ತಮ್ಮದೇ ಆದ ವಿಶಿಷ್ಟ ಶೈಲಿ ಮತ್ತು ಮ್ಯಾನರಿಸಂನಿಂದ ಸ್ಯಾಂಡಲ್‌ವುಡ್‌ನಲ್ಲಿ ಅಪ್ರತಿಮ ಸಾಮ್ರಾಜ್ಯ ಕಟ್ಟಿರುವ ರಘು ಅವರು, ಈಗ ತಮ್ಮ 400ನೇ ಮೈಲಿಗಲ್ಲಿನ ಚಿತ್ರ 'ಹೊಸ ಜೀವನ'ದ ಮೂಲಕ ಮತ್ತೊಂದು ಇನ್ನಿಂಗ್ಸ್ ಆರಂಭಿಸಿದ್ದಾರೆ. ಮೋಹನ್ ಕುಮಾರ್ ಹನುಮಯ್ಯ ನಿರ್ದೇಶನದಲ್ಲಿ ಮೂಡಿಬರುತ್ತಿರುವ, ಸ್ನೇಹ, ಪ್ರೀತಿ ಮತ್ತು ಜೀವನದ ಹೋರಾಟದ ಸುತ್ತ ಸಾಗುವ ಈ ಚಿತ್ರದ ಕಥೆ ಕೇಳಿದ ತಕ್ಷಣ ರಘು ಅವರಿಗೆ ʼಇದು ನನ್ನದೇ ಪಾತ್ರʼ ಅಂತ ಕಣ್ಣಮುಂದೆ ಬಂತಂತೆ!
ಯಾವುದೇ ಚಿತ್ರರಂಗದಲ್ಲಿ ನಾಯಕ ನಟರು ಚಿತ್ರದ ಒಂದು ತೂಕವಾದರೆ, ಆ ಚಿತ್ರಕ್ಕೆ ಜೀವ ತುಂಬಿ ಮುನ್ನಡೆಸುವ ಇನ್ನೊಂದು ತೂಕ ಪೋಷಕ ಹಾಗೂ ಹಾಸ್ಯ ನಟರು. ಇಡೀ ಚಿತ್ರವನ್ನ ನೋಡಿಸಿಕೊಂಡು ಹೋಗುವ ಶಕ್ತಿ ಅವರಿಗಿರುತ್ತದೆ. ಪೋಷಕ ಪಾತ್ರಗಳ ಪ್ರಭಾವದಿಂದಲೇ ಗೆದ್ದ ಸಿನಿಮಾಗಳಿವೆ. ಕಮಿಡಿಯನ್ ಆಗಿ, ಪೋಷಕರಾಗಿ ನಟಿಸಿದವರು ಮುಂದೆ ನಾಯಕನಾಗಿ ನಟಿಸಿದ ಸಿನಿಮಾಗಳ ಸಂಖ್ಯೆಯೂ ಸಾಕಷ್ಟಿವೆ. ಅಂತಹ ಪ್ರಭಾವಶಾಲಿ ನಟರ ಸಾಲಿನಲ್ಲಿ ಮುಂಚೂಣಿಯಲ್ಲಿ ನಿಲ್ಲುವ ಹೆಸರು ‘ರಂಗಾಯಣ ರಘು’. ರಂಗಭೂಮಿಯ ಹಿನ್ನೆಲೆಯಿಂದ ಬಂದು, ಬೆಳ್ಳಿಪರದೆಯ ಮೇಲೆ ತಮ್ಮದೇ ಆದ ವಿಶಿಷ್ಟ ಮ್ಯಾನರಿಸಂ ಮತ್ತು ಕಂಠಸಿರಿಯಿಂದ ದೊಡ್ಡ ಫ್ಯಾನ್ ಬೇಸ್ ಸಂಪಾದಿಸಿರುವ ಹಿರಿಯ ನಟ ರಘು ಈಗ 400 ಚಿತ್ರಗಳ ಸರದಾರ.
