ರಾಜ್ಯದಲ್ಲಿ 15 ಸಾವಿರ ಹಿಂದಿ ಶಿಕ್ಷಕರು ಹಾಗೂ ಅವರ ಕುಟುಂಬದವರ ಹಿತದೃಷ್ಟಿಯಿಂದ ದ್ವಿಭಾಷಾ ನೀತಿ ಕೈಬಿಟ್ಟು ತ್ರಿಭಾಷಾ ಸೂತ್ರವನ್ನು
ಮುಂದುವರಿಸಬೇಕು ಎಂದು ಜಿಲ್ಲಾ ಹಿಂದಿ ಭಾಷಾ ಶಿಕ್ಷಕರ ಸಂಘದ ಅದ್ಯಕ್ಷ ಕೆ.ವಿ.ಶ್ರೀನಿವಾಸ್ ಒತ್ತಾಯಿಸಿದರು.
ಅವರು ಪಟ್ಟಣದ ಬಾಲಕಿಯರ ಪ್ರೌಢಶಾಲಾ ಆವರಣದಲ್ಲಿ ದೇಶಿ ಭಾಷೆಗಳ ಒಕ್ಕೂಟ ಅಡಿಯಲ್ಲಿ ಎಐ ನಿಯಮ ಹಾಗೂ ದ್ವಿಭಾಷಾ ನೀತಿಯನ್ನು ಕೈಬಿಟ್ಟು ತೃತೀಯ ಭಾಷೆ ಹಿಂದಿ ಯನ್ನು ಮುಂದುವರಿಸಬೇಕು ಎಂದು ತಾಲ್ಲೂಕು ಹಾಗೂ ಜಿಲ್ಲಾ ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲಾ ಹಿಂದಿ ಶಿಕ್ಷಕರು ಬೆಂಗಳೂರು ಫ್ರೀಡಂ ಪಾರ್ಕ್ ನಲ್ಲಿ ಒಂದು ದಿನದ ಸಾಂಕೇತಿಕ ಹೋರಾಟಕ್ಕೆ ಬಸ್ ಬೆಂಗಳೂರು ಛಲೋ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಎನ್ಎಸ್ಕ್ಯೂಎಫ್ (ಎಐ) ನಿಯಮ ಕೈಬಿಟ್ಟು ತೃತೀಯ ಭಾಷೆ ಮುಂದುವರಿಸಬೇಕು ಎಂದು ಒತ್ತಾಯಿಸಿ ರಾಜ್ಯದ ಹಿಂದಿ ಭಾಷಾ ಶಿಕ್ಷಕರ ಒಂದು ದಿನದ ಫ್ರೀಡಂ ಪಾರ್ಕ್ ನಲ್ಲಿ ಧರಣಿ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.
ತೃತೀಯ ಭಾಷೆಯಾಗಿ ಹಿಂದಿ ವಿಷಯದ ಅಧ್ಯಯನವನ್ನು ಮುಂದುವರಿಸಬೇಕು. ಹಿಂದಿ ಬಿ.ಇಡಿ ಪದವೀಧರರನ್ನು 15 ಸಾವಿರ ಶಿಕ್ಷಕರ ನೇಮಕಾತಿಯಲ್ಲಿ ಪರಿಗಣಿಸಬೇಕು’ ಎಂದು ಆಗ್ರಹಿಸಿದರು,
ಕಳೆದ ವರ್ಷ ಎಸ್‍ಎಸ್‍ಎಲ್‍ಸಿ ಬೋರ್ಡ್ ಪರೀಕ್ಷೆಯಲ್ಲಿ ತೃತೀಯ ಭಾಷೆಗಳಿಗೆ ಅಂಕಗಳ ಬದಲು ಗ್ರೇಡ್ ನೀಡುವ ನಿಯಮ ವಿರೋಧಿಸಿ ವಿದ್ಯಾರ್ಥಿಗಳು ಕೋರ್ಟ್ ಮೂಲಕ ಅಂಕ ಪಡೆದಿದ್ದರು. ಈ ಶೈಕ್ಷಣಿಕ ವರ್ಷದಲ್ಲಿ ಸುಮಾರು 1,800 ಶಾಲೆಗಳಲ್ಲಿ ತೃತೀಯ ಭಾಷೆ ಬದಲು ಎನ್‍ಎಸ್‍ಕ್ಯೂಎಫ್ ಅಡಿ ಎಐ ವಿಷಯ ಅಳವಡಿಸುತ್ತಿರುವುದರಿಂದ ಹಿಂದಿ ಅಧ್ಯಯನ ಬಯಸುವ ಸಾವಿರಾರು ವಿದ್ಯಾರ್ಥಿಗಳು ಹಾಗೂ ಶಿಕ್ಷಕರಿಗೆ ತೊಂದರೆಯಾಗಿದೆ ಎಂದು ದೂರಿದರು
ಈ ನೀತಿ ಮುಂದುವರಿದರೆ 10ನೇ ತರಗತಿಯವರೆಗಿನ ಹಿಂದಿ ಅಧ್ಯಯನ 8ನೇ ತರಗತಿಗೆ ಸೀಮಿತವಾಗಲಿದೆ. ಇದರ ಪರಿಣಾಮ ಪದವಿಪೂರ್ವ, ಪದವಿ ಹಾಗೂ ವಿಶ್ವವಿದ್ಯಾಲಯ ಹಂತದ ಉನ್ನತ ಶಿಕ್ಷಣದ ಮೇಲೂ ಆಗಲಿದೆ ಎಂದರು.
