ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಬಾಳೂರು ವ್ಯಾಪ್ತಿಯ ಪ್ರವಾಸಿ ತಾಣದ ಸೌಂದರ್ಯ ಹಾಗೂ ನೈರ್ಮಲ್ಯ ಕಾಪಾಡಲು ಹೋದ ಸ್ಥಳೀಯ ಯುವಕನಿಗೆ ಪುಂಡರ ಗುಂಪೊಂದು ಕುತ್ತಿಗೆಗೆ ಕೈಹಾಕಿ ಕೊಲೆ ಬೆದರಿಕೆ ಹಾಕಿರುವ ಆರೋಪ ಕೇಳಿಬಂದಿದೆ.
ಮೈದಾಡಿ ಪ್ರವಾಸಿ ತಾಣದಲ್ಲಿ ಬಿದ್ದಿದ್ದ ಕಸವನ್ನು ಸ್ವಚ್ಛಗೊಳಿಸಲು ಸ್ಥಳೀಯರು ತೆರಳಿದ್ದಾಗ, ಅಲ್ಲಿಗೆ ಪಿಕಪ್ ಕ್ಯಾಂಪರ್ (KA 18 C 9338) ವಾಹನದಲ್ಲಿ ಬಂದಿದ್ದ ಸಂಜಯ್ (ಮುಳ್ಳೂಡಿ), ಶಮಂತ್ (ಸಂಸೆ), ಸಂತೋಷ್ (ಕಳಸ) ಹಾಗೂ ದೀಕ್ಷಿತ್ (ನಲ್ಲಿಬೀಡು) ಎಂಬುವವರು ವಾಹನದ ಸ್ಪೀಕರ್‌ನಲ್ಲಿ ಅತಿಯಾದ ಸೌಂಡ್ ಹಾಕಿಕೊಂಡು ಡ್ಯಾನ್ಸ್ ಮಾಡುತ್ತಿದ್ದರು ಎನ್ನಲಾಗಿದೆ.
ಇದನ್ನು ಗಮನಿಸಿದ ಸ್ಥಳೀಯ ಯುವಕರು, “ಪ್ರವಾಸಿಗರು ನೋಡಿದರೆ ಹೀಗೆಯೇ ಮಾಡುತ್ತಾರೆ, ಸ್ಪೀಕರ್ ಸೌಂಡ್ ಸ್ವಲ್ಪ ಕಡಿಮೆ ಮಾಡಿ” ಎಂದು ಸೌಜನ್ಯದಿಂದ ಮನವಿ ಮಾಡಿದ್ದಾರೆ. ಇದರಿಂದ ಕೆರಳಿದ ಸಂಜಯ್, “ಇನ್ನೂ ಜೋರಾಗಿ ಸ್ಪೀಕರ್ ಹಾಕುತ್ತೇನೆ, ಏನು ಮಾಡುತ್ತೀಯಾ?” ಎಂದು ಉದ್ಧಟತನ ತೋರಿದ್ದಲ್ಲದೆ ಕುತ್ತಿಗೆಗೆ ಕೈಹಾಕಲು ಯತ್ನಿಸಿದ್ದಾನೆ ಎಂದು ಆರೋಪಿಸಲಾಗಿದೆ. ಈ ವೇಳೆ ಜೊತೆಯಲ್ಲಿದ್ದ ಶಮಂತ್, ಹಳೆಯ ವೈಯಕ್ತಿಕ ವಿಚಾರಗಳನ್ನು ಪ್ರಸ್ತಾಪಿಸಿ ಅಸಭ್ಯ ಪದಗಳಿಂದ ನಿಂದಿಸಿದ್ದಾನೆ ಎಂದು ದೂರಲಾಗಿದೆ. ಉಳಿದ ಇಬ್ಬರೂ ಸೇರಿ ಇನ್ನೂ ಜೋರಾಗಿ ಸ್ಪೀಕರ್ ಹಾಕಿ, “ನಮ್ಮ ತಂಟೆಗೆ ಬಂದರೆ ನಿನ್ನನ್ನು ಜೀವಂತವಾಗಿ ಬಿಡುವುದಿಲ್ಲ” ಎಂದು ಬಹಿರಂಗವಾಗಿ ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಇದನ್ನೂ ಓದಿದ್ದೀರಾ?ಮೂಡಿಗೆರೆ | ಅಪಘಾತ: ಮೂವರು ಸಾವು; ಇಬ್ಬರಿಗೆ ಗಂಭೀರ
ಈ ಸಂದರ್ಭದಲ್ಲಿ ಸ್ಥಳದಲ್ಲಿದ್ದವರು ಮಧ್ಯಪ್ರವೇಶಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದ್ದಾರೆ. ಘಟನೆ ಕುರಿತು ಸಂತ್ರಸ್ತರು ಮೂಡಿಗೆರೆ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಮೊರೆ ಹೋಗಿದ್ದರು. ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ ನ್ಯಾಯಾಲಯದ ಅನುಮತಿಯಂತೆ ಆರೋಪಿಗಳಾದ ಸಂಜಯ್, ಶಮಂತ್, ಸಂತೋಷ್ ಹಾಗೂ ದೀಕ್ಷಿತ್ ವಿರುದ್ಧ ಬಾಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.




