ಬೇಸಿಗೆಯ ಪ್ರಖರ ಬಿಸಿಲಿನ ತಾಪ ದಿನದಿಂದ ದಿನಕ್ಕೆ ಏರಿಕೆಯಾಗಿ ಕೃಷಿ ಚಟುವಟಿಕೆಗಳಿಗೆ ಅಡ್ಡಿಪಡಿಸುತ್ತಿದ್ದು, ರೈತ ಸಮೂಹದಲ್ಲಿ ಆತಂಕ ಸೃಷ್ಟಿಸಿದೆ.
ಜಿಲ್ಲೆಯ ಬಹುತೇಕ ಕಡೆ ಐಪಿ ಸೆಟ್‌ಗಳಿಗೆ ಪ್ರತಿದಿನ ಬೆಳಗ್ಗೆ 10 ರಿಂದ ಸಂಜೆ 5 ಗಂಟೆವರೆಗೆ 7 ಗಂಟೆಗಳ ಕಾಲ ನಿರಂತರವಾಗಿ ತ್ರಿಫೇಸ್ ವಿದ್ಯುತ್ ಪೂರೈಕೆಯಾಗುತ್ತಿದೆ. ರೈತರು ಬಿಸಿಲಿನ ಧಗೆ ಲೆಕ್ಕಿಸದೆ ಬೆಳೆಗಳಿಗೆ ನೀರುಣಿಸುವ ಕೆಲಸದಲ್ಲಿ ತೊಡಗುತ್ತಿದ್ದಾರೆ. ಇದರಿಂದ ಕೃಷಿ ಕಾರ್ಮಿಕರು ಹೀಟವೇವ್‌ಗೆ ತುತ್ತಾಗುವ ಭಯ ಕಾಡುತ್ತಿದೆ.
ಬೇಸಿಗೆ ತಾಪಮಾನವು ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಕೆಲ ದಿನಗಳಿಂದ ಮಧ್ಯಾಹ್ನದಲ್ಲಿ ಬಿಸಿಲಿನ ತೀವ್ರತೆ ಗರಿಷ್ಠ ಮಟ್ಟಕ್ಕೆ ತಲುಪುತ್ತಿರುವುದರಿಂದ ಸಾಮಾನ್ಯ ಜನರ ಜೊತೆಗೆ ಕೂಲಿ ಕಾರ್ಮಿಕರು, ದಿನಗೂಲಿ ನೌಕರರು, ರೈತರು ದೊಡ್ಡ ಸಂಕಷ್ಟ ಎದುರಿಸುತ್ತಿದ್ದಾರೆ. ವಿಶೇಷವಾಗಿ ಹೊಲಗಳಿಗೆ ನೀರು ಹರಿಸುವ ಕೆಲಸ ಬಿರು ಬಿಸಿಲಿನಲ್ಲೇ ಮಾಡುವ ರೈತರಿಗೆ ತ್ರಾಸದಾಯಕವಾಗಿದ್ದು, ರೈತರ ಆರೋಗ್ಯದ ಮೇಲೂ ದುಷ್ಪರಿಣಾಮ ಬೀರುತ್ತಿದೆ.
ಮಳೆಗಾಲ, ಚಳಿಗಾಲದಲ್ಲಿ ಹೊಲದಲ್ಲಿ ಬೆಳೆಗಳಿಗೆ ನೀರು ಹರಿಸುವ ವೇಳೆ ರೈತರಿಗೆ ಹೆಚ್ಚಿನ ಸಮಸ್ಯೆ ಉಂಟಾಗುವುದಿಲ್ಲ. ಆಗ ಹಗಲು, ರಾತ್ರಿ ವೇಳೆಯೂ ವಿದ್ಯುತ್ ಪೂರೈಸಬಹುದು. ಬೇಸಿಗೆಯಲ್ಲಿ ಬೆಳೆಯುವ ಕಬ್ಬು, ಶೇಂಗಾ, ಮೆಕ್ಕೆಜೋಳ, ಪಪ್ಪಾಯಿ, ಕಲ್ಲಂಗಡಿ ಸೇರಿದಂತೆ ಇತರೆ ಹಣ್ಣು, ತರಕಾರಿಗಳಿಗೆ ನೀರು ಉಣಿಸುವುದು ಅನಿವಾರ್ಯ. ನೆತ್ತಿಸುಡುವ ಬಿಸಿಲಿನಲ್ಲಿ ವಿದ್ಯುತ್ ಪೂರೈಕೆ ಆಗುತ್ತಿರುವುದರಿಂದ ರೈತರು ಅನಿವಾರ್ಯವಾಗಿ ಬಿಸಿಲಿನ ತೀವ್ರತೆಯಲ್ಲೇ ಹೊಲದಲ್ಲಿ ಕೆಲಸ ಮಾಡಬೇಕಾಗುತ್ತದೆ. ಇದರಿಂದ ದೇಹದ ದೌರ್ಬಲ್ಯ, ನೀರಿನ ಕೊರತೆ, ಸೂರ್ಯಾಘಾತದಂತಹ ಸಮಸ್ಯೆಗಳು ಎದುರಾಗುತ್ತಿವೆ ಎನ್ನುತ್ತಾರೆ ರೈತರು.
