ಪ್ರಜಾಪ್ರಭುತ್ವದ ನಾಲ್ಕನೇ ಅಂಗ ಎಂದು ಕರೆಸಿಕೊಳ್ಳುವ ಪತ್ರಿಕೋದ್ಯಮವು ಅತ್ಯಂತ ಜವಾಬ್ದಾರಿಯುತ ವೃತ್ತಿಯಾಗಿದ್ದು, ಪತ್ರಕರ್ತರು ನಿಷ್ಪಕ್ಷಪಾತ, ವಸ್ತುನಿಷ್ಠ ವರದಿಗಳನ್ನು ಜನರಿಗೆ ಮುಟ್ಟಿಸಬೇಕು ಎಂದು ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಅವರು ಹೇಳಿದರು.
ಸೋಮವಾರ ನಗರದ ಎಸ್‌ಆರ್‌ಎಸ್ ಸಭಾಂಗಣದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಯೋಗದಲ್ಲಿ ಆಯೋಜಿಸಿದ ಪತ್ರಿಕಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
“ಕಳೆದ ಎರಡು ಮೂರು ತಿಂಗಳಿನಿಂದ ಜಗತ್ತಿನಲ್ಲಿ ಅನೇಕ ಘಟನಾವಳಿಗಳು ಚರ್ಚೆಯಲ್ಲಿವೆ. ಇದು ವ್ಯಾಪಕವಾಗಿ ವಿಸ್ತಾರಗೊಳ್ಳಲು ಮಾಧ್ಯಮಗಳ ಪಾತ್ರ ಬಹಳಷ್ಟಿದೆ. ನಮ್ಮ ಬರವಣಿಗೆ ಮತ್ತಷ್ಟು ಪರಿಣಾಮಕಾರಿಯಾಗಬೇಕಾದರೆ ವಿಶ್ವಾಸಾರ್ಹ ಸುದ್ದಿ ಸಂಗ್ರಹಣೆಗೆ ಒತ್ತು ನೀಡಬೇಕು. ಜನಾಭಿಪ್ರಾಯ ರೂಪಿಸುವಲ್ಲಿ ಮಾಧ್ಯಮಗಳ ಪಾತ್ರ ಪ್ರಮುಖವಾಗಿದೆ” ಎಂದರು.
ಅಧ್ಯಕ್ಷತೆ ವಹಿಸಿದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಮಾತನಾಡಿ, “ಪತ್ರಕರ್ತರು ಸಮಾಜದ ನಿಜವಾದ ವೈದ್ಯರು. ಸಮಾಜಕ್ಕಾಗುವ ರೋಗವನ್ನು ಸರಿಪಡಿಸುವ ಶಕ್ತಿ ಮಾಧ್ಯಮಕ್ಕಿದೆ. ಪತ್ರಕರ್ತ ವೃತ್ತಿ ಅತ್ಯಂತ ಗೌರವಯುತವಾದದ್ದು, ಈ ವೃತ್ತಿಗೆ ನ್ಯಾಯ ದೊರಕಿಸಿಕೊಡುವ ಕೆಲಸ ಮಾಡಬೇಕಿದೆ. ನಮ್ಮ ಬರವಣಿಗೆ ಸಮಾಜದ ಕಟ್ಟಕಡೆಯ ವ್ಯಕ್ತಿಯ ಕಣ್ಣೊರೆಸುವಂತಾದರೆ ನಮ್ಮ ಬರವಣಿಗೆ ಸಾರ್ಥಕವಾದಂತೆ” ಎಂದು ಪ್ರತಿಪಾದಿಸಿದರು.

