ಕೃಷಿ ಇಲಾಖೆಯಲ್ಲಿನ ಅವೈಜ್ಞಾನಿಕ ನೇಮಕಾತಿ ಕ್ರಮಗಳನ್ನು ರದ್ದುಪಡಿಸುವುದು, ಕೃಷಿ ಶಿಕ್ಷಣದ ಖಾಸಗೀಕರಣವನ್ನು ತಡೆಯುವುದು ಸೇರಿದಂತೆ ನಾಲ್ಕು ಪ್ರಮುಖ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘದ ನೇತೃತ್ವದಲ್ಲಿ ರಾಜ್ಯದ ಕೃಷಿ ವಿದ್ಯಾರ್ಥಿಗಳು ಹಾಗೂ ಕೃಷಿ ಪದವೀಧರರು ಸೋಮವಾರ ನಗರದ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಎದುರು ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದರು.
ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳು, ರಾಜ್ಯದ ಸರ್ಕಾರಿ ಕೃಷಿ ವಿಶ್ವವಿದ್ಯಾಲಯಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ರೈತರ ಹಿತಕ್ಕಾಗಿ ಶ್ರಮಿಸುತ್ತಿದ್ದರೂ, ಕೃಷಿ ಇಲಾಖೆಯ ರೈತ ವಿರೋಧಿ ಹಾಗೂ ವಿದ್ಯಾರ್ಥಿ ವಿರೋಧಿ ನೀತಿಗಳಿಂದ ಕೃಷಿ ಕ್ಷೇತ್ರ ಮತ್ತು ಕೃಷಿ ಶಿಕ್ಷಣ ಸಂಕಷ್ಟಕ್ಕೆ ಸಿಲುಕಿದೆ ಎಂದು ಆರೋಪಿಸಿದರು. ನ್ಯಾಯಯುತ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಅನಿರ್ದಿಷ್ಟಾವಧಿ ಧರಣಿ ಆರಂಭಿಸಿರುವುದಾಗಿ ತಿಳಿಸಿದರು.
ಪ್ರತಿಭಟನಾಕಾರರು ಮೊದಲನೆಯದಾಗಿ, ಕೃಷಿ ಅಧಿಕಾರಿ ಮತ್ತು ಸಹಾಯಕ ಕೃಷಿ ಅಧಿಕಾರಿ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಇದೇ ತಿಂಗಳು ನಡೆಯಲಿರುವ ಕೆಇಎ ಪರೀಕ್ಷೆಯಲ್ಲಿ ಕೊನೆಯ ಕ್ಷಣದಲ್ಲಿ ಐಸಿಎಆರ್ ಮಾನ್ಯತೆ ಇಲ್ಲದ ಖಾಸಗಿ ರೈ ಟೆಕ್ನಾಲಜಿ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಿಗೆ ಅವಕಾಶ ನೀಡಿರುವುದನ್ನು ತೀವ್ರವಾಗಿ ಖಂಡಿಸಿದರು.
2025ರ ಏಪ್ರಿಲ್ 10 ರಂದು ಸುಪ್ರೀಂ ಕೋರ್ಟ್ ನೀಡಿರುವ ತೀರ್ಪಿನ ಪ್ರಕಾರ ನೇಮಕಾತಿ ಪ್ರಕ್ರಿಯೆ ಆರಂಭವಾದ ಬಳಿಕ ಅರ್ಹತಾ ಮಾನದಂಡಗಳನ್ನು ಬದಲಾಯಿಸಲು ಅವಕಾಶವಿಲ್ಲ. ವೃಂದ ಮತ್ತು ನೇಮಕಾತಿ ನಿಯಮಗಳನ್ನು ಉಲ್ಲಂಘಿಸಿ ಖಾಸಗಿ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಿಗೆ ಅವಕಾಶ ಕಲ್ಪಿಸಿರುವುದರಿಂದ ಸರ್ಕಾರಿ ಕೃಷಿ ವಿಶ್ವವಿದ್ಯಾಲಯಗಳ ವಿದ್ಯಾರ್ಥಿಗಳಿಗೆ ಅನ್ಯಾಯವಾಗಿದ್ದು, ತಕ್ಷಣವೇ ಆ ಅವಕಾಶವನ್ನು ರದ್ದುಗೊಳಿಸಬೇಕು ಎಂದು ಒತ್ತಾಯಿಸಿದರು.
