ಉಡುಪಿ ಜಿಲ್ಲೆಯ ಹೆಮ್ಮಾಡಿ–ಕೊಲ್ಲೂರು ರಾಜ್ಯ ಹೆದ್ದಾರಿಯಲ್ಲಿರುವ ವಂಡ್ಸೆ ಶಾಲೆ ತಿರುವು ಈಗ ಸ್ಥಳೀಯರ ಪಾಲಿಗೆ ‘ಅಪಘಾತ ವಲಯ’ವಾಗಿ ಗುರುತಿಸಿಕೊಂಡಿದೆ. ಈ ತಿರುವಿನಲ್ಲಿ ವಾಹನಗಳ ಅತಿವೇಗ ಮತ್ತು ಸುರಕ್ಷತಾ ಕ್ರಮಗಳ ಕೊರತೆಯಿಂದ ವರ್ಷದಿಂದ ವರ್ಷಕ್ಕೆ ಅಪಘಾತಗಳು ಸಂಭವಿಸುತ್ತಲೇ ಇದ್ದರೂ, ಸಂಬಂಧಪಟ್ಟ ಇಲಾಖೆಗಳು ಇನ್ನೂ ಶಾಶ್ವತ ಪರಿಹಾರದತ್ತ ಹೆಜ್ಜೆ ಇಟ್ಟಿಲ್ಲ ಎಂಬ ಆರೋಪ ಕೇಳಿಬರುತ್ತಿದೆ.
ಕೊಲ್ಲೂರು ಮೂಕಾಂಬಿಕಾ, ಮಾರಣಕಟ್ಟೆ ಮತ್ತು ಸಿಗಂಧೂರು ಸೇರಿದಂತೆ ಪ್ರಮುಖ ಧಾರ್ಮಿಕ ಕ್ಷೇತ್ರಗಳಿಗೆ ಹೆಮ್ಮಾಡಿ ಮಾರ್ಗವಾಗಿ ತೆರಳುವ ಸಾವಿರಾರು ವಾಹನಗಳು ಪ್ರತಿದಿನ ಈ ರಸ್ತೆಯಲ್ಲಿ ಸಂಚರಿಸುತ್ತವೆ. ರಾಜ್ಯದ ವಿವಿಧ ಭಾಗಗಳಿಂದ ಬರುವ ಪ್ರವಾಸಿಗರು, ಖಾಸಗಿ ಬಸ್‌ಗಳು, ಸರಕು ಸಾಗಣೆ ವಾಹನಗಳು ಹಾಗೂ ಸ್ಥಳೀಯ ವಾಹನಗಳ ದಟ್ಟ ಸಂಚಾರದಿಂದ ಈ ಮಾರ್ಗ ಸದಾ ಬ್ಯುಸಿಯಾಗಿರುತ್ತದೆ. ಇಂತಹ ಪರಿಸ್ಥಿತಿಯಲ್ಲಿ ವಂಡ್ಸೆ ಶಾಲೆ ತಿರುವಿನಲ್ಲಿ ವಾಹನಗಳು ಅತಿವೇಗವಾಗಿ ಚಲಿಸುವುದರಿಂದ ಚಾಲಕರ ನಿಯಂತ್ರಣ ತಪ್ಪಿ ಅನೇಕ ಬಾರಿ ಗಂಭೀರ ಅಪಘಾತಗಳು ಸಂಭವಿಸಿವೆ. ಈ ದುರಂತಗಳಲ್ಲಿ ಹಲವರು ಪ್ರಾಣ ಕಳೆದುಕೊಂಡಿದ್ದು, ಅನೇಕರು ಗಂಭೀರ ಗಾಯಗೊಂಡಿದ್ದಾರೆ.
ವಂಡ್ಸೆ ಕೇವಲ ಒಂದು ಜಂಕ್ಷನ್ ಅಲ್ಲ, ಬಗ್ವಾಡಿ, ಬಾರಂದಾಡಿ, ನೂಜಾಡಿ, ಜಾಡಿ, ನೆಂಪು, ಕೊಲ್ಲೂರು, ಆಲೂರು, ಚಿತ್ತೂರು, ಇಡೂರು-ಕುಂಜ್ಞಾಡಿ, ಹೊಸೂರು, ಬೆಳ್ಳಾಲ, ನಂದ್ರೋಳಿ, ನೇರಳಕಟ್ಟೆ ಹಾಗೂ ಹೆಮ್ಮಾಡಿ ಸೇರಿದಂತೆ ಹಲವು ಗ್ರಾಮಗಳನ್ನು ಸಂಪರ್ಕಿಸುವ ಪ್ರಮುಖ ಕೇಂದ್ರವಾಗಿದೆ. ವ್ಯಾಪಾರ, ಶಿಕ್ಷಣ, ಆರೋಗ್ಯ ಮತ್ತು ಆಡಳಿತಾತ್ಮಕ ಚಟುವಟಿಕೆಗಳಿಗೆ ಈ ಪ್ರದೇಶವೇ ಪ್ರಮುಖ ಕೇಂದ್ರವಾಗಿರುವುದರಿಂದ ದಿನವಿಡೀ ಜನಸಂಚಾರ ಹೆಚ್ಚಿರುತ್ತದೆ.
