ಔರಾದ್ ಪಟ್ಟಣದಲ್ಲಿ ಮೇ 8 ರಂದು ದಲಿತ ಸಮುದಾಯದ ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ ಕೊಲೆ ಮಾಡಲಾಗಿದ್ದು, ಈ ಪ್ರಕರಣವನ್ನು ಎಸ್‌ಐಟಿಗೆ ಒಪ್ಪಿಸಿ ತನಿಖೆ ನಡೆಸಬೇಕೆಂದು ಜನರ ಧ್ವನಿ ಸಂಘಟನೆಯ ಸಂಸ್ಥಾಪಕ ರಾಜ್ಯಾಧ್ಯಕ್ಷ ಅಂಕುಶ ಗೋಖಲೆ ಆಗ್ರಹಿಸಿದ್ದಾರೆ.
ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಗುರುವಾರ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿ, ಕಮಲನಗರ ತಾಲ್ಲೂಕಿನ ಗ್ರಾಮವೊಂದರ ದಲಿತ ಸಮುದಾಯದ 16 ವರ್ಷದ ಔರಾದ್ ತಾಲೂಕಿನ ಗ್ರಾಮವೊಂದರ ವ್ಯಕ್ತಿ ತನ್ನ ಮನೆಯಲ್ಲಿ ಇಟ್ಟುಕೊಂಡು ಕುಸ್ತಿ ಹಾಗೂ ಕಬ್ಬಡಿ ತರಬೇತಿ ನೀಡುತ್ತಿದ್ದ. ಬಾಲಕಿಯು ಆರೋಪಿ ಮನೆಯಲ್ಲಿಯೇ ಉಳಿದು ತರಬೇತಿ ಪಡೆದಿದ್ದಳುʼ ಎಂದು ಹೇಳಿದರು.
ʼತರಬೇತಿ ನೀಡಿದ ವ್ಯಕ್ತಿ 1.30 ಲಕ್ಷ ಹಣ ನೀಡುವಂತೆ ಪೋಷಕರಿಗೆ ತಿಳಿಸಿದ್ದನು. ಬಾಲಕಿಯ ಪೋಷಕರು 60 ಸಾವಿರ ಹಣ ಕೊಟ್ಟಿದ್ದಾರೆ. ಆದರೆ, ಉಳಿದ ಹಣ ನೀಡದಿದ್ದರೆ ನಿಮ್ಮ ಮಗಳಿಗೆ ತರಬೇತಿ ನೀಡುವುದಿಲ್ಲ, ಹೊಡೆಯುತ್ತೇನೆ ಎಂದು ಬಾಲಕಿ ಹಾಗೂ ಪೋಷಕರಿಗೆ ಬೆದರಿಕೆ ಹಾಕಿ ಹಿಂಸೆ ನೀಡಿದ್ದಾನೆ ʼ ಎಂದು ಆರೋಪಿಸಿದರು.
ʼಇದೇ ಮೇ 8 ರಂದು ಬಾಲಕಿ ತರಬೇತಿಗಾಗಿ ಉಳಿದ ಮನೆಯ ಎರಡು ಅಂತಸ್ತಿನ ಮೇಲಿಂದ ಬಿದ್ದಿದ್ದಾಳೆ. ಲೈಂಗಿಕ ದೌರ್ಜನ್ಯ ಎಸಗಿ ಕೊಲೆಗೈದ ಆರೋಪಿ ʼನಿಮ್ಮ ಮಗಳು ಚಾವಣಿ ಮೇಲಿಂದ ಕೆಳಗೆ ಬಿದ್ದು ಗಂಭೀರ ಗಾಯಗೊಂಡಿದ್ದಾಳೆ, ಬೀದರ್‌ನ ಖಾಸಗಿ ಆಸ್ಪತ್ರೆಗೆ ಬನ್ನಿʼ ಎಂದು ಪೋಷಕರಿಗೆ ಕರೆ ಮಾಡಿ ಮಾಹಿತಿ ನೀಡಿದ್ದ, ಪೋಷಕರು ಆಸ್ಪತ್ರೆಗೆ ಭೇಟಿ ನೀಡಿದ ವೇಳೆಗೆ ಬಾಲಕಿ ಮೃತಪಟ್ಟಿದ್ದಳು. ಇದು ಲೈಂಗಿಕ ದೌರ್ಜನ್ಯ, ಚಿತ್ರಹಿಂಸೆ ನೀಡಿ ಕೊಲೆಗೈದ ಘಟನೆಯಾದರೂ ಆರೋಪಿಯನ್ನು ರಕ್ಷಿಸುವ ಉದ್ದೇಶದಿಂದ ಮೇ 9ರಂದು ಮೃತ ಬಾಲಕಿಯ ಪೋಷಕರು ನೀಡಿದ ದೂರಿನ ಮೇರೆಗೆ ʼಸಂಶಯಾಸ್ಪದ ಸಾವುʼ ಎಂದು ಔರಾದ್ ಪೊಲೀಸ್ ಠಾಣೆಯಲ್ಲಿ ಯುಡಿಆರ್ ಪ್ರಕರಣ ದಾಖಲಾಗಿದೆʼ ಎಂದು ವಿವರಿಸಿದರು.
