ಬಸವಣ್ಣಾ, ನೀವು ಮರ್ತ್ಯಕ್ಕೆ ಬಂದು ನಿಂದಡೆ ಭಕ್ತಿಯ ಬೆಳವಿಗೆ ದೆಸೆದೆಸೆಗಲ್ಲಾ ಪಸರಿಸಿತ್ತಲ್ಲಾ! ಅಯ್ಯಾ, ಸ್ವರ್ಗ ಮರ್ತ್ಯ ಪಾತಾಳದೊಳಗೆಲ್ಲಾ ನಿಮ್ಮ ಭಕ್ತಿಯ ಬೆಳವಿಗೆಯ ಘನವನಾರು ಬಲ್ಲರು? ಅಣ್ಣಾ, ಶಶಿಧರನಟ್ಟಿದ ಮಣಿಹ ಪೂರೈಸಿತ್ತೆಂದು ನೀವು ಲಿಂಗೈಕ್ಯವಾದೊಡೆ, ನಿಮ್ಮೊಡನೆ ಭಕ್ತಿ ಹೋಯಿತ್ತಯ್ಯಾ. ನಿಮ್ಮೊಡನೆ ಅಸಂಖ್ಯಾತ ಮಹಾಗಣಂಗಳು ಹೋದರಣ್ಣಾ. ಮರ್ತ್ಯಲೋಕದ ಮಹಾಮನೆ ಶೂನ್ಯವಾಯಿತ್ತಲ್ಲಾ ಬಸವಣ್ಣಾ. ಎನ್ನನೊಯ್ಯದೆ ಹೋದೆಯಲ್ಲಾ ಪಂಚಪರುಷಮೂರ್ತಿ ಬಸವಣ್ಣಾ. ಬಸವಣ್ಣಪ್ರಿಯ ಚೆನ್ನಸಂಗಯ್ಯಂಗೆ ಪ್ರಾಣಲಿಂಗವಾಗಿ ಹೋದೆಯ ಸಂಗನಬಸವಣ್ಣಾ?
ಶರಣೆ ಅಕ್ಕನಾಗಮ್ಮ ಬಸವಣ್ಣನವರ ಸಹೋದರಿ, ಶರಣ ಚನ್ನಬಸವಣ್ಣನವರ ತಾಯಿ. ಅಕ್ಕನಾಗಮ್ಮಳಿಗೆ ನಾಗಲಾಂಬಿಕೆ ಎಂಬ ಹೆಸರಿನಿಂದ ಕರೆಯುತ್ತಿದ್ದರು. ವಿಜಯಪುರ ಜಿಲ್ಲೆಯ ಬಾಗೇವಾಡಿ ಸಮೀಪದ ಇಂಗಳೇಶ್ವರದಲ್ಲಿ ಜನಿಸಿದ ನಾಗಲಾಂಬಿಕೆ, ಸಹೋದರ ಬಸವಣ್ಣನವರ ಬದುಕು ರೂಪುಗೊಳಿಸುವಿಕೆಯಲ್ಲಿ ಮಹತ್ವದ ಪಾತ್ರ ವಹಿಸಿದ್ದರು. ವಚನ ಸಾಹಿತ್ಯ, ಧರ್ಮದ ರಕ್ಷಣೆಗಾಗಿ ಪ್ರೇರಕ ಶಕ್ತಿಯಾಗಿ ಹೋರಾಡಿದ ವೀರಮಹಿಳೆ ಅಕ್ಕನಾಗಮ್ಮ.
ಅಕ್ಕನಾಗಮ್ಮ ‘ಬಸವಣ್ಣಪ್ರಿಯ ಚೆನ್ನಸಂಗಯ್ಯ’ ಎಂಬ ವಚನಾಂಕಿತದಲ್ಲಿ ರಚಿಸಿರುವ 14 ವಚನಗಳು ಲಭ್ಯವಾಗಿವೆ. ಅವರ ವಚನಗಳಲ್ಲಿ ಬಸವ ಸ್ತುತಿ, ಶರಣರ ಮಹತ್ವ, ಆಧ್ಯಾತ್ಮಿಕ ನಿಲುವು, ಸತ್ಯ, ನಿಷ್ಠೆ ಮತ್ತು ಭಕ್ತಿಯ ವಿಚಾರಗಳು ವ್ಯಕ್ತವಾಗುತ್ತವೆ. ಬಸವಣ್ಣನವರ ಅಗಲಿಕೆಯ ನೋವು ವಚನಗಳಲ್ಲಿ ಕಾಣುತ್ತೇವೆ.