“ತಲೆ ಬಾಚ್ಕಳಿ, ಪೌಡ್ರ್ ಹಾಕ್ಕಳಿ, ಗೀವ್ ಮಿ ಟೆನ್ ರುಪೀಸ್ ದುನಿಯಾ ತುಂಬ ಕಾಸ್ಟ್ಲಿ…” ಇದೊಂದು ಕನ್ನಡ ಸಿನಿಮಾದ ವಿಚಿತ್ರವೆನಿಸಿದರೂ ಸೂಪರ್ ಆಗಿರೋ ಸಿಗ್ನೇಚರ್ ಡೈಲಾಗ್. ಇದರ ಓನರ್ ಒನ್ ಅಂಡ್ ಓನ್ಲಿ ರಂಗಾಯಣ ರಘು. ತುಮಕೂರು ಜಿಲ್ಲೆಯ ಪಾವಗಡ ತಾಲೂಕಿನ ಕೊಟ್ಟೂರಿನಲ್ಲಿ ಬಯಲಾಟದ ಕಲಾವಿದರಾಗಿದ್ದ ಚಿಕರಂಗಪ್ಪಶೆಟ್ಟಿಯವರ ಮಗನಾಗಿ ಜನಿಸಿದ ರಘುನಾಥ್, ನಟನೆಯ ಗೀಳು ಹತ್ತಿಸಿಕೊಂಡು ತಲುಪಿದ್ದು ಮೈಸೂರಿನ ಹೆಮ್ಮೆಯ ‘ರಂಗಾಯಣ’ಕ್ಕೆ. ಅಲ್ಲಿನ ಶಿಸ್ತು, ರಂಗ ಸಂಸ್ಕೃತಿ ಮತ್ತು ದಂತಕಥೆ ಬಿ.ವಿ. ಕಾರಂತರ ಗರಡಿಯಲ್ಲಿ ಪಳಗಿದ ಇವರಿಗೆ ನಟನೆ ಎಂಬುದು ನೀರು ಕುಡಿಯುವಷ್ಟು ಸಲೀಸು. ರಂಗಭೂಮಿ ನೀಡಿದ ಆ ಅದ್ಭುತ ತರಬೇತಿಯೇ ಇವರ ಹೆಸರಿನ ಮುಂದೆ ‘ರಂಗಾಯಣ’ ಎಂಬ ಗೌರವದ ನಾಮಧೇಯ ಶಾಶ್ವತವಾಗಿ ಉಳಿಯುವಂತೆ ಮಾಡಿತು. ರಂಗದ ಮೇಲಿನ ಇವರ ಕೌಶಲ್ಯವೇ ಮುಂದೆ ಚಿತ್ರರಂಗಕ್ಕೆ ದೊಡ್ಡ ಆಸ್ತಿಯಾಯಿತು.

ತಮ್ಮದೇ ಆದ ವಿಶಿಷ್ಟ ಶೈಲಿ ಮತ್ತು ಮ್ಯಾನರಿಸಂನಿಂದ ಸ್ಯಾಂಡಲ್‌ವುಡ್‌ನಲ್ಲಿ ಅಪ್ರತಿಮ ಸಾಮ್ರಾಜ್ಯ ಕಟ್ಟಿರುವ ರಘು ಅವರು, ಈಗ ತಮ್ಮ 400ನೇ ಮೈಲಿಗಲ್ಲಿನ ಚಿತ್ರ ‘ಹೊಸ ಜೀವನ’ದ ಮೂಲಕ ಮತ್ತೊಂದು ಇನ್ನಿಂಗ್ಸ್ ಆರಂಭಿಸಿದ್ದಾರೆ. ಮೋಹನ್ ಕುಮಾರ್ ಹನುಮಯ್ಯ ನಿರ್ದೇಶನದಲ್ಲಿ ಮೂಡಿಬರುತ್ತಿರುವ, ಸ್ನೇಹ, ಪ್ರೀತಿ ಮತ್ತು ಜೀವನದ ಹೋರಾಟದ ಸುತ್ತ ಸಾಗುವ ಈ ಚಿತ್ರದ ಕಥೆ ಕೇಳಿದ ತಕ್ಷಣ ರಘು ಅವರಿಗೆ ʼಇದು ನನ್ನದೇ ಪಾತ್ರʼ ಅಂತ ಕಣ್ಣಮುಂದೆ ಬಂತಂತೆ!
