ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯ ಎರಡನೇ ಹಂತದ ಮತದಾನ ಪ್ರಕ್ರಿಯೆಯಲ್ಲಿ ಮತದಾರರು ಅಭೂತಪೂರ್ವ ಉತ್ಸಾಹ ತೋರಿದ್ದು, ಸಂಜೆ 5 ಗಂಟೆಯ ವೇಳೆಗೆ ಬರೋಬ್ಬರಿ ಶೇಕಡ 89.99ರಷ್ಟು ಭಾರೀ ಮತದಾನವಾಗಿದೆ. ಇದರೊಂದಿಗೆ, 2021ರ ವಿಧಾನಸಭಾ ಚುನಾವಣೆಯಲ್ಲಿ ಇದೇ ಕ್ಷೇತ್ರಗಳಲ್ಲಿ ದಾಖಲಾಗಿದ್ದ ಗರಿಷ್ಠ ಮತದಾನದ ದಾಖಲೆ ಈಗ ಮುರಿದುಬಿದ್ದಿದೆ.
ಚುನಾವಣಾ ಆಯೋಗದ ಅಂಕಿಅಂಶಗಳ ಪ್ರಕಾರ, ಬಿರುಬಿಸಿಲನ್ನೂ ಲೆಕ್ಕಿಸದೆ ಬೆಳಿಗ್ಗೆಯಿಂದಲೇ ಮತಗಟ್ಟೆಗಳತ್ತ ಮುಖಮಾಡಿದ ಜನರು ಸರತಿ ಸಾಲಿನಲ್ಲಿ ನಿಂತು ತಮ್ಮ ಹಕ್ಕು ಚಲಾಯಿಸಿದ್ದಾರೆ. ಸಂಜೆ 5 ಗಂಟೆಯವರೆಗಿನ ವರದಿಯಂತೆ ಮತದಾನದ ಪ್ರಮಾಣವು ಶೇ. 89.99 ತಲುಪಿದೆ.
ಇದನ್ನು ಓದಿದ್ದೀರಾ? ತಮಿಳುನಾಡಿನ ಮೊದಲ ಲಿಂಗತ್ವ ಅಲ್ಪಸಂಖ್ಯಾತ ಕ್ರಿಕೆಟ್ ಅಂಪೈರ್ ರಿತಿಕಾ ಶ್ರೀ – ಸವಾಲು ಮೆಟ್ಟಿ ನಿಂತ ಸಾಧಕಿ
ಕಳೆದ 2021ರ ಚುನಾವಣೆಯಲ್ಲಿ ಇದೇ ನಿರ್ದಿಷ್ಟ ಕ್ಷೇತ್ರಗಳಲ್ಲಿ ಒಟ್ಟಾರೆ ಶೇ. 80.4 ರಷ್ಟು ಮತದಾನವಾಗಿತ್ತು. ಆದರೆ, ಈ ಬಾರಿ ಸಂಜೆ 5ರ ಒಳಗಾಗಿಯೇ ಅದಕ್ಕಿಂತ ಸುಮಾರು ಶೇ. 9.5ರಷ್ಟು ಅಧಿಕ ಮತದಾನವಾಗುವ ಮೂಲಕ ಹೊಸ ಇತಿಹಾಸ ಸೃಷ್ಟಿಯಾಗಿದೆ. ಮತದಾನದ ಅವಧಿ ಮುಕ್ತಾಯಗೊಂಡ ಬಳಿಕ ಬಿಡುಗಡೆಯಾಗುವ ಅಂತಿಮ ವರದಿಯಲ್ಲಿ ಈ ಪ್ರಮಾಣ ಮತ್ತಷ್ಟು ಏರಿಕೆಯಾಗುವ ಸಾಧ್ಯತೆಯಿದೆ.
ಬಿಗಿ ಭದ್ರತೆಯ ನಡುವೆ ಮತದಾನ ಪ್ರಕ್ರಿಯೆ ಸುಗಮವಾಗಿ ನಡೆದಿದೆ. ಪ್ರಜಾಸತ್ತಾತ್ಮಕ ಪ್ರಕ್ರಿಯೆಯಲ್ಲಿ ಮಹಿಳೆಯರು ಹಾಗೂ ಯುವಕರು ಸೇರಿದಂತೆ ಎಲ್ಲಾ ವರ್ಗದ ಜನರ ಈ ಬೃಹತ್ ಪಾಲ್ಗೊಳ್ಳುವಿಕೆಯು ತೀವ್ರ ಪೈಪೋಟಿಗೆ ಸಾಕ್ಷಿಯಾಗಿರುವ ರಾಜ್ಯ ಚುನಾವಣೆಯ ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿದೆ.