ಧಾರ್ಮಿಕ ಕ್ಷೇತ್ರದಲ್ಲಿ ಮಹಿಳೆಯರಿಗೂ ಸಮಾನತೆ ದೊರೆಯಬೇಕೆಂಬ ಮಹತ್ವದ ಉದ್ದೇಶದಿಂದ ಶರಣರು ಅಕ್ಕನಾಗಮ್ಮಳನ್ನು ಅನುಭವ ಮಂಟಪದ ಮೇಲ್ವಿಚಾರಣೆಯ ಜವಾಬ್ದಾರಿ ನೀಡಿದರು. ಕಲ್ಯಾಣದ ಮಹಾಮನೆಗೆ ಬರುವ ಶರಣಾತಿಥಿಗಳ ಪ್ರಸಾದೋಪಚಾರ, ಅನುಭವ ಮಂಟಪದ ಶಿವಾನುಭವ ಗೋಷ್ಠಿಯ ವ್ಯವಸ್ಥೆ ನೋಡಿಕೊಳ್ಳುತ್ತಿದ್ದಳು. ಸ್ತ್ರೀಯರಿಗೆ ಸಮಾನ ಸ್ಥಾನಮಾನ ಸಿಗಬೇಕೆಂದು ಅಕ್ಕನಾಗಮ್ಮ ಅನುಭಾವ ಗೋಷ್ಠಿಯಲ್ಲಿ ಧ್ವನಿ ಎತ್ತಿದ್ದರು. ವಚನ ಚಳವಳಿಯಲ್ಲಿ ಮಹಿಳೆಯರ ಪಾತ್ರ ಬಲಪಡಿಸುವಲ್ಲಿ ನಾಗಲಾಂಬಿಕೆಯ ಕೊಡುಗೆ ಅಪಾರವಾಗಿದೆ.
ಎನಗೆ ಹಾಲೂಟವನಿಕ್ಕುವ ತಾಯೆ, ಎನಗೆ ಪರಿಣಾಮವ ತೋರುವ ತಾಯೆ, ಪರಮಸುಖದೊಳಗಿಪ್ಪ ತಾಯೆ, ಪರವಸ್ತುವ ನಂಬಿದ ತಾಯೆ, ಬಸವನ ಗುರುತಾಯೆ, ಸಂಗಯ್ಯನಲ್ಲಿ ಸ್ವಯಲಿಂಗಿಯಾದೆಯಾ, ಅಕ್ಕನಾಗಮ್ಮ ತಾಯೆ!
ಅಕ್ಕನಾಗಮ್ಮ ಕಲ್ಯಾಣದ ಮಹಾಮನೆಯಲ್ಲಿ ಸಕಲ ಶಿವಶರಣರನ್ನು ಊಟ, ಉಪಚಾರಗೈದು ಸೌಖ್ಯವಾಗಿ ಇರುವಂತೆ ನೋಡಿಕೊಂಡಿದ್ದಳು. ಹೀಗಾಗಿ ನಾಗಲಾಂಬಿಕೆ ಎಲ್ಲರ ಮೆಚ್ಚುಗೆಗೆ ಪಾತ್ರಳಾಗಿ ಪ್ರಸಿದ್ಧ ವಚನಕಾರ್ತಿ ಎನಿಸಿಕೊಂಡಳು. ಅಕ್ಕನಾಗಮ್ಮ ಕೇವಲ ಬಸವಣ್ಣನವರಿಗೆ ಸಹೋದರಿಯಾಗಿ ಅಷ್ಟೇ ಇರಲಿಲ್ಲ. ಬಸವಣ್ಣನವರಿಗೆ ತಾಯಿ, ಗುರು, ಆಧ್ಯಾತ್ಮಿಕ ಮಾರ್ಗದರ್ಶಕಿಯಾಗಿ ಇದ್ದಳು. ಅದನ್ನೇ ಬಸವಣ್ಣನವರ ಪತ್ನಿ ನೀಲಾಂಬಿಕೆಯು ಈ ಮೇಲಿನ ವಚನದಲ್ಲಿ ಅಕ್ಕನಾಗಮ್ಮನವರ ಮಾತ್ರಹೃದಯಿ ಕಾಳಜಿಯನ್ನು ಕೊಂಡಾಡಿದ್ದು ಕಾಣುತ್ತೇವೆ.
