ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ (DHO) ಡಾ.ಧ್ಯಾನೇಶ್ವರ ನಿರಗುಡೆ ಹಾಗೂ ಬಸವಕಲ್ಯಾಣ ತಾಲ್ಲೂಕು ಆರೋಗ್ಯಾಧಿಕಾರಿ (THO) ಡಾ.ಅಶೋಕ ಮೈಲಾರೆ ಅವರ ಅಮಾನತು ಆದೇಶಗಳನ್ನು ಕೂಡಲೇ ಹಿಂಪಡೆದು, ಅವರನ್ನು ಕರ್ತವ್ಯಕ್ಕೆ ಮರು ನಿಯೋಜಿಸುವಂತೆ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕ ಹಾಗೂ ಕರ್ನಾಟಕ ಸರ್ಕಾರಿ ವೈದ್ಯಾಧಿಕಾರಿಗಳ ಸಂಘದ ಜಿಲ್ಲಾ ಘಟಕ ಆಗ್ರಹಿಸಿವೆ.
ಈ ಕುರಿತು ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದ ಪದಾಧಿಕಾರಿಗಳು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಆಯುಕ್ತರ ಹೆಸರಿಗೆ ಬರೆದ ಮನವಿ ಪತ್ರವನ್ನು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪಂಚಾಯತ್ ಸಿಇಒ ಗಿತ್ತೆ ಮಾಧವ್ ವಿಠಲರಾವ್ ಅವರಿಗೆ ಸಲ್ಲಿಸಿದರು.
ಡಿಎಚ್‌ಒ ಡಾ.ಧ್ಯಾನೇಶ್ವರ ನಿರಗುಡೆ ಅವರು ಪ್ರಾಮಾಣಿಕ, ದಕ್ಷ ಹಾಗೂ ಕರ್ತವ್ಯನಿಷ್ಠ ಅಧಿಕಾರಿಯಾಗಿದ್ದು, ಜಿಲ್ಲೆಯ ಆರೋಗ್ಯ ವ್ಯವಸ್ಥೆಯನ್ನು ಉತ್ತಮವಾಗಿ ನಿರ್ವಹಿಸುತ್ತಿದ್ದಾರೆ. ಅವರ ಕಾರ್ಯವೈಖರಿ ಹಾಗೂ ಇಲಾಖೆಗೆ ಸಲ್ಲಿಸುತ್ತಿರುವ ಸೇವೆಯನ್ನು ಜಿಲ್ಲೆಯ ಅಧಿಕಾರಿಗಳು ,ನೌಕರರು ಗೌರವಿಸುತ್ತಾರೆ ಎಂದು ಸಂಘ ತಿಳಿಸಿದೆ.
ಸೆ. 16ರಂದು ಬಸವಕಲ್ಯಾಣ ತಾಲ್ಲೂಕಿನಲ್ಲಿ ನಡೆದ ಕಾರ್ಯಕ್ರಮದ ಬ್ಯಾನರ್‌ನಲ್ಲಿ ಗಣ್ಯರ ಭಾವಚಿತ್ರ ಅಳವಡಿಕೆಗೆ ಸಂಬಂಧಿಸಿದ ಲೋಪದ ಹಿನ್ನೆಲೆಯಲ್ಲಿ ಇಬ್ಬರು ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿದೆ ಎಂಬುದು ಪತ್ರಿಕಾ ವರದಿಗಳಿಂದ ತಿಳಿದುಬಂದಿದೆ. ಬ್ಯಾನರ್‌ಗೆ ಸಂಬಂಧಿಸಿದ ಲೋಪಕ್ಕಾಗಿ ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸುತ್ತಿರುವ ಅಧಿಕಾರಿಗಳ ವಿರುದ್ಧ ಅಮಾನತಿನಂತಹ ಕಠಿಣ ಕ್ರಮ ಕೈಗೊಂಡಿರುವುದು ಅಧಿಕಾರಿಗಳು, ನೌಕರರಲ್ಲಿ ಆತಂಕ ಹಾಗೂ ಅಸಮಾಧಾನಕ್ಕೆ ಕಾರಣವಾಗಿದೆ” ಎಂದು ಸಂಘದ ಪದಾಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.