ʼಮೃತ ಬಾಲಕಿಯ ಪೋಷಕರು, ವಿವಿಧ ಸಂಘಟನೆಗಳು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಗೆ ಭೇಟಿ ನೀಡಿದ ಬಳಿಕ ಮೇ 13ರಂದು ರಾತ್ರಿ ಅದೇ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. ಈ ಎಫ್‌ಐಆರ್ ನಲ್ಲಿ ಆರೋಪಿ ವಿರುದ್ಧ ಅತ್ಯಾಚಾರ, ಕೊಲೆ ಪ್ರಕರಣ ದಾಖಲಿಸದೆ, ಬಾಲಕಿಗೆ ತರಬೇತಿಯ ಬಾಕಿ ಹಣ ತೆಗೆದುಕೊಂಡು ಬಾ, ಇಲ್ಲದಿದ್ದರೆ ತರಬೇತಿ ನೀಡುವುದಿಲ್ಲʼ ಎಂದು ಕಿರುಕುಳ ನೀಡಿದ್ದ ಕಾರಣಕ್ಕೆ ಬಾಲಕಿ ಮನೆಯ ಮೇಲಿಂದ ಬಿದ್ದು ಮೃತಪಟ್ಟಿದ್ದಾಳೆ. ಆತ್ಮಹತ್ಯೆಗೆ ಪ್ರಚೋದನೆ ನೀಡಿದಕ್ಕೆ ಬಾಲಕಿ ಸಾವನ್ನಪ್ಪಿದ್ದಾಳೆ ಎಂಬುದಾಗಿ ಪ್ರಕರಣ ದಾಖಲಾಗಿದೆ. ಈ ಪ್ರಕರಣದಲ್ಲಿ ಆರೋಪಿಯನ್ನು ರಕ್ಷಿಸುವ ಹುನ್ನಾರ ಅಡಗಿದೆʼ ಎಂದು ದೂರಿದರು.
ʼಈ ಪ್ರಕರಣದ ಆರೋಪಿ ಔರಾದ್ ಕ್ಷೇತ್ರದ ಶಾಸಕ ಪ್ರಭು ಚವ್ಹಾಣ ಅವರ ಸ್ವಜಾತಿಗೆ ಸೇರಿದ ಕಾರಣಕ್ಕೆ ಆರೋಪಿಗೆ ರಕ್ಷಿಸುತ್ತಿರುವ ಅನುಮಾನ ವ್ಯಕ್ತವಾಗಿದೆ. ಕುಸ್ತಿ ತರಬೇತಿ ಹಾಗೂ ಹಣ ವಸೂಲಾತಿ ಹೆಸರಿನಲ್ಲಿ ಆರೋಪಿ ಬಾಲಕಿಯನ್ನು ಅಪಹರಿಸಿ, ಲೈಂಗಿಕ ದೌರ್ಜನ್ಯ ನಡೆಸಿ, ಕಿರುಕುಳ ಕೊಟ್ಟು ಕೊಲೆ ಮಾಡಿದ್ದಾನೆ. ಈ ಘಟನೆಯನ್ನು ಉಸ್ತುವಾರಿ ಸಚಿವ ಈಶ್ವರ ಬಿ.ಖಂಡ್ರೆ ಅವರು ಗಂಭೀರವಾಗಿ ಪರಿಗಣಿಸಿ ಸೂಕ್ತ ತನಿಖೆಗೆ ಒಪ್ಪಿಸಬೇಕುʼ ಎಂದು ಒತ್ತಾಯಿಸಿದರು.
ʼಕೊಲೆ ಆರೋಪಿ ಹಾಗೂ ಬಾಲಕಿಯ ಪೋಷಕರನ್ನು ಎಸ್‌ಪಿ ಪ್ರದೀಪ ಗುಂಟಿ ಅವರು ತಮ್ಮ ಕಚೇರಿಗೆ ಕರೆಸಿಕೊಂಡು, ರಾಜಿ ಸಂಧಾನ ಮಾಡಿಸಲು ಹರಸಾಹಸ ಪಟ್ಟಿದ್ದಾರೆ. ಈ ಕುರಿತು ಕೆಲ ಸಂಘಟನೆಗಳ ಮುಖಂಡರು ಪ್ರಶ್ನಿಸಿದರೆ, ಅಂಥವರಿಗೆ ಪೊಲೀಸರು ನೋಟಿಸ್ ಕೊಟ್ಟಿದ್ದಾರೆ. ಕೊಲೆ ಆರೋಪಿಯನ್ನು ಜತೆಗಿಟ್ಟುಕೊಂಡು ರಾಜಿ ಸಂಧಾನ ಮಾಡುವುದು ಸರಿಯೇ? ಇದರ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರೇ ಉತ್ತರಿಸಬೇಕುʼ ಎಂದರು.