ಅಕ್ಕನಾಗಮ್ಮ ಕೇವಲ ಅನುಭವ ಮಂಟಪದ ನಿರ್ವಹಣೆ ಅಷ್ಟೇ ಅಲ್ಲದೆ, ಶರಣ ಚಿಂತನೆ ಮತ್ತು ವಚನ ಪರಂಪರೆಯ ರಕ್ಷಣೆಯಲ್ಲೂ ಅವರು ಮುಂಚೂಣಿಯಲ್ಲಿದ್ದರು. ಕಲ್ಯಾಣ ಕ್ರಾಂತಿಯ ವೇಳೆ ಶರಣರ ಮೇಲೆ ದೌರ್ಜನ್ಯ, ದಬ್ಬಾಳಿಕೆ ಮತ್ತು ಹತ್ಯಾಕಾಂಡ ನಡೆದಾಗ, ವಚನ ಸಾಹಿತ್ಯವನ್ನು ಸಂರಕ್ಷಿಸುವ ಮಹತ್ವದ ಕಾರ್ಯ ಕೈಗೊಂಡವರಲ್ಲಿ ಅಕ್ಕನಾಗಮ್ಮ, ಗಂಗಾಬಿಕೆ ಪ್ರಮುಖರು. ನಾಗಮ್ಮಳ ಪುತ್ರ ಚನ್ನಬಸವಣ್ಣ ಹಾಗೂ ಇತರ ಶರಣರೊಂದಿಗೆ ಕೂಡಿ ಧರ್ಮ ಮತ್ತು ವಚನ ಸಾಹಿತ್ಯ ಪರಂಪರೆ ಉಳಿಸುವ ಹೋರಾಟದಲ್ಲಿ ಸಕ್ರಿಯವಾಗಿದ್ದರು.
ಶರಣರಿಗೆ ಚಿತ್ರಹಿಂಸೆ ಕೊಟ್ಟು, ವಚನ ಕಟ್ಟುಗಳನ್ನು ನಾಶಪಡಿಸಲು ಹೊರಟಿದ್ದ ಪಟ್ಟಭದ್ರ ಹಿತಾಶಕ್ತಿಗಳ ವಿರುದ್ಧ ಸಿಡಿದೆದ್ದು ನಿಂತ ಅಕ್ಕನಾಗಮ್ಮ, ಶರಣರ ವಚನ ಕಟ್ಟುಗಳನ್ನು ಸಂರಕ್ಷಿಸಲು ಶರಣಗಣದೊಂದಿಗೆ ಒಗ್ಗೂಡಿ ಹೋರಾಡಿದರು. ವೈಚಾರಿಕ ಹಾಗೂ ವೈಜ್ಞಾನಿಕ ತಳಹದಿಯಲ್ಲಿ ರೂಪಿತವಾದ ವಚನ ಪರಂಪರೆಯ ಸಮಾನತೆ ಆಶಯಗಳನ್ನು ಭವಷ್ಯದ ಪೀಳಿಗೆಗೆ ತಲುಪಿಸುವ ಮಹತ್ತರ ಲೋಕದ ಕಾಳಜಿ ಅವರಲ್ಲಿತ್ತು. ಅದಕ್ಕಾಗಿಯೇ ಅಕ್ಕನಾಗಮ್ಮ ವೀರಾವೇಶದಿಂದ ಹೋರಾಡಿದಳು ಎಂದು ಸಂಶೋದನೆಯಿಂದ ತಿಳಿದುಬರುತ್ತದೆ.
