ಚಿಕ್ಕಮಗಳೂರು ಜಿಲ್ಲೆ ನರಸಿಂಹರಾಜಪುರ ತಾಲೂಕು ವ್ಯಾಪ್ತಿಯಲ್ಲಿ ಜಮೀನಿಗೆ ಅಳವಡಿಸಿದ್ದ ಐಬೆಕ್ಸ್ ತಂತಿ ಬೇಲಿಗೆ ಅನಧಿಕೃತವಾಗಿ ವಿದ್ಯುತ್ ಸಂಪರ್ಕ ಕಲ್ಪಿಸಿದ್ದರಿಂದ ಎರಡು ಜಾನುವಾರುಗಳು ಮೃತಪಟ್ಟಿವೆ ಎಂಬ ಗಂಭೀರ ಆರೋಪ ಕೇಳಿಬಂದಿದ್ದು, ಸಂಬಂಧಪಟ್ಟ ವ್ಯಕ್ತಿಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಲಾಗಿದೆ.
ತಾಲೂಕಿನ ಗದ್ದೆಮನೆ ಕಾನೂರು ಗ್ರಾಮದ ಶೈಲಾ ಅವರಿಗೆ ಸೇರಿದ ಎರಡು ಜಾನುವಾರುಗಳನ್ನು ನಿನ್ನೆ ಮೇಯಿಸಲು ಕಾಡಿನತ್ತ ಕರೆದೊಯ್ಯಲಾಗಿತ್ತು. ಈ ವೇಳೆ ಶ್ರವಣ್ ಕುಮಾರ್ ಅವರಿಗೆ ಸೇರಿದ ಜಾಗದಲ್ಲಿದ್ದ ಐಬೆಕ್ಸ್ ತಂತಿ ಬೇಲಿಗೆ ತಗುಲಿ ಸುಮಾರು ₹15 ಸಾವಿರ ಮೌಲ್ಯದ ಹೋರಿಕರು ಹಾಗೂ ₹15 ಸಾವಿರ ಮೌಲ್ಯದ ದನ ಮೃತಪಟ್ಟಿವೆ ಎಂದು ತಿಳಿದುಬಂದಿದೆ.
ಸಾಮಾನ್ಯವಾಗಿ ಐಬೆಕ್ಸ್ ತಂತಿಗೆ ತಗುಲಿದ ಮಾತ್ರಕ್ಕೆ ಜಾನುವಾರುಗಳು ಸಾವನ್ನಪ್ಪುವ ಸಾಧ್ಯತೆ ಕಡಿಮೆ ಇರುವುದರಿಂದ, ಬೇಲಿಗೆ ವಿದ್ಯುತ್ ಸಂಪರ್ಕ ನೀಡಲಾಗಿರಬಹುದೆಂಬ ಅನುಮಾನ ವ್ಯಕ್ತವಾಗಿದೆ. ಸ್ಥಳ ಪರಿಶೀಲನೆಯ ವೇಳೆ ಶ್ರವಣ್ ಕುಮಾರ್ ಅವರು ತಮ್ಮ ಮನೆಯಿಂದಲೇ ಐಬೆಕ್ಸ್ ತಂತಿ ಬೇಲಿಗೆ ವಿದ್ಯುತ್ ಸಂಪರ್ಕ ಕಲ್ಪಿಸಿರುವುದು ಕಂಡುಬಂದಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಇದನ್ನೂ ಓದಿದ್ದೀರಾ?ಚಿಕ್ಕಮಗಳೂರು | ಗಾಂಜಾ ಮಾರಾಟ; ಆರೋಪಿಗಳ ಬಂಧನ
ಈ ಹಿನ್ನೆಲೆಯಲ್ಲಿ ಎರಡು ಜಾನುವಾರುಗಳ ಸಾವಿಗೆ ಕಾರಣರಾದ ಶ್ರವಣ್ ಕುಮಾರ್ ಅವರ ವಿರುದ್ಧ ಸೂಕ್ತ ತನಿಖೆ ನಡೆಸಿ ಕಾನೂನು ರೀತ್ಯಾ ಕ್ರಮ ಕೈಗೊಳ್ಳುವಂತೆ ನರಸಿಂಹರಾಜಪುರ ತಾಲೂಕಿನ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಳಲಿಸಲಾಗಿದೆ.