“ವೃತ್ತಿಪರತೆಯಲ್ಲಿ ವ್ಯಕ್ತಿ ಮುಖ್ಯವಲ್ಲ. ಸಂಘಟನೆ ಮುಖ್ಯ. ನಾವು ಸಂಘಜೀವಿಯಾಗಿ ಬದುಕಿದರೆ ನಮ್ಮ ಶಕ್ತಿ ಹೆಚ್ಚಾಗುತ್ತದೆ. ಪತ್ರಕರ್ತರ ಸಂಘ ಯಾರ ಸ್ವತ್ತಲ್ಲ. ಪತ್ರಕರ್ತರ ಬೇಡಿಕೆಗಳಿಗಾಗಿ ನಿರಂತರವಾಗಿ ಹೋರಾಟ ನಡೆಸುತ್ತಿರುವ ರಾಜ್ಯದ ಏಕೈಕ ಸಂಘ ಇದಾಗಿದ್ದು, ನಮ್ಮ ವೃತ್ತಿ ಲಘುವಾಗಿ ಪರಿಗಣಿಸದೆ ಸತ್ಯ, ನ್ಯಾಯಕ್ಕಾಗಿ ಸಮಾಜ ಬದಲಾವಣೆಗಾಗಿ ಪ್ರಾಮಾಣಿಕ ಪತ್ರಕರ್ತರಾಗಿ ಕಾರ್ಯ ನಿರ್ವಹಿಸಬೇಕು ” ಎಂದು ಸಲಹೆ ನೀಡಿದರು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ನಾಡಿನ ಎಲ್ಲ ಜಿಲ್ಲಾ ಕೇಂದ್ರಗಳು, ತಾಲೂಕು ಕೇಂದ್ರಗಳಲ್ಲಿ ಮಾತ್ರವಲ್ಲದೆ ಹೊರನಾಡಿನಲ್ಲೂ ತನ್ನ ಬಾಹು ಚಾಚಿದೆ. ಮುಂಬೈ, ಕಾಸರಗೂಡುಗಳಂತಹ ಗಡಿ ಪ್ರದೇಶಗಳಲ್ಲಿ ಅದು ಪ್ರಭಾವಶಾಲಿಯಾಗಿ ಬೆಳೆದಿದೆ. ಅದಕ್ಕೆಲ್ಲ ಸಂಘದ ಸದಸ್ಯರು ಪಟ್ಟ ಪರಿಶ್ರಮ ಎಂಬುದನ್ನು ಹೆಮ್ಮೆಯಿಂದ ಹೇಳಿಕೊಳ್ಳಬೇಕೆಂದು ತಗಡೂರು ಕರೆ ನೀಡಿದರು.
ಸಂಘದ ಜಿಲ್ಲಾಧ್ಯಕ್ಷ ಅನಂದ ದೇವಪ್ಪ ಪ್ರಾಸ್ತಾವಿಕ ಮಾತನಾಡಿ, “ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಪತ್ರಿಕಾ ಭವನವನ್ನು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘವೇ ನಿರ್ವಹಣೆ ಮಾಡಿಕೊಂಡು ಬರುತ್ತಿದೆ. ಜಿಲ್ಲಾಡಳಿತವು ಬೀದರ್ ಜಿಲ್ಲೆಯಲ್ಲೂ ಕೂಡಲೇ ಕೆಯುಡಬ್ಲೂಜೆಗೆ ಸಂಘದ ನಿರ್ವಹಣೆ ಜವಾಬ್ದಾರಿ ವಹಿಸಬೇಕು” ಎಂದು ಹೇಳಿದರು.
“ನಮ್ಮ ಪತ್ರಕರ್ತರ ಸಂಘದಿಂದ ಮುಂಬರುವ ದಿನಗಳಲ್ಲಿ ಜಿಲ್ಲೆಯ ಪತ್ರಕರ್ತರಿಗೆ ಪತ್ರಿಕೋದ್ಯಮ ಕುರಿತು ವಿಶೇಷ ಕಾರ್ಯಗಾರ ಸೇರಿದಂತೆ ಪತ್ರಕರ್ತರಿಗೆ ನಿವೇಶನ ಹಂಚಿಕೆ, ಆರೋಗ್ಯ ತಪಾಸಣೆ ಕಾರ್ಯಗಳು ಕೈಗೊಳ್ಳುವ ಯೋಜನೆಯಿದೆ. ಜಿಲ್ಲೆಯಲ್ಲಿ 292 ಅರ್ಹ ಪತ್ರಕರ್ತರಿಗೆ ಕೆಯುಡಬ್ಲೂಜೆ ಸಂಘದ ಸದಸ್ಯತ್ವ ನೀಡಲಾಗಿದ್ದು, ಪ್ರತಿಯೊಬ್ಬರು ಸಂಘದ ನಿಯಮಗಳಂತೆ ಕಾರ್ಯನಿರ್ವಹಿಸಿ ಜನಪರ ವರದಿಗಳ ಮುಖಾಂತರ ಉತ್ತಮ ಸಮಾಜ ರೂಪಿಸಲು ಶ್ರಮಿಸಬೇಕು” ಎಂದು ಹೇಳಿದರು.
