ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲೂಕು ಕಚೇರಿ ಮುಂಭಾಗದಲ್ಲಿ ನಿರ್ಮಿಸಲಾಗಿರುವ ಬೃಹತ್ ತಡೆಗೋಡೆಯಲ್ಲಿ ದೊಡ್ಡ ಬಿರುಕು ಕಾಣಿಸಿಕೊಂಡಿದೆ. ಧಾರಾಕಾರ ಮಳೆ ಮುಂದುವರಿದರೆ ಗೋಡೆ ಸಂಪೂರ್ಣ ಕುಸಿಯುವ ಆತಂಕ ಎದುರಾಗಿದೆ. ತಡೆಗೋಡೆಯ ಕೆಳಭಾಗದಲ್ಲಿ ಮನೆಗಳು ಹಾಗೂ ಅಂಗಡಿಗಳಿದ್ದು, ಸ್ಥಳೀಯರಲ್ಲಿ ಭೂಕುಸಿತದ ಆತಂಕ ನಿರ್ಮಾಣವಾಗಿದೆ.
ಸುಮಾರು 50 ಅಡಿ ಎತ್ತರ ಮತ್ತು 120 ಅಡಿ ಅಗಲ ಹೊಂದಿರುವ ಈ ಬೃಹತ್ ತಡೆಗೋಡೆಯಲ್ಲಿನ ಬಿರುಕು ಹೆಚ್ಚಾಗುತ್ತಿದೆ ಎನ್ನಲಾಗಿದೆ. ಪ್ರಸ್ತುತ ಮಳೆಗಾಲವಾಗಿರುವುದರಿಂದ ಮಳೆಯ ಪ್ರಮಾಣ ಮತ್ತಷ್ಟು ಹೆಚ್ಚಾದರೆ ತಡೆಗೋಡೆ ಕುಸಿದು ಬೀಳುವ ಅಪಾಯವಿದೆ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.
ತಡೆಗೋಡೆಯ ಕೆಳಭಾಗದಲ್ಲಿ ನಾಲ್ಕು ಮನೆಗಳು ಮತ್ತು 18ಕ್ಕೂ ಹೆಚ್ಚು ಅಂಗಡಿಗಳಿವೆ. ಒಂದು ವೇಳೆ ತಡೆಗೋಡೆ ಕುಸಿದರೆ ಈ ಕಟ್ಟಡಗಳಿಗೆ ಗಂಭೀರ ಅಪಾಯ ಎದುರಾಗುವ ಸಾಧ್ಯತೆ ಇದೆ.
ಈ ಪ್ರದೇಶವು ಶೃಂಗೇರಿ ಶಾರದಾ ಮಠಕ್ಕೆ ತೆರಳುವ ಪ್ರಮುಖ ಮಾರ್ಗದಲ್ಲಿದ್ದು, ಪ್ರತಿದಿನ ಸಾರ್ವಜನಿಕರ ನಿರಂತರ ಸಂಚಾರವಿರುತ್ತದೆ. ಹೀಗಾಗಿ ತಡೆಗೋಡೆಯ ಬಿರುಕು ಸ್ಥಳೀಯ ನಿವಾಸಿಗಳು ಮತ್ತು ಸಾರ್ವಜನಿಕರ ಆತಂಕವನ್ನು ಮತ್ತಷ್ಟು ಹೆಚ್ಚಿಸಿದೆ.
2024ರ ಮಳೆಗಾಲದಲ್ಲಿ ಇದೇ ಪ್ರದೇಶದಲ್ಲಿ ಕುಸಿತ ಸಂಭವಿಸಿತ್ತು. ನಂತರ ಸುಮಾರು 2 ಕೋಟಿ ರೂ. ವೆಚ್ಚದಲ್ಲಿ ಹೊಸ ತಡೆಗೋಡೆ ನಿರ್ಮಿಸಲಾಗಿತ್ತು. ಆದರೆ ಕಾಮಗಾರಿ ಪೂರ್ಣಗೊಂಡ ಕೆಲವೇ ತಿಂಗಳಲ್ಲಿ ಗೋಡೆಯಲ್ಲಿ ದೊಡ್ಡ ಬಿರುಕು ಕಾಣಿಸಿಕೊಂಡಿರುವುದು ಕಾಮಗಾರಿಯ ಗುಣಮಟ್ಟದ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ತಡೆಗೋಡೆಯ ಒಳಭಾಗದಲ್ಲಿ ಕೇವಲ ಮಣ್ಣು ತುಂಬಿ ಕಳಪೆ ಕಾಮಗಾರಿ ನಡೆಸಿರುವುದೇ ಈ ಪರಿಸ್ಥಿತಿಗೆ ಕಾರಣ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಅಪಾಯದ ಮುನ್ಸೂಚನೆ ಇದ್ದರೂ ಜಿಲ್ಲಾಡಳಿತ ಇದುವರೆಗೆ ಸೂಕ್ತ ಮುಂಜಾಗ್ರತಾ ಕ್ರಮ ಕೈಗೊಂಡಿಲ್ಲ ಎಂದೂ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ತಡೆಗೋಡೆಯಲ್ಲಿ ಬಿರುಕು ಕಾಣಿಸಿಕೊಂಡಿರುವುದನ್ನು ದೃಢಪಡಿಸಿರುವ ಶೃಂಗೇರಿ ತಹಶೀಲ್ದಾರ್ ಅನುಪ್, ಮುಂಜಾಗ್ರತಾ ಕ್ರಮವಾಗಿ ಕೆಳಭಾಗದಲ್ಲಿರುವ ಮನೆಗಳು ಮತ್ತು ಅಂಗಡಿಗಳನ್ನು ಖಾಲಿ ಮಾಡುವಂತೆ ಸೂಚಿಸಲಾಗಿದೆ ಎಂದು ತಿಳಿಸಿದ್ದಾರೆ.
ಅಗತ್ಯವಿದ್ದರೆ ತಾಲೂಕು ಆಡಳಿತದಿಂದ ಆಶ್ರಯ ಕೇಂದ್ರ ತೆರೆಯಲಾಗುವುದು. ಬೆಂಗಳೂರಿನಿಂದ ತಜ್ಞರ ತಂಡ ಶೃಂಗೇರಿಗೆ ಆಗಮಿಸಲಿದ್ದು, ತಡೆಗೋಡೆಯ ಸ್ಥಿತಿಯನ್ನು ಪರಿಶೀಲಿಸಲಿದೆ. ತಂಡವು ನೀಡುವ ಸಲಹೆಯ ಆಧಾರದಲ್ಲಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದ್ದಾರೆ.



