ಈ ದಿನ ಸಂಪಾದಕೀಯ | ಬೆಂಗಳೂರನ್ನು ನರಕವನ್ನಾಗಿಸುತ್ತಿರುವುದು ಮಳೆಯಲ್ಲ, ದುರ್ಬಲ ಆಡಳಿತ

Date:

ಮೊದಲ ಮಳೆಯೇ ನಗರವನ್ನು ಮೊಣಕಾಲೂರಿಸುವ ಸ್ಥಿತಿಗೆ ತಳ್ಳಿದರೆ, ಮುಂದಿನ ಮುಂಗಾರು ಇನ್ನೂ ಭೀಕರವಾಗುವ ಸಾಧ್ಯತೆ ಇದೆ. ಕಾಂಗ್ರೆಸ್‌ ಸರ್ಕಾರ, ಈ ಮಳೆಯನ್ನು, ಇದರಿಂದಾದ ಅವಘಡವನ್ನು ಒಂದು ಎಚ್ಚರಿಕೆ ಎಂದು ಸ್ವೀಕರಿಸಬೇಕು.  ಬೆಂಗಳೂರನ್ನು ನರಕವನ್ನಾಗಿಸುತ್ತಿರುವುದು ಮಳೆಯಲ್ಲ, ದುರ್ಬಲ ಆಡಳಿತ ಎನ್ನುವುದನ್ನು ಮೊದಲು ಅರ್ಥ ಮಾಡಿಕೊಳ್ಳಬೇಕು.

ಬಿರುಬೇಸಿಗೆಯ ಉರಿಬಿಸಿಲಿನಿಂದ ಬೆಂದುಹೋಗಿದ್ದ ಬೆಂಗಳೂರಿಗೆ ಸುರಿದ ಮುಂಗಾರು ಪೂರ್ವ ಮಳೆ ತಂಪಾಗಿಸಿತು. ಆದರೆ ಏಪ್ರಿಲ್ ತಿಂಗಳಲ್ಲಿ ಇದುವರೆಗೆ ಕಂಡು ಕೇಳದ ಅತಿ ಹೆಚ್ಚು ಮಳೆ ಸುರಿದು, 10 ಜನರ ಪ್ರಾಣ ಕಸಿದುಕೊಂಡಿತು. ದೇಶದ ಐಟಿ ಹಬ್ ಎಂದು ಹೆಸರಾದ ಬೆಂಗಳೂರು, ಕೇವಲ ಒಂದೇ ಒಂದು ಮಳೆಗೆ ಅಸ್ತವ್ಯಸ್ತವಾಯಿತು. ಜನರ ಜೀವನ ಕಷ್ಟಕ್ಕೆ ಸಿಲುಕಿತು.

- Advertisement -

ದಶಕಗಳ ಹಿಂದೆ ಬೆಂಗಳೂರು, ಹಿತಕರ ಹವೆಗೆ ಹೆಸರುವಾಸಿಯಾಗಿತ್ತು. ಬೇಸಿಗೆಯಲ್ಲೂ ಬೆಂಗಳೂರಿನ ವಾತಾವರಣ ತಣ್ಣಗಿರುತ್ತಿತ್ತು. ದೇಶದ ನಾನಾ ಭಾಗಗಳಿಂದ ಜನ ಬೆಂಗಳೂರನ್ನು ಬಯಸಿ ಬರುತ್ತಿದ್ದರು. ಆದರೆ, ಬರಬರುತ್ತಾ ಬೆಂಗಳೂರಿನ ಬದುಕು ನರಕಸದೃಶವಾಗಿದೆ. ಅದಕ್ಕೆ ಮುಖ್ಯ ಕಾರಣ, ಇಡೀ ರಾಜ್ಯಕ್ಕೆ ಬೆಂಗಳೂರು ಕೇಂದ್ರವಾಗಿರುವುದು. ಐಟಿ-ಬಿಟಿ, ಕೈಗಾರಿಕೆಗಳು, ಕಚೇರಿಗಳು, ರಾಜಕಾರಣ, ಶಿಕ್ಷಣ, ಉದ್ಯೋಗ, ವಲಸೆ- ಎಲ್ಲಕ್ಕೂ ಬೆಂಗಳೂರೇ ಆಗಬೇಕಾಗಿದೆ. ಅಷ್ಟೇ ಅಲ್ಲ, ಬೆಂಗಳೂರು ಈಗ ನ್ಯಾಷನಲ್ ಕ್ಯಾಪಿಟಲ್ ಆಗುವತ್ತ ದಾಪುಗಾಲು ಹಾಕುತ್ತಿದೆ. ವಾಹನ ಸಂಚಾರ ಸಹಿಸಲಸಾಧ್ಯವಾದ ಹಂತ ತಲುಪಿದೆ. ಮನುಷ್ಯರಿಗಿಂತ ವಾಹನಗಳ ಸಂಖ್ಯೆ ಹೆಚ್ಚಾಗಿದೆ. ಧೂಳು, ಹೊಗೆ, ಧಗೆಯಿಂದಾಗಿ ಬೆಂಗಳೂರು ಬದುಕುವುದಕ್ಕೆ ಯೋಗ್ಯವೆ ಎನ್ನುವ ಪ್ರಶ್ನೆಗಳು ಮುನ್ನೆಲೆಗೆ ಬಂದಿವೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಕಲಬುರಗಿ | ‘ನಮ್ಮನ್ನ ಎಲ್ಲಿಗೆ ಕಳುಹಿಸುತ್ತೀರಿ?’: ತಗ್ಗಿನ ಬೇಲಿಯ...

