ರಾಜ್ಯವನ್ನು ಬೆಚ್ಚಿಬೀಳಿಸಿದ್ದ ಬೀದರ್ ಎಟಿಎಂ ದರೋಡೆ ಹಾಗೂ ಕೊಲೆ ಪ್ರಕರಣದ ಆರೋಪಿಗಳನ್ನು ಬಂಧಿಸುವಲ್ಲಿ ಬೀದರ್ ಪೊಲೀಸರು ಕೊನೆಗೂ ಯಶಸ್ವಿಯಾಗಿದ್ದಾರೆ.
ಬಿಹಾರದ ವೈಶಾಲಿ ಜಿಲ್ಲೆಯ ಧಾಮೋದರ್ ಗ್ರಾಮದ ಬಳಿ ಆರೋಪಿಗಳ ಕಾರನ್ನು ಬೆನ್ನಟ್ಟಿ ಸಿನಿಮೀಯ ರೀತಿಯಲ್ಲಿ ಕಾರ್ಯಾಚರಣೆ ನಡೆಸಿದ ಪೊಲೀಸರು ಅಮನ್‌ಕುಮಾರ್ ಸಿಂಗ್ ಹಾಗೂ ಅಲೋಕ್‌ಕುಮಾರ್ ಎಂಬ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ಘಟನೆ ನಡೆದ ಸುಮಾರು ಒಂದೂವರೆ ವರ್ಷದ ಬಳಿಕ ಆರೋಪಿಗಳು ಪೊಲೀಸರ ಬಲೆಗೆ ಬಿದ್ದಿದ್ದಾರೆ. ಕಳೆದ 20 ದಿನಗಳ ಹಿಂದೆ ಆರೋಪಿಗಳ ಕುರಿತು ಮಹತ್ವದ ಸುಳಿವು ಬೀದರ್ ಪೊಲೀಸರಿಗೆ ಲಭಿಸಿತ್ತು. ಈ ಹಿನ್ನೆಲೆಯಲ್ಲಿ ಪೊಲೀಸರು ಕಳೆದ 20 ದಿನಗಳಿಂದ ಆರೋಪಿಗಳ ಚಲನವಲನಗಳ ಮೇಲೆ ನಿರಂತರ ನಿಗಾ ಇರಿಸಿದ್ದರು.
ಬೀದರ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ್ ಗುಂಟಿ ಅವರ ನೇತೃತ್ವದಲ್ಲಿ ವಿಶೇಷ ಕಾರ್ಯಾಚರಣೆ ನಡೆಸಿ, ಇಂದು ಮಧ್ಯಾಹ್ನ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ಬಂಧಿತ ಆರೋಪಿಗಳನ್ನು ಬೀದರ್‌ಗೆ ಕರೆತರಲಾಗುತ್ತಿದೆ. ಯಾವುದೇ ರಾಜ್ಯದ ಪೊಲೀಸರ ಸಹಾಯ ಪಡೆಯದೇ ಬೀದರ್ ಪೊಲೀಸರು ಈ ಕಾರ್ಯಾಚರಣೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿರುವುದು ವಿಶೇಷ.
ಬೀದರ್ ನಗರದ ಹೃದಯ ಭಾಗದಲ್ಲಿರುವ ಎಸ್‌ಬಿಐ ಬ್ಯಾಂಕ್ ಸಮೀಪ 2025ರ ಜನವರಿ 16ರಂದು ಹಾಡಹಗಲೇ ಬೈಕ್‌ನಲ್ಲಿ ಬಂದ ದರೋಡೆಕೋರರು ಎಂಎಸ್ ಏಜೆನ್ಸಿಯ ಸಿಬ್ಬಂದಿಯ ಮೇಲೆ ದಾಳಿ ನಡೆಸಿ ಹಣ ದೋಚಿದ್ದರು. ಈ ವೇಳೆ ದರೋಡೆಕೋರರು ನಡೆಸಿದ ಗುಂಡಿನ ದಾಳಿಯಲ್ಲಿ ಗಿರಿ ವೆಂಕಟೇಶ್ ಸ್ಥಳದಲ್ಲೇ ಮೃತಪಟ್ಟಿದ್ದರು. ಶಿವಕುಮಾರ್ ಗುನ್ನಳ್ಳಿ ಗಂಭೀರವಾಗಿ ಗಾಯಗೊಂಡಿದ್ದರು.
ದರೋಡೆಕೋರರು ಸುಮಾರು ₹83 ಲಕ್ಷ ಹಣವನ್ನು ದೋಚಿಕೊಂಡು ಪರಾರಿಯಾಗಿದ್ದರು. ಪ್ರಕರಣದ ಆರೋಪಿಗಳ ಬಂಧನಕ್ಕಾಗಿ ಬೀದರ್ ಪೊಲೀಸರು ಸುದೀರ್ಘ ತನಿಖೆ ನಡೆಸುತ್ತಿದ್ದರು. ಕೊನೆಗೂ ಬಿಹಾರದಲ್ಲಿ ಕಾರ್ಯಾಚರಣೆ ನಡೆಸಿ ಇಬ್ಬರು ಪ್ರಮುಖ ಆರೋಪಿಗಳನ್ನು ಬಂಧಿಸಿರುವ ಹಿನ್ನೆಲೆಯಲ್ಲಿ ಬೀದರ್ ಪೊಲೀಸರು ಘಟನೆ ನಡೆದ ಎಸ್‌ಬಿಐ ಬ್ಯಾಂಕ್ ಮುಂಭಾಗದಲ್ಲಿ ಪಟಾಕಿ ಸಿಡಿಸಿ ಸಂಭ್ರಮಾಚರಣೆ ನಡೆಸಿದರು.
ಇದನ್ನೂ ಓದಿ : ಬೀದರ್ | ಗಾಯಾಳುಗಳ ಆರೋಗ್ಯ ವಿಚಾರಿಸಿದ ಶಾಸಕ ಶೈಲೇಂದ್ರ ಬೆಲ್ದಾಳೆ : ಮೃತ ಕುಟುಂಬಸ್ಥರಿಗೆ ಸಾಂತ್ವನ
ಆರೋಪಿಗಳ ಬಂಧನದಿಂದ ಪ್ರಕರಣದ ತನಿಖೆಗೆ ಮಹತ್ವದ ಮುನ್ನಡೆ ದೊರೆತಿದ್ದು, ದರೋಡೆ ಪ್ರಕರಣದ ಇನ್ನಷ್ಟು ಮಾಹಿತಿಗಳು ತನಿಖೆಯ ಬಳಿಕ ಬಹಿರಂಗವಾಗುವ ನಿರೀಕ್ಷೆಯಿದೆ.




