ಸಕ್ಕರೆ ಕಾರ್ಖಾನೆ ಕಾರ್ಮಿಕರ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ಯುನೈಟೆಡ್ ಶುಗರ್ ವರ್ಕಸ್‌್ರ ಫೆಡರೇಷನ್ (KUSWF) ನೇತೃತ್ವದಲ್ಲಿ ಬೆಳಗಾವಿ ನಗರದಲ್ಲಿ ರಾಜ್ಯ ಮಟ್ಟದ ಬೃಹತ್ ಸಮಾವೇಶ ನಡೆಯಿತು.
ಸಮಾವೇಶಕ್ಕೂ ಮುನ್ನ ನಗರದ ಸರ್ದಾರ್ ಮೈದಾನದಿಂದ ಸಾವಿರಾರು ಕಾರ್ಮಿಕರು ಮೆರವಣಿಗೆ ನಡೆಸಿ ಇಂಜಿನಿಯರ್ಸ್ ಇನ್‌ಸ್ಟಿಟ್ಯೂಟ್ ಸಭಾಂಗಣ ತಲುಪಿದರು.
ಸಮಾವೇಶ ಉದ್ಘಾಟಿಸಿದ ಎಐಯುಟಿಯುಸಿ ರಾಜ್ಯಾಧ್ಯಕ್ಷ ಕೆ. ಸೋಮಶೇಖರ್, ಕಾರ್ಮಿಕರ ಹಕ್ಕುಗಳನ್ನು ಮೊಟಕುಗೊಳಿಸುವ ಪ್ರಯತ್ನಗಳು ನಡೆಯುತ್ತಿವೆ ಎಂದು ಆರೋಪಿಸಿದರು. ಉದ್ಯಮಪತಿಗಳಿಗೆ ವಿವಿಧ ನೆರವು ನೀಡಲಾಗುತ್ತಿದ್ದರೂ ಕಾರ್ಮಿಕರು ಕನಿಷ್ಠ ಅಗತ್ಯಗಳನ್ನು ಪೂರೈಸಿಕೊಳ್ಳಲು ಪರದಾಡುವ ಪರಿಸ್ಥಿತಿ ಇದೆ ಎಂದರು.

ಹಿರಿಯ ಕಾರ್ಮಿಕ ಮುಖಂಡ ಅರವಿ ಬಸವನಗೌಡ ಅಧ್ಯಕ್ಷತೆ ವಹಿಸಿದ್ದರು. ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ಮೇಟಿ ಮಾತನಾಡಿ, ಸಕ್ಕರೆ ವಲಯದ ಕಾರ್ಮಿಕರು ಶೋಷಣೆ ಎದುರಿಸುತ್ತಿದ್ದು, 7ನೇ ತ್ರಿಪಕ್ಷೀಯ ವೇತನ ಮಂಡಳಿ ಆದೇಶವನ್ನು ಜಾರಿಗೊಳಿಸಲು ಸರ್ಕಾರ ಪರಿಣಾಮಕಾರಿ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.
ಸಮಾವೇಶದಲ್ಲಿ 7ನೇ ವೇತನ ಮಂಡಳಿ ಆದೇಶವನ್ನು ಎಲ್ಲ ಸಕ್ಕರೆ ಕಾರ್ಖಾನೆಗಳಲ್ಲಿ ಜಾರಿಗೊಳಿಸುವುದು, ತಡೆಯಾಜ್ಞೆ ತೆರವುಗೊಳಿಸುವುದು, ಬಾಕಿ ವೇತನ ಪಾವತಿಸುವುದು ಹಾಗೂ 8ನೇ ವೇತನ ಮಂಡಳಿ ಪ್ರಕ್ರಿಯೆ ಆರಂಭಿಸುವುದು ಸೇರಿದಂತೆ ಪ್ರಮುಖ ನಿರ್ಣಯಗಳನ್ನು ಅಂಗೀಕರಿಸಲಾಯಿತು.