92ಕ್ಕೂ ಅಧಿಕ ಸ್ಲಂ ಕುಟುಂಬಗಳ ಬದುಕು ಕೇವಲ ಜಮೀನಿನ ಹಕ್ಕಿನ ಪ್ರಶ್ನೆಯಲ್ಲ; ಅವರ ಸುರಕ್ಷಿತ ಓಡಾಟ, ಕುಡಿಯುವ ನೀರು ಹಾಗೂ ನಿತ್ಯದ ಬದುಕಿನ ಹಕ್ಕಿನ ಪ್ರಶ್ನೆಯೂ ಹೌದು. ನ್ಯಾಯಾಲಯದ ವಿಚಾರಣೆ ಅಂತಿಮಗೊಳ್ಳುವವರೆಗೆ ಯಾವುದೇ...

ಚುನಾವಣಾ ಆಯೋಗದ ಸಭೆ: ಪರಿಹಾರವಲ್ಲ, ತೇಪೆ ಹಚ್ಚುವ ಕಾರ್ಯಕ್ರಮ

ಅವೈಜ್ಞಾನಿಕ 'SIR' ಪ್ರಕ್ರಿಯೆ ಮತ್ತು ಆಯೋಗದೊಳಗಿನ ಭಿನ್ನಾಭಿಪ್ರಾಯಗಳು ಸಾರ್ವಜನಿಕವಾಗಿ ಬಯಲಾದ ಬೆನ್ನಲ್ಲೇ ಬಿಡುಗಡೆಯಾದ ಚುನಾವಣಾ ಆಯೋಗದ ಪತ್ರಿಕಾ ಪ್ರಕಟಣೆ, ತಪ್ಪುಗಳನ್ನು ತಿದ್ದುವ ಬದಲು ವ್ಯವಸ್ಥೆಯ ಲೋಪಗಳಿಗೆ ತೇಪೆ ಹಚ್ಚುವ ಯತ್ನದಂತೆ ಕಾಣುತ್ತಿದೆ. ದೇಶದ ಇತಿಹಾಸದಲ್ಲೇ...

ಹೊರಟ್ಟಿ ಅವರ ಹೋರಾಟದ ಬದುಕು ಮತ್ತು ಅವರ ಭಕ್ತ...

ಗ್ಯಾರಂಟಿ ಯೋಜನೆಗಳಿಂದ ಕೂಲಿ ಕಾರ್ಮಿಕರು ಸಿಗುತ್ತಿಲ್ಲವೆಂಬ ಬಸವರಾಜ ಹೊರಟ್ಟಿ ಅವರ ಹೇಳಿಕೆ ಮತ್ತು ಅದಕ್ಕೆ ಸಿಕ್ಕ ಸಾರ್ವಜನಿಕ ಚಪ್ಪಾಳೆಗಳು, ಕೇವಲ ಹಸಿವನ್ನೇ ಶ್ರಮದ ಇಂಧನವನ್ನಾಗಿ ನೋಡುವ ಸಮಾಜದ ಕ್ರೂರ ಮನಸ್ಥಿತಿಯನ್ನು ಅನಾವರಣಗೊಳಿಸುತ್ತವೆ. ಬಸವರಾಜ ಹೊರಟ್ಟಿ...