ಅಕ್ಕನಾಗಮ್ಮನವರಿಗೆ ತಮ್ಮ ಸಹೋದರ ಬಸವಣ್ಣನವರ ಮೇಲೆ ಅಪಾರ ಪ್ರೀತಿ, ಅಭಿಮಾನ ಮತ್ತು ಗೌರವವಿತ್ತು. ಅವರ ಬಹುತೇಕ ವಚನಗಳಲ್ಲಿ ಬಸವಣ್ಣನವರ ವ್ಯಕ್ತಿತ್ವ, ಕಾಯಕನಿಷ್ಠೆ, ಭಕ್ತಿ ಮತ್ತು ಸಮಾಜಮುಖಿ ಚಿಂತನೆಗಳ ಗುಣಗಾನ ಮಾಡಿರುವುದು ಕಾಣಬಹುದು. ಬಸವಣ್ಣ ಕಲ್ಯಾಣ ಬಿಟ್ಟು ಹೋದ ಬಳಿಕ ಅಕ್ಕನಾಗಮ್ಮ ಅಣ್ಣನ ಕುರಿತು ವ್ಯಕ್ತಪಡಿಸಿದ ನೋವು, ಸಂಕಟ ಅವರ ವಚನವೊಂದರಲ್ಲಿ ಹೃದಯಸ್ಪರ್ಶಿಯಾಗಿ ಮೂಡಿಬಂದಿದೆ:
ಬಸವಣ್ಣಾ, ನೀವು ಮರ್ತ್ಯಕ್ಕೆ ಬಂದು ನಿಂದಡೆ
ಭಕ್ತಿಯ ಬೆಳವಿಗೆ ದೆಸೆದೆಸೆಗಲ್ಲಾ ಪಸರಿಸಿತ್ತಲ್ಲಾ!
ಅಯ್ಯಾ, ಸ್ವರ್ಗ ಮರ್ತ್ಯ ಪಾತಾಳದೊಳಗೆಲ್ಲಾ
ನಿಮ್ಮ ಭಕ್ತಿಯ ಬೆಳವಿಗೆಯ ಘನವನಾರು ಬಲ್ಲರು?
ಈ ವಚನದಲ್ಲಿ ಅಕ್ಕನಾಗಮ್ಮನವರ ನೋವಿನ ಜೊತೆಗೆ ಬಸವಣ್ಣನವರನ್ನು ಕಳೆದುಕೊಂಡ ಕಲ್ಯಾಣದ ಸಾಮಾಜಿಕ-ಆಧ್ಯಾತ್ಮಿಕ ಶೂನ್ಯತೆಯ ಚಿತ್ರಣವೂ ಒಳಗೊಂಡಿದೆ. ಅಕ್ಕನಾಗಮ್ಮಳ ದೃಷ್ಟಿಯಲ್ಲಿ ಬಸವಣ್ಣನವರು ಭೂಲೋಕಕ್ಕೆ ಬಂದ ಬಳಿಕ ಭಕ್ತಿಯ ಬೆಳಕು ಎಲ್ಲ ದಿಕ್ಕುಗಳಿಗೂ ಪಸರಿಸಿತು. ಅವರ ಕಾಯಕನಿಷ್ಠೆ, ನಡೆ-ನುಡಿ ಮತ್ತು ಭಕ್ತಿ ಜಗದಗಲಕ್ಕೂ ವ್ಯಾಪಿಸಿತು. ಬಸವಣ್ಣನವರನ್ನು ಕಳೆದುಕೊಂಡ ಕಲ್ಯಾಣ ರಾಜ್ಯ ಬಡವಾಗಿತ್ತು. ಜ್ಞಾನದ ನಂದಾದೀಪ ಆರಿತು, ಎಲ್ಲೆಡೆ ಕತ್ತಲು ಆವರಿಸಿದೆ ಎಂದು ಅಕ್ಕನಾಗಮ್ಮ ತಮ್ಮ ಒಡಲ ಸಂಕಟ ನಿವೇದನೆ ಮಾಡಿಕೊಳ್ಳುತ್ತಾಳೆ.
