ಹುಲಸೂರ ತಾಲೂಕು ಬರಪೀಡಿತ ಪ್ರದೇಶವೆಂದು ಘೋಷಿಸಬೇಕೆಂದು ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘದ ನೇತ್ರತ್ವದಲ್ಲಿ ನಡೆಸುತ್ತಿರುವ ಅಹೋರಾತ್ರಿ ಧರಣಿ ಸತ್ಯಾಗ್ರಹ ಶುಕ್ರವಾರ ಮೂರನೇ ದಿನಕ್ಕೆ ಕಾಲಿಟ್ಟಿದೆ.
ಹುಲಸೂರ ಪಟ್ಟಣದ ತಹಸೀಲ್ ಕಚೇರಿ ಸಮೀಪದಲ್ಲಿ ನಡೆಯುತ್ತಿರುವ ಅಹೋರಾತ್ರಿ ಸತ್ಯಾಗ್ರಹದಲ್ಲಿ ರೈತರು ಪ್ರತಿದಿನ ವಿಭಿನ್ನ ರೀತಿಯಲ್ಲಿ ಪ್ರತಿಭಟನೆ ನಡೆಸಿ ಸರ್ಕಾರದ ಗಮನ ಸೆಳೆಯುತ್ತಿದ್ದಾರೆ.
ಶುಕ್ರವಾರ ಬೆಳಿಗ್ಗೆ ರೈತರು ಧರಣಿ ಸ್ಥಳದ ಎದುರುಗಡೆ ಸ್ನಾನ ಮಾಡಿದರು, ಬಳಿಕ ಹುಲಸೂರ ಮಠದ ಶಿವಾನಂದ ಸ್ವಾಮೀಜಿ ನೇತೃತ್ವದಲ್ಲಿ ರೈತರು ಧರಣಿ ಸ್ಥಳದ ವೇದಿಕೆ ಮೇಲೆ ಸಾಮೂಹಿಕ ಲಿಂಗಪೂಜೆ ನೆರವೇರಿಸಿದರು.
ಈ ವೇಳೆ ಪೂಜ್ಯ ಶಿವಾನಂದ ಸ್ವಾಮೀಜಿ ಮಾತನಾಡಿ, “ಹುಲಸೂರುತಾಲೂಕಿನಲ್ಲಿ ಮಳೆ ಕೊರತೆಯಿಂದ ಕೃಷಿ ಚಟುವಟಿಕೆಗಳು ತೀವ್ರವಾಗಿ ಹದಗೆಟ್ಟಿದ್ದು, ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಬೆಳೆ ನಷ್ಟದಿಂದಾಗಿ ರೈತರು ಆರ್ಥಿಕ ಸಂಕಷ್ಟ ಎದುರಿಸುವಂತಾಗಿದೆ. ರೈತರ ಪರಿಸ್ಥಿತಿ ಅರಿತು ಸರ್ಕಾರ ಕೂಡಲೇ ಹುಲಸೂರ ತಾಲೂಕನ್ನು ಬರಪೀಡಿತ ಪ್ರದೇಶವೆಂದು ಘೋಷಿಸಬೇಕು ಎಂದು ಒತ್ತಾಯಿಸಿದರು.

ಹುಲಸೂರ ತಾಲೂಕು ಸೇರಿದಂತೆ ಜಿಲ್ಲೆಯ ಉಳಿದ ತಾಲೂಕುಗಳನ್ನು ಬರಪೀಡಿತ ಪ್ರದೇಶವೆಂದು ಅಧಿಕೃತವಾಗಿ ಘೋಷಣೆ ಮಾಡುವವರೆಗೆ ಅಹೋರಾತ್ರಿ ಧರಣಿ ಸತ್ಯಾಗ್ರಹವನ್ನು ಕೈಬಿಡುವುದಿಲ್ಲ ಎಂದು ಪ್ರತಿಭಟನಾಕಾರರು ಪಟ್ಟು ಹಿಡಿದು ಸತ್ಯಾಗ್ರಹ ಮುಂದುವರೆಸಿದ್ದಾರೆ.
ಇದನ್ನೂ ಓದಿ : ಬಸವಕಲ್ಯಾಣ | ವಿವಿಧೆಡೆ ಸಿಇಒ ಗಿತ್ತೆ ಮಾಧವ್ ಭೇಟಿ: ಕಾರ್ಮಿಕರೊಂದಿಗೆ ಸಂವಾದ, ಮಕ್ಕಳೊಂದಿಗೆ ಊಟ
ನವಕಲ್ಯಾಣ ಕರ್ನಾಟಕ ಮಹಾಸಭಾದ ಡಾ.ಶಂಕರ ಗೌಡ, ರೈತ ಸಂಘದ ಹುಲಸೂರ ತಾಲೂಕು ಅಧ್ಯಕ್ಷ ಬಸವರಾಜ ಚವರೆ, ಉಪಾಧ್ಯಕ್ಷ ಸುನೀಲ್ ಭುಜಂಗೆ, ಕಾರ್ಯದರ್ಶಿ ರಾಜಕುಮಾರ ನಿಡೋದೆ ಹಾಗೂ ರೈತ ಮುಖಂಡರಾದ ರಮೇಶ ಭೂಪಳೆ, ಸೋಮನಾಥ ನಂದಗೆ, ಮಲ್ಲಿಕಾರ್ಜುನ ಧಬಾಲೆ, ಶಿವಕುಮಾರ್ ಕನ್ನಾಡೆ, ನೂರ್ ಅಹ್ಮದ್ ಎಂ., ಚಂದ್ರಕಾಂತ ದೇಟ್ನೆ, ಅಪ್ಪಾರಾವ್ ಖಂಡಾಳೆ, ರಾಜಪ್ಪ ಮಂಗಾ, ರಾಜಕುಮಾರ ತೊಂಡಾರೆ, ಪ್ರಭಾತರಾವ್ ಭೂಸಾರೆ, ಬಸವರಾಜ ಆದ್ಯಾಪ್ಪ, ಮಡೋಳಪ್ಪಾ ಖಪಲೆ, ವೀರಾರೆಡ್ಡಿ, ನಾರಾಯಣರಾವ ರಾಂಪೂರೆ, ಸೇರಿದಂತೆ ಹಲವರು ಭಾಗವಹಿಸಿದ್ದರು.