ಬೆಂಗಳೂರು ನಗರವು ಇಂದು ಅತ್ಯಂತ ವಿಸ್ತಾರವಾಗಿ ಬೆಳೆದಿದೆ. ಕೆರೆ-ಕಟ್ಟೆ, ಬೆಟ್ಟ-ಗುಡ್ಡಗಳನ್ನು ನುಂಗಿ ಬೃಹದಾಕಾರವಾಗಿ ಬೆಳೆಯುತ್ತಲೇ ಇದೆ. 70ರ ದಶಕದಲ್ಲಿದ್ದ ನಗರಯೋಜನೆ ಈಗ ಫೈಲ್‌ಗಳಿಗಷ್ಟೇ ಸೀಮಿತವಾಗಿದೆ. ಹೀಗಿರುವಾಗ ಒಂದೇ ಒಂದು ಬಿರುಮಳೆಗೂ ತಗ್ಗು ಪ್ರದೇಶಗಳು ಕೆರೆಗಳಂತಾಗುತ್ತವೆ. ಹಿಂದೆ ಒಂದು ಕಾಲದಲ್ಲಿ ಬೆಂಗಳೂರಿನಲ್ಲಿ ಸಾವಿರಕ್ಕೂ ಹೆಚ್ಚು ಕೆರೆಗಳಿದ್ದವು. 60ರ ದಶಕದಲ್ಲಿ ಕೆರೆಗಳ ಸಂಖ್ಯೆ 280ಕ್ಕೆ ಇಳಿಯಿತು. ಈಗ 50 ಕೂಡ ಇಲ್ಲ. ಕೆರೆಗಳಿದ್ದ ಜಾಗವೆಲ್ಲ ಬಡಾವಣೆಗಳಾಗಿವೆ. ಅಂತಹ ಜನವಸತಿ ಪ್ರದೇಶಗಳು ಮಳೆಗಾಲದಲ್ಲಿ ಪ್ರವಾಹಕ್ಕೆ ಸಿಲುಕಿ, ತೇಲುತ್ತವೆ. ಮಳೆ ನೀರು ತುಂಬಿದ ಅಂಡರ್‌ಪಾಸ್‌ಗಳು ಮೃತ್ಯುಕೂಪಗಳಾಗುತ್ತವೆ. ರಸ್ತೆ ಗುಂಡಿಗಳು, ರಸ್ತೆ ಪಕ್ಕದ ಮರಗಳು, ವಿದ್ಯುತ್ ಕಂಬಗಳು ಮುರಿದುಬೀಳುವುದು, ಹಲವು ಜೀವಗಳನ್ನು ಬಲಿ ಪಡೆಯುವುದು ಸಾಮಾನ್ಯವಾಗಿದೆ.

Advertisements

ಇದನ್ನು ಓದಿದ್ದೀರಾ?: ಬಿಜೆಪಿ ಬೆವರಿಳಿಸಿದ ಬಂಗಾಳದ ನವದುರ್ಗೆಯರು

ಬೆಂಗಳೂರಿನ ಜನ ಮಳೆಗಾಲದಲ್ಲಿ ಏನೆಲ್ಲ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೋ ಅದಕ್ಕೆಲ್ಲ ಕಾರಣ ಗ್ರೇಟರ್ ಬೆಂಗಳೂರು‌ ಪ್ರಾಧಿಕಾರ ಮತ್ತು ರಾಜ್ಯ ಸರ್ಕಾರ. ಬೆಂಗಳೂರಿನ ಯಾವುದೇ ಪ್ರದೇಶಕ್ಕೆ ಹೋದರೂ, ಅಭಿವೃದ್ಧಿ ನೆಪದ ಕಾಮಗಾರಿ ಎದ್ದುಕಾಣುತ್ತದೆ. ರಸ್ತೆ ಅಗೆದಿರುವುದು, ಅರ್ಧಂಬರ್ಧ ಕೆಲಸ ಮಾಡಿ ಹಾಗೆ ಬಿಟ್ಟಿರುವುದು, ಗುಂಡಿ-ಕೆಸರುಗಳಿಂದ ಓಡಾಡಲು ಕಷ್ಟವಾಗುವುದು- ಸಾಮಾನ್ಯವಾಗಿದೆ. ನಡೆಯುವ ಪ್ರತಿ ಕಾಮಗಾರಿಯಲ್ಲೂ ಗುತ್ತಿಗೆದಾರರು, ಅಧಿಕಾರಿಗಳು ಹಾಗೂ ಅಧಿಕಾರಸ್ಥರ ಲಂಚಾವತಾರವಿದೆ. ಕೋಟಿ ಕೋಟಿ ರೂಪಾಯಿಗಳ ಭ್ರಷ್ಟಾಚಾರವಿದೆ. ಅದನ್ನು ಗುತ್ತಿಗೆದಾರರ ಸಂಘದ ಪದಾಧಿಕಾರಿಗಳೇ ಬಹಿರಂಗವಾಗಿ ಹೇಳಿಕೊಂಡಿದ್ದೂ ಇದೆ. ಇವರೆಲ್ಲ ಸೇರಿಕೊಂಡು ಒಂದು ಕಾಲದ ಸುಂದರ ನಗರವನ್ನು ಮೃತ್ಯುಕೂಪವನ್ನಾಗಿ ಮಾರ್ಪಡಿಸಿದ್ದಾರೆ.

