ತುಮಕೂರು ಜಿಲ್ಲೆ | ಕಾಂಗ್ರೆಸ್‌ – ಜೆಡಿಎಸ್‌ ಪ್ರಾಬಲ್ಯದ ನಡುವೆ ಗೆಲುವಿಗಾಗಿ ಬಿಜೆಪಿ ಕಸರತ್ತು

0
193
ತುಮಕೂರು
ರಾಜ್ಯದಲ್ಲಿಯೇ ಎರಡನೇ ಅತೀ ದೊಡ್ಡ ಜಿಲ್ಲೆಯಾಗಿರುವ ಕಲ್ಪತರು ನಾಡು ತುಮಕೂರು ಜಿಲ್ಲೆ ಕಾಂಗ್ರೆಸ್‌ ಭದ್ರಕೋಟೆಯಾಗಿತ್ತು. ಹಂತ ಹಂತವಾಗಿ ಜನತಾ ಪರಿವಾರ ಮತ್ತು ಜೆಡಿಎಸ್‌ ಪ್ರಾಬಲ್ಯ ಸಾಧಿಸಿದವು. 1983ರಲ್ಲಿ ಜಿಲ್ಲೆಯಲ್ಲಿಯೇ ಮೊದಲ ಬಾರಿಗೆ ಬಿಜೆಪಿ ಖಾತೆ ತೆರೆದಿತ್ತು. ಪ್ರಬಲವಾಗಿದ್ದ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಭದ್ರಕೋಟೆ ಭೇದಿಸಲು ಬಿಜೆಪಿ ಇನ್ನಿಲ್ಲದ ಕಾರ್ಯತಂತ್ರ ನಡೆಸುತ್ತಿದೆ.

ತುಮಕೂರು ಜಿಲ್ಲೆಯು 11 ವಿಧಾನಸಭಾ ಕ್ಷೇತ್ರಗಳನ್ನು ಹೊಂದಿದ್ದು, 2018ರ ಚುನಾವಣೆಯಲ್ಲಿ ಬಿಜೆಪಿ ಮತ್ತು ಜೆಡಿಎಸ್‌ ತಲಾ ನಾಲ್ಕು ಸ್ಥಾನ ಹಾಗೂ ಕಾಂಗ್ರೆಸ್‌ ಮೂರು ಸ್ಥಾನಗಳಲ್ಲಿ ಗೆಲವು ಸಾಧಿಸಿದೆ. ಈ ಬಾರಿಯ ಚುನಾವಣೆಯಲ್ಲಿಯೂ ಮೂರು ಪಕ್ಷಗಳು ಪ್ರಬಲ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದು, ಚುನಾವಣೆ ಕಾವು ಜೋರಾಗಿದೆ.

ತುಮಕೂರು ಜಿಲ್ಲೆಯು ಭೌಗೋಳಿಕವಾಗಿ ಬೆಂಗಳೂರು ಗ್ರಾಮಾಂತರ, ಕೋಲಾರ, ಮಂಡ್ಯ, ಹಾಸನ, ಚಿಕ್ಕಮಗಳೂರು, ಚಿತ್ರದುರ್ಗ ಜಿಲ್ಲೆಗಳಿಂದ ಸುತ್ತುವರಿದಿದ್ದು, ಮತ್ತೊಂದೆಡೆ ಆಂಧ್ರಪ್ರದೇಶ ರಾಜ್ಯಕ್ಕೆ ತನ್ನ ಗಡಿ ಹಂಚಿಕಂಡಿದೆ. ಈ ರೀತಿಯ ಭೌಗೋಳಿಕ ರಚನೆಯ ಕಾರಣಕ್ಕೆ ತುಮಕೂರಿನಲ್ಲಿ ವಿಭಿನ್ನ ರಾಜಕಾರಣವನ್ನು ಕಾಣಬಹುದಾಗಿದೆ. ತುಮಕೂರು ಜಲ್ಲೆಯಲ್ಲಿ ಎರಡು ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರಗಳಿವೆ.  

2018ರ ಚುನಾವಣೆಯಲ್ಲಿ ಚಿಕ್ಕನಾಯಕನಹಳ್ಳಿ ಕ್ಷೇತ್ರದಿಂದ ಗೆಲುವು ಸಾಧಿಸಿದ್ದ ಬಿಜೆಪಿ ಅಭ್ಯರ್ಥಿ ಜೆ ಸಿ ಮಾಧುಸ್ವಾಮಿ ಕಾನೂನು ಮತ್ತು ಸಂಸದೀಯ ಸಚಿವರಾಗಿದ್ದರು. ಅದೇ ರೀತಿ ತಿಪಟೂರು ಕ್ಷೇತ್ರದಿಂದ ಗೆದ್ದಿದ್ದ ಬಿ ಸಿ ನಾಗೇಶ್‌ ಕೂಡ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ ಸಚಿವರಾಗಿದ್ದರು. ಹಿಂದೆ ಡಾ. ಜಿ ಪರಮೇಶ್ವರ್‌ ಮಧುಗಿರಿ ಕ್ಷೇತ್ರದಿಂದ ಗೆದ್ದು, ಉಪಮುಖ್ಯಮಂತ್ರಿ, ಗೃಹಸಚಿವರಾಗಿದ್ದರು.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಚಿಕ್ಕನಾಯಕನಹಳ್ಳಿ ಕ್ಷೇತ್ರ

ಚಿಕ್ಕನಾಯಕನಹಳ್ಳಿ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಹಾಲಿ ಶಾಸಕ, ಸಚಿವ ಜೆ ಸಿ ಮಾಧುಸ್ವಾಮಿ, ಜೆಡಿಎಸ್‌ನಿಂದ ಸಿ ಬಿ ಸುರೇಶ್‌ ಬಾಬು ಹಾಗೂ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಕೆ ಎಸ್‌ ಕಿರಣ್‌ ಕುಮಾರ್‌ ಕಣದಲ್ಲಿದ್ದಾರೆ.

