ಲರೂ ಒಂದಾಗಿದ್ದೇವೆ. ಮುಂಬರುವ ಚುನಾವಣೆಗಳನ್ನು ಎದುರಿಸಲು ಸಂಘಟಿತ ಹೋರಾಟದ ಅಗತ್ಯವಿದೆ. ತಮ್ಮ ಹಾಗೂ ಈಶ್ವರ ಖಂಡ್ರೆಯವರ ಮಧ್ಯೆ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ. ನಾವೆಲ್ಲರೂ ಒಗ್ಗೂಡಿ ಎದುರಾಳಿ ಪಕ್ಷವನ್ನು ಮಣಿಸುವುದು ನಮ್ಮ ಗುರಿಯಾಗಬೇಕು” ಎಂದರು.
ಮಾಜಿ ಸಚಿವ, ಶಾಸಕ ರಹೀಂ ಖಾನ್ ಮಾತನಾಡಿ, “ನಿರ್ಗಮಿತ ಅಧ್ಯಕ್ಷ ಬಸವರಾಜ ಜಾಬಶೆಟ್ಟಿ ಅವರ ಸೇವೆ ಸ್ಮರಣೀಯವಾಗಿದೆ. ನೂತನ ಅಧ್ಯಕ್ಷ ಅಬ್ದುಲ್ ಮನ್ನಾನ್ ಸೇಠ್ ಅವರು ಎಲ್ಲ ಸಮುದಾಯಗಳು ಹಾಗೂ ಕಾರ್ಯಕರ್ತರನ್ನು ವಿಶ್ವಾಸಕ್ಕೆ ಪಡೆದು ಪಕ್ಷವನ್ನು ಮುನ್ನಡೆಸಲಿದ್ದಾರೆ. ಬೀದರ್ ಜಿಲ್ಲೆಯ ಭಾಲ್ಕಿ, ಬೀದರ್ ಉತ್ತರ ಕ್ಷೇತ್ರದಲ್ಲಿ ಮತದಾರರ ಹಕ್ಕನ್ನು ಕಸಿಯುವ ಹುನ್ನಾರ ನಡೆಸಿರುವುದು ಬಯಲಾಗಿದೆ. ಮುಂದಿನ ಚುನಾವಣೆಯಲ್ಲಿ ಸೋಲುವ ಭಯದಿಂದ ಚುನಾವಣಾ ಆಯೋಗವನ್ನು ದುರ್ಬಳಕೆ ಮಾಡಿಕೊಂಡು ಮತ ಕಸಿಯುವ ಯತ್ನ ನಡೆಸಿದ್ದಾರೆ” ಎಂದು ಆರೋಪಿಸಿದರು.
“ನೂತನ ಅಧ್ಯಕ್ಷರಾದ ಮನ್ನಾನ್ ಸೇಠ್ ಅವರಿಗೆ ಒಂದು ಟೀಮ್ ಬೆಂಬಲಿಸಿತು, ನಾವು ಮತ್ತೊಬ್ಬರಿಗೆ ಬೆಂಬಲಿಸಿದ್ದೇವೆ, ಆದರೆ ಅವರ ಖಿಸ್ಮತ್‌ನಲ್ಲಿ ಅಧ್ಯಕ್ಷ ಸ್ಥಾನ ಧಕ್ಕಬೇಕಿತ್ತು ಧಕ್ಕಿದೆ. ಈಗ ಎಲ್ಲರೂ ಒಗ್ಗೂಡಿ ಕಾಂಗ್ರೆಸ್ ಪಕ್ಷ ಮತ್ತಷ್ಟು ಬಲಪಡಿಸಬೇಕು” ಎಂದರು.

ನೂತನ ಅಧ್ಯಕ್ಷ ಅಬ್ದುಲ್ ಮನ್ನಾನ್ ಸೇಠ್ ಮಾತನಾಡಿ, “ಸಾಮಾನ್ಯ ಕಾರ್ಯಕರ್ತನಾಗಿದ್ದ ತಮ್ಮನ್ನು ಗುರುತಿಸಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸ್ಥಾನದ ಜವಾಬ್ದಾರಿ ನೀಡಿದ ಎಐಸಿಸಿ, ಕೆಪಿಸಿಸಿ ಹಾಗೂ ಜಿಲ್ಲೆಯ ಹಿರಿಯ ನಾಯಕರಿಗೆ ಕೃತಜ್ಞತೆ ಸಲ್ಲಿಸಿದರು. ಜಿಲ್ಲೆಯ ಪ್ರತಿಯೊಂದು ತಾಲೂಕು, ಗ್ರಾಮ ಪಂಚಾಯಿತಿ ಹಾಗೂ ಬೂತ್ ಮಟ್ಟದಲ್ಲಿ ಪಕ್ಷವನ್ನು ಬಲಪಡಿಸುವುದು ತಮ್ಮ ಮೊದಲ ಆದ್ಯತೆಯಾಗಿದೆ” ಎಂದರು.
ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿರುವ ಪಕ್ಷದ ಜಿಲ್ಲಾಧ್ಯಕ್ಷ ಸ್ಥಾನ ದಕ್ಕಿರುವುದು ನನಗೆ ತುಂಬಾ ಹೆಮ್ಮೆ ತಂದಿದೆ. ಗಾಂಧೀಜಿ ಜಯಂತಿಯ ಶುಭ ದಿನದಂದು ಪಕ್ಷದ ಜವಾಬ್ದಾರಿ ತೆಗೆದುಕೊಳ್ಳುವ ಅವಕಾಶ ದೊರೆತ್ತಿದ್ದು ನನಗೆ ಅತೀವ ಸಂತೋಷವಾಗಿದೆ. ನಾನು ಯಾವುದೇ ಒಂದು ಗ್ರೂಪಿನವಲ್ಲ, ಕೇವಲ ಕಾಂಗ್ರೆಸ್ ಪಕ್ಷದ ಗ್ರೂಪ್‌ನವನು. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಹಿರಿಯರ ಮಾರ್ಗದರ್ಶನ, ಯುವಕರ ಉತ್ಸಾಹದೊಂದಿಗೆ ಎಲ್ಲ ಸಮುದಾಯಗಳನ್ನು ಒಳಗೊಂಡು ಪಕ್ಷ ಸಂಘಟಿಸಿ, ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಜಿಲ್ಲೆ ಆರು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲ್ಲಿಸಲು ಶ್ರಮಿಸುವೆ” ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಸಮಾರಂಭದಲ್ಲಿ ನೂತನ ಅಧ್ಯಕ್ಷ ಅಬ್ದುಲ್ ಮನ್ನಾನ್ ಸೇಠ್ ಅವರಿಗೆ ಪಕ್ಷದ ಧ್ವಜವನ್ನು ಅಧಿಕೃತವಾಗಿ ಹಸ್ತಾಂತರಿಸಿ ಶುಭ ಕೋರಲಾಯಿತು. ಜಿಲ್ಲಾ ಹಾಗೂ ತಾಲೂಕು ಕಾಂಗ್ರೆಸ್ ಸಮಿತಿಗಳ ಪದಾಧಿಕಾರಿಗಳು, ವಿವಿಧ ಮುಂಚೂಣಿ ಸಂಘಟನೆಗಳ ಮುಖಂಡರು ಹಾಗೂ ಅಪಾರ ಸಂಖ್ಯೆಯಲ್ಲಿ ಆಗಮಿಸಿದ್ದ ಕಾರ್ಯಕರ್ತರಿಗೆ ಧನ್ಯವಾದ ಅರ್ಪಿಸುವುದರೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು.
ಇದನ್ನೂ ಓದಿ : ದೆಹಲಿಯ ಸರ್ಪಗಾವಲಿಗೂ ಜಗ್ಗದ ಯುವಜನತೆ, ಮುಂಬೈನಲ್ಲಿ ಮೊಳಗಿದ ರಣಕಹಳೆ: ಗ್ಯಾನೇಶ್ ವಜಾಕ್ಕೆ ಒಗ್ಗೂಡಿದ ಪ್ರಜಾಶಕ್ತಿ
ಸಮಾರಂಭದಲ್ಲಿ ಕರ್ನಾಟಕ ಮೀನುಗಾರಿಕೆ ಅಭಿವೃದ್ಧಿ ನಿಗಮ ನಿಯಮಿತದ ಅಧ್ಯಕ್ಷೆ ಮಾಲಾ ಬಿ. ನಾರಾಯಣರಾವ್, ಕಾಡಾ ಅಧ್ಯಕ್ಷರಾದ ಬಾಬು ಹೊನ್ನಾ ನಾಯಕ್, ಬಿಡಿಎ ಅಧ್ಯಕ್ಷ ವಿನೋದಕುಮಾರ ಅಪ್ಪೆ, ನಿಕಟಪೂರ್ವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಬಸವರಾಜ ಜಾಬಶೆಟ್ಟಿ, ಮಾಜಿ ವಿಧಾನ ಪರಿಷತ್ ಸದಸ್ಯರಾದ ಕೆ.ಪುಂಡಲಿಕರಾವ್, ಅರವಿಂದ ಕುಮಾರ ಅರಳಿ, ಮಾಜಿ ಸಂಸದ ನರಸಿಂಗ್‌ರಾವ್ ಸೂರ್ಯವಂಶಿ ಹಾಗೂ ಶರಣಪ್ಪ ಮಟ್ಟೂರ, ಧನರಾಜ ತಾಳಂಪಳ್ಳಿ, ಅಭಿಷೇಕ ಪಾಟೀಲ್, ಅಮೃತರಾವ ಚಿಮಕೊಡೆ, ಮೀನಾಕ್ಷಿ ಸಂಗ್ರಾಮ, ರಾಜಶ್ರೀ ಶ್ರೀಕಾಂತ ಸ್ವಾಮಿ, ದತ್ತಾತ್ರಿ ಮೂಲಗೆ ಸೇರಿದಂತೆ ಜಿಲ್ಲಾ, ತಾಲೂಕು ಮಟ್ಟದ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.




