ಮುಖ್ಯಮಂತ್ರಿ ನೇಗಿಲಯೋಗಿ ಯೋಜನೆಯ ಪ್ರಯೋಜನ ಜಿಲ್ಲೆಯ ಪ್ರತಿಯೊಂದು ಹಳ್ಳಿಯ ರೈತರಿಗೂ ತಲುಪುವಂತೆ ವ್ಯಾಪಕ ಪ್ರಚಾರ ಕೈಗೊಳ್ಳಬೇಕು. ಮುಂಗಾರು ಹಂಗಾಮಿಗೂ ಮುನ್ನ ರೈತರಿಗೆ ಯೋಜನೆಯ ಕುರಿತು ಸಂಪೂರ್ಣ ಮಾಹಿತಿ ನೀಡಬೇಕು ಎಂದು ಕೃಷಿ ಸಚಿವ ಪಿ.ಎಂ. ನರೇಂದ್ರಸ್ವಾಮಿ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಚಾಮರಾಜನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಕೃಷಿ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ರೈತ ಸಂಪರ್ಕ ಕೇಂದ್ರಗಳು ಹಾಗೂ ಗ್ರಾಮ ಪಂಚಾಯಿತಿಗಳ ಮೂಲಕ ಯೋಜನೆಯನ್ನು ಹಳ್ಳಿ ಹಳ್ಳಿಗೂ ತಲುಪಿಸಬೇಕು. ಯೋಜನೆಯಡಿ ಮೊದಲು ನೋಂದಣಿ ಮಾಡಿಕೊಂಡವರಿಗೆ ಮೊದಲ ಆದ್ಯತೆ (ಫಸ್ಟ್ ಕಂ ಫಸ್ಟ್ ಸರ್ವ್) ಆಧಾರದ ಮೇಲೆ ಸೇವೆ ಒದಗಿಸಬೇಕು ಎಂದು ತಿಳಿಸಿದರು.
ಜಿಲ್ಲೆಯಲ್ಲಿ ಆರ್‌ಟಿಒ ನೋಂದಣಿಯಾಗಿರುವ ಒಟ್ಟು 6,108 ಟ್ರ್ಯಾಕ್ಟರ್‌ಗಳಿದ್ದು, ಈ ಪೈಕಿ 2,263 ಟ್ರ್ಯಾಕ್ಟರ್ ಮಾಲೀಕರು ಯೋಜನೆಯಡಿ ನೋಂದಣಿಗೆ ಒಪ್ಪಿಗೆ ನೀಡಿದ್ದಾರೆ. ಮೂರು ಎಕರೆಗಿಂತ ಕಡಿಮೆ ಜಮೀನು ಹೊಂದಿರುವ 66,043 ರೈತರಿಗೆ ಯೋಜನೆಯಿಂದ ಅನುಕೂಲವಾಗಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು. ಯೋಜನೆಯ ಕುರಿತು ರೈತರಿಗೆ ಮಾಹಿತಿ ತಲುಪಿಸಲು ಗ್ರೂಪ್ ಕಾಲ್ ವ್ಯವಸ್ಥೆಯನ್ನೂ ಆರಂಭಿಸಲಾಗುತ್ತಿದೆ ಎಂದರು.
ರೈತರು ಕೃಷಿಯಲ್ಲಿ ಆಧುನಿಕ ತಂತ್ರಜ್ಞಾನ ಬಳಕೆಗೆ ಹೆಚ್ಚಿನ ಒತ್ತು ನೀಡಬೇಕು. ಉಪಗ್ರಹ ಆಧಾರಿತ ಬೆಳೆ ಮಾಹಿತಿ, ಮಣ್ಣಿನ ಸತ್ವ ಹಾಗೂ ಹವಾಮಾನ ಮುನ್ಸೂಚನೆ ಸೇರಿದಂತೆ ಅಗತ್ಯ ಮಾಹಿತಿಯನ್ನು ರೈತರ ಮೊಬೈಲ್‌ಗೆ ತಲುಪಿಸುವ ರೈತ ಚೈತನ್ಯ ಯೋಜನೆಯನ್ನು ಸರ್ಕಾರ ಜಾರಿಗೊಳಿಸಿದೆ. ಈಗಾಗಲೇ ಲಕ್ಷಾಂತರ ರೈತರಿಗೆ ಬೆಳೆ ಮಾಹಿತಿಯ ಸಂದೇಶಗಳನ್ನು ನೀಡಲಾಗುತ್ತಿದೆ. ಅಧಿಕಾರಿಗಳು ಈ ಯೋಜನೆಯ ಬಗ್ಗೆ ರೈತರಿಗೆ ಅರಿವು ಮೂಡಿಸಿ, ಸಂಭವನೀಯ ಬೆಳೆ ನಷ್ಟದಿಂದ ಪಾರಾಗಲು ನೆರವಾಗಬೇಕು ಎಂದು ಸೂಚಿಸಿದರು.
