ಎಚ್‌ಐವಿ ಬಾಧಿತರು ಯಾವುದೇ ರೀತಿಯ ಭಯ, ಆತಂಕಕ್ಕೆ ಒಳಗಾಗದೆ ವೈದ್ಯರ ಸಲಹೆಯಂತೆ ನಿಯಮಿತವಾಗಿ ಔಷಧಿ ಸೇವಿಸಬೇಕು. ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ಪ್ರತಿದಿನ ಸಮತೋಲಿತ ಆಹಾರ ಸೇವಿಸುವುದರ ಜೊತೆಗೆ ವ್ಯಾಯಾಮವನ್ನು ರೂಢಿಸಿಕೊಳ್ಳಬೇಕು ಎಂದು ಸ್ವಾಮಿ ವಿವೇಕಾನಂದ ಯೂತ್ ಮೂವ್‌ಮೆಂಟ್‌ನ ಮೀಟೋ ಅಧಿಕಾರಿ ಸುಬ್ಬಯ್ಯಾ ಗುತ್ತೇದಾರ ಹೇಳಿದರು.
ಬೀದರ್ ನಗರದ ಡಿಎಚ್‌ಒ ಸಭಾಂಗಣದಲ್ಲಿ ಬುಧವಾರ ಕರ್ನಾಟಕ ರಾಜ್ಯ ಏಡ್ಸ್ ಪ್ರಿವೆನ್‌ಷನ್ ಸೊಸೈಟಿ, ಬೆಂಗಳೂರು, ಜಿಲ್ಲಾ ಏಡ್ಸ್ ನಿಯಂತ್ರಣ ಮತ್ತು ತಡೆಗಟ್ಟುವ ಘಟಕ, ಬೀದರ್ ಹಾಗೂ ಲಾಲ್ ಬಹದ್ದೂರ್ ಶಿಕ್ಷಣ ಸಂಸ್ಥೆಯ ಸಿಎಸ್‌ಸಿ ಯೋಜನೆ, ಬೀದರ್ ವತಿಯಿಂದ ಆಯೋಜಿಸಿದ್ದ ಪಿಎಲ್‌ಎಚ್‌ಐವಿ ಅನುಭವ ಹಂಚಿಕೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
“ಎಚ್‌ಐವಿ ಬಾಧಿತರು ಸಮಾಜದಲ್ಲಿ ಯಾವುದೇ ರೀತಿಯ ಕಳಂಕ, ತಾರತಮ್ಯ ಅಥವಾ ಅಸಮಾನತೆಯನ್ನು ಎದುರಿಸಿದಲ್ಲಿ, ಅವರಿಗೆ ಲಭ್ಯವಿರುವ ಉಚಿತ ಕಾನೂನು ನೆರವನ್ನು ಪಡೆದುಕೊಳ್ಳಬಹುದು. ಎಚ್‌ಐವಿಯೊಂದಿಗೆ ಬದುಕುತ್ತಿರುವವರು ಆತ್ಮವಿಶ್ವಾಸದಿಂದ ಜೀವನ ನಡೆಸಬೇಕು” ಎಂದು ತಿಳಿಸಿದರು.
ಜಿಲ್ಲಾ ಏಡ್ಸ್ ನಿಯಂತ್ರಣ ಘಟಕದ ಜಿಲ್ಲಾ ಮೇಲ್ವಿಚಾರಕ ಸೂರ್ಯಕಾಂತ ಸಂಗೂಳಕರ್ ಮಾತನಾಡಿ, “ಸಮಾಜದಲ್ಲಿ ಪ್ರತಿಯೊಬ್ಬರಿಗೂ ಗೌರವಯುತವಾಗಿ ಹಾಗೂ ಉತ್ತಮ ರೀತಿಯಲ್ಲಿ ಜೀವನ ನಡೆಸುವ ಹಕ್ಕು ಮತ್ತು ಅವಕಾಶವಿದೆ. ಎಚ್‌ಐವಿ ಬಾಧಿತರು ಯಾವುದೇ ಮುಜುಗರ ಅಥವಾ ಹಿಂಜರಿಕೆಗೆ ಒಳಗಾಗದೆ ಧೈರ್ಯದಿಂದ ಜೀವನ ನಡೆಸಬೇಕು” ಎಂದು ಹೇಳಿದರು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಭಿವೃದ್ಧಿ ನಿರೀಕ್ಷಕಿ ಯಲ್ಲಮ್ಮಾ ಮಾತನಾಡಿ, “ಎಚ್‌ಐವಿ ಬಾಧಿತರು ಸರ್ಕಾರದ ವಿವಿಧ ಕಲ್ಯಾಣ ಯೋಜನೆಗಳ ಕುರಿತು ಮಾಹಿತಿ ಪಡೆದು, ಅರ್ಹತೆಗೆ ಅನುಗುಣವಾಗಿ ಆರ್ಥಿಕ ಹಾಗೂ ಸಾಮಾಜಿಕ ಯೋಜನೆಗಳ ಪ್ರಯೋಜನ ಪಡೆದುಕೊಳ್ಳಬೇಕು. ಆ ಮೂಲಕ ಸ್ವಾವಲಂಬಿ ಜೀವನ ನಡೆಸಲು ಮುಂದಾಗಬೇಕು” ಎಂದು ಸಲಹೆ ನೀಡಿದರು.
ಇದನ್ನೂ ಓದಿ : ಬೀದರ್ ಜಿಲ್ಲೆ ಯಾವತ್ತಿಗೂ ಕಾಂಗ್ರೆಸ್ ಭದ್ರಕೋಟೆ : ಈಶ್ವರ ಖಂಡ್ರೆ
ಕಾರ್ಯಕ್ರಮದಲ್ಲಿ ಎಆರ್‌ಟಿ ವೈದ್ಯಾಧಿಕಾರಿ ಡಾ. ಮಹೇಶ ರೆಡ್ಡಿ, ಕ್ಲಸ್ಟರ್ ಪ್ರಿವೆನ್‌ಷನ್ ಆಫೀಸರ್ ಶಿವಶಂಕರ ಬೆಮಳಗಿ, ಮೊಬಿಲೈಜೇಷನ್ ಫಾರ್ ಏಡ್ಸ್ ಸುರಕ್ಷಾ ಜಿಲ್ಲಾ ಸಹಯೋಗಿ ವಿಶ್ವನಾಥ ಸ್ವಾಮಿ, ಎಆರ್‌ಟಿ ಆಪ್ತಸಮಾಲೋಚಕ ಸಂತೋಷ್ ಸಿಂಧೆ, ಐಸಿಟಿಸಿ ಆಪ್ತಸಮಾಲೋಚಕ ಅರವಿಂದ್ ಕುಲಕರ್ಣಿ ಹಾಗೂ ಸಿಎಸ್‌ಸಿ ಕೋ-ಆರ್ಡಿನೇಟರ್ ಶಿವಕುಮಾರ ಮಾಳೆದೂಡ್ಡಿ ಉಪಸ್ಥಿತರಿದ್ದರು.




