ಭಾರತದ ಜನತೆಗೆ ಭದ್ರತೆಯನ್ನು ಕಲ್ಪಿಸುವ ಸಂವಿಧಾನವು ಅಸ್ತಿತ್ವದಲ್ಲಿದ್ದರೂ ಅದನ್ನು ಚಾಲ್ತಿಗೆ ತರುವಲ್ಲಿ ಭಾರತದ ಶಾಸಕಾಂಗ ಮತ್ತು ಕಾರ್ಯಾಂಗ ವ್ಯವಸ್ಥೆಯು ಎಡವಿದೆ ಎಂದು ಹಿರಿಯ ವಕೀಲರಾದ ಪಿ ರಂಜನ್ ರಾವ್ ಹೇಳಿದರು.
ಸಂತ ಅಲೋಶಿಯಸ್ ಕಾಲೇಜಿನ ಅಖಿಲ ಭಾರತ ವಕೀಲರ ಒಕ್ಕೂಟ ಎಐಎಲ್‌ಯು ವಿಷೇಶ ಉಪನ್ಯಾಸನದಲ್ಲಿ ಮಾತನಾಡಿದ ಅವರು, “ಸಂವಿಧಾನವನ್ನು ರಚಿಸುವ ಕಾರ್ಯ ಸುಲಭದ್ದಾಗಿರಲಿಲ್ಲ. ವಿಭಿನ್ನ ಧರ್ಮ, ಸಿದ್ದಾಂತದ ಮೇಲೆ ಪ್ರೀತಿ ಹೊಂದಿರುವ ಜನ ಸಮುದಾಯದ ನಾಯಕರುಗಳ ಮುತುವರ್ಜಿಯಲ್ಲಿ ಜಾತ್ಯತೀತ, ಧರ್ಮ ನಿರಪೇಕ್ಷ ಸಂವಿಧಾನವು ಭಾರತದಲ್ಲಿ ಅಸ್ತಿತ್ವಕ್ಕೆ ಬಂತು. ಇಂತಹ ಮೌಲ್ಯಯುತವಾದ ಸಂವಿಧಾನದ ಮೌಲ್ಯವನ್ನು ಉಳಿಸಬೇಕಿದೆ” ಎಂದು ಹೇಳಿದರು.
“ಸಂವಿಧಾನದ ಮೂಲಧ್ಯೇಯಕ್ಕೆ ದಕ್ಕೆಯಾದಾಗ ನ್ಯಾಯಾಲಯವು ಸಂವಿಧಾನದ ಮೂಲ ಧ್ಯೆಯವನ್ನು ರಕ್ಷಿಸಬೇಕಾಗಿದೆ. ನ್ಯಾಯಾಂಗಕ್ಕೆ ವಿಮರ್ಶೆಯ ಹಕ್ಕನ್ನು ಭಾರತದ ಸಂವಿದಾನವು ನೀಡಿದೆ.ಶಾಸಕಾಂಗದಲ್ಲಿ ರಚನೆಯಾಗುವ ಕಾನೂನುಗಳು ಸಂವಿಧಾನದ ಮೂಲ ಆಶಯಕ್ಕೆ ಚ್ಯುತಿಯನ್ನುಂಟು ಮಾಡಿದಾಗ ಅದನ್ನು ಖಂಡಿಸುವ ಹಕ್ಕು ನ್ಯಾಯಾಲಯಕ್ಕೆ ಇದೆ. ನ್ಯಾಯಾಧೀಶರು ತಾವು ನ್ಯಾಯಾಧೀಶರೇನಿಸಿಕೊಂಡ ಮೇಲೆ ಸಾಮಾನ್ಯರಿಗಿರುವ ಭಾವನಾತ್ಮಕ ಸೆಳೆತಗಳಿಂದ ದೂರವಿದ್ದು ನಿಸ್ಪಕ್ಷಪಾತ ನ್ಯಾಯದಾನ ನೀಡಬೇಕು” ಎಂದರು.
ಸಮಾವೇಶದಲ್ಲಿ ಹಿರಿಯ ವಕೀಲರಾದ ಬಿಎ ಮೊಹಮ್ಮದ್ ಹನೀಫ್, ವಕೀಲರಾದ ಪ್ರವೀಣ್ ಪಿಂಟೋ, ವಕೀಲರ ಒಕ್ಕೂಟದ ರಾಜ್ಯ ಕಾರ್ಯದರ್ಶಿ ಶ್ರೀನಿವಾಸ್ ಕುಮಾರ್, ಮಂಗಳೂರು ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಗೌತಮ್ ಬಿಪಿ, ಸಂತ ಅಲೋಶಿಯಸ್ ಪರಿಗಣೆತ ವಿಶ್ವ ವಿದ್ಯಾನಿಲಯ ಕನ್ನಡ ವಿಭಾಗದ ಮುಖ್ಯಸ್ಥ ದಿನೇಶ್ ನಾಯಕ್, ವಕೀಲರಾದ ಶಾಲಿನಿ ಮನೋಹರ್, ನಿತಿನ್ ಕುತ್ತಾರ್, ಚರಣ್ ಶೆಟ್ಟಿ ಪಂಜಿಮೊಗರು, ಮನೋಜ್ ವಾಮಂಜೂರು, ರಾಮಚಂದ್ರ ಬಬ್ಬುಕಟ್ಟೆ, ದಿನೇಶ್ ಉಳಿಪಾಡಿ, ಬಿಎಂ ಭಟ್ ಮೊದಲಾದವರು ಉಪಸ್ಥಿತರಿದ್ದರು.