ರಾಜ್ಯದ ಸರ್ಕಾರಿ ಕೃಷಿ ವಿಶ್ವವಿದ್ಯಾಲಯಗಳ ಅಧೀನದಲ್ಲಿ ಖಾಸಗಿ ಕೃಷಿ ಕಾಲೇಜುಗಳಿಗೆ ನೀಡಲಾಗುತ್ತಿರುವ ಸಂಯೋಜನೆ (ಅಫಿಲಿಯೇಷನ್) ತಕ್ಷಣವೇ ನಿಲ್ಲಿಸಬೇಕು. ಖಾಸಗಿ ಕಾಲೇಜುಗಳಿಗೆ ಅವಕಾಶ ನೀಡುವುದರಿಂದ ಕೃಷಿ ಶಿಕ್ಷಣ ವ್ಯಾಪಾರೀಕರಣವಾಗುತ್ತಿದ್ದು, ಬಡ ರೈತರ ಮಕ್ಕಳಿಗೆ ಕೃಷಿ ಶಿಕ್ಷಣ ದುಬಾರಿಯಾಗಲಿದೆ. ಆದ್ದರಿಂದ ಈ ಶೈಕ್ಷಣಿಕ ವರ್ಷದಿಂದಲೇ ಹೊಸ ಪ್ರವೇಶಾತಿಯನ್ನು ಸ್ಥಗಿತಗೊಳಿಸಬೇಕು ಎಂದು ಒತ್ತಾಯಿಸಿದರು.
ಕೃಷಿ ಇಲಾಖೆಯ ಎಒ ಮತ್ತು ಎಎಒ ಹುದ್ದೆಗಳಿಗೆ ಬಿ.ಇ. ಬಯೋಟೆಕ್ನಾಲಜಿ ಪದವೀಧರರಿಗೆ ಅವಕಾಶ ನೀಡಿರುವುದು ಅವೈಜ್ಞಾನಿಕ ನಿರ್ಧಾರವಾಗಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು. ಕೃಷಿ ವಿಷಯದ ಪ್ರಾಯೋಗಿಕ ಜ್ಞಾನವಿಲ್ಲದವರಿಗೆ ಕೃಷಿ ಇಲಾಖೆಯ ಜವಾಬ್ದಾರಿಯುತ ಹುದ್ದೆಗಳನ್ನು ನೀಡುವುದು ರೈತರಿಗೆ ಹಾನಿಕಾರಕವಾಗಿದ್ದು, ಈ ನಿರ್ಧಾರವನ್ನು ತಕ್ಷಣ ಹಿಂಪಡೆದು ಬಿ.ಇ. ಬಯೋಟೆಕ್ ಪದವೀಧರರನ್ನು ನೇಮಕಾತಿ ಪ್ರಕ್ರಿಯೆಯಿಂದ ಹೊರಗಿಡಬೇಕು ಎಂದು ಆಗ್ರಹಿಸಿದರು.
ಇದೇ ವೇಳೆ, ರಸಗೊಬ್ಬರ ಮತ್ತು ಕೀಟನಾಶಕಗಳ ಮಾರಾಟಕ್ಕೆ ಪರವಾನಗಿ ಪಡೆಯಲು ಬಳಸಲಾಗುತ್ತಿರುವ ಡಿಪ್ಲೊಮಾ ಇನ್ ಅಗ್ರಿಕಲ್ಚರಲ್ ಎಕ್ಸ್ಟೆನ್ಷನ್ ಸರ್ವಿಸಸ್ ಫಾರ್ ಇನ್ಪುಟ್ ಡೀಲರ್ಸ್ (ಆರ್ ಇ ಐ ಎಸ್) ಕೋರ್ಸ್ ರದ್ದುಗೊಳಿಸಬೇಕು ಎಂದು ಒತ್ತಾಯಿಸಿದರು. ಸಮರ್ಪಕ ಕೃಷಿ ಜ್ಞಾನವಿಲ್ಲದವರು ಈ ಕೋರ್ಸ್ ಮೂಲಕ ಪರವಾನಗಿ ಪಡೆದು ರೈತರಿಗೆ ಅವೈಜ್ಞಾನಿಕ ಸಲಹೆಗಳನ್ನು ನೀಡುತ್ತಿರುವುದರಿಂದ ಬೆಳೆ, ಭೂಮಿ ಹಾಗೂ ರೈತರ ಆರ್ಥಿಕ ಸ್ಥಿತಿಗೆ ಹಾನಿಯಾಗುತ್ತಿದೆ ಎಂದು ದೂರಿದರು.
