ಕಾಫಿನಾಡಿನಲ್ಲಿ ಭದ್ರಾ ಅಭಯಾರಣ್ಯಕ್ಕೆ ಬೇರೆಡೆಯಿಂದ 56 ಕಾಡಾನೆಗಳನ್ನು ಸ್ಥಳಾಂತರಿಸುವ ಪ್ರಸ್ತಾವನೆಯನ್ನು ಕೈಬಿಡುವಂತೆ ಆಗ್ರಹಿಸಿ, ಶೃಂಗೇರಿ ಶಾಸಕ ಟಿ.ಡಿ. ರಾಜೇಗೌಡ ಅವರು ಅರಣ್ಯ ಸಚಿವ ರಾಮಲಿಂಗಾರೆಡ್ಡಿ ಅವರಿಗೆ ಮನವಿ ಸಲ್ಲಿಸಿದ್ದಾರೆ.
ಹಾಸನ ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಅಬಕಾರಿ ಸಚಿವ ಶಿವಲಿಂಗೇಗೌಡ ಅವರು ಬೇರೆಡೆಯಿಂದ 56 ಕಾಡಾನೆಗಳನ್ನು ಭದ್ರಾ ಅರಣ್ಯಕ್ಕೆ ಸ್ಥಳಾಂತರಿಸುವುದಾಗಿ ಸಾರ್ವಜನಿಕವಾಗಿ ನೀಡಿರುವ ಹೇಳಿಕೆಯಿಂದ ಶೃಂಗೇರಿ ವಿಧಾನಸಭಾ ಕ್ಷೇತ್ರ ಹಾಗೂ ಚಿಕ್ಕಮಗಳೂರು ಜಿಲ್ಲೆಯ ಜನರಲ್ಲಿ ಆತಂಕ ಉಂಟಾಗಿದೆ ಎಂದು ರಾಜೇಗೌಡ ಅವರು ಮನವಿಯಲ್ಲಿ ತಿಳಿಸಿದ್ದಾರೆ.
ಭದ್ರಾ ಅಭಯಾರಣ್ಯವು ಸುಮಾರು 1,000 ಚದರ ಕಿ.ಮೀ. ವಿಸ್ತೀರ್ಣ ಹೊಂದಿದ್ದು, ಇಲ್ಲಿ ಈಗಾಗಲೇ 1,500ಕ್ಕೂ ಹೆಚ್ಚು ಕಾಡುಕೋಣಗಳು, 500ಕ್ಕೂ ಹೆಚ್ಚು ಕಾಡಾನೆಗಳು ಸೇರಿದಂತೆ ಸಾವಿರಾರು ಜಿಂಕೆ, ಕಡವೆ, ಕಾಡುಹಂದಿ ಹಾಗೂ ಇತರ ವನ್ಯಜೀವಿಗಳಿವೆ. ಈ ಪ್ರಾಣಿಗಳ ಹಾವಳಿಯಿಂದ ಪ್ರತಿ ವರ್ಷ ಕಾಫಿ, ಅಡಿಕೆ, ತೆಂಗು, ಕಾಳುಮೆಣಸು, ಏಲಕ್ಕಿ ಸೇರಿದಂತೆ ರೈತರ ಸಾವಿರಾರು ಎಕರೆ ಕೃಷಿ ಬೆಳೆಗಳು ನಾಶವಾಗುತ್ತಿವೆ. ಅಲ್ಲದೆ, ಕಾಡಾನೆ ಹಾಗೂ ಕಾಡುಕೋಣಗಳ ದಾಳಿಯಿಂದ ಈಗಾಗಲೇ 12 ಮಂದಿ ಮೃತಪಟ್ಟಿದ್ದಾರೆ. ಭದ್ರಾ ಅಭಯಾರಣ್ಯದಲ್ಲಿ ಪ್ರಸ್ತುತವೇ ಹೆಚ್ಚಿನ ಸಂಖ್ಯೆಯಲ್ಲಿ ವನ್ಯಜೀವಿಗಳಿರುವುದರಿಂದ ಮತ್ತೆ 56 ಕಾಡಾನೆಗಳನ್ನು ಸ್ಥಳಾಂತರಿಸುವ ನಿರ್ಧಾರ ಅವೈಜ್ಞಾನಿಕವಾಗಲಿದೆ.
ಇದನ್ನೂ ಓದಿದ್ದೀರಾ?ಚಿಕ್ಕಮಗಳೂರು | ಕಾಡಾನೆ ಸಂಚಾರ: ಎಚ್ಚರಿಕೆವಹಿಸಲು ಅರಣ್ಯ ಇಲಾಖೆ ಸೂಚನೆ
ಈ ಹಿನ್ನೆಲೆಯಲ್ಲಿ ಭದ್ರಾ ಅಭಯಾರಣ್ಯಕ್ಕೆ ಕಾಡಾನೆಗಳನ್ನು ಸ್ಥಳಾಂತರಿಸುವ ಪ್ರಸ್ತಾವನೆಯನ್ನು ಕೈಬಿಟ್ಟು, 5,000 ಚದರ ಕಿ.ಮೀ.ಗಿಂತಲೂ ಹೆಚ್ಚಿನ ವಿಸ್ತೀರ್ಣ ಹೊಂದಿರುವ ಸತ್ಯಮಂಗಲ, ಬಂಡೀಪುರ, ನಾಗರಹೊಳೆ, ವಯನಾಡು ಹಾಗೂ ಬಿಳಿಗಿರಿರಂಗನಬೆಟ್ಟದ ಅಭಯಾರಣ್ಯಗಳಿಗೆ ಸ್ಥಳಾಂತರಿಸುವ ಕುರಿತು ಕ್ರಮ ಕೈಗೊಳ್ಳಬೇಕು. ರೈತರು ಹಾಗೂ ಸಾರ್ವಜನಿಕರಲ್ಲಿ ಉಂಟಾಗಿರುವ ಆತಂಕ ಮತ್ತು ಗೊಂದಲಗಳನ್ನು ನಿವಾರಿಸಿ, ಭದ್ರಾ ಅಭಯಾರಣ್ಯದ ಸುತ್ತಮುತ್ತಲಿನ ಜನರ ಬದುಕು ಹಾಗೂ ಕೃಷಿ ಚಟುವಟಿಕೆಗಳ ಮೇಲೆ ಮತ್ತಷ್ಟು ದುಷ್ಪರಿಣಾಮ ಬೀರದಂತೆ ಸರ್ಕಾರ ಸೂಕ್ತ ನಿರ್ಧಾರ ಕೈಗೊಳ್ಳಬೇಕು ಎಂದು ಶಾಸಕ ಟಿ.ಡಿ. ರಾಜೇಗೌಡ ಅವರು ಅರಣ್ಯ ಸಚಿವರನ್ನು ಒತ್ತಾಯಿಸಿದ್ದಾರೆ.



