ಚಿಕ್ಕಬಳ್ಳಾಪುರ: ಬೆಂಗಳೂರಿನ ಹೆಬ್ಬಾಳ–ನಾಗವಾರ ಕೆರೆಯಿಂದ ಸಂಸ್ಕರಿಸಿ ಹರಿಸಲಾಗುತ್ತಿರುವ ಎಚ್.ಎನ್.ವ್ಯಾಲಿ ನೀರನ್ನು ಮೂರನೇ ಹಂತದ ಶುದ್ಧೀಕರಣಕ್ಕೆ ಒಳಪಡಿಸಬೇಕು ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಗೆ ಕೃಷ್ಣಾ ನದಿ ನೀರನ್ನು ಹರಿಸಬೇಕು ಎಂಬ ಆಗ್ರಹದೊಂದಿಗೆ ಮಂಗಳವಾರ ಜೀವಜಲ ಜಾಗೃತಿ ವೇದಿಕೆ ವತಿಯಿಂದ ಶ್ರೀ ಹರಿಕೃಷ್ಣ ಫೌಂಡೇಶನ್ ಆದ್ಯಕ್ಷ ಹಾಗೂ ಬಿಜೆಪಿ ಟಿಕೆಟ್ ಆಕಾಂಕ್ಷಿ ಆನೆಮಡುಗು ಹರೀಶ್. ಕೆ ರೆಡ್ಡಿ ನೇತೃತ್ವದಲ್ಲಿ ನಗರದಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ಹಾಗೂ ಪಾದಯಾತ್ರೆ ನಡೆಯಿತು.
ಈ ಪ್ರತಿಭಟನೆಗೆ ಕನ್ನಡಪರ,ರೈತಪರ ಸಂಘಟನೆಗಳು ಹಾಗೂ ಮಾನವ ಹಕ್ಕುಗಳ ಸಂಘಟನೆ, ದಲಿತ ಸಂಘಟನೆಗಳು ಬೆಂಬಲ ಸೂಚಿಸಿದವು.ಪರಿಶುದ್ಧ ನೀರಿಗಾಗಿ ನಡೆದ ಪಾದಯಾತ್ರೆಯಲ್ಲಿ ನೂರಾರು ಜನರು ಭಾಗವಹಿಸಿ, ಶುದ್ಧ ನೀರು ಹರಿಸಿ ಇಲ್ಲವಾದರೆ ಅಶುದ್ಧ ನೀರು ನಿಲ್ಲಿಸಿ ಎಂದು ಘೋಷಣೆ ಕೂಗಿ ಪ್ರತಿಭಟಿಸಿದರು.ಖಾಲಿ ಬಿಂದಿಗೆಗಳನ್ನು ಹೊತ್ತು ಸಾಗಿದ ಮಹಿಳೆಯರ ದೃಷ್ಯ ಗಮನ ಸೆಳೆಯಿತು.
ಈ ವೇಳೆ ಹರಿಕೃಷ್ಣ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಆನೆಮಡುಗು ಹರೀಶ್. ಕೆ ರೆಡ್ಡಿ ಮಾತನಾಡಿ ನಮ್ಮ ಬೇಡಿಕೆ ಕೇವಲ ಚಿಕ್ಕಬಳ್ಳಾಪುರಕ್ಕೆ ಪರಿಶುದ್ಧ ನೀರು ಒದಗಿಸುವುದಾಗಿದೆ.ಕಳೆದ ಬಜೆಟ್‌ನಲ್ಲಿ ಎಚ್.ಎನ್.ವ್ಯಾಲಿ ನೀರನ್ನು ಮೂರನೇ ಹಂತದ ಶುದ್ಧೀಕರಣಕ್ಕೆ ಒಳಪಡಿಸುವ ಬಗ್ಗೆ ಒತ್ತಾಯಿಸಿದ್ದರೂ ಸರ್ಕಾರ ಯಾವುದೇ ಘೋಷಣೆ ಮಾಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕಂದವಾರ ಕೆರೆಯ ಬಳಿ ನಡೆದ ಹಿಂದಿನ ಪ್ರತಿಭಟನೆಯಲ್ಲಿ ಸಂಸ್ಕರಿತ ನೀರನ್ನು ಬಾಟಲಿಗಳಲ್ಲಿ ತುಂಬಿ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಹಾಗೂ ಸಂಬಂಧಪಟ್ಟ ಸಚಿವರಿಗೆ ಕಳುಹಿಸಿದ್ದರೂ ಸರ್ಕಾರ ಮೌನ ವಹಿಸಿದೆ ಎಂದು ಅವರು ಆರೋಪಿಸಿದರು.