ಸರ್ಕಾರ ಹಾಗೂ ಜಿಲ್ಲಾಡಳಿತ ಹೀಟ್‌ವೇವ್ ಹಿನ್ನಲೆಯಲ್ಲಿ ಮುಂಜಾಗ್ರತೆ ವಹಿಸಲು ಸಾರ್ವಜನಿಕರಿಗೆ ಮನವಿ ಮಾಡಿದೆ. ಮಧ್ಯಾಹ್ನ 12 ಗಂಟೆಯಿಂದ ಸಂಜೆ 4 ಗಂಟೆವರೆಗೆ ಸಾಧ್ಯವಾದಷ್ಟು ಮನೆಯಲ್ಲಿಯೇ ಇರುವಂತೆ ಸೂಚಿಸಿದೆ. ಮಧ್ಯಾಹ್ನದ ವೇಳೆ ಕಾರ್ಮಿಕರು, ರೈತರು ಕೆಲಸದ ಬಿಡುವು ಪಡೆಯಬೇಕೆಂದು ತಿಳಿಸಿದೆ. ಹೀಗಿದ್ದರೂ ಜಿಲ್ಲಾದ್ಯಂತ ರೈತರಿಗೆ ಸರಬರಾಜು ಆಗುವ ತ್ರಿಫೇಸ್ ವಿದ್ಯುತ್ ಪೂರೈಕೆ ಕೆಂಡದ ಬಿಸಿಲಿನ ವೇಳೆ ಮುಂದುವರೆದಿರುವುದು ರೈತರ ಆಕ್ರೋಶಕ್ಕೆ ಕಾರಣವಾಗಿದೆ.
ಕೆಲ ದಿನಗಳಿಂದ ಜಿಲ್ಲೆಯಲ್ಲಿ 40-45 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗುತ್ತಿದ್ದು, ಸೂರ್ಯನ ಶಾಖದಿಂದ ಜನ ತತ್ತರಿಸಿದ್ದಾರೆ. ಮಧ್ಯಾಹ್ನದ ವೇಳೆ ವ್ಯಾಪಾರ ವಹಿವಾಟು ವಿರಳವಾಗಿದ್ದು, ಜನ ಮನೆಯಿಂದ ಹೊರಬರದೇ ಇರುವುದರಿಂದ ರಸ್ತೆಗಳು ಬಿಕೊ ಎನ್ನುತ್ತಿವೆ. ಆದರೆ, ರೈತರು ಮಾತ್ರ ತ್ರಿಫೇಸ್ ವಿದ್ಯುತ್ ಬಂದ ತಕ್ಷಣ ಜಮೀನಿಗೆ ಓಡೋಡಿ ಇಡೀ ದಿನ ಬಿಸಿಲಿಗೆ ಮೈಯೊಡ್ಡಿ ಬೆಳೆಗೆ ನೀರು ಹರಿಸಬೇಕಾದ ಅನಿವಾರ್ಯ ಬಂದೊದಗಿದೆ. ಬಿಸಿಲಿನ ತೀವ್ರತೆ ಭಯದಿಂದ ಮನೆಯಲ್ಲಿದ್ದರೆ ಬೆಳೆ ಒಣಗುವ ಸಾಧ್ಯತೆ ಹೆಚ್ಚಿದೆ ಎಂಬುದು ರೈತರ ನೋವಿನ ಮಾತು.
