ಹಾವಂಜೆ ಗೋಳಿಕಟ್ಟೆಯಲ್ಲಿ ನೂತನವಾಗಿ ನಿರ್ಮಿಸಲಾದ ಅಲ್ ಫಲಾಹ್ ಜುಮ್ಮಾ ಮಸೀದಿಯ ಉದ್ಘಾಟನಾ ಸಮಾರಂಭ ಬುಧವಾರ ಧಾರ್ಮಿಕ ವಿಧಿವಿಧಾನಗಳು ಹಾಗೂ ವಿವಿಧ ಕಾರ್ಯಕ್ರಮಗಳೊಂದಿಗೆ ನಡೆಯಿತು.
ಉಡುಪಿ ಜಿಲ್ಲಾ ಖಾಝಿ ಝೈನುಲ್ ಉಲಮಾ ಎಂ. ಅಬ್ದುಲ್ ಹಮೀದ್ ಮುಸ್ಲಿಯಾರ್ ಮಾಣಿ ಅವರು ನೂತನ ಮಸೀದಿಯನ್ನು ಉದ್ಘಾಟಿಸಿ, ವಕ್ಫ್ ಸಮರ್ಪಣೆ ನೆರವೇರಿಸಿದರು. ಬಳಿಕ ವಿಶೇಷ ದುವಾ ಪ್ರಾರ್ಥನೆ ನಡೆಸಿ ಮಸೀದಿಯ ಅಭಿವೃದ್ಧಿ, ಸಮುದಾಯದ ಏಳಿಗೆ ಹಾಗೂ ಸಮಾಜದಲ್ಲಿ ಶಾಂತಿ ಮತ್ತು ಸೌಹಾರ್ದತೆ ನೆಲೆಸುವಂತೆ ಪ್ರಾರ್ಥಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಮಸೀದಿ ಅಲ್ಲಾಹನ ಭವನವಾಗಿದ್ದು, ಅದರ ಪಾವಿತ್ರ್ಯತೆ ಮತ್ತು ಗೌರವವನ್ನು ಕಾಪಾಡುವುದು ಪ್ರತಿಯೊಬ್ಬ ಮುಸ್ಲಿಮನ ಪವಿತ್ರ ಕರ್ತವ್ಯವಾಗಿದೆ. ಮಸೀದಿಯ ಶಿಸ್ತು, ಗೌರವ ಹಾಗೂ ಧಾರ್ಮಿಕ ಪಾವಿತ್ರ್ಯವನ್ನು ಸಂರಕ್ಷಿಸುವುದರ ಜೊತೆಗೆ ಸಮಾಜದ ಎಲ್ಲ ವರ್ಗದ ಜನರೊಂದಿಗೆ ಸೌಹಾರ್ದತೆ, ಸಹಬಾಳ್ವೆ ಮತ್ತು ಐಕ್ಯತೆಯಿಂದ ಬದುಕಬೇಕು ಎಂದು ಕರೆ ನೀಡಿದರು.
ಪರಸ್ಪರ ಗೌರವ, ಪ್ರೀತಿ ಮತ್ತು ಸಹಕಾರದ ಮನೋಭಾವವನ್ನು ಬೆಳೆಸಿಕೊಂಡಾಗ ಮಾತ್ರ ಸಮಾಜದಲ್ಲಿ ಶಾಂತಿ ಹಾಗೂ ಸಾಮರಸ್ಯವನ್ನು ಸ್ಥಾಪಿಸಲು ಸಾಧ್ಯ. ಧಾರ್ಮಿಕ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದರೊಂದಿಗೆ ಇತರ ಧರ್ಮಗಳ ಜನರ ಭಾವನೆಗಳಿಗೂ ಗೌರವ ನೀಡಬೇಕು. ಸಮಾಜದಲ್ಲಿ ಒಗ್ಗಟ್ಟು ಮತ್ತು ಸಹಬಾಳ್ವೆಯನ್ನು ಬಲಪಡಿಸುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ ಎಂದು ಅವರು ತಿಳಿಸಿದರು.
