ಹೂಗಾರ ಸಮಾಜವು ಸಂಘಟನೆ, ಪ್ರೀತಿ ಮತ್ತು ಸೌಹಾರ್ದತೆಯ ಮೂಲಕ ಶೈಕ್ಷಣಿಕ, ಸಾಮಾಜಿಕ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಪ್ರಗತಿ ಸಾಧಿಸುತ್ತಿರುವುದು ಶ್ಲಾಘನೀಯ. ಸಮಾಜದ ಸರ್ವಾಂಗೀಣ ಅಭಿವೃದ್ಧಿಗೆ ಅಗತ್ಯವಿರುವ ನೆರವು ಮತ್ತು ಸಹಕಾರ ನೀಡಲು ಬದ್ಧನಾಗಿದ್ದೇನೆ ಎಂದು ಶಾಸಕ ಡಾ. ಸಿದ್ದಲಿಂಗಪ್ಪ ಪಾಟೀಲ ಹೇಳಿದರು.
ಹುಮನಾಬಾದ್ ತಾಲೂಕಿನ ಹಳ್ಳಿಖೇಡ(ಬಿ) ಪಟ್ಟಣದಲ್ಲಿ ಅಖಿಲ ಕರ್ನಾಟಕ ಹೂಗಾರ ಸೇವಾ ಮಹಾಸಭಾ ವತಿಯಿಂದ ಆಯೋಜಿಸಿದ್ದ ಕಾಯಕಯೋಗಿ ಶರಣ ಹೂಗಾರ ಮಾದಯ್ಯನವರ ಜಯಂತ್ಯೋತ್ಸವ ಹಾಗೂ ಹೂಗಾರ ತಾಲೂಕು ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.
ಸಮಾಜವು ರಾಜಕೀಯವಾಗಿ ಮುನ್ನೆಲೆಗೆ ಬರಲು ಮುಖಂಡರು ಧೈರ್ಯದಿಂದ ಮುನ್ನಡೆಯಬೇಕು. ಯಾವುದೇ ಕ್ಷೇತ್ರದಲ್ಲಿ ಪ್ರಗತಿ ಸಾಧಿಸಲು ಸಾಹಸ ಮನೋಭಾವ ಮತ್ತು ದೃಢ ಸಂಕಲ್ಪ ಅಗತ್ಯ. ಸಮಾಜದ ಪ್ರತಿಯೊಬ್ಬರೂ ಒಗ್ಗಟ್ಟಿನಿಂದ ಶ್ರಮಿಸಿದಾಗ ಮಾತ್ರ ಅಭಿವೃದ್ಧಿ ಸಾಧ್ಯ. ಹಳ್ಳಿಖೇಡ(ಬಿ) ಪಟ್ಟಣದಲ್ಲಿ ಹೂಗಾರ ಸಮಾಜಕ್ಕೆ ಸುಸಜ್ಜಿತ ಸಮುದಾಯ ಭವನ ನಿರ್ಮಿಸುವುದು ಸೇರಿದಂತೆ ಸಮುದಾಯದ ಪ್ರಮುಖ ಬೇಡಿಕೆಗಳಿಗೆ ಶೀಘ್ರ ಸ್ಪಂದಿಸುವುದಾಗಿ ಭರವಸೆ ನೀಡಿದರು.

ಅಖಿಲ ಕರ್ನಾಟಕ ಹೂಗಾರ ಸೇವಾ ಮಹಾಸಭಾದ ರಾಜ್ಯಾಧ್ಯಕ್ಷ ಶಂಕರ ಹೂಗಾರ ಮಾತನಾಡಿ, “ಹೂಗಾರ ಸಮಾಜದ ಸುದೀರ್ಘ ಹೋರಾಟದ ಫಲವಾಗಿ ಹಿಂದಿನ ಸರ್ಕಾರ ಹೂಗಾರ ಅಭಿವೃದ್ಧಿ ನಿಗಮ ಘೋಷಿಸಿದೆ. ನಿಗಮದ ಯೋಜನೆಗಳು ಸಮಾಜದ ಅರ್ಹ ಫಲಾನುಭವಿಗಳಿಗೆ ತಲುಪಲು ಸರ್ಕಾರ ಅಗತ್ಯ ಅನುದಾನ ಬಿಡುಗಡೆ ಮಾಡಬೇಕು. ಶಾಸಕರು ಹಾಗೂ ಜನಪ್ರತಿನಿಧಿಗಳು ಈ ವಿಷಯವನ್ನು ವಿಧಾನಮಂಡಲದಲ್ಲಿ ಪ್ರಸ್ತಾಪಿಸಿ ಸಮಾಜಕ್ಕೆ ನ್ಯಾಯ ಒದಗಿಸಬೇಕು” ಎಂದು ಒತ್ತಾಯಿಸಿದರು.