ಚಿಕ್ಕನಾಯಕನಹಳ್ಳಿ ಕ್ಷೇತ್ರದಲ್ಲಿ 2004ರ ಚುನಾವಣೆ ಹೊರತುಪಡಿಸಿ 1997ರಿಂದಲೂ ಜೆ ಸಿ ಮಾಧುಸ್ವಾಮಿ ಮತ್ತು ಸಿ ಬಿ ಸುರೇಶ್‌ಬಾಬು ಸಾಂಪ್ರದಾಯಿಕ ಎದುರಾಳಿಗಳಾಗಿದ್ದಾರೆ. ಈ ಕ್ಷೇತ್ರದಲ್ಲಿ ಪಕ್ಷಗಳ ನಡುವಿನ ಹೋರಾಟಕ್ಕಿಂತ ಜೆ ಸಿ ಮಾಧುಸ್ವಾಮಿ ಮತ್ತು ಸಿ ಬಿ ಸುರೇಶ್ ಬಾಬು ನಡುವಿನ ಹೋರಾಟ ಎಂಬ ಸನ್ನಿವೇಶ ನಿರ್ಮಾಣವಾಗಿದೆ.

ಚಿಕ್ಕನಾಯಕನಹಳ್ಳಿ ಕುರುಬರು ಮತ್ತು ಲಿಂಗಾಯತರ ನಡುವೆ ಪರಸ್ಪರ ಪೈಪೋಟಿ ಇರುವ ಕ್ಷೇತ್ರ. ಈ ಕ್ಷೇತ್ರದಿಂದ ಬಹುತೇಕ ಕುರುಬರು, ಲಿಂಗಾಯತ ಸಮುದಾಯದ ಶಾಸಕರೇ ಆಯ್ಕೆಯಾಗುತ್ತಾ ಬಂದಿದ್ದಾರೆ.

ಲಿಂಗಾಯತ ಸಮುದಾಯದ ಮಾಧುಸ್ವಾಮಿ ವಿರುದ್ಧ ಕ್ಷೇತ್ರದಲ್ಲಿ ಆಡಳಿತ ವಿರೋಧಿ ಅಲೆ ಜೋರಾಗಿದೆ. ಜೊತೆಗೆ ಈ ಕ್ಷೇತ್ರದಲ್ಲಿ ಲಿಂಗಾಯತರಷ್ಟೇ ಪ್ರಬಲರಾಗಿರುವ ಕುರುಬರು ಮತ್ತು ಮುಸ್ಲಿಮರು ಮಾಧುಸ್ವಾಮಿಗೆ ವಿರುದ್ಧವಾಗಿದ್ದಾರೆ. ಇವೆಲ್ಲ ಈ ಬಾರಿಯ ಚುನಾವಣಾ ಕಣದಲ್ಲಿ ಪ್ರತಿಫಲನಗೊಳ್ಳಲಿವೆ ಎನ್ನಲಾಗುತ್ತಿದೆ.

ಇತ್ತ ಕಾಂಗ್ರೆಸ್​ ಚಿಕ್ಕನಾಯಕನಹಳ್ಳಿ ಕ್ಷೇತ್ರದ ಅಭ್ಯರ್ಥಿಯಾಗಿ ಮಾಜಿ ಶಾಸಕ ಕಿರಣ್ ಕುಮಾರ್ ಅವರನ್ನು ಕಣಕ್ಕಿಳಿಸಿದೆ. ಮಾಧುಸ್ವಾಮಿ ಪಕ್ಷ ಸೇರುವುದಕ್ಕೂ ಮುನ್ನ ಕಿರಣ್ ಕುಮಾರ್ ಬಿಜೆಪಿಯ ಅಭ್ಯರ್ಥಿಯಾಗಿದ್ದರು. ಆದರೆ ಭಿನ್ನಮತ ಸ್ಪೋಟದಿಂದ ಅವರು ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರಿದ್ದಾರೆ. ಇದು ಬಿಜೆಪಿಗೆ ಕೊಂಚ ಹಿನ್ನಡೆಯುಂಟು ಮಾಡುವ ಸಾಧ್ಯತೆ ಇದೆ.

ತಿಪಟೂರು ಕ್ಷೇತ್ರ

ತಿಪಟೂರು ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಹಾಲಿ ಶಾಸಕ ಮತ್ತು ಸಚಿವ ಬಿ ಸಿ ನಾಗೇಶ್‌, ಕಾಂಗ್ರೆಸ್‌ನಿಂದ ಕೆ ಷಡಕ್ಷರಿ ಹಾಗೂ ಜೆಡಿಎಸ್‌ ಅಭ್ಯರ್ಥಿಯಾಗಿ ಶಾಂತಕುಮಾರ್ ಕಣದಲ್ಲಿದ್ದಾರೆ.

