ಬೀದರ್ ಜಿಲ್ಲೆಯಲ್ಲಿ ಬೇಸಿಗೆ ಬಿಸಿಲಿನ ತಾಪ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಜಲಮೂಲಗಳು ಬತ್ತಿರುವ ಹಿನ್ನೆಲೆ ವನ್ಯಜೀವಿಗಳಿಗೆ ಕುಡಿಯುವ ನೀರಿನ ತೀವ್ರ ಅಭಾವ ಎದುರಾಗಿರುವುದನ್ನು ಮನಗಂಡು ಯುವಕರ ತಂಡವೊಂದು ನೀರುಣಿಸುವ ಕಾರ್ಯಕ್ಕೆ ಮುಂದಾಗಿರುವುದು ಶ್ಲಾಘನೀಯ ಎಂದು ಡಿಎಫ್‌ಆರ್‌ಒ ರಘುನಾಥ್ ರಾಥೋಡ್ ಅಭಿಪ್ರಾಯಪಟ್ಟರು.
ಬೀದರ್ ಹಳ್ಳದಕೇರಿಯ ಸಸ್ಯೋದ್ಯಾನದಲ್ಲಿ ಚಂದ್ರಶೇಖರ್ ಆಜಾದ್ ಯುವಕ ಸಂಘದ ವತಿಯಿಂದ ಪಶು ಪಕ್ಷಿಗಳಿಗಾಗಿ ಮಣ್ಣಿನ ತೊಟ್ಟಿಗಳನ್ನು ಇಟ್ಟು ಪ್ರಾಣಿ, ಪಕ್ಷಿಗಳ ಬಾಯಾರಿಕೆ ನೀಗಿಸುವ ಕಾರ್ಯಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಚಂದ್ರಶೇಖರ್ ಆಜಾದ್ ಯುವ ಸಂಘದ ಅಧ್ಯಕ್ಷ ವಿಜಯಕುಮಾರ್ ಬಂಡೆ ಮಾತನಾಡಿ, ʼಅರಣ್ಯ ವಲಯ ಅಧಿಕಾರಿ ವಿಜಯಕುಮಾರ ಜಾಧವ ಅವರ ಮಾರ್ಗದರ್ಶನದಲ್ಲಿ ಈ ಕಾರ್ಯವನ್ನು ಕೈಗೊಂಡಿದ್ದೇವೆ. ಪಶು ಪಕ್ಷಿಗಳನ್ನು ಉಳಿಸಿಕೊಳ್ಳುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆʼ ಎಂದು ಹೇಳಿದರು.
ʼಬಿಸಿಲಿನ ತಾಪದಿಂದ ತತ್ತರಿಸಿದ ಪ್ರಾಣಿ, ಪಕ್ಷಿಗಳು ನೀರಿಗಾಗಿ ಅಲೆದಾಡುವುದು ಸಾಮಾನ್ಯವಾಗಿದೆ. ಇಂತಹ ಸಂಕಷ್ಟದ ಸಂದರ್ಭದಲ್ಲಿ ಅರಣ್ಯ ಹಾಗೂ ನಗರದ ಉದ್ಯಾನವನ ಸೇರಿ ಸಾರ್ವಜನಿಕ ಪ್ರದೇಶಗಳಲ್ಲಿ ನೀರಿನ ಕುಂಡಗಳನ್ನು ಇಟ್ಟು ಪ್ರಾಣಿ ಪಕ್ಷಿಗಳಿಗಾಗಿ ನೀರಿನ ವ್ಯವಸ್ಥೆ ಮಾಡಲಾಗಿದೆʼ ಎಂದರು.

ʼವನ್ಯಜೀವಿಗಳ ಸಂರಕ್ಷಣೆಗಾಗಿ ಯುವಕ ಸಂಘವು ಕಳೆದ ಹಲವು ವರ್ಷಗಳಿಂದ ನಿರಂತರವಾಗಿ ಸೇವಾ ಕಾರ್ಯಗಳನ್ನು ಕೈಗೊಳ್ಳುತ್ತಿದೆ. ಬೀದರ್ ನಗರದ ವಿವಿಧ ಪ್ರದೇಶಗಳಲ್ಲಿ, ಉದ್ಯಾನವನಗಳಲ್ಲಿ ಹಾಗೂ ಮನೆಗಳ ಸುತ್ತಮುತ್ತಲಿನ ಗಿಡಮರಗಳ ಮೇಲೆ ಪಕ್ಷಿ-ಪ್ರಾಣಿಗಳಿಗೆ ಕುಡಿಯುವ ನೀರಿನ ತೊಟ್ಟಿಗಳನ್ನು ಇಟ್ಟು, ಅವುಗಳಿಗೆ ನೀರಿನ ಅಭಾವವಾಗದಂತೆ ಕ್ರಮ ಕೈಗೊಳ್ಳಲಾಗಿದೆʼ ಎಂದು ತಿಳಿಸಿದರು.
ಈ ಮಾನವೀಯ ಕಾರ್ಯದಲ್ಲಿ ಸಂಘದ ಸದಸ್ಯರು ಮಾತ್ರವಲ್ಲದೆ ಸಾರ್ವಜನಿಕರೂ ಸಹ ಕೈಜೋಡಿಸುತ್ತಿದ್ದಾರೆ, ಪ್ರತಿಯೊಬ್ಬರೂ ಇಂತಹ ಮಾನವೀಯ ಕಾರ್ಯಗಳಲ್ಲಿ ಭಾಗವಹಿಸಬೇಕುʼ ಎಂದು ಕರೆ ನೀಡಿದರು.
ಇದನ್ನೂ ಓದಿ : ಗುಂಡ್ಲುಪೇಟೆ | ಕ್ವಾರೆಯಲ್ಲಿ ಈಜಲು ತೆರಳಿ ಯುವಕ ಸಾವು: ನಿರ್ಲಕ್ಷ್ಯದ ವಿರುದ್ಧ ಆಕ್ರೋಶ
ಸಂಘದ ಪ್ರಮುಖರಾದ ಸೋಮಶೇಖರ್ ನೀಲಪ್ಪನೋರ್, ಮಹಾರುದ್ರ ಚಿಕ್ಲಿ, ವಿಜಯಕುಮಾರ ಗಾಡ್, ರೋಹಿತ್ ಕುಮಾರ, ರೋಹನರಾಜ್, ಸುರೇಶ ಎಕ್ಕಲೇಕಾರ್, ವಿವೇಕ್ ಲಕ್ಷಶೆಟ್ಟಿ, ಹರ್ಷವರ್ಧನ್, ಶಿವಕುಮಾರ ಹಳ್ಳದಕೆರಿ, ಸುದರ್ಶನ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.