ಮೋಹನ್ ಸಾರಥ್ಯದಲ್ಲಿ ಮೂಡಿ ಬರುತ್ತಿರುವ ಹೊಸ ಜೀವನ ಸಿನಿಮಾದಲ್ಲಿ ರಘು ಅವರಿಗೆ ಪ್ರಭು ಮುಂಡ್ಕೂರ್, ಸ್ವಾತಿ ಮುಪ್ಪಾಲ, ಅಚ್ಯುತ್ ಕುಮಾರ್, ಶಿವರಾಜ್ ಕೆ.ಆರ್ ಪೇಟೆ, ಸುಹಾಸ್ ಅತ್ರೆಯಸ್, ಅಭಿ ಸಾಮ್ರಾಟ್, ಉದಯ್ ಆಚಾರ್ ಹಾಗೂ ಇತರರು ಸಾತ್ ನೀಡಿದ್ದಾರೆ. ಜಿ.ಎಸ್ ಸಂಜೀವ್ ಪ್ರಸಾದ್ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ನಿರ್ದೇಶಕ ಮೋಹನ್ ನಿರ್ಮಾಣದಲ್ಲಿಯೂ ಜೊತೆಯಾಗಿದ್ದಾರೆ. ಚಿತ್ರಕ್ಕೆ ಸುಮುಖ ರಾವ್ ಸಂಗೀತ ನಿರ್ದೇಶನ ಮಾಡಿದ್ದು, ಸುನಾದ್ ಗೌತಮ್ ಹಿನ್ನೆಲೆ ಸಂಗೀತ ಒದಗಿಸಿದ್ದಾರೆ. ಸಂಕಲನದ ಜವಾಬ್ದಾರಿಯನ್ನ ಶಶಿಧರ್ ಗೌಡ ನಿಭಾಯಿಸಿದ್ದಾರೆ. ರಾಜ್ ಕಾಂತ್ ಎಸ್ ಕ್ಯಾಮೆರಾ ಹಿಡಿದಿದ್ದರೆ, ಪ್ರತಾಪ್ ಎಂ ಆರ್ ಸಂಭಾಷಣೆ ಬರೆದಿದ್ದಾರೆ.
ಇನ್ನು 1992ರಲ್ಲಿ ಬಿ.ಸುರೇಶ್ ಅವರ ನಿರ್ದೇಶನದ, ಚಂದನ ವಾಹಿನಿಯಲ್ಲಿ ಪ್ರಸಾರಗೊಂಡ ‘ಕನಸುಗಿತ್ತಿ’ ಟೆಲಿಫಿಲಮ್ (ಯೋಗರಾಜ್ ಭಟ್ ಅವರು ಬರೆದ ಮೊದಲ ಕಥೆ) ಮೂಲಕ ರಂಗಾಯಣ ರಘು ಅವರ ನಟನಾ ಜರ್ನಿ ಶುರುವಾಯಿತು. ರಂಗಭೂಮಿಯ ವೇದಿಕೆಯಿಂದ ಬೆಳ್ಳಿತೆರೆಗೆ ಇವರು ಹೆಜ್ಜೆ ಇಟ್ಟಿದ್ದು ನಾದಬ್ರಹ್ಮ ಹಂಸಲೇಖ ನಿರ್ದೇಶನದ ‘ಸುಗ್ಗಿ’ ಚಿತ್ರದ ಮೂಲಕ. ಆದರೆ, ಆ ಚಿತ್ರ ಬಿಡುಗಡೆಯಾಗಲಿಲ್ಲ.