ವಿದ್ಯುತ್ ಪೂರೈಕೆ ಸಮಯ ಬದಲಾಯಿಸಿ, ಬೆಳಿಗ್ಗೆ ಅಥವಾ ಸಂಜೆ ವೇಳೆಯಲ್ಲಿ ವಿದ್ಯುತ್ ಪೂರೈಸಿದರೆ, ತಂಪಾದ ವಾತಾವರಣದಲ್ಲಿ ಬೆಳೆಗಳಿಗೆ ನೀರು ಹರಿಸುವುದು ಸುಲಭವಾಗುತ್ತದೆ. ಇದರಿಂದ ರೈತರ ಆರೋಗ್ಯಕ್ಕೂ ಹಾನಿಯಾಗುವುದಿಲ್ಲ, ಮತ್ತು ಕೃಷಿ ಚಟುವಟಿಕೆಗಳು ಸುಗಮವಾಗಿ ನಡೆಯುತ್ತವೆ ಎನ್ನುತ್ತಾರೆ ಔರಾದ ತಾಲೂಕಿನ ಬಲ್ಲೂರ(ಜೆ) ಗ್ರಾಮದ ಕಬ್ಬು ಬೆಳೆಗಾರ ಮಹಾದೇವ ಪಾಟೀಲ್ ಅವರು.

ಸಾರ್ವಜನಿಕರು, ಸರ್ಕಾರಿ ನೌಕರರಿಗೆ ಬೇಸಿಗೆ ಬಿಸಿಲಿನ ಧಗೆಯಿಂದ ತೊಂದರೆ ಆಗಬಾರದೆಂಬ ಕಾರಣಕ್ಕೆ ಕಲ್ಯಾಣ ಕರ್ನಾಟಕ ಭಾಗದ ಎಲ್ಲ ಜಿಲ್ಲೆಗಳಲ್ಲಿ ಎಪ್ರಿಲ್, ಮೇ ತಿಂಗಳಲ್ಲಿ ಸರ್ಕಾರಿ ಕಚೇರಿಗಳ ಕೆಲಸದ ಸಮಯ ಬೆಳಗ್ಗೆ 8 ಗಂಟೆಯಿಂದ ಮಧ್ಯಾಹ್ನ 1:30ರವರೆಗೆ ಬದಲಾವಣೆ ಮಾಡಲಾಗಿದೆ. ರೈತರು 40 ಡಿಗ್ರಿ ಸೆಲ್ಸಿಯಸ್ ಆಸುಪಾಸಿನ ಬಿಸಿಲಿನಲ್ಲಿ ಕೆಲಸ ಮಾಡಿ ಬೆವರಿನ ಸ್ನಾನ ಮಾಡುತ್ತಿದ್ದರೂ ವಿದ್ಯುತ್ ಪೂರೈಕೆ ಸಮಯ ಬದಲಾವಣೆ ಮಾಡಲು ಸಾಧ್ಯವಿಲ್ಲವೇ ಎಂಬುದು ರೈತ ಸಮುದಾಯದ ಒಕ್ಕೊರಲ ಪ್ರಶ್ನೆ.
‘ಬೇಸಿಗೆ ಮುಗಿಯುವ ತನಕ ಐಪಿ ಸೆಟ್‌ಗಳಿಗೆ ಪೂರೈಸುವ ತ್ರಿಫೇಸ್ ವಿದ್ಯುತ್ ನೀಡುವ ಸಮಯ ಬದಲಾಯಿಸಬೇಕು. ಬಿಸಿಲಿನ ಬೇಗೆಯಿಂದ ರಕ್ಷಿಸಿಕೊಳ್ಳಲು ಇದು ಅತ್ಯಂತ ಅನಿವಾರ್ಯ. ರೈತರ ಆರೋಗ್ಯ ಕಾಳಜಿಯಿಂದಾಗಿ ಬೆಳಗ್ಗಿನ ಜಾವ 5 ಗಂಟೆಯಿಂದ 12 ಗಂಟೆವರೆಗೆ ವಿದ್ಯುತ್ ಕೊಡಬೇಕುʼ ಎಂದು ಕರ್ನಾಟಕ ರಾಜ್ಯ ರೈತ ಸಂಘದ ಹುಮನಾಬಾದ್ ತಾಲ್ಲೂಕು ಅಧ್ಯಕ್ಷ ಸತೀಶ್ ನನ್ನೂರೆ ಹಾಗೂ ರೈತ ಮುಖಂಡರು ಹುಮನಾಬಾದ್ ಜೆಸ್ಕಾಂ ಅಧಿಕಾರಿಗೆ ಮನವಿ ಸಲ್ಲಿಸಿದ್ದಾರೆ.