ಜಾತಿಗಿಂತ ವ್ಯಕ್ತಿ ಪ್ರತಿಷ್ಠೆಗೆ ಮತ ಹಾಕುವ ಮತದಾರರಿರುವ ಕ್ಷೇತ್ರಗಳಲ್ಲಿ ತಿಪಟೂರು ಸಹ ಒಂದು. ಈ ಕ್ಷೇತ್ರದಲ್ಲಿ ಕಳೆದ ಮೂರು ಚುನಾವಣೆಗಳಿಂದ ಕಾಂಗ್ರೆಸ್‌ನ ಕೆ ಷಡಕ್ಷರಿ ಮತ್ತು ಬಿಜೆಪಿಯ ಬಿ ಸಿ ನಾಗೇಶ್‌ ಮುಖಾಮುಖಿಯಾಗುತ್ತಿದ್ದಾರೆ. ಮೂರು ಚುನಾವಣೆಯಲ್ಲಿ ಎರಡು ಬಾರಿ ಬಿ ಸಿ ನಾಗೇಶ್‌ ಗೆಲುವು ಸಾಧಿಸಿದ್ದು 2018ರ ಚುನಾವಣೆಯಲ್ಲಿ 25,563 ಮತಗಳ ಅಂತದಲ್ಲಿ ಬಿ ಸಿ ನಾಗೇಶ್‌ ಗೆಲವು ಸಾಧಿಸಿ, ಶಿಕ್ಷಣ ಸಚಿವರೂ ಆಗಿದ್ದರು. ಈ ಬಾರಿಯೂ ಕಾಂಗ್ರೆಸ್‌ ಮತ್ತು ಬಿಜೆಪಿ ನಡುವೆಯೇ ತೀವ್ರ ಹಣಾಹಣಿ ನಡೆಯಲಿದೆ ಎಂದು ಹೇಳಲಾಗಿದೆ.

ಲಿಂಗಾಯತ ಮತಗಳು ಹೆಚ್ಚಿರುವ ತಿಪಟೂರು ಕ್ಷೇತ್ರದಲ್ಲಿ ಲಿಂಗಾಯತರು ಹೆಚ್ಚು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಜೊತೆಗೆ ಇಲ್ಲಿ ಬ್ರಾಹ್ಮಣ ಸಮುದಾಯದವರೂ ಶಾಸಕರಾಗಿ ಆಯ್ಕೆಯಾಗಿದ್ದಾರೆ.

ತುರುವೇಕೆರೆ ಕ್ಷೇತ್ರ

ತುರುವೇಕೆರೆ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಹಾಲಿ ಶಾಸಕ ಮಸಾಲ ಜಯರಾಮ್‌ ಅವರನ್ನೇ ಮತ್ತೆ ಅದೃಷ್ಠ ಪರೀಕ್ಷೆಗೆ ಕಣಕ್ಕಿಳಿಸಿದೆ. ಬಿಜೆಪಿಯ ಅಭ್ಯರ್ಥಿ ವಿರುದ್ಧ ಕೇವಲ 2,049 ಮತಗಳ ಅಂತರದಲ್ಲಿ ಸೋಲು ಅನುಭವಿಸಿದ್ದ ಎಂ ಟಿ ಕೃಷ್ಣಪ್ಪ ಅವರಿಗೆ ಜೆಡಿಎಸ್‌ ಮತ್ತೆ ಟಿಕೆಟ್‌ ನೀಡಿದೆ. ಇನ್ನೂ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಬಿ ಎಂ ಕಾಂತರಾಜು ಸ್ಪರ್ಧಿಸಿದ್ದಾರೆ.

ತುರುವೇಕೆರೆ ಕ್ಷೇತ್ರದಲ್ಲಿ ಒಕ್ಕಲಿಗ ಮತದಾರರು ಹೆಚ್ಚಾಗಿದ್ದು, ಈವರೆಗೆ ನಡೆದಿರುವ 17 ಚುನಾವಣೆಯಲ್ಲಿ 14 ಮಂದಿ ಒಕ್ಕಲಿಗರೇ ಆಯ್ಕೆ ಆಗಿರುವುದು ಗಮನಾರ್ಹ. ಕ್ಷೇತ್ರದಲ್ಲಿ ಈ ಬಾರಿಯೂ ಬಿಜೆಪಿಯ ಮಸಾಲ ಜಯರಾಮ್‌ ಮತ್ತು ಜೆಡಿಎಸ್‌ನ ಎಂ ಟಿ ಕೃಷ್ಣಪ್ಪ ನಡುವೆಯೇ ನೇರ ಹಣಾಹಣಿ ನಡೆಯಲಿದೆ ಎನ್ನಲಾಗಿದೆ.

