ಮುಂಗಾರು ಆರಂಭವಾಗಿ ಒಂದೂವರೆ ತಿಂಗಳು ಗತಿಸಿದ್ದರೂ ಬೇಸಿಗೆಯ ಪರಿಸ್ಥಿತಿ ಇದೆ. ಬಿತ್ತನೆ ಕುಸಿತಗೊಂಡಿದೆ. ನಿಗದಿತ ಗುರಿ ತಲುಪಲು ಸಾಧ್ಯವಾಗಿಲ್ಲ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಮುಂಗಾರು ಮಳೆಯ ಪ್ರಮಾಣವು ಗಣನೀಯವಾಗಿ ಕುಸಿದಿದ್ದು ತಾಲ್ಲೂಕಿನಲ್ಲಿ ಬರದ ಛಾಯೆ ಆವರಿಸಿದೆ.
ತಾಲ್ಲೂಕಿನ ಕೃಷಿ ಚಟುವಟಿಕೆಗಳು ಮಳೆಯನ್ನೇ ಅವಲಂಬಿಸಿವೆ. ಗೂಳೂರು,ಪಾತಪಾಳ್ಯ,ಚೇಳೂರು, ಚಾಕವೇಲು,ಮಿಟ್ಟೇಮರಿ ಹೋಬಳಿಗಳಲ್ಲಿ ರೈತರು ಹೊಲಗಳನ್ನು ಬಿತ್ತನೆಗೆ ಸಿದ್ಧಪಡಿಸಿಕೊಂಡಿದ್ದರೂ ಮಳೆಯಿಲ್ಲದೆ ಬಿತ್ತನೆಮುಂದೂಡಿದ್ದಾರೆ. ಕೆಲವೆಡೆ ಬಿತ್ತಿದ ಬಿತ್ತನೆ ಬೀಜಗಳು ತೇವಾಂಶದ ಕೊರತೆಯಿಂದ ಮೊಳಕೆ ಬಾರದೆ ಭೂಮಿಯಲ್ಲೇ ಉಳಿದಿವೆ. ಮೊಳಕೆಯೊಡೆದ ಪೈರು ಒಣಗುತ್ತಿದೆ.
ಇದೇ ಪರಿಸ್ಥಿತಿ ಮುಂದುವರೆದರೆ ಮಳೆ ಆಧಾರಿತ ಕೃಷಿಯನ್ನೇ ನಂಬಿರುವ ಸಹಸ್ರಾರು ರೈತ ಕುಟುಂಬಗಳ ಬದುಕು ಅತಂತ್ರವಾಗಲಿದ್ದು, ಕೃಷಿ ವೆಚ್ಚಕ್ಕಾಗಿ ಮಾಡಿದ ಸಾಲ ಕೃಷಿಕರ ಪಾಲಿಗೆ ಮುಳುವಾಗಲಿದೆ.
ಬರದ ತೀವ್ರತೆ ಹೆಚ್ಚುತ್ತಿದ್ದು, ಸರ್ಕಾರ ತಕ್ಷಣ ಪರಿಹಾರ ಕ್ರಮ ಕೈಗೊಳ್ಳದಿದ್ದರೆ ರೈತ ಕುಟುಂಬಗಳ ಬದುಕಿಗೂ ದೊಡ್ಡ ಹೊಡೆತ ಬೀಳುವ ಸಾಧ್ಯತೆ ಇದೆ.
‘ಮುಂಗಾರು ಪ್ರಾರಂಭದಲ್ಲೇ ಬಿದ್ದ ಮಳೆಗೆ ಜಮೀನು ಹಸನು ಮಾಡಿ, ಬಿತ್ತನೆ ಮಾಡಲಾಗಿದೆ. ಆದರೆ ಈವರೆಗೆ ಹದ ಮಳೆ ಬಿದ್ದಿಲ್ಲ. ಮಳೆ ಕೈ ಕೊಟ್ಟಿರುವುದರಿಂದ, ಕೊಳವೆ ಬಾವಿಗಳಲ್ಲಿ ಬರುತ್ತಿದ್ದ ನೀರು ಕಡಿಮೆಯಾಗಿದೆ. ಈ ವರ್ಷ ಬೆಳೆ ಬೆಳೆದು, ಫಸಲು ಪಡೆಯುತ್ತೇವೆ ಎಂಬ ನಂಬಿಕೆಯೇ ಇಲ್ಲವಾಗಿದೆ’ ಎಂದು ರೈತ ಪಿ.ಎನ್. ರಘುರಾಮ ರೆಡ್ಡಿ ಪತ್ರಕೆಗೆ ತಿಳಿಸಿದರು.
ಇದನ್ನು ಓದಿದ್ದೀರಾ..?ಕೋಲಾರ | ಜಂತರ್ ಮಂತರ್‌ನಲ್ಲಿ ಹಲ್ಲೆ ಖಂಡಿಸಿ ಕಾಂಗ್ರೆಸ್ ಪರಿಶಿಷ್ಟ ಜಾತಿ ವಿಭಾಗದಿಂದ ನಗರದಲ್ಲಿ ಪಂಜಿನ ಮೆರವಣಿಗೆ
ಸಕಾಲಕ್ಕೆ ಮಳೆ ಸುರಿಯದಿದ್ದರಿಂದ ಕೆರೆ-ಕಟ್ಟೆಗಳು ಬತ್ತುತ್ತಿವೆ. ಅಂತರ್ಜಲ ಕುಸಿಯುತ್ತಿದೆ. ಮುಂದಿನ ದಿನಗಳಲ್ಲಿ ಕುಡಿಯುವ ನೀರಿಗೂ ಸಂಕಷ್ಟ ಎದುರಾಗುವ ಆತಂಕ ಕಾಡುತ್ತಿದೆ. ಜಾನುವಾರುಗಳಿಗೆ ಮೇವು, ನೀರಿನ ಕೊರತೆಯೂ ಕಾಡಲಿದ್ದು, ರೈತರನ್ನು ಮತ್ತಷ್ಟು ಸಂಕಷ್ಟಕ್ಕೆ ತಳ್ಳಲಿದೆ.