ʼಮೇ ತಿಂಗಳಲ್ಲಿ ಬಿಸಿಲಿನ ತೀವ್ರತೆ ಇನ್ನಷ್ಟು ಹೆಚ್ಚಾಗುವ ಬಗ್ಗೆ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಇದರಿಂದ ರೈತರು ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಬಿಸಿಲಿನ ವೇಳೆ ವಿದ್ಯುತ್ ಕೊಡುವುದರಿಂದ ಕೃಷಿ ಚಟುವಟಕೆಗಳಲ್ಲಿ ತೊಡಗುವ ಕಾರ್ಮಿಕರ ತೊಂದರೆ ಆಗುತ್ತದೆ. ಅಲ್ಲದೆ ಗರಿಷ್ಠ ಉಷ್ಣಾಂಶದಿಂದ ಮೋಟಾರ್ ಸುಟ್ಟು ಬೆಂಕಿ ಅವಘಡ ಸಂಭವಿಸುವ ಸಾಧ್ಯತೆಯಿದೆ. ಬಿಸಿಲಾಘಾತದಿಂದ ರೈತರ ಆರೋಗ್ಯದಲ್ಲಿ ಏರುಪೇರಾದರೆ ಹೊಣೆ ಯಾರು? ಕೂಡಲೇ ತ್ರಿಫೇಸ್ ವಿದ್ಯುತ್ ಪೂರೈಕೆ ಸಮಯ ಬದಲಾಯಿಸಿ ತಂಪಾಗಿರುವ ವೇಳೆ ಪಾಳಿ ಪ್ರಕಾರ ವಿದ್ಯುತ್ ಪೂರೈಸಬೇಕುʼ ಎಂದು ರೈತ ಓಂಕಾರ ಉಪ್ಪೆ ಒತ್ತಾಯಿಸಿದರು.
ʼಈಗ ಜಿಲ್ಲೆಯಲ್ಲಿ 40-44 ಡಿಗ್ರಿ ಸೆಲ್ಸಿಯಸ್ ಬಿಸಿಲು ಅಂದ್ರೆ ಬೆಂಕಿ ಸುರಿದಂತೆ!. ಇಂತಹ ಹೊತ್ತಲ್ಲಿ ಮಧ್ಯಾಹ್ನ ಕರೆಂಟ್ ಕೊಟ್ರೆ ರೈತರು ಬದುಕುವುದಾದರೂ ಹೇಗೆ? ಮಧ್ಯಾಹ್ನದ ತ್ರಿಫೇಸ್ ಕರೆಂಟ್ ನಿಲ್ಲಿಸಿ. ನಮಗೆ ರಾತ್ರಿ ಅಥವಾ ಮುಂಜಾನೆ ಮಾತ್ರ ವಿದ್ಯುತ್ ನೀಡಿ. ರೈತರ ಜೀವದ ಜೊತೆ ಆಟವಾಡಬೇಡಿ’ ಎಂದು ಬಸವಕಲ್ಯಾಣದ ಸಾಮಾಜಿಕ ಕಾರ್ಯಕರ್ತ ಕೃಷ್ಣ ಪಾಟೀಲ ಗೋಕುಲ್ ಮನವಿ ಮಾಡಿದ್ದಾರೆ.
ಈ ಕುರಿತು ಬೀದರ್ ಜೆಸ್ಕಾಂ ಅಧೀಕ್ಷಕ ಎಂಜಿನಿಯರ್ ವೀರಭದ್ರಪ್ಪ ಸಾಲಿಮನಿ ‘ಈದಿನ‘ ಜೊತೆ ಮಾತನಾಡಿ, ‘ಜಿಲ್ಲೆಯ ಬಹುತೇಕ ಕಡೆ ಬೆಳಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೆ ರೈತರ ಹೊಲಗಳಿಗೆ ತ್ರಿಫೇಸ್ ವಿದ್ಯುತ್ ಪೂರೈಕೆ ಇದೆ. ಇದು ಬದಲಾವಣೆಯಾದರೆ ಸಿಸ್ಟಮ್ ಮೇಲೆ ಲೋಡ್ ಬೀಳುವ ಸಾಧ್ಯತೆ ಇದೆ. ಹೀಗಾಗಿ ತ್ರಿಫೇಸ್ ಪೂರೈಕೆಯಲ್ಲಿ ಸಮಯ ಬದಲಾವಣೆ ಅಸಾಧ್ಯ’ ಎಂದು ಹೇಳಿದರು.