ಮುಚ್ಚಿರುವ ಸರ್ಕಾರಿ ಹಾಗೂ ಸಹಕಾರಿ ಸಕ್ಕರೆ ಕಾರ್ಖಾನೆಗಳನ್ನು ಪುನಶ್ಚತನಗೊಳಿಸಿ ಪುನರಾರಂಭಿಸಬೇಕು. ಹಳೆಯ ಕಾರ್ಮಿಕರ ಉದ್ಯೋಗ, ಸೇವಾ ನಿರಂತರತೆ ಹಾಗೂ ಶಾಸನಬದ್ಧ ಬಾಕಿಗಳನ್ನು ರಕ್ಷಿಸಬೇಕು ಎಂದು ಆಗ್ರಹಿಸಲಾಯಿತು.
ದೀರ್ಘಕಾಲದಿಂದ ಕೆಲಸ ಮಾಡುತ್ತಿರುವ ಗುತ್ತಿಗೆ, ದಿನಗೂಲಿ ಹಾಗೂ ಹೊರಗುತ್ತಿಗೆ ಕಾರ್ಮಿಕರನ್ನು ಖಾಯಂಗೊಳಿಸಿ ಪಿಎಫ್, ಇಎಸ್‌ಐ, ಬೋನಸ್, ಗ್ರಾಚುಟಿ, ರಜೆ ಹಾಗೂ ಓಟಿ ಸೇರಿದಂತೆ ಶಾಸನಬದ್ಧ ಸೌಲಭ್ಯಗಳನ್ನು ಒದಗಿಸಬೇಕು ಎಂಬ ನಿರ್ಣಯವೂ ಅಂಗೀಕರಿಸಲಾಯಿತು.

ನಾಲ್ಕು ಕಾರ್ಮಿಕ ಸಂಹಿತೆಗಳನ್ನು ಹಿಂಪಡೆಯಬೇಕು ಹಾಗೂ ಕಾರ್ಮಿಕರ ಮುಷ್ಕರ ಮತ್ತು ಸಂಘಟನೆಯ ಹಕ್ಕುಗಳನ್ನು ರಕ್ಷಿಸಬೇಕು ಎಂದು ಸಮಾವೇಶ ಆಗ್ರಹಿಸಿತು.
ಚುನಾವಣಾ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಕಾರ್ಮಿಕ ಸಚಿವ ಸಂತೋಷ್ ಲಾಡ್ ಹಾಗೂ ಸಕ್ಕರೆ ಸಚಿವ ರುದ್ರಪ್ಪ ಲಮಾಣಿ ಭಾಗವಹಿಸಲು ಸಾಧ್ಯವಾಗಲಿಲ್ಲ. ಸಂದೇಶದ ಮೂಲಕ ಶುಭಾಶಯ ತಿಳಿಸಿದ ಅವರು, ಮುಂದಿನ ದಿನಗಳಲ್ಲಿ ಕಾರ್ಮಿಕರ ಪ್ರತಿನಿಧಿಗಳೊಂದಿಗೆ ಚರ್ಚಿಸಿ ನ್ಯಾಯಯುತ ಸಮಸ್ಯೆಗಳನ್ನು ಇತ್ಯರ್ಥಪಡಿಸುವುದಾಗಿ ಭರವಸೆ ನೀಡಿದ್ದಾರೆ.
ಸಮಾವೇಶದಲ್ಲಿ ಫೆಡರೇಷನ್ ಕಾರ್ಯಾಧ್ಯಕ್ಷ ಚಕ್ರಪಾಣಿ, ಬಸವರಾಜ ಪೂಜಾರ, ಖಜಾಂಚಿ ವಿಜಯ ಯಾದವ್, ಮಲ್ಲಿಕಾರ್ಜುನ ಜೋಗುರ, ಬೃಂಗೀಶ್ ಸೇರಿದಂತೆ ಪದಾಧಿಕಾರಿಗಳು ಹಾಗೂ ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ್ದ ಸಾವಿರಾರು ಸಕ್ಕರೆ ಕಾರ್ಮಿಕರು ಪಾಲ್ಗೊಂಡಿದ್ದರು.



