ಬೀದರ್ ಜಿಲ್ಲಾ ಎಸ್ಐಆರ್ ವಿರೋಧಿ ಜನಾಂದೋಲನ ಸಮಿತಿಯ ಸಭೆ ನಗರದ ಕರ್ನಾಟಕ ಸಾಹಿತ್ಯ ಸಂಘದ ಸಭಾಂಗಣದಲ್ಲಿ ಗುರುವಾರ ನಡೆಯಿತು.
ಬೀದರ್ ಜಿಲ್ಲೆಯಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್ಐಆರ್) ಪ್ರಕ್ರಿಯೆಯ ಪ್ರಗತಿ, ನ್ಯೂನತೆಗಳು ಹಾಗೂ ಮತದಾರರು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಸವಿಸ್ತಾರವಾಗಿ ಚರ್ಚಿಸಿ ಹಲವು ಮಹತ್ವದ ನಿರ್ಣಯಗಳನ್ನು ಕೈಗೊಳ್ಳಲಾಯಿತು.
ಗ್ರಾಮೀಣ ಭಾಗದ ಬೂತ್ ಹಾಗೂ ನಗರ-ಪಟ್ಟಣಗಳ ವಾರ್ಡ್ಗಳಲ್ಲಿ ಮತದಾರರಿಗೆ ಎಸ್ಐಆರ್ ಗಣತಿ ಅರ್ಜಿ ಭರ್ತಿ ಮಾಡಲು ಸಮಿತಿಯ ಸದಸ್ಯರು ನೆರವು ನೀಡಬೇಕು. ಅರ್ಜಿ ಸಲ್ಲಿಕೆಯಲ್ಲಿ ಎದುರಾಗುವ ಸಮಸ್ಯೆಗಳನ್ನು ಮೇಲಾಧಿಕಾರಿಗಳ ಗಮನಕ್ಕೆ ತಂದು ತಕ್ಷಣ ಪರಿಹರಿಸಲು ಕ್ರಮ ಕೈಗೊಳ್ಳಬೇಕು ಎಂದು ತೀರ್ಮಾನಿಸಲಾಯಿತು.
ಮತದಾರರು ಫಾರಂ ಭರ್ತಿ ಮಾಡುವ ವೇಳೆ ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಜುಲೈ 17ರಂದು ಜಿಲ್ಲಾಧಿಕಾರಿಗಳ ಮೂಲಕ ಕೇಂದ್ರ ಚುನಾವಣಾ ಆಯೋಗ, ರಾಜ್ಯ ಚುನಾವಣಾ ಆಯೋಗ ಹಾಗೂ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲು ಸಭೆಯಲ್ಲಿ ನಿರ್ಧರಿಸಲಾಯಿತು.
ಜುಲೈ 29ರಂದು ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕವಾಗಿದ್ದು, ಆಗಸ್ಟ್ 5ರಂದು ಕರಡು ಮತದಾರರ ಪಟ್ಟಿ ಪ್ರಕಟವಾಗಲಿದೆ. ಹೀಗಾಗಿ ಅನಕ್ಷರಸ್ಥರು, ಬಡವರು ಹಾಗೂ ಮಹಿಳೆಯರ ಬಳಿ ಚುನಾವಣಾ ಆಯೋಗ ಸೂಚಿಸಿರುವ 11 ದಾಖಲೆಗಳು ಲಭ್ಯವಿಲ್ಲದ ಕಾರಣ ಅವರಿಗೆ ನೆರವು ನೀಡುವ ಉದ್ದೇಶದಿಂದ ಜಿಲ್ಲಾ, ತಾಲೂಕು ಹಾಗೂ ಗ್ರಾಮ ಮಟ್ಟದಲ್ಲಿ ‘ಕಾವಲು ಸಮಿತಿ’ ರಚಿಸಲು ಸಭೆ ತೀರ್ಮಾನಿಸಿದೆ.
ಸಭೆಯ ಅಧ್ಯಕ್ಷತೆಯನ್ನು ಜಿಲ್ಲಾ ಅಧ್ಯಕ್ಷ ಶ್ರೀಕಾಂತ ಸ್ವಾಮಿ ವಹಿಸಿದ್ದರು. ಸಂಚಾಲಕ ಓಂಪ್ರಕಾಶ ರೊಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಗದೀಶ್ವರ ಬಿರಾದಾರ ಸಭೆಯ ನಡಾವಳಿಯನ್ನು ವಾಚಿಸಿದರು.
ಇದನ್ನೂ ಓದಿ : ಬೀದರ್ | SIR : ಜು.14ರವರೆಗೆ 14,52,254 ಗಣತಿ ಅರ್ಜಿ ವಿತರಣೆ; 5,20,602 ಅರ್ಜಿ ಸ್ವೀಕೃತ
ಸಭೆಯಲ್ಲಿ ಸಮಿತಿಯ ಪ್ರಮುಖರಾದ ಡಾ.ಮಕ್ಸೂದ್ ಚಂದಾ, ಅಬ್ದುಲ್ ಮನ್ನಾನ್ ಸೇಠ್, ವಿಠಲದಾಸ ಪ್ಯಾಗೆ, ನಿಜಾಮುದ್ದೀನ್, ಸಂತೋಷ ಜೋಳದಾಬಕೆ, ಮಹೇಶ್ ಗೋರನಾಳಕರ, ಸಿದ್ದು ಫುಲಾರಿ, ರಮೇಶ್ ಮಠಪತಿ, ಚೆನ್ನಬಸಯ್ಯ ಗಣಾಚಾರಿ, ಸಂದೀಪ್ ಮುಕಿಂದೆ, ಜೈವಂತ್ ಸಿಂಗಾರೆ, ಮೊಹಮ್ಮದ್ ಫಯಾಜುದ್ದೀನ್, ಸುಂದರ ಜ್ಞಾನಿ, ಅಬ್ದುಲ್ ಸಮದ್, ಮೊಹಮ್ಮದ್ ಫಿರಾಸತ್ ಅಲಿ, ಅರುಣ ಪಾಟೀಲ, ಪೃಥ್ವಿರಾಜ, ಜಯವಂತ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.