ರಂಗಭೂಮಿಯಿಂದ ಸಿನಿಮಾಗೆ ಬಂದಾಗ ರಘು ಅವರಿಗೆ ಆರಂಭದಲ್ಲಿ “ಅಯ್ಯೋ ಈ ಸಿನಿಮಾ ಸಾಹವಾಸನೇ ಬೇಡಪ್ಪಾ… ಇಲ್ಲಿ ನಟನೆ ಮಾಡೋಕೆ ಬಿಡಲ್ಲ, ತಟ್ಟನೆ ‘ಕಟ್’ ಅಂತಾರೆ, ಗಂಟೆಗಟ್ಟಲೆ ಸುಮ್ಮನೆ ನಿಂತ್ಕೊಂಡಿರಬೇಕು ಅಂತಾರೆ…” ಅಂತ ಬೇಸರ ಮಾಡಿಕೊಂಡಿದ್ದರಂತೆ. ಸಿನಿಮಾದ ಈ ಲೈಟ್ಸ್-ಕ್ಯಾಮೆರಾ ಜಗತ್ತಿಗೆ ಸಂಪೂರ್ಣವಾಗಿ ಅಡ್ಜಸ್ಟ್ ಆಗಲು ಇವರಿಗೆ ಬರೋಬ್ಬರಿ 10 ವರ್ಷ ಬೇಕಾಯಿತು. ಆಮೇಲೆ ‘ಭೂಮಿ ತಾಯಿ ಚೊಚ್ಚಲ ಮಗ’, ‘ಮೇಘ ಬಂತು ಮೇಘ’, ‘ಭೂಮಿಗೀತೆ’, ‘ಚಂದ್ರೋದಯ’, ‘ಸಿಂಗಾರವ್ವ’, ‘ಅರಮನೆ’ ಚಿತ್ರಗಳಲ್ಲಿ ನಟಿಸಿದರು.

ಇವರ ಲೈಫ್‌ಗೆ ಅಸಲಿ ಟ್ವಿಸ್ಟ್ ಕೊಟ್ಟಿದ್ದು ಹೀರೋ ಅಷ್ಟೇ ಪ್ರಾಮುಖ್ಯತೆ ಇದ್ದ ಬಿ.ಸುರೇಶ್ ಅವರ ‘ಅರ್ಥ’ ಸಿನಿಮಾ. ಈ ಚಿತ್ರಕ್ಕೆ ರಾಜ್ಯ ಪ್ರಶಸ್ತಿ ಬಂದರೆ, ಇವರಿಗೆ ಬೆಸ್ಟ್ ಆ್ಯಕ್ಟರ್ ಪ್ರಶಸ್ತಿ ಸಿಕ್ಕಿತ್ತು. ಆ ನಂತರ ಕಿಚ್ಚ ಸುದೀಪ್ ಅವರ ‘ಧಮ್’ ಚಿತ್ರದ ಮೂಲಕ ಇವರ ನಟನಾ ಕೌಶಲ್ಯ ಇನ್ನಷ್ಟು ಅನಾವರಣಗೊಂಡಿತು.
ಕನ್ನಡ ಚಿತ್ರರಂಗದ ಇಂದಿನ ಎಲ್ಲ ಪ್ರಮುಖ ಮತ್ತು ಸ್ಟಾರ್ ನಟರೊಂದಿಗೆ ಹಾಸ್ಯ ಹಾಗೂ ಪೋಷಕ ನಟನಾಗಿ ರಂಗಾಯಣ ರಘು ಧೂಳೆಬ್ಬಿಸಿದ್ದಾರೆ. ರಘು ಬರೀ ಕಾಮಿಡಿಗೆ ಸೀಮಿತವಾಗಲಿಲ್ಲ. ದರ್ಶನ್, ಪುನೀತ್ ಸೇರಿದಂತೆ ಹಲವು ಕನ್ನಡದ ಸ್ಟಾರ್ ನಟರ ಚಿತ್ರಗಳಲ್ಲಿ ಯಶಸ್ವೀ ಖಳನಾಯಕನಾಗಿಯೂ ಸೈ ಎನಿಸಿಕೊಂಡಿದ್ದಾರೆ. ‘ರಂಗ ಸಮುದ್ರ’ ಮತ್ತು ಸೂಪರ್ ಹಿಟ್ ‘ಶಾಖಾಹಾರಿ’ಯಂತಹ ವಿಭಿನ್ನ ಚಿತ್ರಗಳಲ್ಲಿ ಇವರೇ ಮುಖ್ಯ ಕಥಾನಾಯಕನಾಗಿಯೂ ಅಭಿನಯಿಸಿ ಪ್ರೇಕ್ಷಕರ ಮನ ಗೆದ್ದಿದ್ದಾರೆ.

