ಅಮೆರಿಕದ ಮಧ್ಯಂತರ ಚುನಾವಣೆಗಳಲ್ಲಿ ಡೆಮಾಕ್ರಟ್ ಪಕ್ಷ ಭಾರೀ ಜಯ ಗಳಿಸಿದೆಯಾದರೂ ಆತ್ಮನಿರೀಕ್ಷಣೆ ಮಾಡಿಕೊಳ್ಳಬೇಕು ಮತ್ತು ಕಾರ್ಯವೈಖರಿ-ತತ್ವನೀತಿಗಳನ್ನು ತಿದ್ದಿಕೊಳ್ಳಬೇಕೆಂದು ಆ ಪಕ್ಷದ ಹಿರಿಯ ನಾಯಕ ಬರ್ನಿ ಸ್ಯಾಂಡರ್ಸ್ ತಾಕೀತು ಮಾಡಿದ್ದಾರೆ.
ಅಮೆರಿಕದ ರಾಜಕೀಯ ಭವಿಷ್ಯ ಮತ್ತು ಡೆಮಾಕ್ರಟ್ ಪಕ್ಷದ ಪ್ರಸ್ತುತ ಸ್ಥಿತಿಗತಿಯ ಕುರಿತು ಅತ್ಯಂತ ಕಠಿಣ ಹಾಗೂ ದಿಟ್ಟ ವಿಶ್ಲೇಷಣೆ ನಡೆಸಿರುವ ಹಿರಿಯ ನಾಯಕ ಬರ್ನಿ ಸ್ಯಾಂಡರ್ಸ್, ಡೆಮಾಕ್ರಟ್ ಪಕ್ಷವು ತನ್ನ ಮೂಲ ತತ್ವಗಳಿಂದ ದೂರ ಸರಿದಿದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ. ಕಾರ್ಮಿಕರ, ಶ್ರಮಿಕರ ಮತ್ತು ಸಾಮಾನ್ಯ ಅಮೆರಿಕನ್ನರ ಹಿತಾಸಕ್ತಿಯನ್ನು ಕಡೆಗಣಿಸಿ, ಬಂಡವಾಳಶಾಹಿಗಳ ಹಾಗೂ ಕಾರ್ಪೊರೇಟ್ ಪ್ರಭಾವಕ್ಕೆ ಒಳಗಾಗಿರುವುದೇ ಪಕ್ಷ ಜನರಿಂದ ದೂರ ಸರಿದಿದೆ. ಈ ದೂರವನ್ನು ಕಾಯಮ್ಮಾಗಿ ತಗ್ಗಿಸಬೇಕಿದ್ದರೆ ತಿದ್ದಿಕೊಳ್ಳುವುದು ಮುಖ್ಯವೆಂದು ಅವರು ಪ್ರತಿಪಾದಿಸಿದ್ದಾರೆ.
ಸ್ಯಾಂಡರ್ಸ್ ಅವರ ಪ್ರಕಾರ, ಡೆಮಾಕ್ರಟ್ ಪಕ್ಷವು ಐತಿಹಾಸಿಕವಾಗಿ ಅಮೆರಿಕದ ಕಾರ್ಮಿಕ ವರ್ಗದ ಬೆನ್ನೆಲುಬಾಗಿತ್ತು. ಆದರೆ ಇತ್ತೀಚಿನ ವರ್ಷಗಳಲ್ಲಿ, ಪಕ್ಷವು ಕೆಲಸಗಾರರ ಮತ್ತು ಶ್ರಮಜೀವಿಗಳ ದೈನಂದಿನ ಸಂಕಟಗಳನ್ನು (ಆರ್ಥಿಕ ಸಂಕಷ್ಟ, ಹೆಚ್ಚುತ್ತಿರುವ ಜೀವನ ವೆಚ್ಚಗಳು) ಪರಿಣಾಮಕಾರಿಯಾಗಿ ನಿರ್ವಹಿಸುವಲ್ಲಿ ವಿಫಲವಾಗಿದೆ. “ಕಾರ್ಮಿಕ ವರ್ಗವು ತಮ್ಮನ್ನು ಕೈಬಿಟ್ಟಿದೆ ಎಂದು ಡೆಮಾಕ್ರಟರು ಭಾವಿಸಿದರೆ, ನಿಜಕ್ಕೂ ಡೆಮಾಕ್ರಟಿಕ್ ಪಕ್ಷವೇ ಕಾರ್ಮಿಕ ವರ್ಗವನ್ನು ಮೊದಲು ಕೈಬಿಟ್ಟಿದೆ” ಎಂದು ಸ್ಯಾಂಡರ್ಸ್ ಬಲವಾಗಿ ಉಲ್ಲೇಖಿಸಿದ್ದಾರೆ.