ಕುಣಿಗಲ್‌ ಕ್ಷೇತ್ರ

ಕಾಂಗ್ರೆಸ್‌ ಭದ್ರಕೋಟೆಯಾಗಿರುವ ಕುಣಿಗಲ್‌ ವಿಧಾನಸಭಾ ಕ್ಷೇತ್ರದ ಹಾಲಿ ಶಾಸಕ ಡಾ. ಎಚ್‌ ಡಿ ರಂಗನಾಥ್‌ ಅವರಿಗೆ ಕಾಂಗ್ರೆಸ್‌ ಟಿಕೆಟ್‌ ನೀಡಿದೆ. ಬಿಜೆಪಿ ಅಭ್ಯರ್ಥಿಯಾಗಿ ಡಿ ಕೃಷ್ಣಕುಮಾರ್‌ ಕಣದಲ್ಲಿದ್ದರೆ, ಜೆಡಿಎಸ್‌ನಿಂದ ಡಾ. ಬಿ ಎನ್‌ ರವಿ ಸ್ಪರ್ಧಿಸಿದ್ದಾರೆ. ಇವರ ಜೊತೆಗೆ ಪ್ರಕ್ಷೇತರರಾಗಿ ಮಾಜಿ ಶಾಸಕ ಬಿ ಬಿ ರಾಮಸ್ವಾಮಿಗೌಡ ಸ್ಪರ್ಧೆಗಿಳಿಸಿದ್ದಾರೆ.

ಕುಣಿಗಲ್ ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧೆಗಿಳಿದಿರುವ ಪ್ರಮುಖ ಮೂರು ಪಕ್ಷಗಳ ಅಭ್ಯರ್ಥಿಗಳು ಒಕ್ಕಲಿಗ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಈ ಕ್ಷೇತ್ರದಲ್ಲಿ ಇದುವರೆಗೆ ಒಕ್ಕಲಿಗರನ್ನು ಬಿಟ್ಟರೆ ಬೇರೆ ಯಾವುದೇ ಸಮುದಾಯದವರು ಶಾಸಕರಾಗದಿರುವುದು ಗಮನಾರ್ಹ. ಹಾಗಾಗಿ ಇಲ್ಲಿ ಒಕ್ಕಲಿಗರ ಮತಗಳೇ ನಿರ್ಣಾಯಕ.

ಕುಣಿಗಲ್‌ ಕ್ಷೇತ್ರದಲ್ಲಿ ಈವರೆಗೂ ನಡೆದಿರುವ 15 ಚುನಾವಣೆಗಳಲ್ಲಿ ಹತ್ತು ಬಾರಿ ಕಾಂಗ್ರೆಸ್‌ ಆಯ್ಕೆಯಾಗಿದ್ದು, ಅಧಿಕಾರ ಪಡೆಯಲು ಬಿಜೆಪಿ ಇನ್ನಿಲ್ಲದ ಕಸರತ್ತು ನಡೆಸುತ್ತಲೇ ಇದೆ. ಬಿಜೆಪಿ ಅಭ್ಯರ್ಥಿ ಕೃಷ್ಣಕುಮಾರ್‌, ಜೆಡಿಎಸ್‌ ಅಭ್ಯರ್ಥಿ ಡಾ. ಬಿ ಎನ್ ರವಿ ಅವರಿಗೆ ಸಂಬಂಧದಲ್ಲಿ ಚಿಕ್ಕಪ್ಪ. ವರಸೆಯಲ್ಲಿ ಅಪ್ಪ- ಮಗ ಆಗಬೇಕು. ಇಬ್ಬರೂ ಬೇರೆ ಬೇರೆ ಪಕ್ಷದಿಂದ ಅದೃಷ್ಟ ಪರೀಕ್ಷೆಗೆ ಇಳಿದಿರುವುದು ಗಮನ ಸೆಳೆದಿದೆ.

ತುಮಕೂರು ನಗರ

ತುಮಕೂರು ನಗರ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಇಕ್ಬಾಲ್‌ ಅಹ್ಮದ್‌, ಬಿಜೆಪಿ ಅಭ್ಯರ್ಥಿಯಾಗಿ ಜ್ಯೋತಿ ಗಣೇಶ್‌, ಜೆಡಿಎಸ್‌ನಿಂದ ಎನ್‌ ಗೋವಿಂದರಾಜು ಹಾಗೂ ಬಿಜೆಪಿ ಬಂಡಾಯ ಅಭ್ಯರ್ಥಿ ಸೊಗಡು ಶಿವಣ್ಣ ಪಕ್ಷೇತರರಾಗಿ ಕಣಕ್ಕಿಳಿಸಿದ್ದು, ಈ ಬಾರಿ ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ನಡುವೆ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ.

ಬಿಜೆಪಿ ಅಭ್ಯರ್ಥಿ ಜ್ಯೋತಿಗಣೇಶ್ ಹಾಲಿ ಶಾಸಕರಾಗಿದ್ದು, ಅಬ್ಬರದ ಪ್ರಚಾರದಲ್ಲಿ ತೊಡಗಿದ್ದಾರೆ. ಇನ್ನೂ ಜೆಡಿಎಸ್ ಅಭ್ಯರ್ಥಿಯಾಗಿರುವ ಗೋವಿಂದರಾಜು ಮೂರನೆ ಬಾರಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಮಹಿಳೆ ಜೊತೆ ನಡೆಸಿದ ಅಸಭ್ಯ ಮಾತುಕತೆ ಆಡಿಯೊ ವೈರಲ್ ಆಗಿತ್ತು. ಸ್ವಪಕ್ಷದವರಿಂದಲೇ ಅಸಮಾಧಾನಕ್ಕೆ ಗುರಿಯಾಗಿರುವ ಗೋವಿಂದರಾಜುಗೆ ಈ ಚುನಾವಣೆ ನಿಜಕ್ಕೂ ಅಗ್ನಿ ಪರೀಕ್ಷೆಯಾಗಿದೆ.