2026-27ನೇ ಸಾಲಿನ ಮುಂಗಾರು ಹಂಗಾಮಿನ ಬೆಳೆ ವಿಮೆ ಯೋಜನೆಯಡಿ ಜಿಲ್ಲೆಯಲ್ಲಿ 17,925 ರೈತರು ನೋಂದಣಿ ಮಾಡಿಕೊಂಡಿದ್ದಾರೆ. ಕಳೆದ ವರ್ಷ 9,448 ರೈತರು ನೋಂದಾಯಿಸಿಕೊಂಡಿದ್ದರೆ, ಈ ಬಾರಿ ದುಪ್ಪಟ್ಟಿನಷ್ಟು ನೋಂದಣಿಯಾಗಿದೆ. ಅನಗತ್ಯ ಕಾರಣಗಳನ್ನು ಮುಂದಿಟ್ಟು ರೈತರಿಗೆ ಪರಿಹಾರ ನೀಡದೆ ವಂಚಿಸುವ ವಿಮಾ ಕಂಪನಿಗಳನ್ನು ಕರೆಸಿ ಎಚ್ಚರಿಕೆ ನೀಡಬೇಕು. ಬರಗಾಲದ ಸಂದರ್ಭದಲ್ಲಿ ಯಾವುದೇ ಕಾರಣಕ್ಕೂ ಬೆಳೆ ವಿಮೆ ಪರಿಹಾರ ಪಾವತಿ ವಿಳಂಬವಾಗಬಾರದು ಎಂದು ಸಚಿವರು ತಾಕೀತು ಮಾಡಿದರು.
ಜಿಲ್ಲೆಯಲ್ಲಿರುವ ಮಳೆಮಾಪನ ಕೇಂದ್ರಗಳನ್ನು ಸುಸ್ಥಿತಿಯಲ್ಲಿಡಬೇಕು ಎಂದು ಸೂಚಿಸಿದ ಸಚಿವರು, ಕೃಷಿ ಕಾಲೇಜಿನ ಸಮಸ್ಯೆಗಳ ಬಗ್ಗೆಯೂ ಮಾಹಿತಿ ಪಡೆದರು. ಕಾಲೇಜಿನಲ್ಲಿ ಸಿಬ್ಬಂದಿ ಕೊರತೆಯಿದ್ದು, ಮುಖ್ಯ ಕಟ್ಟಡ ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ. ಗ್ರಂಥಾಲಯ ಕಟ್ಟಡದಲ್ಲಿ ತರಗತಿಗಳನ್ನು ನಡೆಸಲಾಗುತ್ತಿದೆ. ಅನುದಾನದ ಕೊರತೆಯಿಂದ ಹೌಸಿಂಗ್ ಬೋರ್ಡ್ ಕಾಮಗಾರಿಯನ್ನು ಅಪೂರ್ಣಗೊಳಿಸಿದೆ ಎಂದು ಅಧಿಕಾರಿಗಳು ವಿವರಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ಬೆಳಗಾವಿ ಅಧಿವೇಶನ ಮುಗಿದ ಬಳಿಕ ಕೃಷಿ ಕಾಲೇಜಿಗೆ ಖುದ್ದು ಭೇಟಿ ನೀಡಿ ಪರಿಶೀಲನೆ ನಡೆಸುವುದಾಗಿ ಭರವಸೆ ನೀಡಿದರು.