ಕಾರ್ಯಕ್ರಮಕ್ಕೆ ರಾಜ್ಯದ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತರಾಜ್ ಸಚಿವರಾದ ಈಶ್ವರ ಖಂಡ್ರೆ ಅವರು ದೂರವಾಣಿ ಮೂಲಕ ಮಾತನಾಡಿ ತಮ್ಮ ಶುಭ ಕೋರಿದರು. ಬೀದರ್ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಸವರಾಜ ಜಾಬಶೆಟ್ಟಿ ಮಾತನಾಡಿದರು.

ಇದೇ ವೇಳೆ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಶೇ 70ಕ್ಕಿಂತ ಅಧಿಕ ಅಂಕ ಗಳಿಸಿದ ಪತ್ರಕರ್ತರ ಮಕ್ಕಳಾದ ಕು.ಅಹಮ್ಮದಿ ನಾಝ್, ಶೇಖ್ ಶಾದಿಯಾ, ಭುವನೇಶ್ವರಿ, ಸುಹಾಸಿನಿ, ಹರ್ಷಿತಾ, ತನಿಷ್, ಪ್ರಜ್ವಲ್, ಶೃತಿ ಮತ್ತಿತರರಿಗೆ ಪ್ರತಿಭಾ ಪುರಸ್ಕಾರ ವಿತರಿಸಲಾಯಿತು. ನೂತನವಾಗಿ ಆಯ್ಕೆಯಾದ ಎಲ್ಲ ತಾಲೂಕುಗಳ ಅಧ್ಯಕ್ಷ ಹಾಗೂ ಪ್ರಧಾನ ಕಾರ್ಯದರ್ಶಿಗಳಿಗೆ ಸನ್ಮಾನಿಸಲಾಯಿತು.
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕ ಮಂಜುನಾಥ ಸುಳ್ಳೊಳ್ಳಿ, ರಾಜ್ಯ ಕಾರ್ಯಕಾರಿಣಿ ಸಮಿತಿ ಸದಸ್ಯ ಅಪ್ಪಾರಾವ್ ಸೌದಿ, ರಾಷ್ಟ್ರೀಯ ಕಾರ್ಯಕಾರಿಣಿ ಮಂಡಳಿ ಸದಸ್ಯ ಬಸವರಾಜ ಪವಾರ, ಸಂಘದ ಗೌರವ ಸಲಹೆಗಾರರಾದ ಗಂಧರ್ವ ಸೇನಾ, ಮಲ್ಲಿಕಾರ್ಜುನ ಬಿರಾದಾರ, ಉಪಾಧ್ಯಕ್ಷರಾದ ಬಸವರಾಜ ಕಾಮಶೆಟ್ಟಿ, ಪ್ರಥ್ವಿರಾಜ.ಎಸ್, ಶ್ರೀಕಾಂತ ಬಿರಾದಾರ, ಕಾರ್ಯದರ್ಶಿ ಸ್ವಾಮಿದಾಸ ನಾಗೂರೆ, ಸಂತೋಷ ಚಟ್ಟಿ, ಖಜಾಂಚಿ ಸುನಿಲಕುಮಾರ ಕುಲಕರ್ಣಿ ಉಪಸ್ಥಿತರಿದ್ದರು.
ಇದನ್ನೂ ಓದಿ : ಬೀದರ್ | ಸ್ಪರ್ಧಾತ್ಮಕ ಪರೀಕ್ಷೆ ಯಶಸ್ಸಿಗೆ ಅಧ್ಯಯನ ಅಗತ್ಯ : ಶಿವಕುಮಾರ ಸ್ವಾಮಿ
ಗಾಯಕ ಶಿವಕುಮಾರ ಪಾಂಚಾಳ ಹಾಗೂ ಸಂಘದ ಸದಸ್ಯೆ ಪ್ರಿಯಂಕಾ ಗುರುರಾಜ ಹಾಗೂ ಸಂಗಡಿಗರು ನಾಡಗೀತೆ, ವಂದೆ ಮಾತರಂ ಗೀತೆ ನಡೆಸಿಕೊಟ್ಟರು. ಐಎಫ್‌ಡಬ್ಲೂಜೆ ಸದಸ್ಯ ಅಶೋಕಕುಮಾರ ಕರಂಜಿ ಸ್ವಾಗತಿಸಿದರು, ಕಾರ್ಯದರ್ಶಿ ಶಶಿಕಾಂತ ಶೆಂಬೆಳ್ಳಿ ನಿರೂಪಿಸಿದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಿವಕುಮಾರ ಸ್ವಾಮಿ ವಂದಿಸಿದರು.




