ತಾಲೂಕಿನ ಮುರುಗಮಲ್ಲ ಹೋಬಳಿಯ ನಂದಿಗಾನಹಳ್ಳಿ ಗ್ರಾಮದ ಬಳಿ ಚಿರತೆ ಹಾಗೂ ಅದರ ಮರಿಗಳು ಪ್ರತ್ಯಕ್ಷವಾಗಿವೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದ ಫೋಟೋ ಕೃತಕ ಬುದ್ಧಿಮತ್ತೆ (AI) ಬಳಸಿ ಸೃಷ್ಟಿಸಲಾದ ನಕಲಿ ಚಿತ್ರ ಎಂಬುದು ಅರಣ್ಯ ಇಲಾಖೆಯ ತನಿಖೆಯಿಂದ ಬಯಲಾಗಿದೆ.
ಈ ಸುಳ್ಳು ಸುದ್ದಿಯಿಂದ ಸುತ್ತಮುತ್ತಲಿನ ಗ್ರಾಮಗಳಲ್ಲಿ ಆತಂಕ ಮೂಡಿಸಿದ್ದು,ವದ ಹಬ್ಬಿಸಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಭಾನುವಾರ ರಾತ್ರಿ ಸುಮಾರು 11:15 ರ ಸುಮಾರಿಗೆ ನಂದಿಗಾನಹಳ್ಳಿ ಮತ್ತು ನಿಮಕಾಯಲಹಳ್ಳಿ ಮಾರ್ಗದ ಮಧ್ಯೆ ರಾಮಕೃಷ್ಣರೆಡ್ಡಿ ಎಂಬವರ ತೋಟದ ಬಳಿ ಮುಖ್ಯ ರಸ್ತೆಯಲ್ಲಿ ಕಾರಿಗೆ ಚಿರತೆ ಮತ್ತು ಅದರ ಮರಿಗಳು ಅಡ್ಡ ಬಂದಿದ್ದವು ಎಂದು ವೇಮಗಹಳ್ಳಿಯ ನಿವಾಸಿಯೊಬ್ಬರು ಫೋಟೋ ಸಮೇತ ಸಾಮಾಜಿಕ ಜಾಲತಾಣಗಳಲ್ಲಿ ಮಾಹಿತಿ ಹಂಚಿಕೊಂಡಿದ್ದರು.ಕಾರಿನ ಬೆಳಕಿಗೆ ಹೆದರಿ ಚಿರತೆಯು ಪಕ್ಕದ ತೋಟದ ಕಡೆಗೆ ತೆರಳಿದೆ ಎಂದು ಅವರು ತಿಳಿಸಿದ್ದರು.
ಮುಖ್ಯ ರಸ್ತೆಯಲ್ಲಿ ಚಿರತೆ ಸಂಚರಿಸಿದೆ ಎಂಬ ಸುದ್ದಿ ವೈರಲ್ ಆಗುತ್ತಿದ್ದಂತೆ ನಂದಿಗಾನಹಳ್ಳಿ,ನಿಮ್ಮಕಾಯಲಹಳ್ಳಿ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಜನತೆ ಮತ್ತು ಪಾದಚಾರಿಗಳಲ್ಲಿ ತೀವ್ರ ಭೀತಿ ಉಂಟಾಗಿ ರಾತ್ರಿ ವೇಳೆ ಓಡಾಡಲು ಭಯಪಡುವಂತಾಯಿತು.ಕೂಡಲೇ ಗ್ರಾಮಸ್ಥರು ಈ ಫೋಟೋವನ್ನು ಅರಣ್ಯಾಧಿಕಾರಿಗಳಿಗೆ ಕಳುಹಿಸಿ ಎಚ್ಚೆತ್ತುಕೊಳ್ಳುವಂತೆ ಕೋರಿದ್ದರು.
ಇದನ್ನು ಓದಿದ್ದೀರಾ..? ಶ್ರೀನಿವಾಸಪುರ | ರೈತರ ಮೇಲೆ ದೌರ್ಜನ್ಯ ಆರೋಪ, ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸಲು ಆಗ್ರಹ
ಈ ಕುರಿತು ಪ್ರತಿಕ್ರಿಯಿಸಿದ ಅರಣ್ಯಾಧಿಕಾರಿ ವೀರಭದ್ರಪ್ಪ,”ಈ ರೀತಿಯ ಚಿರತೆ ಸಂತತಿ ನಮ್ಮ ಪ್ರದೇಶದಲ್ಲಿ ಇಲ್ಲ,ಯಾರು ಆತಂಕ ಪಡಬೇಡಿ”ಎಂದು ಸ್ಪಷ್ಟಪಡಿಸಿದ್ದಾರೆ.ಇದು AI ಬಳಸಿ ಸೃಷ್ಟಿಸಲಾದ ಚಿತ್ರವಾಗಿದ್ದು, ವಿದೇಶಿ ಚಿರತೆಯ ಫೋಟೋವನ್ನು ಸ್ಥಳೀಯ ರಸ್ತೆಗೆ ತಂದಂತೆ ಬಿಂಬಿಸಲಾಗಿದೆ ಇತ್ತೀಚಿನ ದಿನಗಳಲ್ಲಿ ಇಂತಹ ಮೂರು ನಕಲಿ ಪ್ರಕರಣಗಳು ತಮ್ಮ ಗಮನಕ್ಕೆ ಬಂದಿದ್ದು,ಕಾಲೇಜು ವಿದ್ಯಾರ್ಥಿಯೊಬ್ಬ ಈ ರೀತಿ ಮಾಡಿರುವುದನ್ನು ಪತ್ತೆ ಹಚ್ಚಿ ಎಚ್ಚರಿಕೆ ನೀಡಿ ಕಳುಹಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ




