ಕಿರಿಯ ವಯಸ್ಸಿನಲ್ಲೇ ಹೃದಯಾಘಾತದಿಂದ ಪತ್ರಕರ್ತ ಹಾಗೂ ಡಿಜಿಟಲ್ ಮಾಧ್ಯಮ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದ ಶ್ರೀನಿವಾಸ ಎ. ಕೊಳ್ಳೇಗಾಲ (30) ಅವರು ನಿಧನರಾಗಿದ್ದಾರೆ.
ಮೂಲತಃ ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲೂಕಿನವರಾದ ಶ್ರೀನಿವಾಸ ಅವರು ಕೊಳ್ಳೇಗಾಲ ಹಾಗೂ ಮೈಸೂರಿನಲ್ಲಿ ಶಿಕ್ಷಣ ಪಡೆದಿದ್ದರು. ಪತ್ರಿಕೋದ್ಯಮ ಕ್ಷೇತ್ರದಲ್ಲಿ ವಿವಿಧ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸಿದ್ದ ಅವರು, ‘ಒನ್ ಇಂಡಿಯಾ ಕನ್ನಡ’ದಲ್ಲಿ ಸೋಷಿಯಲ್ ಮೀಡಿಯಾ ಎಕ್ಸಿಕ್ಯೂಟಿವ್ ಆಗಿ ವೃತ್ತಿಜೀವನ ಆರಂಭಿಸಿದ್ದರು.
ನಂತರ ‘ಮೈಖೇಲ್ ಕನ್ನಡ’ ಹಾಗೂ ‘ಕನ್ನಡ ಫಿಲ್ಮಿಬೀಟ್’ನಲ್ಲಿ ಸಬ್ ಎಡಿಟರ್ ಆಗಿ ಸೇವೆ ಸಲ್ಲಿಸಿದ್ದರು. ಮೈಸೂರಿನ ‘ಆಂದೋಲನ’ ದಿನಪತ್ರಿಕೆಯ ಡಿಜಿಟಲ್ ತಂಡದ ಲೀಡ್ ಆಗಿಯೂ ಕಾರ್ಯನಿರ್ವಹಿಸಿದ್ದರು. ಬಳಿಕ ‘ಕನ್ನಡ ದುನಿಯಾ’ ಬಳಗ ಸೇರಿಕೊಂಡು ಪತ್ರಿಕೋದ್ಯಮ ಕ್ಷೇತ್ರದಲ್ಲಿ ಸೇವೆ ಮುಂದುವರಿಸಿದ್ದರು.
ಶ್ರೀನಿವಾಸ ಅವರು ಕ್ರೀಡಾ ಕ್ಷೇತ್ರದ ಬಗ್ಗೆ ವಿಶೇಷ ಆಸಕ್ತಿ ಹಾಗೂ ಆಳವಾದ ಜ್ಞಾನ ಹೊಂದಿದ್ದರು. ಅತ್ಯುತ್ತಮ ಸ್ಪೋರ್ಟ್ಸ್ ಅಬ್ಸರ್ವರ್ ಆಗಿದ್ದ ಅವರು, ತಮ್ಮದೇ ಆದ ವಿಶಿಷ್ಟ ಶೈಲಿಯ ಕ್ರೀಡಾ ಬರವಣಿಗೆಯ ಮೂಲಕ ಓದುಗರ ಗಮನ ಸೆಳೆದಿದ್ದರು. ಕ್ರೀಡೆಯಷ್ಟೇ ಅಲ್ಲದೆ ಪ್ರವಾಸೋದ್ಯಮ, ಟ್ರೆಂಡಿಂಗ್ ವಿಷಯಗಳು ಹಾಗೂ ಪ್ರಚಲಿತ ಬೆಳವಣಿಗೆಗಳ ಕುರಿತು ಸುದ್ದಿ ವಿಶ್ಲೇಷಿಸುವಲ್ಲಿಯೂ ಪರಿಣತಿ ಹೊಂದಿದ್ದರು.
ಪತ್ರಿಕೋದ್ಯಮದಲ್ಲಿ ಕೆಲಸ ಮಾಡಿದ ವಿವಿಧ ಸಂಸ್ಥೆಗಳಲ್ಲಿ ಸ್ನೇಹಪರ ವ್ಯಕ್ತಿತ್ವದಿಂದ ಸಹೋದ್ಯೋಗಿಗಳ ಮೆಚ್ಚುಗೆಗೆ ಪಾತ್ರರಾಗಿದ್ದರು. ಬೆಂಗಳೂರು ತೊರೆದು ಮೈಸೂರಿನಲ್ಲಿ ನೆಲೆಸಿದ್ದ ಅವರು ಅವಿವಾಹಿತರಾಗಿದ್ದು, ತಂದೆ, ತಾಯಿ ಹಾಗೂ ಕಿರಿಯ ಸಹೋದರನನ್ನು ಅಗಲಿದ್ದಾರೆ.
ಅವರ ಹಠಾತ್ ನಿಧನದಿಂದ ಕುಟುಂಬಸ್ಥರು, ಸ್ನೇಹಿತರು ಹಾಗೂ ಪತ್ರಿಕೋದ್ಯಮ ಕ್ಷೇತ್ರದ ಸಹೋದ್ಯೋಗಿಗಳಲ್ಲಿ ತೀವ್ರ ಶೋಕ ವ್ಯಕ್ತವಾಗಿದೆ. ಶ್ರೀನಿವಾಸ ಅವರ ಅಂತ್ಯಕ್ರಿಯೆ ಬುಧವಾರ ಸಂಜೆ ಕೊಳ್ಳೇಗಾಲದಲ್ಲಿ ನಡೆಯಲಿದೆ.
ಈ ವಿಶೇಷ ವರದಿ ಓದಿದ್ದೀರಾ? ಕರ್ನಾಟಕ ಮತ್ತೊಂದು ಬೆಂಗಾಲ್ ಆಗಲು ಬಿಡುವುದಿಲ್ಲ; SIR ರದ್ದಾಗಲೇಬೇಕು: ಪ್ರಕಾಶ್ ರಾಜ್
ಶ್ರೀನಿವಾಸ ಎ. ಅವರ ನಿಧನಕ್ಕೆ ‘ಕನ್ನಡ ದುನಿಯಾ’ ಬಳಗ ಸೇರಿದಂತೆ ಪತ್ರಿಕೋದ್ಯಮ ಕ್ಷೇತ್ರದ ಹಲವು ಗಣ್ಯರು ಹಾಗೂ ಸಹೋದ್ಯೋಗಿಗಳು ಸಂತಾಪ ಸೂಚಿಸಿದ್ದಾರೆ.




