ಬೀದರ್ ಜಿಲ್ಲೆಯ ರೈತರ ಜೀವನಾಡಿಯಾಗಿರುವ ಬೀದರ್ ಸಹಕಾರ ಸಕ್ಕರೆ ಕಾರ್ಖಾನೆಯ (ಬಿಎಸ್‌ಎಸ್‌ಕೆ) ಸಮಸ್ಯೆಗಳ ಕುರಿತು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಅವರೊಂದಿಗೆ ಚರ್ಚಿಸಿದ ಜಿಲ್ಲೆಯ ಶಾಸಕರು ಕಾರ್ಖಾನೆಯನ್ನು ಶೀಘ್ರ ಪುನಶ್ಚೇತನಗೊಳಿಸಿ ಪುನರಾರಂಭಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಮನವಿ ಸಲ್ಲಿಸಿದರು.
ಬೀದರ್ ಜಿಲ್ಲೆಗೆ ಭೇಟಿ ನೀಡಿದ ರಾಜ್ಯದ ನೂತನ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಜಿಲ್ಲೆಯ ಶಾಸಕರಾದ ಬೀದರ್ ದಕ್ಷಿಣ ಕ್ಷೇತ್ರದ ಶಾಸಕ ಡಾ.ಶೈಲೇಂದ್ರ ಬೆಲ್ದಾಳೆ, ಬಸವಕಲ್ಯಾಣ ಶಾಸಕ ಶರಣು ಸಲಗರ ಹಾಗೂ ಹುಮನಾಬಾದ್ ಶಾಸಕ ಶ್ರೀ ಸಿದ್ದು ಪಾಟೀಲ ಅವರು ಭೇಟಿ ನೀಡಿ ಮನವಿ ಮಾಡಿದರು.
“ಹಲವು ವರ್ಷಗಳಿಂದ ಸ್ಥಗಿತಗೊಂಡಿರುವ ಬಿಎಸ್‌ಎಸ್‌ಕೆ ಸಕ್ಕರೆ ಕಾರ್ಖಾನೆಯಿಂದ ಜಿಲ್ಲೆಯ ಸಾವಿರಾರು ಕಬ್ಬು ಬೆಳೆಗಾರ ರೈತರು, ಕಾರ್ಮಿಕರು ಹಾಗೂ ಕಾರ್ಖಾನೆಯನ್ನು ಅವಲಂಬಿಸಿರುವ ಕುಟುಂಬಗಳು ತೀವ್ರ ಸಂಕಷ್ಟ ಎದುರಿಸುತ್ತಿವೆ. ಕಾರ್ಖಾನೆ ಪುನರಾರಂಭವಾದರೆ ರೈತರಿಗೆ ಕಬ್ಬಿಗೆ ಸ್ಥಿರ ಮಾರುಕಟ್ಟೆ ದೊರೆಯುವುದರ ಜೊತೆಗೆ, ಸ್ಥಳೀಯ ಮಟ್ಟದಲ್ಲಿ ಉದ್ಯೋಗಾವಕಾಶಗಳು ಹೆಚ್ಚಾಗಿ ಜಿಲ್ಲೆಯ ಆರ್ಥಿಕ ಚಟುವಟಿಕೆಗೂ ಹೊಸ ಚೈತನ್ಯ ಸಿಗಲಿದೆ” ಎಂದು ಮುಖ್ಯಮಂತ್ರಿಗಳ ಗಮನಕ್ಕೆ ತಂದರು.
ರೈತರ ಹಿತಾಸಕ್ತಿ ಹಾಗೂ ಜಿಲ್ಲೆಯ ಕೈಗಾರಿಕಾ ಅಭಿವೃದ್ಧಿಯನ್ನು ಗಮನದಲ್ಲಿಟ್ಟುಕೊಂಡು ಬಿಎಸ್‌ಎಸ್‌ಕೆ ಸಕ್ಕರೆ ಕಾರ್ಖಾನೆಯ ಪುನಶ್ಚೇತನಕ್ಕೆ ಸರ್ಕಾರ ಆದ್ಯತೆ ನೀಡಬೇಕು. ಕಾರ್ಖಾನೆ ಪುನರಾರಂಭಕ್ಕೆ ಸಂಬಂಧಿಸಿದಂತೆ ಶೀಘ್ರ ಸಕಾರಾತ್ಮಕ ನಿರ್ಧಾರ ಕೈಗೊಂಡು ಜಿಲ್ಲೆಯ ರೈತರಿಗೆ ನ್ಯಾಯ ಒದಗಿಸಬೇಕು ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಇದನ್ನೂ ಓದಿ : ಬೀದರ್ | ಎಸ್‌ಐಆರ್ ಪ್ರಕ್ರಿಯೆಗೆ ನಿಯೋಜನೆಗೊಂಡ ಬಿಎಲ್‌ಒ ಹೃದಯಾಘಾತದಿಂದ ಸಾವು
ಈ ಸಂದರ್ಭದಲ್ಲಿ ಉಪಮುಖ್ಯಮಂತ್ರಿ ಜಿ.ಪರಮೇಶ್ವರ, ಬೀದರ್ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಸೇರಿದಂತೆ ಮತ್ತಿತರರಿದ್ದರು.