ʼಅಪ್ರಾಪ್ತೆಯ ಬಾಲಕಿಯ ಅತ್ಯಾಚಾರ, ಕೊಲೆ ಪ್ರಕರಣ ಕೂಡಲೇ ಸಿಐಡಿ ತನಿಖೆಗೆ ಒಪ್ಪಿಸಬೇಕು. ಬಾಲಕಿಯ ಶವ ಹೊರತೆಗೆದು ಪುನಃ ಮರಣೋತ್ತರ ಪರೀಕ್ಷೆ ನಡೆಸಬೇಕು. ಇದಕ್ಕೆ ಜಿಲ್ಲೆಯ ವೈದ್ಯರು, ಪೊಲೀಸ್ ಸಿಬ್ಬಂದಿ ಮೇಲೆ ನಂಬಿಕೆ ಇಲ್ಲ. ಹೀಗಾಗಿ ಅನ್ಯ ಜಿಲ್ಲೆಯ ದಕ್ಷ ಅಧಿಕಾರಿಗಳನ್ನು ತನಿಖೆಗೆ ನಿಯೋಜಿಸಬೇಕು. ಆರೋಪಿ ವಿರುದ್ಧ ಅತ್ಯಾಚಾರ, ಕೊಲೆ ಪ್ರಕರಣ ದಾಖಲಿಸಿ, ಸೂಕ್ತ ತನಿಖೆ ನಡೆಸಿ ಕಠಿಣ ಶಿಕ್ಷೆ ನೀಡಬೇಕು. ಜಿಲ್ಲೆಯ ಎಸ್‌ಪಿ ಪ್ರದೀಪ್ ಗುಂಟಿ ಅವರನ್ನು ಜಿಲ್ಲೆಯಿಂದ ವರ್ಗಾವಣೆ ಮಾಡಬೇಕುʼ ಎಂದು ಗೋಖಲೆ ಆಗ್ರಹಿಸಿದರು.
ಬಿಎಸ್ಪಿ ಪಕ್ಷದ ಜಿಲ್ಲಾಧ್ಯಕ್ಷ ಕಪಿಲ್ ಗೋಡಬೊಲೆ ಮಾತನಾಡಿ, ʼರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದ ನಂತರ ಎಸ್‌ಸಿ, ಎಸ್‌ಟಿ, ಒಬಿಸಿ, ಮೈನಾರಿಟಿ ಸಮುದಾಯದ ಮೇಲೆ ನಿರಂತರವಾಗಿ ದೌರ್ಜನ್ಯ ನಡೆಯುತ್ತಿದೆ. ಜಿಲ್ಲೆಯ ಭಾಲ್ಕಿಯಲ್ಲೂ ಈ ಹಿಂದೆ ಅನೇಕ ಪ್ರಕರಣಗಳು ನಡೆದಿವೆ. ಈಗ ಕಮಲನಗರ ತಾಲೂಕಿನಲ್ಲಿ ದಲಿತ ಬಾಲಕಿಯ ಮೇಲೆ ದೌರ್ಜನ್ಯ, ಕೊಲೆ ಪ್ರಕರಣ ಬೆಳಕಿಗೆ ಬಂದಿದೆ. ಅನ್ಯಾಯದ ವಿರುದ್ಧ ಧ್ವನಿಯೆತ್ತುವ ಜಿಲ್ಲೆಯ ಸಂಘಟನೆಗಳ ಮುಖಂಡರನ್ನು ಹತ್ತಿಕ್ಕುವ ಕೆಲಸ ನಡೆಯುತ್ತಿದೆʼ ಎಂದು ಹೇಳಿದರು.