ಕಾಂಗ್ರೆಸ್‌ನ ನಿಷ್ಠಾವಂತ ಕಾರ್ಯಕರ್ತ ಇಕ್ಬಾಲ್ ಅಹಮದ್ ಹೆಸರು ತುಮಕೂರಿನ ಬಹುತೇಕ ಮಂದಿಗೆ ಗೊತ್ತಿಲ್ಲ. ಆದರೂ ಸಾಮಾನ್ಯ ಕಾರ್ಯಕರ್ತನಿಗೆ ಪಕ್ಷ ಟಿಕೆಟ್ ನೀಡಿದೆ. ನಿಮ್ಮ ಸೇವೆ ಮಾಡಲು ನನಗೊಂದು ಅವಕಾಶ ನೀಡಿ ಎಂದು ಮತಯಾಚನೆ ಮಾಡುತ್ತಿದ್ದಾರೆ.

ಬಿಜೆಪಿ ಟಿಕೆಟ್ ವಂಚಿತ ಮಾಜಿ ಸಚಿವ ಸೊಗಡು ಶಿವಣ್ಣ ಬೇಸತ್ತು ಸ್ವತಂತ್ರ ಅಭ್ಯರ್ಥಿಯಾಗಿ ಅಖಾಡಕ್ಕೆ ಇಳಿದಿದ್ದಾರೆ. ಜೊತೆಗೆ ಜೆಡಿಎಸ್ ವರಿಷ್ಠ ದೇವೇಗೌಡರ ಮಾನಸ ಪುತ್ರ ಎಂದೇ ಕರೆಯಲ್ಪಡುವ ಮುಖಂಡ ನರಸೇಗೌಡ ಕೂಡ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿದ್ದಾರೆ.

ತುಮಕೂರು ಗ್ರಾಮಾಂತರ

ತುಮಕೂರು ಗ್ರಾಮಾಂತರ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಹಾಲಿ ಶಾಸಕ ಡಿ ಸಿ ಗೌರಿಶಂಕರ್, ಬಿಜೆಪಿ ಅಭ್ಯರ್ಥಿ ಬಿ ಸುರೇಶ್‌ಗೌಡ, ಕಾಂಗ್ರೆಸ್‌ ಅಭ್ಯರ್ಥಿಯಾಗಿ ಜಿ ಎಸ್‌ ಷಣ್ಮುಗಪ್ಪ ಸ್ಪರ್ಧಿಸಿದ್ದಾರೆ. ಈ ಕ್ಷೇತದಲ್ಲಿ ಬಿಜೆಪಿ ಮತ್ತು ಜೆಡಿಎಸ್‌ ಅಭ್ಯರ್ಥಿಗಳು ಹಣ ಬಲ ಮತ್ತು ಜನಬಲ ಎರಡರಲ್ಲೂ ಒಬ್ಬರಿಗಿಂತ ಒಬ್ಬರು ಕಡಿಮೆ ಇಲ್ಲ. ಆರೋಪ ಪತ್ಯಾರೋಪ ಮಾಡುತ್ತಾ ಮಾತಿನ ಯುದ್ಧವನ್ನೇ ನಡೆಸುವ ಇಬ್ಬರ ನಡುವೆ ಈ ಬಾರಿ ಚುನಾವಣಾ ಕಣದಲ್ಲಿ ರೋಚಕ ಕದನ ಏರ್ಪಡುವುದರಲ್ಲಿ ಅನುಮಾನವಿಲ್ಲ.

ಬಿಜೆಪಿ ಅಭ್ಯರ್ಥಿ ಬಿ ಸುರೇಶ್ ಗೌಡ ತಾವು ಶಾಸಕರಾಗಿದ್ದ ಅವಧಿಯಲ್ಲಿ ಮಾಡಿದ ಅಭಿವೃದ್ಧಿ ಕಾರ್ಯಗಳನ್ನು ಮುಂದಿಟ್ಟುಕೊಂಡು ಮತದಾರರ ಬಳಿ ತೆರಳುತ್ತಿದ್ದಾರೆ. ಇನ್ನೂ ಕಾಂಗ್ರೆಸ್‌ ಅಭ್ಯರ್ಥಿ ಷಣ್ಮುಖಪ್ಪ ಕ್ಷೇತ್ರಕ್ಕೆ ಹೊಸ ಮುಖ. ರಾಜಕೀಯ ಅನುಭವ ಇಲ್ಲದ ಇವರು ಘಟಾನುಘಟಿ ನಾಯಕರಿಬ್ಬರ ನಡುವೆ ಎಷ್ಟು ಮತ ಗಳಿಸಲಿದ್ದಾರೆ ಎಂಬುದೇ ನೋಡಬೇಕಿದೆ.