ಖಾಝಿ ಮಾಣಿ ಉಸ್ತಾದ್‌ಗೆ ಗೌರವಾರ್ಪಣೆ
ಇದೇ ಸಂದರ್ಭದಲ್ಲಿ ಅಲ್ ಫಲಾಹ್ ಜುಮ್ಮಾ ಮಸೀದಿಯ ವತಿಯಿಂದ ಉಡುಪಿ ಜಿಲ್ಲಾ ಖಾಝಿ ಝೈನುಲ್ ಉಲಮಾ ಎಂ. ಅಬ್ದುಲ್ ಹಮೀದ್ ಮುಸ್ಲಿಯಾರ್ ಮಾಣಿ ಅವರನ್ನು ಖಾಝಿಯಾಗಿ ಸ್ವೀಕರಿಸಿ ಗೌರವಿಸಲಾಯಿತು. ಮಸೀದಿಯ ಖತೀಬ್ ಅಬ್ದುಲ್ ರಝಾಕ್ ಅಲ್ ಮದನಿ ಅಲ್ ಪುರ್ಖಾನಿ ಅವರು ಧಾರ್ಮಿಕ ಪ್ರಭಾಷಣ ಮಾಡಿದರು.
ಮಸೀದಿ ನಿರ್ಮಾಣ ಕಾರ್ಯದಲ್ಲಿ ಮುಂಚೂಣಿಯಲ್ಲಿ ನಿಂತು ಶ್ರಮಿಸಿದ ಹಬೀಬುಲ್ಲ ಗೋಳಿಕಟ್ಟೆ ಅವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಿ ಗೌರವಿಸಲಾಯಿತು. ಮಸೀದಿಯ ನಿರ್ಮಾಣ ಕಾರ್ಯದಲ್ಲಿ ಸಹಕರಿಸಿದವರ ಸೇವೆಯನ್ನು ಸ್ಮರಿಸಲಾಯಿತು.
ಕಾರ್ಯಕ್ರಮದಲ್ಲಿ ಅಸ್ಸಯ್ಯಿದ್ ಜಾಫರ್ ಅಸ್ಸಖಾಫ್ ತಂಳ್ ಕೋಟೇಶ್ವರ, ಇಸ್ಮಾಯಿಲ್ ಮದನಿ ಮಾವಿನಕಟ್ಟೆ, ಬಶೀರ್ ಮದನಿ ಕಟಪಾಡಿ, ಹನೀಫ್ ಮದನಿ ಅಂಬಾಗಿಲು, ಉಮರ್ ಮದನಿ ಕಾಮಿಲ್, ಇಸ್ಮಾಯಿಲ್ ಸಖಾಫಿ ಆತ್ರಾಡಿ, ನೌಫಲ್ ಮದನಿ ಕುಂಜಾಲು, ಅಬ್ದುರ್ರಶೀದ್ ಸಖಾಫಿ ಮಜೂರು, ಶರೀಫ್ ಮುಸ್ಲಿಯಾರ್ ಮಟಪಾಡಿ, ಹಾಜಿ ಅಬೂಬಕ್ಕರ್ ನೇಜಾರು, ಕೆ.ಪಿ. ಇಬ್ರಾಹಿಂ ಮಟಪಾಡಿ ಹಾಗೂ ಇಕ್ಬಾಲ್ ಕುಂಜಾಲು ಅತಿಥಿಗಳಾಗಿ ಭಾಗವಹಿಸಿದ್ದರು.
ಮಸೀದಿ ಅಧ್ಯಕ್ಷ ಜಿ.ಎ. ರೆಹಮಾನ್, ಗೌರವಾಧ್ಯಕ್ಷ ಇಸ್ಮಾಯಿಲ್ ಸಾಹೇಬ್, ಪ್ರಧಾನ ಕಾರ್ಯದರ್ಶಿ ಶಂಶುದ್ದೀನ್ ಮೊಹಮ್ಮದ್, ಗೋಳಿಕಟ್ಟೆ ಹಿದಾಯುತುಲ್ ಇಸ್ಲಾಂ ಮದರಸ ಸಮಿತಿ ಅಧ್ಯಕ್ಷ ಮೊಹಮ್ಮದ್ ಅಲಿ ಹಾಗೂ ಅಲ್ ಫಲಾಹ್ ಯಂಗ್‌ಮೆನ್ಸ್ ಅಧ್ಯಕ್ಷ ಮೊಹಮ್ಮದ್ ಸಿರಾಜ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
ಸುನ್ನೀ ಕೋ ಆರ್ಡಿನೇಷನ್ ಜಿಲ್ಲಾಧ್ಯಕ್ಷ ಕೆ.ಎ. ಅಬ್ದುರ್ರಹ್ಮಾನ್ ರಝ್ವಿ ಅಲ್ ಫುರ್ಖಾನಿ ಕಲ್ಕಟ್ಟ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಹನೀಫ್ ಗೋಳಿಕಟ್ಟೆ ಸ್ವಾಗತಿಸಿದರು.