ಬಸವಣ್ಣ ಕೇವಲ ಪೂಜಿಸುವ ದೇವ ಮೂರ್ತಿಯಲ್ಲ. ಅಂಧಕಾರದಲ್ಲಿ ಮುಳುಗಿದ್ದ ಸಮಾಜಕ್ಕೆ ಜ್ಞಾನದ ಬೆಳಕು ತೋರಿಸಿದ ಮಹಾಗುರು. ಕಾಯಕಕ್ಕೆ ಘನತೆ ತಂದುಕೊಟ್ಟು, ಕಾಯಕಜೀವಿಗಳಿಗೆ ಸಾಮಾಜಿಕ ನ್ಯಾಯ, ಘನತೆ ದೊರಕಿಸಿಕೊಟ್ಟ ಸಂಘಟಕ. ಸಮಾನತೆ, ಮಾನವೀಯತೆ, ಸ್ತ್ರೀ ಸ್ವಾತಂತ್ರ್ಯ ಹಾಗೂ ದಾಸೋಹದ ಪರಿಕಲ್ಪನೆಗಳನ್ನು ಸಮಾಜದ ಮುಂದೆ ಪ್ರತಿಪಾದಿಸಿದ ಸಮಾಜ ಸುಧಾರಕ. ಶರಣ ಸಂಕುಲವನ್ನು ಮುನ್ನಡೆಸಿದ ಸಮೂಹ ಸಂಘಟಕನಾದ ಒಡಹುಟ್ಟಿದ ಅಣ್ಣನನ್ನು ಕಳೆದುಕೊಂಡ ಅಕ್ಕನಾಗಮ್ಮ ಅಂತಿಮ ದಿನಗಳಲ್ಲಿ ದುಃಖಿಸುತ್ತಾಳೆ. ಸಮಾಜೋಧಾರ್ಮಿಕ ಮಾರ್ಗದರ್ಶಕನನ್ನು ಕಳೆದುಕೊಂಡ ಶರಣ ಬಳಗದ ನೋವು ಇಲ್ಲಿ ಒಟ್ಟಾಗಿ ವ್ಯಕ್ತವಾಗಿದೆ.
ಎನ್ನ ಕುಲಸೂತಕವ ಕಳೆದಾತ ಬಸವಣ್ಣ
ಎನ್ನ ಮನಸೂತಕವ ಕಳೆದಾತ ಬಸವಣ್ಣ
ಎನ್ನ ತನುಸೂತಕವ ಕಳೆದಾತ ಬಸವಣ್ಣ
ಎನ್ನ ನೆನಹು ಸೂತಕವ ಕಳೆದಾತ ಬಸವಣ್ಣ
ಎನ್ನ ಕುರುಹು ಸೂತಕವ ಕಳೆದಾತ ಬಸವಣ್ಣ
ಎನ್ನ ಭಾವಸೂತಕವ ಕಳೆದಾತ ಬಸವಣ್ಣ
ಎನ್ನ ತನ್ನೊಳಗೆ ಇಂಬಿಟ್ಟುಕೊಂಡಾತ ಬಸವಣ್ಣ
ನಿಜದ ನಿರವಯ ಬಾಗಿಲ ತೋರಿದಾತ ಬಸವಣ್ಣ
ಬಸವಣ್ಣಪ್ರಿಯ ಚೆನ್ನಸಂಗನ ಹೃದಯದಲ್ಲಿ
ನಿಜನಿವಾಸಿಯಾಗಿ ಇರಿಸಿದ ಎನ್ನ ತಂದೆ ಸಂಗನ ಬಸವಣ್ಣ
ತನ್ನ ಕುಲ,ಮನ, ತನು,ಭಾವದಲ್ಲಿನ ಮೈಲಿಗೆಯನ್ನು ತೊಳೆದು ನಿಜದ ಅರಿವನ್ನು ತುಂಬಿ, ಸತ್ಯದ ಬಾಗಿಲು ತೋರಿಸಿದ ಮಹಾನ್ ಚೇತನ ಬಸವಣ್ಣ ಎಂಬ ಭಾವ ಈ ವಚನದಲ್ಲಿ ವ್ಯಕ್ತವಾಗುತ್ತದೆ. ಬಸವಣ್ಣನವರಿಗೆ ʼಎನ್ನ ತಂದೆ ಸಂಗನ ಬಸವಣ್ಣʼ ಎಂದು ಸಂಬೋಧಿಸಿದ್ದು ನೋಡಿದಾಗ ಅಕ್ಕನಾಗಮ್ಮ ಬಸವಣ್ಣನವರನ್ನು ಗುರುವಾಗಿ ತನ್ನೊಳಗೆ ಇಂಬಿಟ್ಟುಕೊಂಡಿದ್ದರು ಎಂಬುದು ಸ್ಪಷ್ಟವಾಗುತ್ತದೆ. ಅಕ್ಕನಾಗಮ್ಮಳ ಮೇಲೆ ಅಣ್ಣ ಬಸವಣ್ಣನವರ ಆಧ್ಯಾತ್ಮಿಕ ಪ್ರಭಾವ ಇರುವುದು ಈ ಮೇಲಿನ ವಚನದಲ್ಲಿ ಗಮನಿಸಬಹುದು.