ಒಟ್ಟಾರೆ ತುಮಕೂರು ಗ್ರಾಮಾಂತರ ಕ್ಷೇತ್ರದಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಅಭ್ಯರ್ಥಿ ಮಧ್ಯೆ ನೇರ ಹಣಾಹಣಿ ನಡೆಯಲಿದ್ದು, ಗೆಲುವಿನ ಮತಗಳ ಅಂತರ ತೀರ ದೊಡ್ಡ ಸಂಖ್ಯೆಯಲ್ಲಿ ಇರುವುದಿಲ್ಲ ಎಂಬ ಲೆಕ್ಕಾಚಾರವಿದೆ.

ಕೊರಟಗೆರೆ ಕ್ಷೇತ್ರ

ಈವರೆಗೂ ಬಿಜೆಪಿ ಖಾತೆ ತೆರೆಯದ ಕೊರಟಗೆರೆ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಅನಿಲ್‌ ಕುಮಾರ್‌, ಕಾಂಗ್ರೆಸ್‌ ಅಭ್ಯರ್ಥಿಯಾಗಿ ಮಾಜಿ ಉಪಮುಖ್ಯಮಂತ್ರಿ ಡಾ. ಜಿ ಪರಮೇಶ್ವರ್‌, ಜೆಡಿಎಸ್‌ ಅಭ್ಯರ್ಥಿಯಾಗಿ ಸುಧಾಕರ್‌ ಲಾಲ್‌ ಸ್ವರ್ಧಿಸಿದ್ದಾರೆ.

ಬಿಜೆಪಿಯು ನಿವೃತ್ತ ಐಎಎಸ್‌ ಅಧಿಕಾರಿ ಬಿ ಎಚ್‌ ಅನಿಲ್‌ ಕುಮಾರ್‌ ಅವರನ್ನು ಕಣಕ್ಕಿಳಿಸಿದೆ. ಮಾದಿಗ ಸಮುದಾಯದ ಅವರಿಗೂ ಜಾತಿ ಬಲದ ಬೆಂಬಲವಿದೆ. ಇವರೂ ಪೈಪೋಟಿ ಕೊಡುತ್ತಾರೆ ಎಂಬುದು ಸದ್ಯದ ಚೆರ್ಚೆ.

ಎಸ್‌ಸಿ ಮೀಸಲು ಕ್ಷೇತ್ರವಾಗಿದ್ದು, ಛಲವಾದಿ ಸಮಾಜದ ಡಾ. ಜಿ ಪರಮೇಶ್ವರ್‌, ಲಂಬಾಣಿ ಸಮುದಾಯದ ಪಿ ಆರ್‌ ಸುಧಾಕರ್‌ಲಾಲ್‌ ಮತ್ತು ಮಾದಿಗ ಸಮುದಾಯ ಬಿ ಎಚ್‌ ಅನಿಲ್‌ ಕುಮಾರ್‌ ಕಣದಲ್ಲಿದ್ದಾರೆ. ಕ್ಷೇತ್ರದಲ್ಲಿಒಕ್ಕಲಿಗ ಸಮುದಾಯದ ಪ್ರಾಬಲ್ಯ ಹೆಚ್ಚಿದೆ. ಎಸ್‌ಸಿ ಮತಗಳಲ್ಲಿ ಮಾದಿಗ ಸಮುದಾಯದ ಮತಗಳೇ ಅಧಿಕ. ನಂತರದ ಸ್ಥಾನದಲ್ಲಿ ಲಿಂಗಾಯತರಿದ್ದಾರೆ. ಬಿಜೆಪಿ ಮಾದಿಗ ಸಮುದಾಯದ ಅಭ್ಯರ್ಥಿ ಕಣಕ್ಕಿಳಿಸಿ ಒಕ್ಕಲಿಗ, ಲಿಂಗಾಯತ ಮತ ಬ್ಯಾಂಕ್‌ನ ಲಾಭವನ್ನೂ ಪಡೆದು ಕಾಂಗ್ರೆಸ್‌ ಮತ್ತು ಜೆಡಿಎಸ್‌ಗೆ ಟಕ್ಕರ್‌ ಕೊಡುವ ಲೆಕ್ಕಾಚಾರದಲ್ಲಿದೆ.

ಗುಬ್ಬಿ ಕ್ಷೇತ್ರ

ಜೆಡಿಎಸ್‌ ಭದ್ರಕೋಟೆಯಾಗಿರುವ ಗುಬ್ಬಿ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ದಿಲೀಪ್‌ ಕುಮಾರ್‌, ಜೆಡಿಎಸ್‌ ಅಭ್ಯರ್ಥಿಯಾಗಿ ಬಿ ಎಸ್‌ ನಾಗರಾಜ್‌ ಹಾಗೂ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಜೆಡಿಎಸ್‌ ತೊರೆದು ಕಾಂಗ್ರೆಸ್‌ ಸೇರ್ಪಡೆಯಾಗಿರುವ ಎಸ್‌ ಆರ್‌ ಶ್ರೀನಿವಾಸ್‌ ಕಣಕ್ಕಿಳಿದಿದ್ದಾರೆ.

