2023ರ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಶೃಂಗೇರಿ ವಿಧಾನಸಭಾ ಕ್ಷೇತ್ರದ ಅಂಚೆ ಮತ ಎಣಿಕೆಯಲ್ಲಿ ಅಕ್ರಮ ನಡೆದಿದೆ ಎಂದು ಪರಾಜಿತ ಬಿಜೆಪಿ ಅಭ್ಯರ್ಥಿ ಡಿ ಎನ್ ಜೀವರಾಜ್ ಅವರು ಕೋರ್ಟಿನ ಮೊರೆ ಹೋಗಿದ್ದರು. ಅದರ ಮರು ಎಣಿಕೆ ಇದೇ ಮೇ 2ರಂದು ನಡೆದಿದ್ದು, ಫಲಿತಾಂಶ ನಿನ್ನೆ ಪ್ರಕಟವಾಗಿದೆ. 52 ಮತಗಳ ಅಂತರದಿಂದ ಜೀವರಾಜ್ ಗೆದ್ದಿದ್ದಾರೆ. ಮೂರು ವರ್ಷ ಶಾಸಕರಾಗಿದ್ದ ಕಾಂಗ್ರೆಸ್‌ನ ರಾಜೇಗೌಡ ಅನರ್ಹರಾಗಿದ್ದಾರೆ. ಆದರೆ, ಈ ಮತ ಎಣಿಕೆಯಲ್ಲೂ ಅಕ್ರಮ ನಡೆದಿದೆ ಎಂದು ಕಾಂಗ್ರೆಸ್ ಮುಖಂಡರು ಆರೋಪಿಸಿದ್ದಾರೆ. ಈ ಮಧ್ಯೆ ಚುನಾವಣಾಧಿಕಾರಿ ಬಿಜೆಪಿಯ ಜೀವರಾಜ್ ಅವರಿಗೆ ಇಂದು ಶಾಸಕತ್ವದ ಪ್ರಮಾಣಪತ್ರ ಅಧಿಕೃತವಾಗಿ ನೀಡಿದ್ದಾರೆ.
2023ರಲ್ಲಿ ನಡೆದಿದ್ದ ಶೃಂಗೇರಿ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಟಿ ಡಿ ರಾಜೇಗೌಡ, ಬಿಜೆಪಿಯ ಡಿಎನ್ ಜೀವರಾಜ್ ಅವರ ವಿರುದ್ದ ಕೇವಲ 201 ಮತಗಳ ಅಂತರದಿಂದ ಗೆಲುವನ್ನು ಸಾಧಿಸಿದ್ದರು. ಆ ವೇಳೆ, 279 ಅಂಚೆ ಮತಗಳನ್ನು ತಿರಸ್ಕರಿಸಲಾಗಿತ್ತು. ಇದನ್ನು ಜೀವರಾಜ್, ಹೈಕೋರ್ಟಿನಲ್ಲಿ ಪ್ರಶ್ನಿಸಿದ್ದರು. ಏಪ್ರಿಲ್ 2026ರಲ್ಲಿ ಅಂಚೆ ಮತಗಳನ್ನು ಮರುಎಣಿಕೆ ಮಾಡುವಂತೆ ಆದೇಶಿಸಿತ್ತು. ಹೈಕೋರ್ಟ್ ಆದೇಶದ ಪ್ರಕಾರ, ಮೇ 2ರಂದು ಮರುಎಣಿಕೆ ನಡೆಸಲಾಗಿತ್ತು.
279 ಅಂಚೆ ಮತಗಳ ಪೈಕಿ, 255 ಮತಗಳು ಅಸಿಂಧು ಎಂದು ಘೋಷಿಸಲಾಗಿದೆ. ಆ ಮೂಲಕ, ಬಿಜೆಪಿ ಅಭ್ಯರ್ಥಿ ಜೀವರಾಜ್ 52 ಮತಗಳಿಂದ ಗೆದ್ದಿದ್ದಾರೆ.
ಶೃಂಗೇರಿ ಫಲಿತಾಂಶದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್, “ಡಿ ಎನ್ ಜೀವರಾಜ್ ಅವರು ಅಧಿಕಾರಿಗಳನ್ನು ದುರ್ಬಳಕೆ ಮಾಡಿಕೊಂಡಿರುವುದು ಸ್ಪಷ್ಟವಾಗುತ್ತಿದೆ. ಪೋಸ್ಟಲ್ ಮತಗಳಲ್ಲಿ ಭಾರೀ ಅಕ್ರಮ ನಡೆದಿದೆ ಎನ್ನುವ ಮಾಹಿತಿಯಿದೆ. ಮತ ಎಣಿಕೆ ಏಜೆಂಟ್ ಗಳಿಂದ ಅಧಿಕಾರಿಗಳು ಸಹಿ ಹಾಕಿಸಿಕೊಂಡಿದ್ದರು. ಇದಾದ ಬಳಿಕ ಅಂಚೆ ಮತಗಳನ್ನು ತಿದ್ದಿದ್ದಾರೆ” ಎಂದು ಗಂಭೀರ ಆರೋಪ ಮಾಡಿದ್ದಾರೆ. ಅಷ್ಟೇ ಅಲ್ಲ “ನಾವು ಸುಮ್ಮನೆ ಕೈಕಟ್ಟಿ ಕೂರುವುದಿಲ್ಲ, ಕೋರ್ಟ್ ಮೂಲಕ ಯಾವ ಯಾವ ಆಯ್ಕೆಯಿದೆಯೋ ಎಲ್ಲವನ್ನೂ ಪರಿಶೀಲಿಸಿ ಮುಂದಕ್ಕೆ ಹೋಗುತ್ತೇವೆ” ಎಂದು ಹೇಳುವ ಮೂಲಕ ಕಾನೂನು ಹೋರಾಟದ ಸೂಚನೆ ನೀಡಿದ್ದಾರೆ.