ಈ ವರ್ಷ ಜಿಲ್ಲೆಯಲ್ಲಿ ಸಮರ್ಪಕ ಮಳೆಯಾಗದ ಹಿನ್ನೆಲೆಯಲ್ಲಿ ಸುಮಾರು 15 ಸಾವಿರ ಮೆಟ್ರಿಕ್ ಟನ್ ರಸಗೊಬ್ಬರ ದಾಸ್ತಾನು ಇದೆ ಎಂದು ಅಧಿಕಾರಿಗಳು ತಿಳಿಸಿದರು. ಯೂರಿಯಾ ಕೃತಕ ಅಭಾವ ಸೃಷ್ಟಿಸುವವರ ಮೇಲೆ ನಿಗಾ ವಹಿಸಬೇಕು. ಜೈ ಕಿಸಾನ್ ಆ್ಯಪ್‌ನಲ್ಲಿ ರಸಗೊಬ್ಬರ ದಾಸ್ತಾನು ಸೇರಿದಂತೆ ಎಲ್ಲ ಮಾಹಿತಿಯನ್ನು ಕಾಲಕಾಲಕ್ಕೆ ಅಪ್‌ಡೇಟ್ ಮಾಡಬೇಕು ಎಂದು ಸಚಿವರು ಸೂಚಿಸಿದರು.
ಪಿಎಂ ಕಿಸಾನ್ ಸಮ್ಮಾನ್ ಯೋಜನೆಯಡಿ ಇ-ಕೆವೈಸಿ ಮಾಡಿಸದ ಕಾರಣ ಹಲವು ರೈತರು ಸಹಾಯಧನದಿಂದ ವಂಚಿತರಾಗಿದ್ದಾರೆ. ಯಾವ ಕಾರಣಕ್ಕೆ ರೈತರಿಗೆ ಸೌಲಭ್ಯ ದೊರೆತಿಲ್ಲ ಎಂಬುದನ್ನು ಪರಿಶೀಲಿಸಿ, ಅವರನ್ನು ಮತ್ತೆ ಯೋಜನೆಯ ವ್ಯಾಪ್ತಿಗೆ ಸೇರಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು. ಈ ಕುರಿತು ಸಂಪೂರ್ಣ ಮಾಹಿತಿಯನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಬೇಕು. ಯೋಜನೆಯಿಂದ ವಂಚಿತರಾದ ರೈತರ ತಾಲೂಕುವಾರು ಪಟ್ಟಿಯನ್ನು ಸಿದ್ಧಪಡಿಸಿ ವರದಿ ನೀಡುವಂತೆ ಸೂಚಿಸಿದರು.
ಮಣ್ಣು ಪರೀಕ್ಷೆಯ ಮಾದರಿಗಳನ್ನು ಸಂಗ್ರಹಿಸಿ ಎರಡು ತಿಂಗಳ ನಂತರ ವರದಿ ನೀಡಿದರೆ ರೈತರಿಗೆ ಯಾವುದೇ ಪ್ರಯೋಜನವಿಲ್ಲ. ಮಣ್ಣು ಪರೀಕ್ಷೆಗೆ ಜಿಲ್ಲೆಗೆ 15 ಲಕ್ಷ ರೂ. ವೆಚ್ಚ ಮಾಡಲು ಅಭ್ಯಂತರವಿಲ್ಲ. ಈ ಬಗ್ಗೆ ಸರ್ಕಾರದ ಹಂತದಲ್ಲಿ ಚರ್ಚಿಸಲಾಗುವುದು ಎಂದರು. ಹನಿ ನೀರಾವರಿ ಹಾಗೂ ಸೂಕ್ಷ್ಮ ನೀರಾವರಿ ಯೋಜನೆಗಳಲ್ಲಿ ಸೌಲಭ್ಯಗಳು ಪುನರಾವರ್ತನೆಯಾಗದಂತೆ ಎಚ್ಚರಿಕೆ ವಹಿಸಬೇಕು. ಜಲಾನಯನ ಪ್ರದೇಶದ ಚಟುವಟಿಕೆಗಳು ಹಾಗೂ ವಿಬಿಜಿ ರಾಮ್ ಜಿ ಯೋಜನೆಯನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು ಎಂದು ತಿಳಿಸಿದರು.