ಎಸ್‌ ಆರ್‌ ಶ್ರೀನಿವಾಸ್‌ ಅವರು ಗುಬ್ಬಿ ಕ್ಷೇತ್ರದಲ್ಲಿ 2004ರಿಂದ ಸತತ ನಾಲ್ಕು ಬಾರಿ ಗೆಲುವು ಸಾಧಿಸಿದ್ದಾರೆ. ಸೋಲಿಲ್ಲದ ಸರದಾರ ಎಂದೇ ಕರೆಯುವ ಎಸ್‌ ಆರ್‌ ಶ್ರೀನಿವಾಸ್‌ ಜೆಡಿಎಸ್‌ ಜೊತೆಗೆ ಒಡಕು ಉಂಟಾದ ಕಾರಣ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದು, ಈ ಬಾರಿ ಬಿಜೆಪಿ ಮತ್ತು ಜೆಡಿಎಸ್‌ ನಡುವೆ ಪೈಪೋಟಿ ಏರ್ಪಡುವ ಸಾಧ್ಯತೆ ಹೆಚ್ಚಿದೆ.

ಶಿರಾ ವಿಧಾನಸಭಾ ಕ್ಷೇತ್ರ

ಶಿರಾ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ರಾಜೇಶ್‌ ಗೌಡ, ಕಾಂಗ್ರೆಸ್‌ ಅಭ್ಯರ್ಥಿಯಾಗಿ ಟಿ ಬಿ ಜಯಚಂದ್ರ ಹಾಗೂ ಜೆಡಿಎಸ್‌ ಅಭ್ಯರ್ಥಿಯಾಗಿ ಉಗ್ರೇಶ್‌ ಸ್ಪರ್ಧಿಸಿದ್ದಾರೆ.

ಕಾಂಗ್ರೆಸ್‌ ಭದ್ರಕೋಟೆಯಾಗಿರುವ ಶಿರಾ ವಿಧಾನಸಭಾ ಕ್ಷೇತ್ರದಲ್ಲಿ ಎಂಟು ಬಾರಿ ಕಾಂಗ್ರೆಸ್‌, ಎರಡು ಬಾರಿ ಸ್ವತಂತ್ರ ಅಭ್ಯರ್ಥಿ, ಮೂರು ಬಾರಿ ಜೆಡಿಎಸ್‌ ಗೆಲುವು ಸಾಧಿಸಿತ್ತು. 2018ರ ಚುನಾವಣೆಯಲ್ಲಿ ಜೆಡಿಎಸ್‌ನಿಂದ ಗೆಲುವು ಸಾಧಿಸಿದ್ದ ಬಿ ಸತ್ಯನಾರಾಯಣ ಅಕಾಲಿಕ ಮರಣ ಹಿನ್ನೆಲೆ ನಡೆದ ಉಪಚುನಾವಣೆಯಲ್ಲಿ ಬಿಜೆಪಿಯ ಸಿ ಎಂ ರಾಜೇಶ್‌ ಗೌಡ ಗೆಲುವು ಸಾಧಿಸಿ ಬಿಜೆಪಿಯ ಖಾತೆ ತೆರೆದಿದ್ದಾರೆ. ಶಿರಾ ವಿಧಾನಸಭಾ ಕ್ಷೇತ್ರದಲ್ಲಿ ಪರಿಶಿಷ್ಟ ಜಾತಿ ಸಮುದಾಯದ ಮತಗಳೇ ನಿರ್ಣಾಯಕ.

ಪಾವಗಡ ವಿಧಾನಸಭಾ ಕ್ಷೇತ್ರ

ಪಾವಗಡ ಕ್ಷೇತ್ರದಿಂದ ಈಬಾರಿ ಬಿಜೆಪಿಯಿಂದ ಕೃಷ್ಣನಾಯಕ್‌, ಕಾಂಗ್ರೆಸ್‌ನಿಂದ ಎಚ್‌ ವಿ ವೆಂಕಟೇಶ್‌, ಜೆಡಿಎಸ್‌ನಿಂದ ಕೆ ಎಂ ತಿಮ್ಮರಾಯಪ್ಪ ಅವರಿಗೆ ಟಿಕೆಟ್‌ ನೀಡಲಾಗಿದೆ.

ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರವಾಗಿರುವ ಪಾವಗಡ ಕಾಂಗ್ರೆಸ್‌ನ ಭದ್ರ ಕೋಟೆ. 1952ರಲ್ಲಿ ಸಿ ಟಿ ಹನುಮಂತರಾಯರಿಂದ ಹಿಡಿದು ಈಗಿನ ವೆಂಕಟರಮಣಪ್ಪರವರ ವರೆಗೆ 10 ಬಾರಿ ಕಾಂಗ್ರೆಸ್‌ ಈ ಕ್ಷೇತ್ರದಲ್ಲಿ ವಿಜಯ ಪತಾಕೆ ಹಾರಿಸಿದರೆ ಜೆಡಿಎಸ್‌ ನಾಲ್ಕು ಬಾರಿ, ಒಂದು ಬಾರಿ ಕಾಂಗ್ರೆಸ್‌ ಬಂಡಾಯ ಅಭ್ಯರ್ಥಿ ಗೆಲುವು ಸಾಧಿಸಿದ್ದುದು ವಿಶೇಷ.

