ಬರಗಾಲದಿಂದ ಸಂಕಷ್ಟಕ್ಕೆ ಸಿಲುಕಿರುವ ರೈತರ ಸಮಸ್ಯೆಗಳಿಗೆ ತುರ್ತಾಗಿ ಪರಿಹಾರ ಕಲ್ಪಿಸಬೇಕು. ರೈತರ ಸಾಲಮನ್ನಾ, ನೀರಿನ ಸಮಸ್ಯೆ ಪರಿಹಾರ ಹಾಗೂ ರೈತರ ಕ್ಷೇಮಾಭಿವೃದ್ಧಿ ಮಂಡಳಿ ರಚನೆಗೆ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಅಖಿಲ ಭಾರತ ಕಿಸಾನ್ ಸಭಾ ಒತ್ತಾಯಿಸಿದೆ.
ನಗರದ ಸ್ಟಾರ್ ಲಾಡ್ಜ್ ಸಭಾಂಗಣದಲ್ಲಿ ಶುಕ್ರವಾರ ನಡೆದ ಅಖಿಲ ಭಾರತ ಕಿಸಾನ್ ಸಭಾದ ಜಿಲ್ಲಾ ಮಂಡಳಿ ಸಭೆಯಲ್ಲಿ ಸಂಘಟನೆಯ ಕರ್ನಾಟಕ ರಾಜ್ಯ ಕಾರ್ಯಕಾರಿ ಅಧ್ಯಕ್ಷ ಮೌಲಾಮುಲ್ಲಾ ಮಾತನಾಡಿ, “ರೈತರ ಸಮಸ್ಯೆಗಳ ಪರಿಹಾರಕ್ಕೆ ಸಂಘಟಿತ ಹೋರಾಟ ಅಗತ್ಯವಿದೆ. ರೈತರ ಹೋರಾಟದಲ್ಲಿ ಯುವಜನರು ಸಕ್ರಿಯವಾಗಿ ಪಾಲ್ಗೊಳ್ಳಬೇಕು” ಎಂದು ಕರೆ ನೀಡಿದರು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಅಧ್ಯಕ್ಷ ನಜೀರ ಅಹ್ಮದ್ ಅವರ ಸಮ್ಮುಖದಲ್ಲಿ ನಡೆದ ಸಭೆಯಲ್ಲಿ ಪ್ರಮುಖರಾದ ಶಿವರಾಜ ಪಾಟೀಲ್ ಅತಿವಾಳ, ಶಿವರಾಯ ಮುದಾಳೆ ಅವರು ರೈತರು ಎದುರಿಸುತ್ತಿರುವ ವಿವಿಧ ಸಮಸ್ಯೆಗಳನ್ನು ತಿಳಿಸಿದರು. ಬಿ.ಎಸ್.ಎಸ್.ಕೆ. ಸಕ್ಕರೆ ಕಾರ್ಖಾನೆಯಲ್ಲಿ ನಡೆದಿರುವ ಅವ್ಯವಹಾರಗಳ ಬಗ್ಗೆಯೂ ಪ್ರಸ್ತಾಪಿಸಿ, ಈ ಕುರಿತು ಸೂಕ್ತ ತನಿಖೆ ನಡೆಸಿ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.
ಜಿಲ್ಲಾ ಗೌರವಾಧ್ಯಕ್ಷ ವೀರಶೆಟ್ಟಿ ವಟಂಬೆ ಮಾತನಾಡಿ, “ರೈತರ ಸಾಲಮನ್ನಾ ಮಾಡಬೇಕು. ವಿಬಿ-ಜಿ ರಾಮ್ ಜಿ ಕಾರ್ಯಕ್ರಮವನ್ನು ರೈತರ ಹಿತದೃಷ್ಟಿಯಿಂದ ಪರಿಣಾಮಕಾರಿಯಾಗಿ ಜಾರಿಗೊಳಿಸಬೇಕು ಎಂದರು.
ಮಾಣಿಕ ಖಾನಾಪೂರ ಅವರು ಕಾರ್ಯಕ್ರಮದ ಅನುಷ್ಠಾನದಲ್ಲಿನ ಅಡೆತಡೆಗಳ ಕುರಿತು ವಿವರಿಸಿದರು. ಮುಖಂಡ ಬಾಬುರಾವ ಹೊನ್ನಾ ಅವರು ರೈತರ ವಿವಿಧ ಸಮಸ್ಯೆಗಳ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು.
ಕ್ಷೇಮಾಭಿವೃದ್ಧಿ ಮಂಡಳಿ ರಚನೆಗೆ ನಿರ್ಣಯ
ರೈತರ ಸಮಸ್ಯೆಗಳಿಗೆ ಸ್ಪಂದಿಸುವುದು ಹಾಗೂ ಅವರ ಹಿತಾಸಕ್ತಿಗಳನ್ನು ರಕ್ಷಿಸುವ ಉದ್ದೇಶದಿಂದ ರೈತರ ಕ್ಷೇಮಾಭಿವೃದ್ಧಿ ಮಂಡಳಿ ರಚಿಸಬೇಕೆಂಬ ಪ್ರಸ್ತಾವನೆಯನ್ನು ಸಭೆಯಲ್ಲಿ ಅಂಗೀಕರಿಸಲಾಯಿತು.
ಸಭೆಯ ಆರಂಭದಲ್ಲಿ ರೈತರ ಪರ ಕಾಳಜಿ ಹೊಂದಿದ್ದ ದಿವಂಗತ ನಾನಾ ಪಾಟೇಕರ್ ಅವರನ್ನು ಸ್ಮರಿಸಿ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಬಳಿಕ ಎರಡು ನಿಮಿಷ ಮೌನ ಆಚರಿಸಲಾಯಿತು.
ಇದನ್ನೂ ಓದಿ : ಬೀದರ್ | ಕಾನ್ಶಿರಾಂ ಹೋರಾಟ ಬಹುಜನರ ರಾಜಕೀಯ ಜಾಗೃತಿಗೆ ದಾರಿದೀಪ
ಸಭೆಯಲ್ಲಿ ಎಂ.ಡಿ. ಖಮರ್ ಪಟೇಲ್, ಪಾಂಡುರಂಗ ಪ್ಯಾಗೆ, ಜೈಶೀಲಕುಮಾರ, ಪ್ರಭು ಹೊಚಕನಳ್ಳಿ, ಬಸವರಾಜ ಪಾಟೀಲ್, ಎಂ.ಡಿ.ಮೋಹಿನ್‌ಮಿಯ್ಯಾ, ರಾಜಕುಮಾರ ಬಗದಲ್‌ಕರ್, ಎಂ.ಡಿ. ಶಫಾಯತ್‌ಅಲಿ, ಚಾಂದೋಬಾ ಭೋಸ್ಲೆ, ರಾಮಣ್ಣ, ನನ್ನೆಸಾಬ್, ಶಿವಕುಮಾರ, ಪ್ರಜ್ವಲ್, ಪ್ರವೀಣ, ಯೋಗೇಶ, ಆದಿತ್ಯ ಸೇರಿದಂತೆ ಹಲವರು ಭಾಗವಹಿಸಿದ್ದರು.