2003-4ರಲ್ಲಿ ‘ಮಣಿ’ ಚಿತ್ರಕ್ಕೆ ಹಾಗೂ 2006-7ರಲ್ಲಿ ಚಿತ್ರರಂಗಕ್ಕೇ ದೊಡ್ಡ ತಿರುವು ಕೊಟ್ಟ ‘ದುನಿಯಾ’ ಚಿತ್ರಕ್ಕೆ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ (ಅತ್ಯುತ್ತಮ ಪೋಷಕ ನಟ) ಲಭಿಸಿದೆ. 2006ರಲ್ಲಿ ‘ಸೈನೈಡ್’ ಚಿತ್ರದ ಅದ್ಭುತ ನಟನೆಗೆ ‘ಅತ್ಯುತ್ತಮ ಪೋಷಕ ನಟ’ ಪ್ರಶಸ್ತಿ, 2023ರ ‘ಟಗರು ಪಲ್ಯ’ ಸಿನಿಮಾದಲ್ಲಿ ಇವರು ನಿರ್ವಹಿಸಿದ ತಂದೆಯ ಅದ್ಭುತ ಪಾತ್ರಕ್ಕೂ ಫಿಲ್ಮ್‌ಫೇರ್ ಅತ್ಯುತ್ತಮ ಪೋಷಕ ನಟ ಪ್ರಶಸ್ತಿ ಲಭಿಸಿದೆ. ಇದರೊಂದಿಗೆ ‘ರಾಮ್’ (2009), ‘ಮೊದಲಾಸಲ’ (2010), ‘ಒಲವೆ ಮಂದಾರ’ (2011), ‘ಜಯಮ್ಮನ ಮಗ’ (2013) ಚಿತ್ರಗಳಿಗೆ ಫಿಲ್ಮ್‌ಫೇರ್ ನಾಮನಿರ್ದೇಶನಗೊಂಡಿದ್ದರು.
2011ರಲ್ಲಿ ‘ಸಂಜು ವೆಡ್ಸ್ ಗೀತಾ’ ಚಿತ್ರದ ನೆಗೆಟಿವ್ ಪಾತ್ರಕ್ಕೆ SIIMA ಕೊಡಮಾಡುವ ‘ಅತ್ಯುತ್ತಮ ಖಳನಟ’ ಪ್ರಶಸ್ತಿ ಹಾಗೂ 2012ರಲ್ಲಿ ‘ರೋಮಿಯೋ’ ಚಿತ್ರಕ್ಕೆ ‘ಅತ್ಯುತ್ತಮ ಪೋಷಕ ನಟ’ ಪ್ರಶಸ್ತಿ ಪಡೆದರು. ‘ದುನಿಯಾ’ ಚಿತ್ರಕ್ಕಾಗಿ ‘ಸುವರ್ಣ ಚಲನಚಿತ್ರ ಪ್ರಶಸ್ತಿ’ ಹಾಗೂ ‘ಉದಯ ಚಲನಚಿತ್ರ ಪ್ರಶಸ್ತಿ’ ಕೂಡ ಮುಡಿಗೇರಿಸಿಕೊಂಡಿದ್ದಾರೆ.