ಗ್ರೇಟರ್ ಬೆಂಗಳೂರು ಅಥಾರಿಟಿ ಅಡಿಯಲ್ಲಿ ವಿವಿಧ ಸಂಸ್ಥೆಗಳನ್ನು ಒಗ್ಗೂಡಿಸಲಾಗಿದೆ ಎನ್ನಲಾದರೂ, ಅವುಗಳ ನಡುವಿನ ಸಮನ್ವಯದ ಕೊರತೆ, ಈಗ ಸುರಿಯುತ್ತಿರುವ ಮಳೆಯಲ್ಲಿ ಬಯಲಾಗಿದೆ. ಚಿಂತಾಜನಕ ಸಂಗತಿ ಎಂದರೆ, ಬೆಂಗಳೂರು ಇಂದಿಗೂ ಓಬಿರಾಯನ ಕಾಲದ ಅಭಿವೃದ್ಧಿ ಯೋಜನೆಯನ್ನೇ ಆಧಾರವಾಗಿಸಿಕೊಂಡಿದೆ. 2026ರ ಸವಾಲುಗಳನ್ನು ದಶಕಗಳ ಹಿಂದಿನ ನಕ್ಷೆಯೊಂದಿಗೆ ಎದುರಿಸಲು ನೋಡಿ ನಗೆಪಾಟಲಿಗೀಡಾಗುತ್ತಿದೆ. ಸಮಸ್ಯೆಗಳೇನು ಎಂಬುದು ಎಲ್ಲರಿಗೂ ಗೊತ್ತಿದೆ. ಇಲ್ಲದಿರುವುದು ಅವುಗಳನ್ನು ಎದುರಿಸುವ ರಾಜಕೀಯ ಮತ್ತು ಆಡಳಿತಾತ್ಮಕ ಇಚ್ಛಾಶಕ್ತಿ.

ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದು, ಇದೇ ಮೇ 20ಕ್ಕೆ ಮೂರು ವರ್ಷಗಳಾಗುತ್ತದೆ. ಇದೇ ಸಮಯದಲ್ಲಿ ಮಳೆ ಬಿದ್ದು ನಗರವಾಸಿಗಳ ಬದುಕು ನರಕವಾಗಿದೆ. ಆದರೆ, ಜಿಬಿಎ ಅಧ್ಯಕ್ಷ ಸಿದ್ದರಾಮಯ್ಯನವರು ಮತ್ತು ಬೆಂಗಳೂರು ನಗರ ಅಭಿವೃದ್ಧಿ ಖಾತೆ ಸಚಿವ ಡಿ.ಕೆ. ಶಿವಕುಮಾರ್ ಅವರ ನಡುವೆ ಅಧಿಕಾರ ಹಂಚಿಕೆಯ ರಾಜಕೀಯ ನಾಟಕ- ಈ ಕ್ಷಣಕ್ಕೂ ಚಾಲ್ತಿಯಲ್ಲಿದೆ. ಶಿವಕುಮಾರ್ ಅವರನ್ನು ಮುಖ್ಯಮಂತ್ರಿ ಪದವಿಯಿಂದ ದೂರವಿಡಬೇಕೆಂಬ ಏಕಮಾತ್ರ ಕಾರಣದಿಂದ, ಅವರು ಕೇಳಿದ್ದನ್ನು ಕೊಡಲಾಗಿದೆ. ಅವರು ಮಾಡಿದ್ದನ್ನು ಮೌನವಾಗಿದ್ದು ಸಮ್ಮತಿಸಲಾಗುತ್ತಿದೆ. ಸಿದ್ದರಾಮಯ್ಯನವರು ಸಿಎಂ ಕುರ್ಚಿ ತಂಟೆಗೆ ಬರದಿದ್ದರೆ ಸಾಕು ಎಂದು ಸುಮ್ಮನಾದಂತಿದೆ. ವಿರೋಧ ಪಕ್ಷಗಳು ಪ್ರಶ್ನಿಸುವ ಮೂಲಭೂತ ಕರ್ತವ್ಯವನ್ನೇ ಮರೆತು ಕೂತಿವೆ.