10-12 ವರ್ಷಗಳಿಂದ ಶಿಕ್ಷಕರ ನೇಮಕಾತಿಯಾಗಿಲ್ಲ. ಈಗ 15 ಸಾವಿರ ನೇಮಕಾತಿಯಲ್ಲಿ ಕೇವಲ ಕನ್ನಡ, ಇಂಗ್ಲಿಷ್‍ಗೆ ಮಾತ್ರ ಅವಕಾಶ ನೀಡಲಾಗಿದೆ. 4 ಸಾವಿರಕ್ಕೂ ಹೆಚ್ಚು ಹಿಂದಿ ಹುದ್ದೆಗಳು ಖಾಲಿ ಇದ್ದರೂ ರಾಜ್ಯಪತ್ರದಲ್ಲಿ ಪರಿಗಣಿಸಿಲ್ಲ ಎಂದು ದೂರಿದರು.
ತಾಲ್ಲೂಕು ಹಿಂದಿ ಭಾಷೆ ಶಿಕ್ಷಕರ ಸಂಘದ ಅದ್ಯಕ್ಷೆ ಜಿ.ರಾಮಸುಬ್ಬಮ್ಮ ಮಾತನಾಡಿ ತೃತೀಯ ಭಾಷೆ ತೆಗೆದು ಹಾಕುವುದರಿಂದ ವಿದ್ಯಾರ್ಥಿಗಳ ಶೈಕ್ಷಣಿಕ ಹಿತಾಸಕ್ತಿಗೆ ಸಾಕಷ್ಟು ತೊಂದರೆ ಉಂಟಾಗುತ್ತಿದೆ. ಜತೆಗೆ ತೃತೀಯ ಭಾಷೆ ಶಿಕ್ಷಕರ ನೌಕರಿಗೆ ಕುತ್ತು ಬರುವ ಸಾಧ್ಯತೆ ಇದೆ. ಇದನ್ನು ಗಮನಿಸಿ ಶಾಲೆಗಳಲ್ಲಿ ತೃತೀಯ ಭಾಷೆಯ ಜಾರಿಗೊಳಿಸಿ ಎಐ ಶಿಕ್ಷಣವನ್ನು ಕೈ ಬಿಡಬೇಕು ಎಂದು ಹೇಳಿದರು. ಕೂಡಲೇ ಹಿಂದಿ ಶಿಕ್ಷಕರನ್ನು ನೇಮಕಾತಿಯಲ್ಲಿ ಪರಿಗಣಿಸಬೇಕು ಹಾಗೂ ಎನ್‍ಎಸ್‍ಕ್ಯೂಎಫ್ (ಎಐ) ನಿಯಮ ಕೈಬಿಟ್ಟು ತೃತೀಯ ಭಾಷೆ ಮುಂದುವರಿಸಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ತಾಲ್ಲೂಕು ಪ್ರಾಥಮಿಕ ಹಾಗೂ ಪ್ರೌಢಶಾಲಾ ಸಹ ಶಿಕ್ಷಕರ ಸಂಘ,ಪದವೀಧರ ಬಡ್ತಿ ಶಿಕ್ಷಕರ ಸಂಘ ಹಾಗೂ ರಾಜ್ಯ ಸರ್ಕಾರಿ ನೌಕರರ ಸಂಘ ನೈತಿಕ ಬೆಂಬಲವನ್ನು ವ್ಯಕ್ತಪಡಿಸಿದ್ದಾರೆ.
ಇದನ್ನು ಓದಿದ್ದೀರಾ..?ಮಾಲೂರು | ನೈಸ್ ಟೋಲ್ ಅಕ್ರಮ – 7 ದಿನದಲ್ಲಿ ಸ್ಫೋಟಕ ಸತ್ಯ ಬಹಿರಂಗವಾಗುತ್ತೆ
ಈ ಸಂದರ್ಭದಲ್ಲಿ ಬಡ್ತಿ ಮುಖ್ಯ ಶಿಕ್ಷಕರ ಸಂಘದ ಅದ್ಯಕ್ಷ ಈಶ್ವರಪ್ಪ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅದ್ಯಕ್ಷ ಸಿ.ವಿ.ವೆಂಕಟರಾಯಪ್ಪ, ಎಂ.ವಿ.ರಂಗಾರೆಡ್ಡಿ,ವಿಜಯ್ ಕುಮಾರ್, ತಬ್ಬುಸುಮ್,ಈಶ್ವರಾಚಾರಿ,ಸುಬ್ಬರಾಯಪ್ಪ,ರಾಜರಾಜೇಶ್ವರಿ, ಎ.ಎನ್.ಜಯಣ್ಣ,ಕೆ.ಸುನಿಲ್ ಕುಮಾರ್, ಕೆ.ಸಿ.ನಟರಾಜ್,ರಾಧ,ರಾಣ ಕಾಂಬಳೆ ಉಮಾ,ಸೈಪುಲ್ಲಾ,ನಯಾಜ್,ಹರ್ಷಿಯಾ,ಜಯರಾಮ ರೆಡ್ಡಿ, ಹಾಗೂ ಇತರೆ ಶಿಕ್ಷಕರು ಹಾಜರಿದ್ದರು.