ಕೃಷಿ ಇಲಾಖೆಯ ಅಧಿಕಾರಿಗಳು ಕೈಗೊಂಡಿರುವ ಅವೈಜ್ಞಾನಿಕ ನಿರ್ಧಾರಗಳನ್ನು ಸರ್ಕಾರ ತಕ್ಷಣ ಸರಿಪಡಿಸಿ ರಾಜ್ಯದ ಸಾವಿರಾರು ಕೃಷಿ ವಿದ್ಯಾರ್ಥಿಗಳು ಹಾಗೂ ರೈತರಿಗೆ ನ್ಯಾಯ ಒದಗಿಸಬೇಕು. ನಾಲ್ಕು ಪ್ರಮುಖ ಬೇಡಿಕೆಗಳು ಈಡೇರುವವರೆಗೆ ಅನಿರ್ದಿಷ್ಟಾವಧಿ ಧರಣಿ ಮುಂದುವರಿಯಲಿದೆ ಎಂದು ಪ್ರತಿಭಟನಾಕಾರರು ಎಚ್ಚರಿಸಿದರು.
ಕರ್ನಾಟಕ ರಾಜ್ಯ ರೈತ ಸಂಘದ ಗೌರವಾಧ್ಯಕ್ಷ ಚಾಮರಸ ಮಾಲಿಪಾಟೀಲ್ ಮಾತನಾಡಿ ಸರ್ಕಾರ ಕೃಷಿ ಪದವೀಧರರ ಬದಲಿಗೆ ಬಿಟೆಕ್ ಪದವೀದರರನ್ನು ಕೃಷಿ ಅಧಿಕಾರಿಗಳನ್ನಾಗಿ ನೇಮಿಸಲು ಹೊರಟಿರುವದು ಅವೈಜ್ಞಾನಿಕ ಕ್ರಮವಾಗಿದೆ. ಕೃಷಿಯನ್ನು ಖಾಸಗೀಕರಣ ಮಾಡಲು ಸರ್ಕಾರ ಮುಂದಾಗಿದೆ. ಖಾಸಗಿಯವರಿಗೆ ಕೃಷಿ ಕಾಲೇಜು ನೀಡುವದಿರಂದ ಹಣವಂತರಿಗೆ ಮಾತ್ರ ಕೃಷಿ ಪದವಿ ದೊರೆಯುವಂತಾಗುತ್ತದೆ. ಈಗಾಗಲೇ ಅವೈಜ್ಞಾನಿಕ ನೀತಿ ಕೈ ಬಿಡಲು ಸಿಎಂ ಮತ್ತು ಡಿಸಿಎಂಗೆ ಮನವಿ ಮಾಡಲಾಗಿದೆ. ಯಾವುದೇ ಸ್ಪಂದನೆ ದೊರೆಯದೇ ಹೋದರೆ ರೈತ ಸಂಘದಿಂದ ರಾಜ್ಯದಾದ್ಯಂತ ಹೋರಾಟ ರೂಪಿಸುವದಾಗಿ ಹೇಳಿದರು.
ಪ್ರತಿಭಟನೆಯ ಸಂದರ್ಭದಲ್ಲಿ ಕೆಲಕಾಲ ರಸ್ತೆ ಸಂಚಾರ ಅಸ್ತವ್ಯಸ್ತಗೊಂಡಿದ್ದು, ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಸ್ಥಿತಿ ನಿಯಂತ್ರಿಸಿ ವಾಹನಗಳ ಸಂಚಾರವನ್ನು ಸುಗಮಗೊಳಿಸಿದರು.
ಈ ಸುದ್ದಿ ಓದಿದ್ದೀರಾ? ರಾಯಚೂರು | ಶಿಥಿಲ ಕಟ್ಟಡದಲ್ಲಿ ಶಿಕ್ಷಣ; ಮದರಕಲ್ ಸರ್ಕಾರಿ ಶಾಲೆಯ ದುಸ್ಥಿತಿಗಿಲ್ಲ ಮುಕ್ತಿ
ಈ ಸಂದರ್ಭದಲ್ಲಿ ರೈತ ಮುಖಂಡರಾದ ಪ್ರಭಾಕರ ಪಾಟೀಲ್ ನಾಗರತ್ನ ವಿ.ಪಾಟೀಲ್, ಹರವಿ ಶಂಕರಗೌಡ, ಸೂಗುರಯ್ಯ ಹಿರೆಮಠ, ವಿದ್ಯಾರ್ಥಿಗಳಾದ ಶಿವಪ್ಪ, ಅಂಕೇಶ, ನರ್ಮದಾ, ಜ್ಯೋತಿ ಸೇರಿದಂತೆ ನೂರಾರು ಜನರು ಭಾಗಿಯಾದರು.