ಚಿಕ್ಕಮಗಳೂರಿನ ಕಾಂಗ್ರೆಸ್ ಮುಖಂಡ ಸುಧೀರ್ ಕುಮಾರ್ ಮುರೊಳ್ಳಿ ಅವರು ಈ ಫಲಿತಾಂಶದ ಬಗ್ಗೆ ಭಾರೀ ಆರೋಪ ಮಾಡಿದ್ದಾರೆ. “ಮತಪತ್ರಗಳನ್ನು ಇಟ್ಟಿದ್ದ ಸ್ಟ್ರಾಂಗ್ ರೂಂ ಭದ್ರತೆ ಬಗ್ಗೆ ಅವರು ಅನುಮಾನ ವ್ಯಕ್ತಪಡಿಸಿದ್ದರು. ಸರಿಯಾದ ಕಾಂಪೌಂಡ್ ಇಲ್ಲದ ಹಳೆಯ ಕಟ್ಟಡದಲ್ಲಿ ಮತಪೆಟ್ಟಿಗೆಗಳನ್ನು ಇಡಲಾಗಿತ್ತು. ಹೀಗಾಗಿ ಅಕ್ರಮ ನಡೆದಿರುವ ಸಾಧ್ಯತೆಯಿದೆ ಎಂದು ಅವರು ಆರೋಪಿಸಿದ್ದಾರೆ. ಇಪ್ಪತ್ತೈದು ಮತಗಳಿರುವ ಬಂಡಲ್ ಅನ್ನು ಎಣಿಕೆಗೆ ಪರಿಗಣಿಸಿಲ್ಲ ಎಂಬ ಆರೋಪವೂ ಕೇಳಿಬಂದಿದೆ.
ಇನ್ನೂ ಎರಡು ಕ್ಷೇತ್ರದ ಫಲಿತಾಂಶ ಬಾಕಿಯಿದೆ
ಬೆಂಗಳೂರು ನಗರ ವ್ಯಾಪ್ತಿಯ ಜಯನಗರ ವಿಧಾನಸಭಾ ಕ್ಷೇತ್ರದಲ್ಲೂ ಇದೇ ರೀತಿಯ ಆರೋಪ ಕೇಳಿ ಬಂದಿತ್ತು. ಆರಂಭದಲ್ಲಿ ಕಾಂಗ್ರೆಸ್‌ನ ಸೌಮ್ಯಾ ರೆಡ್ಡಿ 160 ಮತಗಳಿಂದ ಗೆಲುವು ಸಾಧಿಸಿದ್ದಾರೆ ಎಂದು ಘೋಷಿಸಲಾಗಿತ್ತು. ಈ ಫಲಿತಾಂಶವನ್ನು ಒಪ್ಪದ ಬಿಜೆಪಿ, ಮರುಎಣಿಕೆಗೆ ಪಟ್ಟು ಹಿಡಿಯಿತು. ಮರು ಎಣಿಕೆಯಲ್ಲಿ ಬಿಜೆಪಿಯ ರಾಮಮೂರ್ತಿ ಕೇವಲ ಹದಿನಾರು ಮತಗಳಿಂದ ಗೆಲುವು ಸಾಧಿಸಿದ್ದಾರೆ ಎಂದು ಚುನಾವಣಾ ಆಯೋಗ ಘೋಷಿಸಿತ್ತು.
ಚುನಾವಣಾ ಅಧಿಕಾರಿಗಳನ್ನು ಬಿಜೆಪಿ ದುರುಪಯೋಗ ಪಡಿಸಿಕೊಂಡಿದೆ, ಇವರ ಒತ್ತಡಕ್ಕೆ ಅಧಿಕಾರಿಗಳು ಮಣಿದಿದ್ದಾರೆ. ʼಪೋಸ್ಟಲ್ ವೋಟ್’ನಲ್ಲಿ ಅಕ್ರಮ ನಡೆದಿದೆ. ಬಿಜೆಪಿ ಗೆಲುವನ್ನು ಪ್ರಶ್ನಿಸಿ, ಕಾಂಗ್ರೆಸ್, ಕೋರ್ಟ್ ಮೆಟ್ಟಲೇರಿತ್ತು. ಆದರೆ ಈ ಪ್ರಕರಣ ಇನ್ನೂ ಇತ್ಯರ್ಥವಾಗಿಲ್ಲ.