ಸಾರ್ವಜನಿಕರಿಗಾಗಿ ಮಸೀದಿ ಸಂದರ್ಶನ ಕಾರ್ಯಕ್ರಮ
ನೂತನ ಮಸೀದಿಯ ಉದ್ಘಾಟನೆಯ ಅಂಗವಾಗಿ ಧಾರ್ಮಿಕ ಸೌಹಾರ್ದತೆ ಹಾಗೂ ಪರಸ್ಪರ ಅರಿವು ಮೂಡಿಸುವ ಉದ್ದೇಶದಿಂದ ಸಾರ್ವಜನಿಕರಿಗಾಗಿ ವಿಶೇಷ ಮಸೀದಿ ಸಂದರ್ಶನ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಬೆಳಗ್ಗೆಯಿಂದ ಸಂಜೆಯವರೆಗೆ ನಡೆದ ಈ ಕಾರ್ಯಕ್ರಮದಲ್ಲಿ ಸ್ಥಳೀಯ ವಿವಿಧ ಧರ್ಮಗಳ ಮುಖಂಡರು ಹಾಗೂ ಸಾರ್ವಜನಿಕರು ಮಸೀದಿಗೆ ಭೇಟಿ ನೀಡಿದರು.
ಮಸೀದಿಯ ವಾಸ್ತುಶಿಲ್ಪ, ಪ್ರಾರ್ಥನಾ ವ್ಯವಸ್ಥೆ, ಧಾರ್ಮಿಕ ಆಚರಣೆಗಳು ಹಾಗೂ ಮಸೀದಿಯ ಕಾರ್ಯಚಟುವಟಿಕೆಗಳ ಕುರಿತು ಮಾಹಿತಿ ಪಡೆದುಕೊಂಡರು. ವಿವಿಧ ಧರ್ಮಗಳ ಜನರು ಒಂದೇ ವೇದಿಕೆಯಲ್ಲಿ ಸೇರಿ ಪರಸ್ಪರ ವಿಚಾರ ವಿನಿಮಯ ನಡೆಸುವ ಮೂಲಕ ಸೌಹಾರ್ದತೆ ಮತ್ತು ಸಹಬಾಳ್ವೆಯ ಮಹತ್ವವನ್ನು ಸಾರಿದರು.
ಜಮಾಅತೆ ಇಸ್ಲಾಮೀ ಹಿಂದ್ ಕಾರ್ಯಕರ್ತ ಆಸೀಫ್ ಇಕ್ಬಾಲ್, ಕರ್ನಾಟಕ ಫಾರ್ವಡ್ ಟ್ರಸ್ಟ್‌ನ ಕುಟುಂಬ ಸಮಾಲೋಚಕಿ ಹುಮೈರಾ ಕಾರ್ಕಳ ಹಾಗೂ ಜೆಐಎಚ್ ಸದಸ್ಯೆ ರೇಷ್ಮಾ ಬೈಲೂರು ಅವರು ಸಾರ್ವಜನಿಕ ಮಸೀದಿ ಸಂದರ್ಶನ ಕಾರ್ಯಕ್ರಮವನ್ನು ನಡೆಸಿಕೊಟ್ಟರು.
ನೂತನ ಮಸೀದಿಯ ಉದ್ಘಾಟನೆಯೊಂದಿಗೆ ಧಾರ್ಮಿಕ ಚಟುವಟಿಕೆಗಳಿಗೆ ಹೊಸ ವೇದಿಕೆ ನಿರ್ಮಾಣವಾಗಿದ್ದು, ಸಾರ್ವಜನಿಕ ಮಸೀದಿ ಸಂದರ್ಶನದ ಮೂಲಕ ವಿವಿಧ ಧರ್ಮಗಳ ನಡುವೆ ಪರಸ್ಪರ ಅರಿವು, ಗೌರವ ಮತ್ತು ಸೌಹಾರ್ದತೆಯನ್ನು ಬೆಳೆಸುವ ಸಂದೇಶವೂ ಕಾರ್ಯಕ್ರಮದಲ್ಲಿ ವ್ಯಕ್ತವಾಯಿತು.