ಬಸವಣ್ಣ ಜೊತೆಗೆ ಅಲ್ಲಮಪ್ರಭು, ಚನ್ನಬಸವಣ್ಣ, ಸಿದ್ಧರಾಮ, ಘಟಿವಾಳಯ್ಯ, ಮರುಳಶಂಕರದೇವ, ಅಕ್ಕಮಹಾದೇವಿ ಮೊದಲಾದ ಶರಣರನ್ನು ಅಕ್ಕನಾಗಮ್ಮ ಸ್ತುತಿಸಿರುವುದು ವಚನಗಳಲ್ಲಿ ನೋಡುತ್ತೇವೆ. ಇಲ್ಲಿ ಅಣ್ಣ-ತಂಗಿಯ ಕೌಟುಂಬಿಕ ಬಾಂಧವ್ಯದ ರಕ್ತ ಸಂಬಂಧದ ಜೊತೆಗೆ ಭಕ್ತಿ ಸಂಬಂಧ ದೊಡ್ಡದಾಗಿದೆ. ಅಕ್ಕನಾಗಮ್ಮಳಿಗೆ ಆಧಾತ್ಮದ ಗುರು ಬಸವಣ್ಣನವರೇ ಆಗಿರುವುದು ಕಾಣುತ್ತೇವೆ. ʼನಿಜದ ನಿರವಯ ಬಾಗಿಲ ತೋರಿದಾತ ಬಸವಣ್ಣʼ ಎಂದ ಹೆಮ್ಮೆಯಿಂದ ಹೇಳಿಕೊಂಡಿದ್ದಾಳೆ ಅಕ್ಕನಾಗಮ್ಮ.
ಎನ್ನ ತನು ಚೆನ್ನಬಸವಣ್ಣನ ಬಯಲ ಬೆರಸಿತ್ತು. ಎನ್ನ ಮನ ಸಂಗನಬಸವಣ್ಣನ ನಿಜಪದವ ಬೆರಸಿತ್ತು. ಎನ್ನ ಪ್ರಾಣ ಅಲ್ಲಮಪ್ರಭುದೇವರ ಅರಿವ ಬೆರಸಿತ್ತು. ಇಂತೀ ಮೂವರು ಒಂದೊಂದ ಹಂಚಿಕೊಂಡ ಕಾರಣ, ಎನಗೇನೂ ಇಲ್ಲದೆ, ಬಸವಣ್ಣಪ್ರಿಯ ಚೆನ್ನಸಂಗಯ್ಯನ ಹೃದಯಕಮಲದಲ್ಲಿ ನಿಜನಿವಾಸಿಯಾಗಿದ್ದೆನು.
ಕಲ್ಯಾಣ ಕ್ರಾಂತಿಯ ವೇಳೆ ಶರಣ ಬಳಗದ ನೇತ್ರತ್ವ ವಹಿಸಿ ಉಳವಿಯಲ್ಲಿ ಇದ್ದು, ಪುತ್ರ ಚನ್ನಬಸವಣ್ಣ ಲಿಂಗೈಕ್ಯನಾದ ಬಳಿಕ ಅಕ್ಕನಾಗಮ್ಮಳು ನುಲಿಯ ಚಂದಯ್ಯನವರ ಜೊತೆಗೂಡಿ ಸಂಚರಿಸುತ್ತ ಚಿಕ್ಕಮಗಳೂರ ಜಿಲ್ಲೆಯ ಎಣ್ಣೆಹೊಳೆ ಪ್ರದೇಶದಲ್ಲಿ ನೆಲೆಸಿ, ಅಲ್ಲಿಯೇ ಲಿಂಗೈಕ್ಯ ಆಗಿರುವ ಬಗ್ಗೆ ಸಂಶೋಧಕರು ತಿಳಿಸುತ್ತಾರೆ. ಅಲ್ಲಿ ಈಗ ಅಕ್ಕನಾಗಮ್ಮಳ ಸಮಾಧಿ, ಗದ್ದುಗೆ ಇದೆ.