ಮಹಾಸಭಾದ ರಾಜ್ಯ ಸಹ ಕಾರ್ಯದರ್ಶಿ ದುರ್ಯೋಧನ ಹೂಗಾರ ಮಾತನಾಡಿ, “ಹೂಗಾರ ಸಮುದಾಯದವರು ಹೂವಿನ ಕಾಯಕದ ಜತೆಗೆ ರಾಜ್ಯದ ಹನುಮಾನ್ ದೇವಾಲಯಗಳು ಸೇರಿದಂತೆ ಹಲವು ಪ್ರಸಿದ್ಧ ಧಾರ್ಮಿಕ ಕೇಂದ್ರಗಳಲ್ಲಿ ಪೂಜಾ ಕೈಂಕರ್ಯಗಳನ್ನು ನಿಷ್ಠೆಯಿಂದ ನಿರ್ವಹಿಸುತ್ತಿದ್ದಾರೆ. ಕಾಯಕ ಸಂಸ್ಕೃತಿಯನ್ನು ಉಳಿಸಿಕೊಂಡಿರುವ ಸಮುದಾಯವು ಶಿಕ್ಷಣ, ಉದ್ಯೋಗ, ಉದ್ಯಮ ಹಾಗೂ ರಾಜಕೀಯ ಕ್ಷೇತ್ರಗಳಲ್ಲಿ ಸಾಧನೆ ಮಾಡುತ್ತಿದೆ. ರಾಜಕೀಯ ಕ್ಷೇತ್ರದಲ್ಲಿಯೂ ಹೆಚ್ಚಿನ ಸಾಧನೆ ಮಾಡುವ ನಿಟ್ಟಿನಲ್ಲಿ ಸಮಾಜದವರು ಮುಂದಾಗಬೇಕು” ಎಂದರು.
ಚಿಕ್ಕಮಠ ಸಂಸ್ಥಾನದ ಪಂಡಿತಾರಾಧ್ಯ ಶಿವಾಚಾರ್ಯರು ದಿವ್ಯ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಜಿಲ್ಲಾ ಗೌರವಾಧ್ಯಕ್ಷ ರೇವಣ್ಣಪ್ಪ ಹೂಗಾರ ಹಾಗೂ ರಾಜ್ಯ ಪ್ರಧಾನ ಕಾರ್ಯದರ್ಶಿ ಉಮೇಶ ಹೂಗಾರ ಸಮಾಜ ಸಂಘಟನೆಯ ಮಹತ್ವದ ಕುರಿತು ಮಾತನಾಡಿದರು.

ಸಮ್ಮೇಳನದ ಅಂಗವಾಗಿ ಬೆಳಿಗ್ಗೆ ಹಳ್ಳಿಖೇಡ(ಬಿ) ಪಟ್ಟಣದ ಬಸವೇಶ್ವರ ವೃತ್ತದಿಂದ ಆರಂಭವಾದ ಶರಣ ಹೂಗಾರ ಮಾದಯ್ಯನವರ ಭಾವಚಿತ್ರವನ್ನು ಭವ್ಯ ಮೆರವಣಿಗೆ ನಡೆಯಿತು. ಅಪಾರ ಸಂಖ್ಯೆಯಲ್ಲಿ ಮಹಿಳೆಯರು, ಯುವಕರು ಹಾಗೂ ಹಿರಿಯರು ಪಾಲ್ಗೊಂಡಿದ್ದರು. ವಿವಿಧ ಕಲಾತಂಡಗಳ ಪ್ರದರ್ಶನ ಮೆರವಣಿಗೆಗೆ ಮೆರುಗು ನೀಡಿತು.
ಇದನ್ನೂ ಓದಿ : ಬೀದರ್ | ರೈತರ ಸಾಲಮನ್ನಾ, ಕ್ಷೇಮಾಭಿವೃದ್ಧಿ ಮಂಡಳಿ ರಚನೆಗೆ ಕಿಸಾನ್ ಸಭಾ ಒತ್ತಾಯ
ಕಾರ್ಯಕ್ರಮದಲ್ಲಿ ರಾಜ್ಯ ಉಪಾಧ್ಯಕ್ಷ ಪಡಿಯಪ್ಪ ಹೂಗಾರ ಧಾರವಾಡ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಿವಕುಮಾರ ಹೂಗಾರ, ರಾಜ್ಯ ಸಂಚಾಲಕ ವಿಶ್ವನಾಥ ಹೂಗಾರ, ಸಂಘಟನಾ ಕಾರ್ಯದರ್ಶಿ ಅಶೋಕ ಹೂಗಾರ, ಜಿಲ್ಲಾ ಉಪಾಧ್ಯಕ್ಷ ವಿಜಯಕುಮಾರ ಹೂಗಾರ, ತಾಲೂಕು ಅಧ್ಯಕ್ಷ ಪ್ರವೀಣ ಹೂಗಾರ, ಪ್ರಧಾನ ಕಾರ್ಯದರ್ಶಿ ಮಹೇಶ್ ಹೂಗಾರ, ಮುಖಂಡರಾದ ಗುರುನಾಥ ಹೂಗಾರ, ಶ್ರೀದೇವಿ ಹೂಗಾರ, ವಿಜಯಲಕ್ಷ್ಮಿ ಹೂಗಾರ, ಕೇಶವರಾವ್ ತಳಘಟಕರ್, ಮಾಂತಯ್ಯ ತೀರ್ಥ, ಮಲ್ಲಿಕಾರ್ಜುನ ಪ್ರಭಾ, ವಿಷ್ಣು ಹೂಗಾರ, ಜಗನಾಥ ಹೂಗಾರ, ಶಿವಪುತ್ರ ಸೇರಿದಂತೆ ರಾಜ್ಯ ಹಾಗೂ ಜಿಲ್ಲಾ ಮಟ್ಟದ ಪದಾಧಿಕಾರಿಗಳು ಉಪಸ್ಥಿತರಿದ್ದರು.