ಚಿಕ್ಕಮಗಳೂರು ಎಂಎಲ್‌ಸಿ ಚುನಾವಣೆಯಲ್ಲಿ ಪರಾಜಿತರಾದ ಕಾಂಗ್ರೆಸ್‌ನ ಗಾಯತ್ರಿ ಶಾಂತೇಗೌಡ v/s ಎಂ ಕೆ ಪ್ರಾಣೇಶ್ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಮರು ಮತ ಎಣಿಕೆ ನಡೆಸಲು ನಿರ್ದೇಶನ ನೀಡಿತ್ತು. ಮರು ಮತ ಎಣಿಕೆ ನಡೆದು ಫಲಿತಾಂಶವನ್ನು ಮುಚ್ಚಿದ ಲಕೋಟೆಯಲ್ಲಿ ಸುಪ್ರೀಂಗೆ ಸಲ್ಲಿಕೆಯಾಗಿ ವರ್ಷ ಆಗುತ್ತಾ ಬಂತು. ಇನ್ನೂ ಫಲಿತಾಂಶ ಪ್ರಕಟವಾಗಿಲ್ಲ. ಪ್ರಾಣೀಶ್ ಅವರು ನಾಲ್ಕು ವರ್ಷಗಳಿಂದ ವಿಧಾನಪರಿಷತ್ತಿನ ಉಪಸಭಾಪತಿ ಆಗಿ ಅಧಿಕಾರ ಅನುಭವಿಸುತ್ತಿದ್ದಾರೆ.
ಐದು ವರ್ಷದ ಅವಧಿಗೆ ಆಯ್ಕೆಯಾಗುವ ಶಾಸಕರು ಸಂಸದರ ಚುನಾವಣೆಯಲ್ಲಿ ಮತ ಎಣಿಕೆ/ ಆಯ್ಕೆಯ ಬಗ್ಗೆ ತಕರಾರುಗಳಿದ್ದಲ್ಲಿ ಇಂತಿಷ್ಟು ದಿನಗಳ ಒಳಗಾಗಿ ಅರ್ಜಿ ಸಲ್ಲಿಸಬೇಕು ಎಂಬ ನಿಯಮ ಇದೆ. ಆದರೆ, ಕೋರ್ಟ್‌ನಲ್ಲಿ ವಿಚಾರಣೆ ನಡೆದು ತೀರ್ಪು ಬರಲು ಯಾವುದೇ ಕಾಲಮಿತಿ ಇಲ್ಲ. ಕೆಲವು ಪ್ರಕರಣಗಳ ತೀರ್ಪು ಹೊರ ಬರುವ ವೇಳೆಗೆ ಮತ್ತೊಂದು ಚುನಾವಣೆ ಬಂದಿರುತ್ತದೆ.
ಕೆಎಸ್ ಮಂಜುನಾಥಗೌಡ v/s ಶಾಸಕ ಕೆ ವೈ ನಂಜೇಗೌಡ ಪ್ರಕರಣ
ಮಾಲೂರಿನ ವಿಧಾನಸಭಾ ಕ್ಷೇತ್ರದ ಬಿಜೆಪಿಯ ಪರಾಜಿತ ಅಭ್ಯರ್ಥಿ ಕೆ ಎಸ್ ಮಂಜುನಾಥಗೌಡ v/s ಶಾಸಕ ಕೆ ವೈ ನಂಜೇಗೌಡ ಪ್ರಕರಣದಲ್ಲಿ ನಂಜೇಗೌಡ ಅವರ ವಿರುದ್ಧ ನಾಮಪತ್ರ ಸಲ್ಲಿಸುವಾಗ ಸಂಪೂರ್ಣ ಆಸ್ತಿಯ ವಿವರ ಬಹಿರಂಗಪಡಿಸಿಲ್ಲ ಎಂಬ ಆರೋಪ ಮಾಡಲಾಗಿತ್ತು. ವಿಚಾರಣೆ ನಡೆಸಿದ ಕರ್ನಾಟಕ ಹೈಕೋರ್ಟ್ ಕೆ ವೈ ನಂಜೇಗೌಡ ಅವರನ್ನು ಅನರ್ಹಗೊಳಿಸಿತ್ತು. ಆದರೆ, ಹೈಕೋರ್ಟ್ ಆದೇಶಕ್ಕೆ ಸುಪ್ರೀಂ ಕೋರ್ಟ್‌ನಿಂದ ತಡೆ ಸಿಕ್ಕಿದೆ. ಹಾಗಾಗಿ ನಂಜೇಗೌಡ ಶಾಸಕರಾಗಿ ಮುಂದುವರಿದ್ದಾರೆ.