ʼಮೃತ ಬಾಲಕಿಯ ಕೊಲೆ ಖಂಡಿಸಿ ನ್ಯಾಯಕ್ಕಾಗಿ ಧ್ವನಿಯೆತ್ತಿದ ಕೆಲ ಸಂಘಟನೆಯ ಮುಖಂಡರನ್ನು ಪೊಲೀಸರು ಬಂಧಿಸಿ ಬಿಡುಗಡೆ ಮಾಡಿರುವುದು ಸರಿಯಾದ ಕ್ರಮವಲ್ಲ. ಈ ಬಗ್ಗೆ ಗೃಹ ಸಚಿವ ಜಿ.ಪರಮೇಶ್ವರ ಅವರು ಬಾಲಕಿಯ ಸಾವಿಗೆ ನ್ಯಾಯ ಕೊಡಿಸಲು ಸೂಚಿಸಬೇಕು ಎಂದ ಅವರು, ಜಿಲ್ಲೆಯ ಜನರಿಗೆ ನ್ಯಾಯ ಕೊಡಿಸಲು ಆಗದಿದ್ದರೆ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ.ಖಂಡ್ರೆ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಡಬೇಕುʼ ಎಂದು ಆಗ್ರಹಿಸಿದರು.
ಇದನ್ನೂ ಓದಿ : ನೀಟ್ ಪರೀಕ್ಷೆ ರದ್ದು | ವಿದ್ಯಾರ್ಥಿಗಳ ಭವಿಷ್ಯದೊಂದಿಗೆ ಆಟವಾಡುತ್ತಿರುವ ಕೇಂದ್ರ ಸರ್ಕಾರ : ಸಾಗರ ಖಂಡ್ರೆ
ಪತ್ರಿಕಾಗೋಷ್ಠಿಯಲ್ಲಿ ಜನರ ಧ್ವನಿ ಸಂಘಟನೆಯ ಜಿಲ್ಲಾಧ್ಯಕ್ಷ ರಾಜಕುಮಾರ ಶಿಂಧೆ, ಮುಖಂಡರಾದ ದಿಲೀಪ್‌ಕುಮಾರ್ ವರ್ಮಾ, ಹಣಮಂತ ಮಟ್ಟೆ, ತಿಪ್ಪಣ್ಣ ವಾಲಿ, ಅಂಬಾದಾಸ ಚಕ್ರವರ್ತಿ, ಸಚೀನ ಗಿರಿ, ಮಾರುತಿ ಕಾಂಬಳೆ ಮತ್ತಿತರರಿದ್ದರು.
ಆರೋಪಿ ಬಂಧನ :
ಔರಾದ(ಬಿ) ಪಟ್ಟಣದಲ್ಲಿ ಮೇ 8 ರಂದು ಅಪ್ರಾಪ್ತ ಬಾಲಕಿಯ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಕಿಯ ತಾಯಿ ನೀಡಿದ ದೂರಿನ ಆಧಾರದಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು, ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದಡಿ ಓರ್ವ ಆರೋಪಿಯನ್ನು ಬಂಧಿಸಲಾಗಿದೆ ಎಂದು ಎಸ್ಪಿ ಪ್ರದೀಪ ಗುಂಟಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಪೋಷಕರಿಂದ ಹೆಚ್ಚಿನ ಮಾಹಿತಿ ಸಂಗ್ರಹಿಸಲಾಗುತ್ತಿದ್ದು, ಅಗತ್ಯವಿರುವ ಎಲ್ಲಾ ಪುರಾವೆಗಳನ್ನು ಕಲೆಹಾಕುವ ಕಾರ್ಯ ಮುಂದುವರಿದಿದೆ. ಇಲಾಖೆಯ ಹಿರಿಯ ಅಧಿಕಾರಿಗಳ ಮೇಲ್ವಿಚಾರಣೆಯಲ್ಲಿ ಎಲ್ಲಾ ಆಯಾಮಗಳಲ್ಲಿ ತನಿಖೆ ನಡೆಯುತ್ತಿದ್ದು, ನಿಷ್ಪಕ್ಷಪಾತ ಹಾಗೂ ಸಮಗ್ರ ತನಿಖೆ ನಡೆಸಲಾಗುವುದು ಎಂದು ಹೇಳಿದ್ದಾರೆ.
ಇದನ್ನೂ ಓದಿ : ಬೀದರ್ | 11ನೇ ದಿನ ಪೂರೈಸಿದ ಎಸ್‌ಐಆರ್, ಇವಿಎಂ ವಿರುದ್ಧದ ಉಪವಾಸ ಸತ್ಯಾಗ್ರಹ : ಬೆಂಬಲ
ಅಪ್ರಾಪ್ತ ಬಾಲಕಿಯ ಪ್ರಕರಣವಾಗಿರುವುದರಿಂದ ಯಾವುದೇ ರೀತಿಯ ಊಹಾಪೋಹ, ವದಂತಿ ಅಥವಾ ಅಸತ್ಯ ಮಾಹಿತಿಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಡಬಾರದು ಎಂದು ಪೊಲೀಸರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ. ಸಾಮಾಜಿಕ ಜಾಲತಾಣಗಳನ್ನು ವದಂತಿ ಹರಡಿ ತನಿಖೆಯ ದಿಕ್ಕು ತಪ್ಪಿಸುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.