ಜಿಬಿಎಗೆ ಚುನಾವಣೆಗಳಾಗಿ ಹನ್ನೊಂದು ವರ್ಷಗಳಾದರೂ, ಜೂನ್‌ 30ರೊಳಗೆ ಚುನಾವಣೆ ಮುಗಿಸಬೇಕೆಂದು ಸುಪ್ರೀಂ ಕೋ‍ರ್ಟ ಸೂಚಿಸಿದ್ದರೂ, ಚುನಾವಣೆ ನಡೆಯುವುದೇ ಅನುಮಾನವಾಗಿದೆ. ನಗರದ ಧಾವಂತದ ಬದುಕಿಗೆ ಒಗ್ಗಿಹೋಗಿರುವ ಜನರಿಗೆ ಶಾಸಕರು-ಸಂಸದರನ್ನು ಹುಡುಕಲು, ಸಮಸ್ಯೆ ಹೇಳಿಕೊಳ್ಳಲು ಸಮಯವಿಲ್ಲ. ಇತ್ತೀಚಿನ ದಿನಗಳಲ್ಲಿ ಆಳುವ ಸರ್ಕಾರದ ವಿರುದ್ಧ ಬೀದಿಗಿಳಿದು ಪ್ರಶ್ನಿಸುವ, ಪ್ರತಿಭಟಿಸುವ ಕೆಚ್ಚು ಕೂಡ ಜನರಲ್ಲಿ ಕಾಣುತ್ತಿಲ್ಲ. ಜನರ ಈ ಹೊಂದಿಕೊಂಡು ಹೋಗುವ ಗುಣ ಅಧಿಕಾರಿಗಳು ಮತ್ತು ಅಧಿಕಾರಸ್ಥ ರಾಜಕಾರಣಿಗಳಿಗೆ ಅನುಕೂಲಕರ ಸನ್ನಿವೇಶವನ್ನು ಸೃಷ್ಟಿಸುತ್ತಿದೆ.

ಬೆಂಗಳೂರು ನಗರ ಅಭಿವೃದ್ಧಿ ಖಾತೆ ಸಚಿವ ಡಿ.ಕೆ. ಶಿವಕುಮಾರ್, ದೂರದೃಷ್ಟಿಯುಳ್ಳ ವ್ಯಕ್ತಿ, ಪ್ರಭಾವಿ ಸಚಿವ, ಧೈರ್ಯಸ್ಥ ಎನ್ನುವವರಿದ್ದಾರೆ. ಅದನ್ನು ಅವರು ಸಾಬೀತುಪಡಿಸುವವರಂತೆ, ಸ್ಕೈ-ಡೆಕ್, ಎರಡನೇ ವಿಮಾನ ನಿಲ್ದಾಣ, ಸುರಂಗರಸ್ತೆ, ಫ್ಲೈ ಓವರ್, ಮೆಟ್ರೋ ಕುರಿತು ಕನಸುಗಾರನಂತೆ ಮಾತನಾಡುತ್ತಾರೆ. ಸಿಲಿಕಾನ್ ಸಿಟಿಯನ್ನು ವಿಶ್ವಮಟ್ಟಕ್ಕೆ ಏರಿಸಿ ಬ್ರ್ಯಾಂಡ್ ಬೆಂಗಳೂರು-ವೈಬ್ರ್ಯಾಂಟ್‌ ಬೆಂಗಳೂರು ಮಾಡುತ್ತೇನೆ ಎನ್ನುತ್ತಾರೆ. ಮಾತೆತ್ತಿದರೆ ಸಾವಿರಾರು ಕೋಟಿಗಳ ಹೊಸ ಹೊಸ ಯೋಜನೆಗಳನ್ನು ಕಣ್ಮುಂದೆ ತಂದು ನಿಲ್ಲಿಸುತ್ತಾರೆ. ಎದುರಾಗುವ ಅವಘಡಗಳನ್ನು ಅವಕಾಶವನ್ನಾಗಿ ಮಾರ್ಪಡಿಸುತ್ತಾರೆ. ಆದರೆ, ಜನರ ಮೂಲಭೂತ ಸಮಸ್ಯೆಗಳನ್ನು ಪ್ರಜ್ಞಾಪೂರ್ವಕವಾಗಿಯೇ ಮರೆಯುತ್ತಾರೆ. ಇಲ್ಲವೇ ಅಧಿಕಾರಿಗಳ ಮೇಲೆ ಹಾಕಿ, ನುಣುಚಿಕೊಳ್ಳುತ್ತಾರೆ.

