ಜಾತ್ರೆಗೆ ತೆರಳಿ ವಾಪಸ್ ಊರಿಗೆ ಬರುವಾಗ ಟಾಟಾ ಮ್ಯಾಜಿಕ್ ವಾಹನಕ್ಕೆ ಹಿಂಬದಿಯಿಂದ ವೇಗವಾಗಿ ಬಂದ ಟಿಪ್ಪರ್ ಡಿಕ್ಕಿ ಹೊಡೆದ ಪರಿಣಾಮ ಓರ್ವ ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿರುವ ಘಟನೆ ಔರಾದ್-ಬೀದರ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಧರಿ ಹನುಮಾನ ಕ್ರಾಸ್ ಸಮೀಪ ನಡೆದಿದೆ.
ಔರಾದ್ ತಾಲೂಕಿನ ಚಟ್ನಾಳ ಗ್ರಾಮದ ಸಂಗಮೇಶ ಕೂಡ್ಲೆ(40) ಮೃತರು. ಅಪಘಾತದಲ್ಲಿ ಚಂದ್ರಕಾಂತ ಮುಚಳಂಬೆ, ಸಂಜುಕುಮಾರ ತೊಗರಗೆ, ಗುಂಡಮ್ಮ ದುಬಲಗುಂಡೆ, ಸುರೇಖಾ ಎಂಬುವವರಿಗೆ ಕೈಕಾಲು, ತಲೆ, ಕಣ್ಣಿಗೆ ತೀವ್ರ ಪೆಟ್ಟಾಗಿದ್ದು, ಉಳಿದ ಕೆಲವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಎಲ್ಲರನ್ನೂ ಬೀದರ್ ಬ್ರಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ.
ಬೀದರ್ ತಾಲೂಕಿನ ಅಲಿಯಂಬರ್ ಗ್ರಾಮದಲ್ಲಿ ಬುಧವಾರ ಜರುಗಿದ ಜಾತ್ರೆಗೆ ಟಾಟಾ ಮ್ಯಾಜಿಕ್ ವಾಹನದಲ್ಲಿ ತೆರಳಿದ್ದರು. ದೇವರ ದರ್ಶನ ಮುಗಿಸಿಕೊಂಡು ರಾತ್ರಿ ಊರಿಗೆ ವಾಪಸ್ ತೆರಳುತ್ತಿದ್ದರು. ರಾತ್ರಿ 11 ಗಂಟೆ ಸುಮಾರಿಗೆ ಧರಿ ಹನುಮಾನ ಕ್ರಾಸ್ ಸಮೀಪದಲ್ಲಿ ಹಿಂಬದಿಯಿಂದ ವೇಗವಾಗಿ ಬಂದ ಟಿಪ್ಪರ್ ವಾಹನಕ್ಕೆ ಗುದ್ದಿದೆ. ಟಿಪ್ಪರ್ ಚಾಲಕ ವಾಹನ ಸಮೇತ ಅಲ್ಲಿಂದ ಓಡಿ ಹೋಗಿದ್ದಾನೆ. ಡಿಕ್ಕಿಯ ರಭಸಕ್ಕೆ ಟಾಟಾ ಮ್ಯಾಜಿಕ್ ವಾಹನ ಪಲ್ಟಿಯಾಗಿ ನುಜ್ಜುಗುಜ್ಜಾಗಿದೆ.
ಗಾಯಗೊಂಡವರನ್ನು ಕೂಡಲೇ ಬ್ರಿಮ್ಸ್‌ಗೆ ದಾಖಲಿಸಲಾಗಿತ್ತು. ಹೆಚ್ಚಿನ ಚಿಕಿತ್ಸೆಗಾಗಿ ಸಂಗಮೇಶ ಕೂಡ್ಲೆ ಎಂಬುವವರನ್ನು ಬೀದರ್‌ನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆಗೆ ಸ್ಪಂದಿಸದೆ ಬೆಳಿಗ್ಗಿನ ಜಾವ 4 ಗಂಟೆ ಸುಮಾರಿಗೆ ಕೊನೆಯುಸೆರೆಳೆದರು ಎಂದು ತಿಳಿದು ಬಂದಿದೆ.
ಇದನ್ನೂ ಓದಿ : ಬೀದರ್ | ಜಲ್ಲಿ ಕಲ್ಲಿನ ರಸ್ತೆ ಮೇಲೆ ಜನರ ಸರ್ಕಸ್; ಮುಗ್ಗರಿಸಿ ಬಿದ್ದರೂ ಕದಲದ ಆಡಳಿತ!
ಸಂತಪೂರ ಠಾಣೆ ವ್ಯಾಪ್ತಿಯಲ್ಲಿ ದುರ್ಘಟನೆ ಜರುಗಿದ್ದು, ಠಾಣೆಯ ಪಿಎಸ್‌ಐ ದಿನೇಶ ಸೇರಿದಂತೆ ಪೊಲೀಸ್ ಸಿಬ್ಬಂದಿ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದು, ತನಿಖೆ ಮುಂದುವರೆದಿದೆ.