ಪ್ರೇಕ್ಷಕರು ಇವರ ‘ಡೈರೆಕ್ಟರ್ ಸ್ಪೆಷಲ್’, ‘ಶ್ರೀರಾಮ್’, ‘ರಂಗ ಎಸ್‌ಎಸ್‌ಎಲ್‌ಸಿ’, ‘ಅಜ್ಞಾತವಾಸಿ’, ‘ಮೂರನೇ ಕೃಷ್ಣಪ್ಪ’, ʼಭಗವಾನ್ʼ, ʼಸ್ವಾಮಿʼ, ʼಧರ್ಮʼ, ತಾಜ್ ಮಹಲ್ʼ, ʼಇಂತಿ ನಿನ್ನ ಪ್ರೀತಿಯʼ, ʼಜಾಕಿʼ ಹಾಗೂ ಇತ್ತೀಚಿನ ‘ಕೃಷ್ಣಂ ಪ್ರಣಯ ಸಖಿ’ಯಂತಹ ವಿಭಿನ್ನ ಚಿತ್ರಗಳ ಪಾತ್ರಗಳನ್ನು ಮರೆಯಲು ಸಾಧ್ಯವೇ ಇಲ್ಲ. ಇಂತಿ ನಿನ್ನ ಪ್ರೀತಿಯ ಚಿತ್ರದಲ್ಲಿ ನಗು ನಗುತ್ತಲೇ ಅಳಿಸಿಬಿಟ್ಟಿದ್ದರು ರಘು. ಅವರ ಪ್ರತಿ ಪಾತ್ರವೂ ಅತ್ಯದ್ಭುತ. ಇದೇ ಕಾರಣಕ್ಕೆ, ಇವತ್ತಿಗೂ ರಿಮೇಕ್ ಚಿತ್ರಗಳ ವ್ಯಾಮೋಹಕ್ಕೆ ಬೀಳದೆ, ನಮ್ಮದೇ ನೆಲದ ಸೊಗಡಿರುವ ಸ್ವಂತ ಕಥೆಗಳನ್ನು ಹೆಣೆಯುವ ಪ್ರತಿಯೊಬ್ಬ ನಿರ್ದೇಶಕರಿಗೂ ರಘು ಮೊದಲ ಆಯ್ಕೆ.
ರಘು TOIನ ಸಂದರ್ಶನವೊಂದರಲ್ಲಿ ಹೀಗೆ ಹೇಳುತ್ತಾರೆ. “ನಾಯಕರಿಗಿಂತ ಭಿನ್ನವಾಗಿ, ಪೋಷಕ/ಖಳ ನಾಯಕರು ನೆನಪಿನಲ್ಲಿ ಉಳಿಯಬೇಕಾದರೆ ಅವರ ಪಾತ್ರಗಳಿಗೆ ವಿಶಿಷ್ಟ ಸ್ಪರ್ಶ ನೀಡಬೇಕು. ಅದಕ್ಕಾಗಿಯೇ, ಗಂಭೀರ ಖಳನಾಯಕರ ಪಾತ್ರಗಳನ್ನು ನಿರ್ವಹಿಸುವ ಬದಲು, ರಂಗ ಎಸ್‌ಎಸ್‌ಎಲ್‌ಸಿ, ಸುಂಟರಗಾಳಿಯಂತಹ ಚಿತ್ರಗಳಲ್ಲಿ ಖಳನಾಯಕನನ್ನು ಸ್ವಲ್ಪ ಇಷ್ಟವಾಗುವಂತೆ ಮಾಡಲು ನಾನು ಸ್ವಲ್ಪ ಹಾಸ್ಯ ಬೆರೆಸಿದ್ದೇನೆ. ಬಾಲಕೃಷ್ಣ, ಮುಸುರಿ ಕೃಷ್ಣಮೂರ್ತಿ ಹಾಸ್ಯದ ಸ್ಪರ್ಶದೊಂದಿಗೆ ಖಳ ನಾಯಕರ ಪಾತ್ರಗಳನ್ನು