ಮೇ.1 ರಂದು ಭಗವಾನ್ ಬುದ್ಧ ಜಯಂತಿ ಹಾಗೂ ಮೇ.10 ರಂದು ಹೇಮರೆಡ್ಡಿ ಮಲ್ಲಮ್ಮ ಜಯಂತಿಯನ್ನು ಅದ್ದೂರಿಯಾಗಿ ಮತ್ತು ಅರ್ಥಪೂರ್ಣವಾಗಿ ಆಚರಿಸಲು ಅಪರ ಜಿಲ್ಲಾಧಿಕಾರಿ ಶಿವಾನಂದ ಕರಾಳೆ ತಿಳಿಸಿದರು.
ಮಂಗಳವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮೇ1 ರಂದು ಭಗವಾನ್ ಬುದ್ಧ ಜಯಂತಿ ಹಾಗೂ ಮೇ10 ರಂದು ಹೇಮರೆಡ್ಡಿ ಮಲ್ಲಮ್ಮ ಜಯಂತಿ ಆಚರಣೆ ಕುರಿತು ಕರೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಮೇ 1ರಂದು ಬೆಳಿಗ್ಗೆ 9:30 ಗಂಟೆಗೆ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಭಗವಾನ್ ಬುದ್ಧ ಜಯಂತಿಯನ್ನು ಆಚರಿಸಿ ನಂತರ ಸಂಜೆ 5 ಗಂಟೆಗೆ ಬೀದರ ನಗರದ ಗಾಂಧಿ ಗಂಜ್ ಬುದ್ಧ ವಿಹಾರದಿಂದ ಮೆರವಣಿಗೆ ಚಾಲನೆ ನೀಡಿ ಮಹಾತ್ಮ ಬೊಮ್ಮಗೊಂಡೇಶ್ವರ ವೃತ್ತ, ವಿಶ್ವ ಗುರು ಬಸವೇಶ್ವರ ವೃತ್ತ, ಭಗತಸಿಂಗ್ ವೃತ್ತ ಮತ್ತು ಡಾ.ಬಿ.ಆರ್.ಅಂಬೇಡ್ಕರ್ ವೃತ್ತದ ಮಾರ್ಗದಿಂದ ನೇರವಾಗಿ ಪೂಜ್ಯ ಚನ್ನಬಸವ ಪಟ್ಟದ್ದೇವರು ರಂಗಮಂದಿರ ತಲುಪಿ ನಂತರ ವೇದಿಕೆ ಕಾರ್ಯಕ್ರಮ ಜರುಗಲಿದೆ ಎಂದರು.
ಮೇ10 ರಂದು ಬೆಳಿಗ್ಗೆ 10 ಗಂಟೆಗೆ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಜಯಂತಿ ಆಚರಿಸಿ ನಂತರ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಸಮುದಾಯ ಭವನದಲ್ಲಿ ಮಧ್ಯಾಹ್ನ 12 ಗಂಟೆಗೆ ವೇದಿಕೆ ಕಾರ್ಯಕ್ರಮ ಜರುಗಲಿದೆ.
ಕನ್ನಡ ಸಂಸ್ಕೃತಿ ಇಲಾಖೆ ವತಿಯಿಂದ ಕಲಾ ತಂಡಗಳ ವ್ಯವಸ್ಥೆ, ನಗರಸಭೆ ವತಿಯಿಂದ ಎಲ್ಲ ಮಹನೀಯರ ವೃತ್ತಗಳ ಮೇಲೆ ದೀಪಾಲಂಕಾರ, ಕುಡಿಯುವ ನೀರಿನ ವ್ಯವಸ್ಥೆ, ಪ್ರಮುಖ ವೃತ್ತಗಳ ಸ್ವಚ್ಚತೆ ಮಾಡುವುದು, ಪೊಲೀಸ್ ಇಲಾಖೆ ವತಿಯಿಂದ ಮೆರವಣಿಗೆ ಹೋಗುವ ಮಾರ್ಗದಲ್ಲಿ ಸೂಕ್ತ ಪೊಲೀಸ್ ಬಂದೋಬಸ್ತ್ ಒದಗಿಸುವಂತೆ ಅಪರ ಜಿಲ್ಲಾಧಿಕಾರಿಗಳು ಅಧಿಕಾರಿಗಳಿಗೆ ಸೂಚಿಸಿದರು.
ಸಭೆಯಲ್ಲಿ ಕನ್ನಡ ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಸಿದ್ರಾಮ ಶಿಂಧೆ, ಪೂಜ್ಯ ಭಂತೆ ಧರ್ಮಪಾಲ, ರಾಜಪ್ಪಾ ಗೂನ್ನಳ್ಳಿಕರ್, ಮಾರುತಿ ಬೌದ್ಧೆ, ಬಾಬು ಪಾಸ್ವಾನ್ , ಮಹೇಶ ಗೋರನಾಳಕರ್, ಶ್ರೀಪತಿರಾವ ದೀನೆ, ಡಾ.ಕಾಶಿನಾಥ ಚೆಲ್ವಾ, ಫರ್ನಾಂಡೀಸ್ ಹಿಪ್ಪಳಗಾಂವ, ಬಾಬು ಆಣದೂರ, ಶರಣು ಫುಲೆ, ಪೂಜ್ಯ ಭಂತೆ ಭದಂತ ಧಮ್ಮನಾಗ ಮಹಾಥೆರೋರೊ, ಶಂಕರ ರೆಡ್ಡಿ ಸೇರಿದಂತೆ ಸಮಾಜದ ಮುಖಂಡರು ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.