ಡೆಮಾಕ್ರಟ್ ಪಕ್ಷವು ತನ್ನ ಧೋರಣೆಗಳಲ್ಲಿ ತಕ್ಷಣವೇ ಮಾಡಿಕೊಳ್ಳಬೇಕಾದ ಪ್ರಮುಖ ಬದಲಾವಣೆಗಳನ್ನು ಸ್ಯಾಂಡರ್ಸ್ ಪಟ್ಟಿ ಮಾಡಿದ್ದಾರೆ. ಆರೋಗ್ಯ ರಕ್ಷಣೆಯನ್ನು ಪ್ರತಿಯೊಬ್ಬ ನಾಗರಿಕನ ಮೂಲಭೂತ ಹಕ್ಕು ಎಂದು ಪರಿಗಣಿಸಬೇಕು. ಪ್ರಾಸಂಗಿಕ ಆಸ್ಪತ್ರೆ ವೆಚ್ಚಗಳಿಂದ ಕೋಟ್ಯಂತರ ಜನ ಸಾಲಕ್ಕೆ ಸಿಲುಕುತ್ತಿದ್ದು, ಕಾರ್ಪೊರೇಟ್ ವಿಮಾ ಕಂಪನಿಗಳ ಹಿತಾಸಕ್ತಿ ಕಾಯುವುದನ್ನು ಡೆಮಾಕ್ರಟರು ನಿಲ್ಲಿಸಬೇಕು ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಅಮೆರಿಕದ ಮೊದಲ ಮುಸ್ಲಿಂ ಸೆನೇಟರ್ ಆಗಲಿದ್ದಾರೆಯೇ ಡಾ ಅಬ್ದುಲ್ ಎಲ್-ಸಯದ್?
ಕನಿಷ್ಠ ವೇತನವನ್ನು ಗಣನೀಯವಾಗಿ ಹೆಚ್ಚಿಸಿ, ಶ್ರಮಿಕರಿಗೆ ಗೌರವಯುತ ಜೀವನ ನಡೆಸಲು ಅವಕಾಶ ಕಲ್ಪಿಸಬೇಕು. ಚುನಾವಣಾ ನಿಧಿ ಮತ್ತು ಪಕ್ಷದ ನೀತಿ-ನಿಯಮಗಳಲ್ಲಿ ಕಾರ್ಪೊರೇಟ್ ಕೋಟ್ಯಾಧಿಪತಿಗಳ ಪ್ರಭಾವವನ್ನು ಸಂಪೂರ್ಣವಾಗಿ ಹತೋಟಿಗೆ ತರಬೇಕು. ಯುವಜನತೆಗೆ ಸಾಲದ ಹೊರೆಯಾಗದಂತೆ ಉನ್ನತ ಶಿಕ್ಷಣ ಲಭ್ಯವಾಗುವಂತೆ ಮಾಡುವುದು ಮತ್ತು ಭವಿಷ್ಯದ ಉದ್ಯೋಗ ಭದ್ರತೆಯನ್ನು ಒದಗಿಸುವುದು ಎಂದು ಹೇಳಿದ್ದಾರೆ.
ಕೇವಲ ಚುನಾವಣಾ ತಂತ್ರಗಾರಿಕೆ ಅಥವಾ ಮೇಲ್ನೋಟದ ಪ್ರಚಾರಗಳಿಂದ ಜನರ ನಂಬಿಕೆ ಗೆಲ್ಲಲು ಸಾಧ್ಯವಿಲ್ಲ. ಡೆಮಾಕ್ರಟ್ ಪಕ್ಷವು ತನ್ನ ಸಿದ್ಧಾಂತದಲ್ಲಿ ಆಮೂಲಾಗ್ರ ಬದಲಾವಣೆ ತರಬೇಕು. ಸಾಮಾನ್ಯ ಜನರ ದೈನಂದಿನ ಬದುಕಿನ ಜ್ವಲಂತ ಸಮಸ್ಯೆಗಳಿಗೆ ಪ್ರತ್ಯಕ್ಷ ಪರಿಹಾರ ನೀಡುವ ಧೈರ್ಯಶಾಲಿ ನೀತಿಗಳನ್ನು ಪಕ್ಷವು ತನ್ನ ಕಾರ್ಯಸೂಚಿಯನ್ನಾಗಿ ಮಾಡಿಕೊಳ್ಳಬೇಕು ಎಂದು ತಿಳಿಸಿದ್ದಾರೆ.