ನಿರ್ವಹಿಸಲು ಸ್ಫೂರ್ತಿ ನೀಡಿದರು. ಸಹಜವಾಗಿ, ನಿಜ ಜೀವನದ ಪಾತ್ರಗಳಿಂದ ಪ್ರೇರಿತವಾದ ಅಂತಹ ವಿಲಕ್ಷಣ ಪಾತ್ರಗಳನ್ನು ಬರೆದ ಕೀರ್ತಿ ನಿರ್ದೇಶಕರಿಗೆ ಸಲ್ಲುತ್ತದೆ”

“ಬೆಂಗಳೂರಿಗೆ ಮಾಲ್‌ಗಳು ಬಂದಾಗ, ಕನ್ನಡ ಚಿತ್ರಗಳಿಗೆ ದೊಡ್ಡ ಸಮಸ್ಯೆಯೇ ಆಗಿತ್ತು. ನಾವು ಪ್ರದರ್ಶನಗಳಿಗಾಗಿ ಹೋರಾಡಬೇಕಾಯಿತು. ಒಟಿಟಿ ಪ್ಲಾಟ್‌ಫಾರ್ಮ್‌ನೊಂದಿಗೆ ಈಗ ಪರಿಸ್ಥಿತಿ ಇದೇ ರೀತಿ ಇದೆ. ಕೋವಿಡ್ ಸಾಂಕ್ರಾಮಿಕ ನಮ್ಮ ಜೀವನಶೈಲಿಯನ್ನೇ ಬದಲಾಯಿಸಿತು. ಹಳೆಯ ರೇಡಿಯೋ, FM ಮೂಲಕ ತನ್ನನ್ನು ತಾನು ಮರುಶೋಧಿಸಿಕೊಂಡಂತೆಯೇ, ಬಹುಶಃ ಭವಿಷ್ಯದಲ್ಲಿ, ಸಿನಿಮಾ ಕೂಡ ತನ್ನನ್ನು ತಾನು ಮರುಶೋಧಿಸಿಕೊಳ್ಳುತ್ತದೆ. ನಾವು ಕಾಯಬೇಕಾಗಿದೆ” ಎನ್ನುತ್ತಾರೆ ರಘು.
ಇವತ್ತಿನ ರೀಲ್ಸ್ ಜಮಾನದ ಯುವಕ-ಯುವತಿಯರಿಗೆ ರಘು ಅಣ್ಣ ಖಡಕ್ ಕಿವಿಮಾತೊಂದನ್ನ ಹೇಳಿದ್ದಾರೆ, “ಜಿಮ್‌ಗೆ ಹೋಗಿ ಬಾಡಿ ಬಿಲ್ಡ್ ಮಾಡಿದರೆ ಅಂಡರ್‌ವೇರ್ ಕಂಪನಿಗಳಿಗೆ ಮಾಡೆಲ್ ಆಗಬಹುದೇ ಹೊರತು, ನಿಜವಾದ ಕಲಾವಿದನಾಗಲು ಸಾಧ್ಯವಿಲ್ಲ!” ನಟನೆ ಕಲಿಯಬೇಕಾದರೆ ಕನಿಷ್ಠ 5 ವರ್ಷ ರಂಗಭೂಮಿಯಲ್ಲಿ ಕೆಲಸ ಮಾಡಬೇಕು. ಧೀರ ನಡಿಗೆ, ಪ್ರಸನ್ನ ಭಾವನೆ, ಗಂಭೀರತೆಯನ್ನು ಕಲಿಸುವುದೇ ರಂಗಭೂಮಿ. ಶರೀರ ಮತ್ತು ಶಾರೀರ ಎರಡನ್ನೂ ಸರಿಯಾಗಿ ರೂಪಿಸುವುದು ರಂಗಭೂಮಿ ಮಾತ್ರ ಎನ್ನುತ್ತಾರೆ ರಘು.
