ಮಾದಕ ವಸ್ತು ಮಾರಾಟ ದಂಧೆಯಲ್ಲಿ ಭಾಗಿಯಾಗಿ ಸಾರ್ವಜನಿಕರ ಶಾಂತಿ, ನೆಮ್ಮದಿಗೆ ಕಂಟಕವಾಗಿದ್ದ ಇಬ್ಬರು ರೌಡಿಗಳನ್ನು ರಾಜ್ಯದ ಪ್ರತ್ಯೇಕ ಜಿಲ್ಲೆಗಳಿಗೆ ಗಡಿಪಾರು ಮಾಡಿ ಬೀದರ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ ಗುಂಟಿ ಅವರು ಆದೇಶ ಹೊರಡಿಸಿದ್ದಾರೆ.
ಬೀದರ್ ನಗರದ ಮಾಂಗರವಾಡಿ ಗಲ್ಲಿಯ ಸಹೋದರರಾದ ವಿಕಾಸ ಈಶ್ವರ ಕಸಬೆ ಮತ್ತು ಸುದೇಶ ಈಶ್ವರ ಕಸಬೆ ಗಡಿಪಾರಾದ ರೌಡಿಶೀಟರ್‌ಗಳು. ವಿಕಾಶ ಕಸಬೆ ರಾಯಚೂರು ಜಿಲ್ಲೆ ಮತ್ತು ಸುದೇಶ ಕಸಬೆಗೆ ಕೊಪ್ಪಳ ಜಿಲ್ಲೆಗೆ ಗಡಿಪಾರು ಮಾಡಲಾಗಿದೆ ಎಂದು ಎಸ್ಪಿ ಪ್ರದೀಪ ಗುಂಟಿ ಅವರು ಸೋಮವಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮಾರ್ಕೆಟ್ ಪೊಲೀಸ್ ಠಾಣೆಯ ನಿವಾಸಿಗಳಾದ ವಿಕಾಸ ಕಸಬೆ ಹಾಗೂ ಸುದೇಶ ಕಸಬೆ ಅವರು ಬೀದರ್ ಜಿಲ್ಲೆಯ ವಿವಿಧ ಸ್ಥಳಗಳಲ್ಲಿ ಮಾದಕ ವಸ್ತು ಹಾಗೂ ಸಿರಫ್‌ಗಳನ್ನು ಕಾಲೇಜು ವಿದ್ಯಾರ್ಥಿಗಳಿಗೆ, ಯುವಕರಿಗೆ ಹಾಗೂ ಸಾರ್ವಜನಿಕರಿಗೆ ಮಾರಾಟ ಮಾಡಿ ಕಾನೂನು ವಿರುದ್ಧ ಕೃತ್ಯ ಎಸಗುತ್ತಿದ್ದರು. ಅಪರಾಧಿಕ ಕೃತ್ಯ ತಡೆಯಲು ನಗರದ ಮಾರ್ಕೆಟ್, ಗಾಂಧಿಗಂಜ ಹಾಗೂ ಅಬಕಾರಿ ಠಾಣೆಗಳಲ್ಲಿ ವಿಕಾಶ ವಿರುದ್ಧ ವಿವಿಧ ಠಾಣೆಗಳಲ್ಲಿ 4 ಹಾಗೂ ಸುದೇಶ ವಿರುದ್ಧ ಮಾರ್ಕೆಟ್, ಗಾಂಧಿ ಗಂಜ ಠಾಣೆಯಲ್ಲಿ 3 ಎನ್‌ಡಿಪಿಎಸ್ ಕಾಯ್ದೆ ಅಡಿಯಲ್ಲಿ ಪ್ರಕರಣಗಳು ದಾಖಲಿಸಲಾಗಿತ್ತು.
ಆದರೆ, ಇಬ್ಬರು ತಮ್ಮ ಹಳೆ ಚಾಳಿ ಬಿಡದೆ ಅಪರಾಧಿಕ ಕೃತ್ಯಗಳನ್ನು ಮುಂದುವರೆಸಿದ ಹಿನ್ನೆಲೆ ಸಮಾಜದ ಶಾಂತಿ ಪಾಲನೆ ಮತ್ತು ಕಾನೂನು ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ಬೀದರ್ ಜಿಲ್ಲೆಯಿಂದ ಅನ್ಯ ಜಿಲ್ಲೆಗಳಿಗೆ ಗಡಿಪಾರು ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ : ಕನೇರಿ ಶ್ರೀ ಬಸವಕಲ್ಯಾಣ ಪ್ರವೇಶಕ್ಕೆ ತಡೆ ನೀಡಿ : ಸಚಿವ ಈಶ್ವರ ಖಂಡ್ರೆಗೆ ಮನವಿ ಸಲ್ಲಿಸಿದ ಮಠಾಧೀಶರ ಒಕ್ಕೂಟ
ಜಿಲ್ಲೆಯಲ್ಲಿ ಕಾನೂನು ವಿರುದ್ಧ ಚಟುವಟಿಕೆಯಲ್ಲಿ ಭಾಗಿಯಾಗಿ, ಕಾನೂನು ಮತ್ತು ಸುವ್ಯವಸ್ಥೆಯಲ್ಲಿ ಅಡೆತಡೆಯನ್ನುಂಟು ಮಾಡುವವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು ಹಾಗೂ ಗಡಿಪಾರು ಮಾಡಲಾಗುವುದು. ಜಿಲ್ಲೆಯ ನಾಗರಿಕರು ಯಾವುದೇ ಕಾನೂನು ವಿರುದ್ದ ಚಟುವಟಿಕೆಯಲ್ಲಿ ಭಾಗಿಯಾಗಿ ಕಾನೂನು ಸಂಘರ್ಷದಲ್ಲಿ ಅಮೂಲ್ಯವಾದ ತನ್ನ ಹಾಗೂ ತನ್ನ ಕುಟುಂಬದ ಜೀವನವನ್ನು ಹಾಳುಮಾಡಿಕೊಳ್ಳಬೇಡಿ ಎಂದು ಜಿಲ್ಲೆಯ ಸಾರ್ವಜನಿಕರಲ್ಲಿ ಜಿಲ್ಲಾ ಪೊಲೀಸ್ ಕಚೇರಿ ಕೋರಿದೆ.