ಜಿಲ್ಲೆಯಲ್ಲಿ ಜಾನುವಾರುಗಳಿಗೆ ಮೇವಿನ ಕೊರತೆಯಾಗದಂತೆ ಮುನ್ನೆಚ್ಚರಿಕೆ ವಹಿಸಬೇಕು. ಬರಗಾಲದ ಸಂದರ್ಭದಲ್ಲಿ ಮೇವು ಪೂರೈಕೆಗೆ ವ್ಯವಸ್ಥೆ ಮಾಡುವುದರ ಜತೆಗೆ ಜಾನುವಾರುಗಳಿಗೆ ರೋಗ ಹರಡದಂತೆ ಕ್ರಮ ಕೈಗೊಳ್ಳಬೇಕು. ಪ್ರತಿ ಗ್ರಾಮದಲ್ಲೂ ನೀರಿನ ತೊಟ್ಟಿಗಳನ್ನು ನಿರ್ಮಿಸಬೇಕು ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ರೈತರಿಗೆ ದೀರ್ಘಕಾಲೀನ ಆದಾಯ ತಂದುಕೊಡುವ ತೇಗ ಸಿರಿ ಯೋಜನೆಗೆ ಹೆಚ್ಚಿನ ಉತ್ತೇಜನ ನೀಡಬೇಕು. ರಸ್ತೆ ಬದಿ ಹಾಗೂ ಸರ್ಕಾರಿ ಜಮೀನುಗಳಲ್ಲಿ ತೇಗದ ಸಸಿಗಳನ್ನು ನೆಡಬೇಕು. ಈ ಯೋಜನೆಯಡಿ ಶೇ.70ರಷ್ಟು ಆದಾಯ ಸರ್ಕಾರಕ್ಕೆ ಹಾಗೂ ಶೇ.30ರಷ್ಟು ಆದಾಯ ರೈತರಿಗೆ ಹಂಚಿಕೆಯಾಗಲಿದೆ ಎಂದು ಸಚಿವ ತಿಳಿಸಿದರು.
ಸಭೆಗೂ ಮುನ್ನ ಸಚಿವರು ರೈತ ಮುಖಂಡರೊಂದಿಗೆ ಚರ್ಚೆ ನಡೆಸಿದರು. ಇದೇ ಸಂದರ್ಭದಲ್ಲಿ ನೇಗಿಲಯೋಗಿ ಯೋಜನೆ ಹಾಗೂ ಆನ್‌ಲೈನ್ ಮೂಲಕ ರಸಗೊಬ್ಬರ ಬುಕ್ಕಿಂಗ್ ಮಾಡುವ ಕುರಿತು ಜಾಗೃತಿ ಮೂಡಿಸುವ ಪೋಸ್ಟರ್‌ಗಳನ್ನು ಬಿಡುಗಡೆ ಮಾಡಿದರು.
ಈ ವಿಶೇಷ ಲೇಖನ ಓದಿದ್ದೀರಾ? ಗಾಂಧೀಜಿ ತತ್ವಗಳ ಪ್ರಸ್ತುತತೆ: ಸಮಾನತೆಯ ಸಮಾಜಕ್ಕೆ ಶ್ರಮದ ಘನತೆಯೇ ಅಡಿಪಾಯ
ಸಭೆಯಲ್ಲಿ ಜಿಲ್ಲಾಧಿಕಾರಿ ಶ್ರೀರೂಪ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಆಕೃತಿ ಬನ್ಸಾಲ್, ಅಪರ ಕೃಷಿ ನಿರ್ದೇಶಕ ಮಧುಸೂದನ್, ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ನರೇಶ್, ಕೃಷಿ ಕಾಲೇಜಿನ ಡೀನ್ ದೊರೆಸ್ವಾಮಿ, ಜಂಟಿ ಕೃಷಿ ನಿರ್ದೇಶಕ ಭಾನುಪ್ರಕಾಶ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.