ಪಾವಗಡ ಕ್ಷೇತ್ರದಲ್ಲಿ ಬಿಜೆಪಿ ಈವರೆಗೆ ಒಂದು ಬಾರಿಯೂ ಗೆಲುವು ಸಾಧಿಸಿಲ್ಲ. 2018ರ ಚುನಾವಣೆಯಲ್ಲಿ ವೆಂಕಟರಮಣಪ್ಪ ತಮ್ಮ ಮಗನ ಬದಲು ತಾವೇ ಅಖಾಡಕ್ಕೆ ಇಳಿದು, ಜೆಡಿಎಸ್‌ನ ಕೆ ಎಂ ತಿಮ್ಮರಾಯಪ್ಪ ಅವರನ್ನು ಕೇವಲ 409 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಈ ಬಾರಿ ಅವರ ಪುತ್ರ ಎಚ್‌ ವಿ ವೆಂಕಟೇಶ್ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಕಣದಲ್ಲಿದ್ದಾರೆ. ಪಾವಗಡ ಕ್ಷೇತ್ರದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಮತದಾರರೇ ಹೆಚ್ಚಿದ್ದು, ಆ ಮತಗಳೇ ನಿರ್ಣಾಯಕ.

ಮಧುಗಿರಿ ಕ್ಷೇತ್ರ

ಮಧುಗಿರಿ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಎಲ್‌ ಸಿ ನಾಗರಾಜ್‌, ಕಾಂಗ್ರೆಸ್‌ ಅಭ್ಯರ್ಥಿಯಾಗಿ ಕೆ ಎನ್‌ ರಾಜಣ್ಣ, ಜೆಡಿಎಸ್‌ ಅಭ್ಯರ್ಥಿಯಾಗಿ ಹಾಲಿ ಶಾಸಕ ಎಂ ವಿ ವೀರಭದ್ರಯ್ಯ ಸ್ಪರ್ಧಿಸಿದ್ದಾರೆ.

ಏಕಶಿಲಾ ಬೆಟ್ಟದ ಮೂಲಕ ಪ್ರಸಿದ್ಧಿ ಪಡೆದಿರುವ ಮಧುಗಿರಿ ವಿಧಾನಸಭಾ ಕ್ಷೇತ್ರ ರಾಜಕೀಯವಾಗಿ ತನ್ನದೇ ಆದ ಛಾಪು ಮೂಡಿಸಿಕೊಂಡು ರಾಜ್ಯಮಟ್ಟದಲ್ಲಿ ಸುದ್ದಿಯಾಗಿದೆ. ಮೀಸಲು ಕ್ಷೇತ್ರವಾಗಿದ್ದ ಹಿನ್ನೆಲೆ ಈ ಕ್ಷೇತ್ರದಿಂದ 1998ರಿಂದ ಡಾ. ಜಿ ಪರಮೇಶ್ವರ್‌ ಮೂರು ಬಾರಿ ಗೆಲುವು ಸಾಧಿಸಿ ಸಚಿವರಾಗಿ ರಾಜ್ಯದ ಗಮನ ಸೆಳೆದಿದ್ದರು. 2008ರಲ್ಲಿ ಸಾಮಾನ್ಯ ಕ್ಷೇತ್ರವಾದ ಮೇಲೆ ನಡೆದ ವಿಧಾನಸಭೆ ಚುನಾವಣೆಯಲ್ಲಿ ಮಾಜಿ ಸಚಿವ ಸಿ ಚನ್ನಿಗಪ್ಪ ಪುತ್ರ ಡಿ ಸಿ ಗೌರಿಶಂಕರ್‌ ಈ ಕ್ಷೇತ್ರದಿಂದ ಗೆಲುವು ಸಾಧಿಸಿ ಅನಂತರ ಆಪರೇಶನ್‌ ಕಮಲದ ಮೂಲಕ ಬಿಜೆಪಿಗೆ ಹಾರಿದ ಪರಿಣಾಮ ಉಪಚುನಾವಣೆ ನಡೆದು ಈ ಕ್ಷೇತ್ರದಿಂದ ದೇವೇಗೌಡರ ಕುಟುಂಬದ ಅನಿತಾ ಕುಮಾರಸ್ವಾಮಿ ಶಾಸಕಿಯಾಗಿ ರಾಜ್ಯದ ಗಮನ ಸೆಳೆದರು.

2013ರ ಚುನಾವಣೆಯಲ್ಲಿ ರಾಜ್ಯ ಅಪೆಕ್ಸ್‌ ಬ್ಯಾಂಕ್‌ ಮತ್ತು ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಕೆ.ಎನ್‌. ರಾಜಣ್ಣ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಗೆಲುವು ಸಾಧಿಸಿದ್ದರು. 2018ರ ಚುನಾವಣೆಯಲ್ಲಿ ಜೆಡಿಎಸ್‌ ಅಭ್ಯರ್ಥಿ ವೀರಭದ್ರಯ್ಯ ಗೆಲುವು ಸಾಧಿಸಿದ್ದರು.

ಮಧುಗಿರಿ ವಿಧಾನಸಭಾ ಕ್ಷೇತ್ರದಲ್ಲಿ ಪ್ರತಿ ಬಾರಿಯಂತೆ ಈ ಬಾರಿಯೂ ಕಾಂಗ್ರೆಸ್‌ ಮತ್ತು ಜೆಡಿಎಸ್‌ ನಡುವೆಯೇ ಪ್ರಬಲ ಪೈಪೋಟಿ ಏರ್ಪಟ್ಟಿದೆ.

LEAVE A REPLY

Please enter your comment!
Please enter your name here