ಅಕ್ಕನಾಗಮ್ಮನವರ ಬದುಕು ಕೇವಲ ಬಸವಣ್ಣನವರ ಸಹೋದರಿಯ ಜೀವನ ಚರಿತ್ರೆಯಲ್ಲ. ಅದು ಮಹಿಳಾ ನಾಯಕತ್ವದ, ತ್ಯಾಗ, ಧೈರ್ಯ ಮತ್ತು ಸಾಹಿತ್ಯ ಸಂರಕ್ಷಣೆಯ ಅಪೂರ್ವ ಅಧ್ಯಾಯ. 12ನೇ ಶತಮಾನದ ಸಮಕಾಲೀನ ಶರಣರಾದ ಕೋಲಶಾಂತಯ್ಯ, ಮರುಳಶಂಕರದೇವ, ಆಯ್ದಕ್ಕಿ ಲಕ್ಕಮ, ನೀಲಮ್ಮ ಸೇರಿ ಅನೇಕರು ಅಕ್ಕನಾಗಮ್ಮಳ ಜ್ಞಾನ, ಅಕ್ಕರೆಯ ಪ್ರೀತಿಯನ್ನು ಕೊಂಡಾಡಿದ್ದಾರೆ. ʼಅಕ್ಕನಾಗಾಯಮ್ಮನ ಪ್ರಸಾದವಕೊಂಡು ಎನ್ನ ಅಂತರಂಗ ಶುದ್ಧವಾಯಿತ್ತಯ್ಯಾʼ ಎಂದು ಲಕ್ಕಮ್ಮ ಅಕ್ಕನಾಗಮ್ಮಳ ಕುರಿತು ಅಭಿಮಾನದ ಮಾತು ನುಡಿದಿದ್ದಾಳೆ.
ಭಕ್ತಿಯ ತವನಿಧಿಯೆ, ಮುಕ್ತಿಯ ಮೂರುತಿಯೆ, ಲಿಂಗಜಂಗಮದ ಚೈತನ್ಯವೆ ನಿಮ್ಮನಗಲಿ ಎಂತು ಸೈರಿಸುವೆನು? ಎಲೆ ಅಯ್ಯಾ ಪರಮಗುರುವೆ, ಆಹಾ ಎನ್ನ ಅಂತರಂಗದ ಜ್ಯೋತಿಯೆ, ನಿಮ್ಮ ಒಕ್ಕ ಶೇಷಪ್ರಸಾದವನಿಕ್ಕಿ ಎನ್ನ ಪಾವನವಮಾಡಿ ಉಳುಹಿದೆಯಯ್ಯಾ. ಲಿಂಗವೆ ಎನಗಿನ್ನಾರು ಹೇಳಯ್ಯಾ ನೀವಲ್ಲದೆ? ಬಸವಣ್ಣಪ್ರಿಯ ಚೆನ್ನಸಂಗಯ್ಯಾ, ನೀವಗಲಿದಡೆ ಎನ್ನ ಪ್ರಾಣ ನಿಮ್ಮೊಳಗಲ್ಲದೆ ಅಗಲಬಲ್ಲುದೆ?