ತಿರುವಿನ ಸಮೀಪದಲ್ಲೇ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಇರುವುದರಿಂದ ಪ್ರತಿದಿನ ನೂರಾರು ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಪೋಷಕರು ಇದೇ ರಸ್ತೆಯನ್ನು ಬಳಸುತ್ತಾರೆ. ಅಲ್ಲದೆ ಪ್ರಾಥಮಿಕ ಆರೋಗ್ಯ ಕೇಂದ್ರ, ರಾಷ್ಟ್ರೀಕೃತ ಬ್ಯಾಂಕ್‌ಗಳು ಹಾಗೂ ಪಶುಸಂಗೋಪನಾ ಕೇಂದ್ರಗಳಿಗೂ ಇದೇ ಮಾರ್ಗದಲ್ಲಿ ಜನರು ಓಡಾಡುತ್ತಾರೆ. ಶಾಲಾ ವಲಯದಲ್ಲೇ ವಾಹನಗಳು ವೇಗವಾಗಿ ಚಲಿಸುತ್ತಿರುವುದು ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ.
ಅಪಘಾತಗಳನ್ನು ತಡೆಯಲು ತಿರುವಿನಲ್ಲಿ ರಸ್ತೆ ಉಬ್ಬು (ಹಂಪ್ಸ್) ನಿರ್ಮಿಸುವುದು ಅತ್ಯಂತ ಪರಿಣಾಮಕಾರಿ ಕ್ರಮ ಎಂದು ಸ್ಥಳೀಯರು ಅಭಿಪ್ರಾಯಪಟ್ಟಿದ್ದಾರೆ. ಒಂದು ವೇಳೆ ತಾಂತ್ರಿಕ ಅಥವಾ ಕಾನೂನು ಕಾರಣಗಳಿಂದ ಹಂಪ್ಸ್ ನಿರ್ಮಿಸಲು ಸಾಧ್ಯವಾಗದಿದ್ದರೆ, ಕನಿಷ್ಠ ಬ್ಯಾರಿಕೇಡ್, ರಂಬಲ್ ಸ್ಟ್ರಿಪ್, ಪ್ರತಿಫಲಕ ಸೂಚನಾ ಫಲಕಗಳು ಹಾಗೂ ವೇಗ ಮಿತಿ ಫಲಕಗಳನ್ನು ಅಳವಡಿಸುವ ಮೂಲಕ ವಾಹನಗಳ ವೇಗವನ್ನು ನಿಯಂತ್ರಿಸಬೇಕು ಎಂಬುದು ಸಾರ್ವಜನಿಕರ ಆಗ್ರಹವಾಗಿದೆ. ಸ್ಥಳೀಯರು, ಗ್ರಾಮ ಪಂಚಾಯಿತಿ ಪ್ರತಿನಿಧಿಗಳು ಹಾಗೂ ಸಾರ್ವಜನಿಕರು ಹಲವು ಬಾರಿ ಟ್ರಾಫಿಕ್ ಪೊಲೀಸ್, ಲೋಕೋಪಯೋಗಿ ಇಲಾಖೆ ಮತ್ತು ಜನಪ್ರತಿನಿಧಿಗಳ ಗಮನಕ್ಕೆ ಈ ಸಮಸ್ಯೆಯನ್ನು ತಂದಿದ್ದರೂ ಇದುವರೆಗೆ ಯಾವುದೇ ಪರಿಣಾಮಕಾರಿ ಕ್ರಮ ಕೈಗೊಳ್ಳಲಾಗಿಲ್ಲ ಎಂಬ ಬೇಸರ ವ್ಯಕ್ತವಾಗಿದೆ.
ಈ ಕುರಿತು ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ ವಂಡ್ಸೆ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರಾದ ಉದಯಕುಮಾರ್ ಶೆಟ್ಟಿ, ಇಲ್ಲಿನ ಮುಖ್ಯ ರಸ್ತೆಯಲ್ಲಿ ಸಂಭವಿಸುತ್ತಿರುವ ಅವಘಡಗಳ ಕುರಿತು ಈಗಾಗಲೇ ಟ್ರಾಫಿಕ್ ಪೊಲೀಸ್, ಲೋಕೋಪಯೋಗಿ ಇಲಾಖೆ ಹಾಗೂ ಜನಪ್ರತಿನಿಧಿಗಳ ಗಮನ ಸೆಳೆಯಲಾಗಿದೆ. ಆದರೂ ಇದುವರೆಗೂ ಯಾವುದೇ ಕ್ರಮ ಕೈಗೊಳ್ಳದಿರುವುದು ದುರದೃಷ್ಟಕರ ಎಂದು ಹೇಳಿದ್ದಾರೆ.
ಪ್ರತಿ ಅಪಘಾತದ ಬಳಿಕ ಕೆಲ ದಿನಗಳ ಚರ್ಚೆ, ನಂತರ ಮತ್ತೆ ಮೌನ. ಈ ಚಕ್ರ ಯಾವಾಗ ಮುರಿಯುತ್ತದೆ? ಇನ್ನೆಷ್ಟು ಜೀವಹಾನಿ ಸಂಭವಿಸಿದ ಬಳಿಕ ಅಧಿಕಾರಿಗಳು ಶಾಶ್ವತ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುತ್ತಾರೆ ಎಂಬ ಪ್ರಶ್ನೆ ಈಗ ವಂಡ್ಸೆ ಜನರದ್ದು. ಶಾಲಾ ವಲಯ ಮತ್ತು ಜನನಿಬಿಡ ಪ್ರದೇಶವಾಗಿರುವ ಈ ತಿರುವಿನಲ್ಲಿ ತಕ್ಷಣವೇ ವೇಗ ನಿಯಂತ್ರಣ ವ್ಯವಸ್ಥೆ ಅಳವಡಿಸಿ, ಸಾರ್ವಜನಿಕರ ಜೀವ ರಕ್ಷಣೆಗಾಗಿ ಸಂಬಂಧಪಟ್ಟ ಇಲಾಖೆ ಆದ್ಯತೆ ನೀಡಬೇಕೆಂಬುದು ಸ್ಥಳೀಯರ ಒಕ್ಕೊರಲಿನ ಆಗ್ರಹವಾಗಿದೆ.