ಬರ್ನಿ ಸ್ಯಾಂಡರ್ಸ್ ಅವರು ನೀಡಿರುವ ಈ ಖಡಕ್ ಎಚ್ಚರಿಕೆಯು ಕೇವಲ ಡೆಮಾಕ್ರಟ್ ಪಕ್ಷದ ಪ್ರಸ್ತುತ ಸ್ಥಿತಿಗೆ ಹಿಡಿದ ಕನ್ನಡಿಯಷ್ಟೇ ಅಲ್ಲ; ಅದು ಅಮೆರಿಕದ ಭವಿಷ್ಯದ ರಾಜಕೀಯ ದಿಕ್ಸೂಚಿಯನ್ನೂ ಸೂಚಿಸುತ್ತಿದೆ. ಪಕ್ಷದ ಉನ್ನತ ನಾಯಕತ್ವವು ಕಾರ್ಪೊರೇಟ್ ಶಕ್ತಿಗಳ ಸಾಮೀಪ್ಯದಿಂದ ಹೊರಬಂದು, ದೇಶದ ನೈಜ ತಳಹದಿಯಾಗಿರುವ ಶ್ರಮಿಕ ವರ್ಗ, ಮಧ್ಯಮ ವರ್ಗ ಮತ್ತು ಯುವ ಸಮುದಾಯದ ನೈಜ ಆಕಾಂಕ್ಷೆಗಳಿಗೆ ಸೂಕ್ತವಾಗಿ ಸ್ಪಂದಿಸದಿದ್ದರೆ, ಜನಪ್ರಿಯತೆಯನ್ನು ಸಂಪೂರ್ಣವಾಗಿ ಕಳೆದುಕೊಳ್ಳುವ ಅಪಾಯವಿದೆ ಎಂಬ ಸ್ಪಷ್ಟ ಸಂದೇಶವನ್ನು ಇದು ರವಾನಿಸಿದೆ.
ಡೆಮಾಕ್ರಟ್ ಪಕ್ಷವು ತಾನು ಐತಿಹಾಸಿಕವಾಗಿ ಅಳವಡಿಸಿಕೊಂಡಿದ್ದ ಕಾರ್ಮಿಕ ಪರ ಸಿದ್ಧಾಂತಗಳಿಗೆ ಮರುಜೀವ ನೀಡಬೇಕಾದ ನಿರ್ಣಾಯಕ ಹಂತದಲ್ಲಿ ನಿಂತಿದೆ. ಉದ್ಯೋಗ ಭದ್ರತೆ, ಸುಲಭವಾಗಿ ಲಭ್ಯವಾಗುವ ಉಚಿತ ಮತ್ತು ಉತ್ತಮ ಆರೋಗ್ಯ ಸೇವೆ, ಗುಣಮಟ್ಟದ ಶಿಕ್ಷಣ ಮತ್ತು ಬದುಕುವ ವೆಚ್ಚಗಳ ಮೇಲಿನ ನಿಯಂತ್ರಣದಂತಹ ಮೂಲಭೂತ ಪ್ರಜೆಗಳ ಹಕ್ಕುಗಳನ್ನು ಪಕ್ಷವು ತನ್ನ ಮುಖ್ಯ ಕಾರ್ಯಸೂಚಿಯನ್ನಾಗಿ ಮರುರೂಪಿಸಿಕೊಳ್ಳಬೇಕಿದೆ. ಕೇವಲ ಚುನಾವಣಾ ತಂತ್ರಗಾರಿಕೆಗಳು, ಮೇಲ್ನೋಟದ ಜಾಹೀರಾತುಗಳು ಅಥವಾ ಎದುರಾಳಿ ಪಕ್ಷಗಳ ಲೋಪದೋಷಗಳನ್ನು ತೋರಿಸಿ ಮತ ಕೇಳುವ ಸಾಂಪ್ರದಾಯಿಕ ಶೈಲಿ ಇನ್ನು ಮುಂದೆ ಕೆಲಸ ಮಾಡುವುದಿಲ್ಲ ಎಂಬುದನ್ನು ಸ್ಯಾಂಡರ್ಸ್ ಪ್ರತಿಪಾದಿಸಿದ್ದಾರೆ.