ಅಕ್ಕನಾಗಮ್ಮ ವಚನ ಸಾಹಿತ್ಯ ಕಾಪಾಡಲು ನಡೆಸಿದ ಹೋರಾಟ, ಶರಣ ಸಂಕುಲ ರಕ್ಷಿಸಲು ತೋರಿದ ಧೈರ್ಯ ಮತ್ತು ಬಸವಣ್ಣನವರ ಸರ್ವ ಏಳಿಗೆಗಾಗಿ ಅವರು ಬೆನ್ನುಲುಬಾಗಿ ನಿಂತು ಶ್ರಮಿಸಿದ ಶಕ್ತಿ ಅನನ್ಯ. ಸಮಾಜದಲ್ಲಿ ಶಾಂತಿ, ಸೌಹಾರ್ದತೆ, ಬಾಂಧವ್ಯ ಗಟ್ಟಿಗೊಳ್ಳಬೇಕಾದರೆ ಅಕ್ಕನಾಗಮ್ಮ ಅವರಂತಹ ವಚನಕಾರ್ತಿಯರ ಬದುಕು-ಹೋರಾಟ ಆದರ್ಶವಾಗಿದೆ.
ಇದನ್ನೂ ಓದಿ : ವಚನ ಕಲ್ಯಾಣ | ಭಕ್ತಂಗೆ ಸುಖವೂ ಸರಿ, ದುಃಖವೂ ಸರಿ..
ʼಭಕ್ತಿಯ ತವನಿಧಿಯೆ, ಮುಕ್ತಿಯ ಮೂರುತಿಯೆ, ಲಿಂಗಜಂಗಮದ ಚೈತನ್ಯವೆ ನಿಮ್ಮನಗಲಿ ಎಂತು ಸೈರಿಸುವೆನು?ʼ ಎಂದು ಅಕ್ಕನಾಗಮ್ಮ ಬಸವಣ್ಣನ ಅಗಲಿಕೆ ಸ್ಮರಿಸಿ ವ್ಯಥೆಪಟ್ಟಿದ್ದು ನಿಜ. ಸಾಮಾಜಿಕ ಕಾಠಿಣ್ಯತೆ ಕಾಲಘಟ್ಟದಲ್ಲಿಯೂ ವಚನ ಸಾಹಿತ್ಯವನ್ನು ಸಂರಕ್ಷಿಸಿ, ಮುಂದಿನ ಪೀಳಿಗೆಗೆ ತಲುಪಿಸಿದ ಅನೇಕ ಶರಣ-ಶರಣೆಯರ ತ್ಯಾಗವೂ ಇದೆ. ಆ ಪರಂಪರೆಯಲ್ಲಿ ಅಕ್ಕನಾಗಮ್ಮನವರ ಸ್ಥಾನ ಅತ್ಯಂತ ಮಹತ್ವದ್ದು ಎಂಬುದು ನಾವೆಲ್ಲರೂ ಸ್ಮರಿಸಬೇಕು.
(ಆ.12ರಿಂದ ಶ್ರಾವಣ ಮಾಸ ಆರಂಭಗೊಂಡಿದೆ. ತನ್ನಿಮಿತ್ತ ಪ್ರತಿದಿನ ಬಸವಾದಿ ಶಿವಶರಣರ ವಚನ ಅನುಭಾವವನ್ನು “ವಚನ ಕಲ್ಯಾಣ” ಹೆಸರಿನಲ್ಲಿ ಸರಣಿ ಲೇಖನ ʼಈದಿನ ಡಾಟ್ ಕಾಮ್ʼನಲ್ಲಿ ಪ್ರಕಟವಾಗಲಿದೆ. ಓದಿ…ಓದಿಸಿ)

ಬಾಲಾಜಿ ಕುಂಬಾರ್
ಬಾಲಾಜಿ ಕುಂಬಾರ ಅವರು ಔರಾದ್ ತಾಲ್ಲೂಕಿನ ಚಟ್ನಾಳ ಗ್ರಾಮದವರು. ಸಾಹಿತ್ಯ, ಶಿಕ್ಷಣ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದಾರೆ. ಸದ್ಯ 'ಈದಿನ.ಕಾಮ್' ಮಾಧ್ಯಮ ಸಂಸ್ಥೆಯಲ್ಲಿ ಬೀದರ್ ಜಿಲ್ಲಾ ಹಿರಿಯ ಸಂಯೋಜಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕವಿತೆ, ಲೇಖನ, ದೇಶಿ ನುಡಿ ಬರಹ ಬರೆಯುವುದು ಇವರ ಮುಖ್ಯ ಹವ್ಯಾಸ.



