ಹಾಸನ ಜಿಲ್ಲೆಯ ಬೇಲೂರು ಭಾಗದಿಂದ ಮೂಡಿಗೆರೆ ಮಾರ್ಗವಾಗಿ ಭದ್ರಾ ಅಭಯಾರಣ್ಯದತ್ತ ಕಾಡಾನೆಗಳನ್ನು ಸ್ಥಳಾಂತರಿಸುತ್ತಿರುವ ಕ್ರಮವನ್ನು ವಿರೋಧಿಸಿ, ಮೂಡಿಗೆರೆ ಶಾಸಕಿ ನಯನಾ ಮೋಟಮ್ಮ ರಾಜೀನಾಮೆ ಪತ್ರ ಪ್ರದರ್ಶಿಸಿ ಎಚ್ಚರಿಕೆ ನೀಡಿದ್ದರು. ಈ ಬಗ್ಗೆ ಮೂಡಿಗೆರೆ ವಿಧಾನಸಭಾ ಕ್ಷೇತ್ರದ ಬಿಜೆಪಿ ಮುಖಂಡ ಹಾಗೂ ಪರಾಜಿತ ಅಭ್ಯರ್ಥಿ ದೀಪಕ್ ದೊಡ್ಡಯ್ಯ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಶಾಸಕರ ರಾಜೀನಾಮೆ ಹೇಳಿಕೆಯನ್ನು ‘ನಾಟಕ’ ಎಂದು ಕರೆದಿರುವ ಅವರು, ಬರೀ ಪತ್ರ ತೋರಿಸುವುದರಿಂದ ಅಥವಾ ಪಕ್ಷದ ಅಧ್ಯಕ್ಷರಿಗೆ ಪತ್ರ ಕೊಡುವುದರಿಂದ ಯಾವುದೇ ಪ್ರಯೋಜನವಿಲ್ಲ ನೇರವಾಗಿ ವಿಧಾನಸಭೆಯ ಸಭಾಧ್ಯಕ್ಷರಿಗೆ ರಾಜೀನಾಮೆ ಸಲ್ಲಿಸಿ ಅದನ್ನು ಅಂಗೀಕರಿಸುವಂತೆ ಮಾಡಲಿ ಎಂದು ದೀಪಕ್ ದೊಡ್ಡಯ್ಯ ಸವಾಲು ಹಾಕಿದ್ದಾರೆ.
ಇದನ್ನೂ ಓದಿದ್ದೀರಾ?ಹಾಸನ | ತರಕಾರಿ ಮಾರುಕಟ್ಟೆ: ಸ್ಥಳಾಂತರಿಸುವ ಪ್ರಕ್ರಿಯೆ ಸಂಪೂರ್ಣ; ಸಚಿವ ಕೆ.ಎಂ. ಶಿವಲಿಂಗೇಗೌಡ
ಕೇವಲ ಪತ್ರಿಕಾಗೋಷ್ಠಿ ಹಾಗೂ ಮಾತುಗಳಿಗೆ ಸೀಮಿತವಾಗದೆ, ನುಡಿದಂತೆ ನಡೆದುಕೊಂಡರೆ ಮಾತ್ರ ಜನಪರ ಕಾಳಜಿ ಇದೆ ಎಂಬುದು ಸಾಬೀತಾಗುತ್ತದೆ. ಈ ಹಿಂದೆ ಶಿವಲಿಂಗೇಗೌಡರು ಈ ಕಡೆ ಆನೆ ಕಳುಹಿಸುತ್ತಿದ್ದೇವೆ ಎಂದು ಹೇಳಿದ್ದ ವೇಳೆಯಲ್ಲೇ ಜನರ ತೋಟ ಮತ್ತು ಬೆಳೆ ರಕ್ಷಣೆಗೆ ಅಡ್ಡವಾಗಿ ನಿಂತು ಹೋರಾಡಬೇಕಿತ್ತು. ಆದರೆ ಈಗ ಜನರ ಎದುರು ನಾಟಕವಾಡುತ್ತಿದ್ದಾರೆ ಎಂದು ದೀಪಕ್ ದೊಡ್ಡಯ್ಯ ಟೀಕಿಸಿದ್ದಾರೆ.