ಇದನ್ನೂ ಓದಿ: ಸಂಪತ್ತಿಗೆ ಸವಾಲ್ ನಾಟಕದ ಕವಿ: ಧುತ್ತರಗಿ ಎಂಬ ಅಮೂಲ್ಯ ಸಂಪತ್ತು
ಇವರ ಪತ್ನಿ ಮಂಗಳಾ ಅವರೂ ರಂಗಭೂಮಿಯಲ್ಲಿದ್ದಾರೆ, ಸೈಕಲಾಜಿ ಆಂಡ್ ಥಿಯೇಟರ್ ಓದಿರುವ ಮಗಳು ಚುಕ್ಕಿಗೂ ನಟನೆ ಎಂದರೆ ಪಂಚಪ್ರಾಣ, ಇತ್ತೀಚೆಗೆ ‘ರೋಶಮನ್’ ನಾಟಕದಲ್ಲಿ ನಟಿಸಿದ್ದಾಳೆ. ಒಂದು ವೇಳೆ ಸಿನಿಮಾಗೆ ಬರದಿದ್ದರೆ ರಘು ಅಣ್ಣ ಬಿಡದಿಯ ತಮ್ಮ ಜಮೀನಿನಲ್ಲಿ ಹಸುಗಳನ್ನು ಮೇಯಿಸುತ್ತಾ ನೆಮ್ಮದಿಯಾಗಿ ಕೃಷಿ ಮಾಡಿಕೊಂಡಿರುತ್ತಿದ್ದರಂತೆ. ಈಗಲೂ ಶೂಟಿಂಗ್ ಇಲ್ಲದಿದ್ದರೆ ಸಾಕು, ಜಮೀನಿಗೆ ಓಡಿಹೋಗಿ ಮರಗಿಡಗಳ ಮಧ್ಯೆ ಕಾಲ ಕಳೆಯುತ್ತಾರೆ. ನಾಲ್ಕೈದು ಹಸುಗಳನ್ನು ಸಾಕಿದ್ದಾರೆ, ಎಲ್ಲೇ ಹೋದರೂ ಒಂದು ಗಿಡ ತಂದು ನೆಡುವುದು ಇವರ ಹವ್ಯಾಸ.
ರಾಜಕೀಯದಿಂದಲೂ ಇವರಿಗೆ ಮಧುಗಿರಿಯಿಂದ ಶಾಸಕನಾಗಿ ಸ್ಪರ್ಧಿಸಲು ಆಹ್ವಾನ ಬಂದಿತ್ತಾದರೂ, ರಾಜಕಾರಣಿಗಳ ಬಗ್ಗೆ ಜನರ ಅಭಿಪ್ರಾಯ ನೋಡಿ “ಅಯ್ಯೋ ಈ ರಾಜಕೀಯದ ಸಹವಾಸನೇ ಬೇಡ” ಅಂದುಕೊಂಡರಂತೆ. ಆದರೂ ಹಳ್ಳಿಯ ಸಮಸ್ಯೆಗಳನ್ನು ನೋಡಿದಾಗ ಇಂದಿಗೂ ಅವರಿಗೆ ‘ಪೊಲಿಟಿಕಲ್ ಪವರ್’ ಬೇಕು ಅನಿಸುತ್ತದೆಯಂತೆ. ಇಷ್ಟೆಲ್ಲಾ ಪಾತ್ರಗಳನ್ನು ಮಾಡಿರುವ ರಘು ಅವರಿಗೆ ಮಹಾಭಾರತದ ವಿಧುರನ ಪಾತ್ರ ಮಾಡಲೇಬೇಕೆಂಬ ಕನಸಿದೆ.
ಮೊದಲ ಸಿನಿಮಾ ‘ಸುಗ್ಗಿ’ ರಿಲೀಸ್ ಆಗದಿದ್ದರೂ, ಇಂದು 400ನೇ ಚಿತ್ರ ‘ಹೊಸ ಜೀವನ’ದವರೆಗೆ ಬಂದು ನಿಂತಿರುವ ಈ ನಟನಾ ಗಾರುಡಿಗನಿಗೆ ಇಡೀ ಕರ್ನಾಟಕದ ಕಡೆಯಿಂದ ಸಲಾಮ್ . ರಘು ಅಣ್ಣಾ… ನಿಮ್ಮ ನಟನೆ ಸೂಪರೋ ಸೂಪರು!