ಬರಪೀಡಿತ ಜಿಲ್ಲೆಗಳಿಗೆ ಶಾಶ್ವತ ನೀರಾವರಿ ಯೋಜನೆಗಳಾದ ಎತ್ತಿನಹೊಳೆ ಯೋಜನೆ ವರ್ಷಗಳಾದರೂ ಪೂರ್ಣಗೊಂಡಿಲ್ಲ. ಇದರ ವೆಚ್ಚವೂ ಹೆಚ್ಚುತ್ತಿದ್ದು, ಈ ಭಾಗಕ್ಕೆ ಹರಿಸಲಾಗುತ್ತಿರುವ ಎಚ್.ಎನ್. ವ್ಯಾಲಿ ನೀರು ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಆದ್ದರಿಂದ ಈ ನೀರನ್ನು ಮೂರನೇ ಹಂತದ ಶುದ್ಧೀಕರಣಕ್ಕೆ ಒಳಪಡಿಸಬೇಕು ಇಲ್ಲವಾದಲ್ಲಿ ನೀರು ಹರಿಸುವುದನ್ನೇ ನಿಲ್ಲಿಸಿ,ಗಡಿ ಹಂತ ತಲುಪಿರುವ ಕೃಷ್ಣಾ ನದಿ ನೀರನ್ನು ಚಿಕ್ಕಬಳ್ಳಾಪುರಕ್ಕೆ ಹರಿಸಲು ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದರು.
ಸರ್ಕಾರ ಕೂಡಲೇ ಕ್ರಮ ಕೈಗೊಳ್ಳದಿದ್ದಲ್ಲಿ ಮುಂದಿನ ದಿನಗಳಲ್ಲಿ ವಿಧಾನಸೌಧ ಮುತ್ತಿಗೆ ಹಾಕಿ ಹೋರಾಟ ತೀವ್ರಗೊಳಿಸಲಾಗುವುದು ಎಂದು ಎಚ್ಚರಿಕೆ ನೀಡಿದರು. ಶಾಸಕ ಪ್ರದೀಪ್ ಈಶ್ವರ್ ಮೂರನೇ ಹಂತದ ಶುದ್ಧೀಕರಣಕ್ಕೆ ಬೆಂಬಲವಿದೆ ಎಂದು ಹೇಳುತ್ತಿದ್ದರೂ, ವಿಧಾನಸೌಧದಲ್ಲಿ ಈ ಕುರಿತು ಮೌನ ವಹಿಸಿರುವುದು ಬೇಸರ ತಂದಿದೆ ಎಂದು ಅವರು ಟೀಕಿಸಿದರು. ರಣಬಿಸಿಲಿನ ನಡುವೆಯೂ ಚಪ್ಪಲಿ ಧರಿಸದೆ ಬರಿ ಕಾಲಿನಿಂದಲೇ ಹರೀಶ್.ಕೆ ರೆಡ್ಡಿ ಶನಿಮಹಾತ್ಮ ದೇವಾಲಯದಿಂದ ಶಿಡ್ಲಘಟ್ಟ ವೃತ್ತದವರೆಗೆ ಕಾಲ್ನಡಿಗೆಯಲ್ಲೇ ಸಾಗಿದರು.
