ಬೀದರ ಸಮೀಪದ ಗೋರನಳ್ಳಿ ಸಮೀಪದ ಲಿಂಗರಾಜ ಅಪ್ಪ ಎಂಜಿನಿಯರಿಂಗ್ ಕಾಲೇಜಿನಲ್ಲಿ ವಿಎಲ್ಎಸ್ಐ ಟೆಕ್ನಾಲಜಿ ವತಿಯಿಂದ 2026ರ ಕ್ಯಾಂಪಸ್ ನೇಮಕಾತಿ ಅಭಿಯಾನ ಯಶಸ್ವಿಯಾಗಿ ನಡೆಯಿತು.
ಕಾರ್ಯಕ್ರಮದಲ್ಲಿ ಕೈಗಾರಿಕಾ ತಜ್ಞರು ವಿದ್ಯಾರ್ಥಿಗಳಿಗೆ ವಿಎಲ್ಎಸ್ಐ, ಎಂಬೆಡೆಡ್ ಸಿಸ್ಟಮ್ ಹಾಗೂ ಸೆಮಿಕಂಡಕ್ಟರ್ ಕ್ಷೇತ್ರದಲ್ಲಿನ ಉದ್ಯೋಗಾವಕಾಶಗಳು ಮತ್ತು ಕೈಗಾರಿಕೆಯ ನಿರೀಕ್ಷೆಗಳ ಕುರಿತು ಮಾಹಿತಿ ನೀಡಿದರು.
ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಬಸವರಾಜ ಎಸ್.ದೇಶಮುಖ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, “ವಿದ್ಯಾರ್ಥಿಗಳು ತಾಂತ್ರಿಕ ಜ್ಞಾನ, ಸಮಸ್ಯೆ ಪರಿಹಾರ ಕೌಶಲ್ಯ ಹಾಗೂ ಸಂವಹನ ಸಾಮರ್ಥ್ಯವನ್ನು ವೃದ್ಧಿಸಿಕೊಳ್ಳುವ ಮೂಲಕ ಉದ್ಯೋಗ ಕ್ಷೇತ್ರದಲ್ಲಿ ಯಶಸ್ಸು ಸಾಧಿಸಬೇಕು” ಎಂದು ಕರೆ ನೀಡಿದರು.
ಕಾಲೇಜಿನ ಪ್ರಾಂಶುಪಾಲೆ ಡಾ.ವಿನಿತಾ ಪಾಟೀಲ ಮಾತನಾಡಿ, “ಗುಣಮಟ್ಟದ ಶಿಕ್ಷಣವನ್ನು ಒದಗಿಸುವುದು ಹಾಗೂ ವಿದ್ಯಾರ್ಥಿಗಳ ಯಶಸ್ಸಿಗೆ ಸದಾ ಬದ್ಧರಾಗಿ ದಾರಿ ತೋರುವುದು ನಮ್ಮ ಸಂಸ್ಥೆಯ ಉದ್ದೇಶವಾಗಿದೆ. ಆಡಳಿತ ಮಂಡಳಿಯ ಮಾರ್ಗದರ್ಶನ, ಪ್ರೋತ್ಸಾಹದಿಂದ ಅನೇಕ ವಿದ್ಯಾರ್ಥಿಗಳು ಉನ್ನತ ವ್ಯಾಸಂಗದಲ್ಲಿ ತೊಡಗಿಸಿಕೊಂಡು ಬದುಕು ರೂಪಿಸಿಕೊಂಡಿದ್ದಾರೆ” ಎಂದರು.
ನೇಮಕಾತಿ ಪ್ರಕ್ರಿಯೆಯಲ್ಲಿ ಅಂತಿಮ ವರ್ಷದ ಎಂಜಿನಿಯರಿಂಗ್ ಹಾಗೂ ಪದವಿ ವಿಭಾಗದ ಒಟ್ಟು 135 ವಿದ್ಯಾರ್ಥಿಗಳು ಆಪ್ಟಿಟ್ಯೂಡ್ ಪರೀಕ್ಷೆಗೆ ಹಾಜರಾಗಿದ್ದು, 39 ವಿದ್ಯಾರ್ಥಿಗಳು ಎರಡನೇ ಹಂತಕ್ಕೆ ಆಯ್ಕೆಯಾಗಿದ್ದಾರೆ. ಆಯ್ಕೆಯಾದ ವಿದ್ಯಾರ್ಥಿಗಳಿಗೆ ಬೆಂಗಳೂರಿನಲ್ಲಿ ಎಚ್‌ಆರ್ ಸಂದರ್ಶನ ನಡೆಯಲಿದೆ ಕಾಲೇಜಿನ ಮುಖ್ಯಸ್ಥರು ತಿಳಿಸಿದ್ದಾರೆ.
ಇದನ್ನೂ ಓದಿ : ಬೀದರ್ | ಎಸ್‌ಐಆರ್ ಕರಡು ಪಟ್ಟಿಯಿಂದ 1.66 ಲಕ್ಷ ಮತದಾರರು ಡಿಲೀಟ್: ನಿಮ್ಮ ಹೆಸರು ಮತ ಪಟ್ಟಿಯಲ್ಲಿ ಭದ್ರವಾಗಿದೆಯೇ?
ಬೆಂಗಳೂರು ಮೂಲದ ವಿಎಲ್ಎಸ್ಐ ಟೆಕ್ನಾಲಜಿ ಸಂಸ್ಥೆಯ ಟೆಕ್ನಿಕಲ್ ಹೆಡ್ ಲಲಿತಾ ಎಲ್.ಎ., ಟ್ಯಾಲೆಂಟ್ ಅಕ್ವಿಸಿಷನ್ ಮ್ಯಾನೇಜರ್ ಗಗನಾ ಬಿ.ಆರ್. ಹಾಗೂ ಎಂಬೆಡೆಡ್ ಸಿಸ್ಟಮ್ ಇಂಜಿನಿಯರ್ ನಿತಿನ್ ವಿ.ವೈ. ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು.
ಕಾರ್ಯಕ್ರಮದ ಯಶಸ್ಸಿಗೆ ತರಬೇತಿ ಮತ್ತು ನೇಮಕಾತಿ ವಿಭಾಗದ ಪ್ರೊ. ವಿವೇಕಾನಂದ ಬಿರಾದಾರ ಹಾಗೂ ವಿವಿಧ ವಿಭಾಗಗಳ ಅಧ್ಯಾಪಕರು, ಸಿಬ್ಬಂದಿಯವರು ಸಹಕರಿಸಿದರು.