ʼಬೆಂಕಿಯುಗುಳುವ ಸೂರ್ಯನಿಂದ ತಪ್ಪಿಸಿಕೊಳ್ಳಲು ಜನರು ಹರಸಾಹಸ ಪಡುತ್ತಿದ್ದಾರೆ. ಬಿಸಿಲಿನ ಬೇಗೆಗೆ ಬಸವಳಿದು ಕೆಲವೆಡೆ ಕಾರ್ಮಿಕರು ಸಾವನ್ನಪ್ಪಿರುವ ಘಟನೆಗಳು ವರದಿಯಾಗಿವೆ. ಇಂತಹ ಗರಿಷ್ಠ ತಾಪಮಾನದ ಅವಧಿಯಲ್ಲಿ ರೈತರ ಆರೋಗ್ಯದ ಹಿತದೃಷ್ಟಿಯಿಂದ ವಿದ್ಯುತ್ ಪೂರೈಕೆಯಲ್ಲಿ ವಿನಾಯಿತಿ ನೀಡುವುದು ಮಾನವೀಯತೆ ಪ್ರಶ್ನೆಯಾಗಿದೆ. ರೈತರ ಬೇಡಿಕೆಗೆ ಅನುಗುಣವಾಗಿ ಮುಂಗಾರು ಆರಂಭವರೆಗೆ ವಿದ್ಯುತ್ ಪೂರೈಸಿದರೆ ಬಿಸಿಲಾಘಾತದಿಂದ ರಕ್ಷಿಸಿಕೊಳ್ಳಲು ಸಾಧ್ಯವಿದೆʼ ಎಂದು ಸಾಮಾಜಿಕ ಹೋರಾಟಗಾರ ಜಗದೀಶ್ವರ ಬಿರಾದಾರ ಹೇಳಿದರು.
ಇದನ್ನೂ ಓದಿ : ಸಿಲಿಂಡರ್ ಬೆಲೆ ಏರಿಕೆ | ಬಿಜೆಪಿಯ ಬಡಜನ ವಿರೋಧಿ ನೀತಿ ಮತ್ತೆ ಬಯಲು : ಈಶ್ವರ ಖಂಡ್ರೆ
ಒಟ್ಟಿನಲ್ಲಿ, ಬೇಸಿಗೆಯ ತೀವ್ರತೆಯನ್ನು ಮನಗಂಡು ರೈತರಿಗೆ ಅನುಕೂಲವಾಗುವ ರೀತಿಯಲ್ಲಿ ವಿದ್ಯುತ್ ಪೂರೈಕೆ ಸಮಯವನ್ನು ಬದಲಾಯಿಸುವುದು ಅತೀ ಅವಶ್ಯಕವಾಗಿದೆ. ಇದು ರೈತರ ಆರೋಗ್ಯವನ್ನು ಕಾಪಾಡುವುದರ ಜೊತೆಗೆ ಕೃಷಿ ಉತ್ಪಾದಕತೆಯನ್ನೂ ಹೆಚ್ಚಿಸುವುಲ್ಲಿ ಸಹಕಾರಿ ಆಗಲಿದೆ. ಇದನ್ನು ಗಂಭೀರವಾಗಿ ಪರಿಗಣಿಸಿ ವಿದ್ಯುತ್ ಸರಬರಾಜು ಅಧಿಕಾರಿಗಳು ಮೇಲಾಧಿಕಾರಿಗಳ ಗಮನಕ್ಕೆ ತಂದು ರೈತರ ಬೇಡಿಕೆಗೆ ಸ್ಪಂದಿಸುವುದು ಒಳಿತು.

ಬಾಲಾಜಿ ಕುಂಬಾರ್
ಬಾಲಾಜಿ ಕುಂಬಾರ ಅವರು ಔರಾದ್ ತಾಲ್ಲೂಕಿನ ಚಟ್ನಾಳ ಗ್ರಾಮದವರು. ಸಾಹಿತ್ಯ, ಶಿಕ್ಷಣ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದಾರೆ. ಸದ್ಯ 'ಈದಿನ.ಕಾಮ್' ಮಾಧ್ಯಮ ಸಂಸ್ಥೆಯಲ್ಲಿ ಬೀದರ್ ಜಿಲ್ಲಾ ಹಿರಿಯ ಸಂಯೋಜಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕವಿತೆ, ಲೇಖನ, ದೇಶಿ ನುಡಿ ಬರಹ ಬರೆಯುವುದು ಇವರ ಮುಖ್ಯ ಹವ್ಯಾಸ.