ಇದೇ ವೇಳೆ ಮಾತನಾಡಿದ ನೆಲಮಂಗಲ ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷ ಜಗದೀಶ್ ಚೌಧರಿ ಶಾಸಕ ಪ್ರದೀಪ್ ಈಶ್ವರ್ ಇತರೆ ವಿಷಯಗಳ ಬಗ್ಗೆ ಮಾತನಾಡುವಂತೆ ನೀರಿನ ಸಮಸ್ಯೆ ಕುರಿತು ಕೂಡ ವಿಧಾನಸೌಧದಲ್ಲಿ ಧ್ವನಿ ಎತ್ತಬೇಕು.ಜನರು ನಿಮಗೆ ವಿಶ್ವಾಸದಿಂದ ಮತ ನೀಡಿ ಕಳುಹಿಸಿದ್ದಾರೆ.ತಕ್ಷಣ ಮುಖ್ಯಮಂತ್ರಿಗಳ ಗಮನಕ್ಕೆ ವಿಷಯವನ್ನು ತೆಗೆದುಕೊಂಡು ಸಮಸ್ಯೆ ಪರಿಹರಿಸಬೇಕು ಆನೆಮಡುಗು ಹರೀಶ್. ಕೆ ರೆಡ್ಡಿ ನಡೆಸುತ್ತಿರುವ ಪರಿಶುದ್ಧ ನೀರಿಗಾಗಿ ಪಾದಯಾತ್ರೆ ಅವರ ಸಾಮಾಜಿಕ ಕಳಕಳಿಯನ್ನು ಬಿಂಬಿಸುತ್ತಿದೆ ಅವರಿಗೆ ನಾವೆಲ್ಲರೂ ಬೆಂಬಲ ನೀಡಬೇಕು ಎಂದು ಜಗದೀಶ್ ಚೌಧರಿ ತಿಳಿಸಿದರು.
ಇದನ್ನು ಓದಿದ್ದೀರಾ..? ರಾಜ್ಯಪಾಲ ತಾವರ್ ಚಂದ್ ಗೆಹ್ಲೋಟ್ ಅವರನ್ನು ಕೂಡಲೇ ಹಿಂದಕ್ಕೆ ಕರೆಯಿಸಿಕೊಳ್ಳಬೇಕು : ಎಂ.ಕೆ.ರಾಘವೇಂದ್ರ
ಈ ಸಂದರ್ಭದಲ್ಲಿ ಪರಿಸರ ವಾದಿ ಚೌಡಪ್ಪ ಮಾತನಾಡಿದರು.ಮಹಾ ನಾಯಕ ಅಂಬೇಡ್ಕರ್ ಸೇನೆ ಅಧ್ಯಕ್ಷ ಡಿ.ವಿ. ನಾರಾಯಣಸ್ವಾಮಿ,ರಾಮ ಕೃಷ್ಣಪ್ಪ,ಬಾಲಕುಂಟಹಳ್ಳಿ ಗಂಗಾದರಪ್ಪ,ಹೋಟೆಲ್ ರಾಮಣ್ಣ,ಹರೀಶ್ ಮತ್ತು ಇತರರು ಉಪಸ್ಥಿತರಿದ್ದರು.ಈ ವೇಳೆ ಉಪವಿಭಾಗಾಧಿಕಾರಿ ಅಶ್ವಿನ್ ಮುಖಾಂತರ ಸರಕಾರಕ್ಕೆ ಮನವಿ ಸಲ್ಲಿಸಲಾಯಿತು.
ಚಿಕ್ಕಬಳ್ಳಾಪುರ |ಕೊಳಚೆ ನೀರು ಬೇಡ , ಕೃಷ್ಣ ನದಿಯ ಶುದ್ಧ ನೀರು ಚಿಕ್ಕಬಳ್ಳಾಪುರ ಜಿಲ್ಲೆಗೆ ಹರಿಸಿ : ಹರೀಶ್ ರೆಡ್ಡಿ
ಪೋಸ್ಟ್ ಹಂಚಿಕೊಳ್ಳಿ:
ಪೋಸ್ಟ್ ಹಂಚಿಕೊಳ್ಳಿ:
This video cannot be played in your browser. Open the video directly
ಈ ಹೊತ್ತಿನ ಪ್ರಮುಖ ಸುದ್ದಿ
ವಿಡಿಯೋ