ಈ ಪ್ರಕರಣದ ವಾಸ್ತವಾಂಶಗಳನ್ನು ನಿಷ್ಪಕ್ಷಪಾತವಾಗಿ ಪರಿಶೀಲಿಸಿ, ಅಮಾನತು ಆದೇಶಗಳನ್ನು ಹಿಂಪಡೆದು ಅಧಿಕಾರಿಗಳನ್ನು ಕರ್ತವ್ಯಕ್ಕೆ ಮರು ನಿಯೋಜಿಸಲು ಸಕ್ಷಮ ಪ್ರಾಧಿಕಾರ ಹಾಗೂ ಸರ್ಕಾರಕ್ಕೆ ಶಿಫಾರಸು ಮಾಡಬೇಕು. ಕರ್ತವ್ಯನಿಷ್ಠ ಅಧಿಕಾರಿಗಳು ಹಾಗೂ ನೌಕರರಿಗೆ ಅನಗತ್ಯ ಒತ್ತಡ ಅಥವಾ ಅನ್ಯಾಯವಾಗದಂತೆ ಸೂಕ್ತ ರಕ್ಷಣೆ ಒದಗಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಿದೆ.
ಇದನ್ನೂ ಓದಿ : ಬೀದರ್ | ನಾಗಪುರ ದೀಕ್ಷಾಭೂಮಿ ಯಾತ್ರೆಗೆ ಅರ್ಜಿ ಆಹ್ವಾನ
ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಸೋಮಶೇಖರ ಚಿದ್ರಿ, ಕಾರ್ಯದರ್ಶಿ ಪ್ರಭು ತುಗಾವೆ, ರಾಜ್ಯ ಪರಿಷತ್ ಸದಸ್ಯ ರಾಜಕುಮಾರ ಮಾಳಗೆ, ಸುನೀಲ ಕಸ್ತೂರೆ, ಸತ್ತಾರ ಪಟೇಲ್, ಕರ್ನಾಟಕ ಸರ್ಕಾರಿ ವೈದ್ಯಾಧಿಕಾರಿಗಳ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಡಾ.ಶಂಕ್ರೇಪ್ಪ ಬೊಮ್ಮಾ, ಕಾರ್ಯದರ್ಶಿ ಡಾ.ಸಂದೀಪ ಘೊಡೆ, ಖಜಾಂಚಿ ಡಾ.ಶಾಂತಲಿಂಗ ಪಾಟೀಲ್, ಡಾ.ಕಿರಣ ಪಾಟೀಲ್, ಡಾ. ದೀಪಾ ಖಂಡ್ರೆ, ಡಾ.ಅನೀಲ ಏಕ್ಲೂರೆ, ಡಾ.ಸೋಹಿಲ್, ಡಾ.ರಾಜಶೇಖರ್ ಪಾಟೀಲ್, ಡಾ.ಸಂಗಾರೆಡ್ಡಿ, ಡಾ. ಗಾಯತ್ರಿ ವಿಜಯಕುಮಾರ, ಡಾ. ಅನೀಲ್ ಗಡ್ಡೆ, ನಿತೀನ್ ಬಿರಾದಾರ, ಡಾ. ರವಿ ಕಲಶೆಟ್ಟಿ, ಡಾ. ಶಶಿ ಭೂರೆ, ಡಾ. ಶೇಷಾಂಗ, ಡಾ. ಅಶೋಕ ಮೈಲಾರೆ, ಡಾ. ಯುವರಾಜ, ಡಾ.ಅಜಯ, ಡಾ. ಶಿವಕುಮಾರ ಸಿದ್ದೇಶ್ವರ ಹಾಗೂ ಡಾ. ಇಸ್ಮಾಯಿಲ್ ಮತ್ತಿತರರು ಉಪಸ್ಥಿತರಿದ್ದರು.




