ಫಿನ್‌ಟೆಕ್ ಸಂಸ್ಥೆ ‘ಕ್ರೆಡ್’ (CRED) ಸಂಸ್ಥಾಪಕ ಕುನಾಲ್ ಶಾ ಅವರನ್ನು ವಿಶ್ವದ ಅತಿದೊಡ್ಡ ಮೆಸೇಜಿಂಗ್ ಆ್ಯಪ್ WhatsApp ನೂತನ ಜಾಗತಿಕ ಮುಖ್ಯಸ್ಥರನ್ನಾಗಿ ಮೆಟಾ ಸಂಸ್ಥೆ ನೇಮಕ ಮಾಡಿದೆ. ಕಳೆದ ಏಳು ವರ್ಷಗಳಿಂದ WhatsApp ಮುನ್ನಡೆಸುತ್ತಿದ್ದ ವಿಲ್ ಕ್ಯಾಥ್‌ಕಾರ್ಟ್ ಅವರ ಸ್ಥಾನಕ್ಕೆ ಕುನಾಲ್ ಶಾ ಬರಲಿದ್ದಾರೆ. ಇದೇ ವೇಳೆ, ಮೆಟಾ ಕಂಪನಿಯು ಕ್ರೆಡ್ ಸಂಸ್ಥೆಯಲ್ಲಿ ಬರೋಬ್ಬರಿ 900 ಮಿಲಿಯನ್ ಡಾಲರ್ (ಅಂದಾಜು 8,550 ಕೋಟಿ ರೂ.) ಬೃಹತ್ ಹೂಡಿಕೆ ಮಾಡಿದೆ.
WhatsApp ಜಾಗತಿಕ ಜವಾಬ್ದಾರಿ ವಹಿಸಿಕೊಳ್ಳಲಿರುವ ಹಿನ್ನೆಲೆಯಲ್ಲಿ ಕುನಾಲ್ ಶಾ ಅವರು ಕ್ರೆಡ್ ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (CEO) ಹುದ್ದೆಯಿಂದ ಕೆಳಗಿಳಿಯಲಿದ್ದಾರೆ. ಅವರ ಜಾಗಕ್ಕೆ ಕಂಪನಿಯ ಕಾರ್ಯತಂತ್ರ ಮತ್ತು ಹಣಕಾಸು ವಿಭಾಗದ ಮುಖ್ಯಸ್ಥರಾಗಿದ್ದ ಮಿತೇನ್ ಸಂಪತ್ ಅವರನ್ನು ಹಂಗಾಮಿ ಸಿಇಒ ಆಗಿ ನೇಮಿಸಲಾಗಿದೆ. ಸಿಇಒ ಹುದ್ದೆ ತೊರೆದರೂ, ಕುನಾಲ್ ಶಾ ಅವರು ಕ್ರೆಡ್‌ನಲ್ಲಿ ತಮ್ಮ ಶೇಕಡಾ 20ಕ್ಕಿಂತ ಕಡಿಮೆ ಇರುವ ವೈಯಕ್ತಿಕ ಷೇರುಗಳನ್ನು ಹಾಗೇ ಮುಂದುವರಿಸಲಿದ್ದಾರೆ ಎಂದು ಕಂಪನಿ ಸ್ಪಷ್ಟಪಡಿಸಿದೆ.
ಕುನಾಲ್ ಶಾ ಅವರ ತಾಂತ್ರಿಕ ದೂರದೃಷ್ಟಿಯನ್ನು ಮೆಟಾ ಸಿಇಒ ಮಾರ್ಕ್ ಜುಕರ್‌ಬರ್ಗ್ ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ಕುನಾಲ್ ಅವರಲ್ಲಿರುವ ‘ಸೃಷ್ಟಿಕರ್ತನ ಮನೋಭಾವ’ ಮತ್ತು ಜಾಗತಿಕ ದೃಷ್ಟಿಕೋನವು WhatsApp ಅನ್ನು ಮುಂದಿನ ಹಂತಕ್ಕೆ ಮುನ್ನಡೆಸಲು ಅತ್ಯಂತ ಸಹಕಾರಿಯಾಗಲಿದೆ ಎಂದು ಜುಕರ್‌ಬರ್ಗ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ತಮಗ ಸಿಕ್ಕಿರುವ ಈ ಜಾಗತಿಕ ಜವಾಬ್ದಾರಿಯ ಕುರಿತು ಕುನಾಲ್ ಶಾ ಅವರು ಕೂಡ ಎಕ್ಸ್ ಖಾತೆಯಲ್ಲಿ ತೀವ್ರ ಸಂತಸ ಹಂಚಿಕೊಂಡಿದ್ದಾರೆ.
ಇದನ್ನು ಓದಿದ್ದೀರಾ? ಬಿಡದಿ ಟೌನ್‌ಶಿಪ್ ವಿವಾದ: ಕೇಂದ್ರ ಸಚಿವ ಎಚ್‌ಡಿಕೆಗೆ ಚರ್ಚೆಗೆ ಆಹ್ವಾನಿಸಿದ ಸಿಎಂ
ಮೆಟಾ ಮಾಡಿರುವ ಈ 8,550 ಕೋಟಿ ರೂ. ಹೂಡಿಕೆಯಿಂದಾಗಿ ಕ್ರೆಡ್ ಸಂಸ್ಥೆಯ ಒಟ್ಟು ಮೌಲ್ಯ ಅಂದಾಜು 4.5 ಬಿಲಿಯನ್ ಡಾಲರ್‌ಗೆ (ಸುಮಾರು 43,239 ಕೋಟಿ ರೂ.) ಏರಿಕೆಯಾಗಿದೆ.
2018ರಲ್ಲಿ ಕೇವಲ 1 ಮಿಲಿಯನ್ ಡಾಲರ್ ವೈಯಕ್ತಿಕ ಬಂಡವಾಳದೊಂದಿಗೆ ಆರಂಭವಾದ ‘ಕ್ರೆಡ್’, ಇಂದು 17 ಮಿಲಿಯನ್ (1.7 ಕೋಟಿ) ಸಕ್ರಿಯ ಬಳಕೆದಾರರನ್ನು ಹೊಂದಿದೆ. ಭಾರತದ ಶೇ. 40ರಷ್ಟು ಕ್ರೆಡಿಟ್ ಕಾರ್ಡ್ ಬಿಲ್ ಪಾವತಿಗಳು ಕ್ರೆಡ್ ಮೂಲಕವೇ ನಡೆಯುತ್ತಿದ್ದು, ಕಂಪನಿಯು ವಾರ್ಷಿಕ 3,200 ಕೋಟಿ ರೂ. ಆದಾಯ ಗಳಿಸುತ್ತಿದೆ. ಈ ಯಶಸ್ಸಿನ ಬೆನ್ನಲ್ಲೇ ಕುನಾಲ್ ಶಾ ಈಗ ಜಾಗತಿಕ WhatsApp ಮುನ್ನಡೆಸುವ ಅತ್ಯುನ್ನತ ಗೌರವಕ್ಕೆ ಪಾತ್ರರಾಗಿದ್ದಾರೆ.