ಇದನ್ನು ಓದಿದ್ದೀರಾ?: ಮೋದಿ ದೋಣಿ ವಿಹಾರ ಮತ್ತು ಹೊತ್ತಿ ಉರಿಯುತ್ತಿರುವ ಮಣಿಪುರ

ಮೊದಲ ಮಳೆಯೇ ನಗರವನ್ನು ಮೊಣಕಾಲೂರಿಸುವ ಸ್ಥಿತಿಗೆ ತಳ್ಳಿದರೆ, ಮುಂದಿನ ಮುಂಗಾರು ಇನ್ನೂ ಭೀಕರವಾಗುವ ಸಾಧ್ಯತೆ ಇದೆ. ಕಾಂಗ್ರೆಸ್‌ ಸರ್ಕಾರ, ಈ ಮಳೆಯನ್ನು, ಇದರಿಂದಾದ ಅವಘಡವನ್ನು ಒಂದು ಎಚ್ಚರಿಕೆ ಎಂದು ಸ್ವೀಕರಿಸಬೇಕು. ಸತ್ತವರಿಗೆ ಪರಿಹಾರ ಘೋಷಿಸುವುದಲ್ಲ, ಬದುಕಿರುವವರಿಗೆ ನೆಮ್ಮದಿಯಿಂದ ಬದುಕುವ ವಾತಾವರಣ ಸೃಷ್ಟಿಸಬೇಕು. ಬೆಂಗಳೂರನ್ನು ನರಕವನ್ನಾಗಿಸುತ್ತಿರುವುದು ಮಳೆಯಲ್ಲ, ದುರ್ಬಲ ಆಡಳಿತ ಎನ್ನುವುದನ್ನು ಮೊದಲು ಅರ್ಥ ಮಾಡಿಕೊಳ್ಳಬೇಕು. ಅರ್ಥ ಮಾಡಿಕೊಳ್ಳದಿದ್ದರೆ, ಕಾಂಗ್ರೆಸ್ ನಾಯಕರು ಮುಂದಿನ ಚುನಾವಣೆಯಲ್ಲಿ ಮತದಾರರನ್ನು ಎದುರಿಸುವುದು ಕಷ್ಟವಿದೆ.   

WhatsApp Image 2025 11 17 at 3.23.18 PM
ಈ ದಿನ ಸಂಪಾದಕೀಯ
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚುನಾವಣಾ ಆಯೋಗದ ಸಭೆ: ಪರಿಹಾರವಲ್ಲ, ತೇಪೆ ಹಚ್ಚುವ ಕಾರ್ಯಕ್ರಮ

ಅವೈಜ್ಞಾನಿಕ 'SIR' ಪ್ರಕ್ರಿಯೆ ಮತ್ತು ಆಯೋಗದೊಳಗಿನ ಭಿನ್ನಾಭಿಪ್ರಾಯಗಳು ಸಾರ್ವಜನಿಕವಾಗಿ ಬಯಲಾದ ಬೆನ್ನಲ್ಲೇ...

ಮಳೆ ಅಬ್ಬರ: ಉತ್ತರ ಪ್ರದೇಶದಲ್ಲಿ 10 ಮಂದಿ ಸಾವು; ಒಡಿಶಾದಲ್ಲಿ ಪ್ರವಾಹ

ದೇಶದ ಹಲವು ರಾಜ್ಯಗಳಲ್ಲಿ ಮುಂಗಾರು ಮಳೆಯ ಆರ್ಭಟ ಮುಂದುವರಿದಿದ್ದು, ಉತ್ತರ ಪ್ರದೇಶ...

26 ಬಾರಿ ಸೋತರೂ ಕುಗ್ಗದ ಛಲ; 59ನೇ ವಯಸ್ಸಿನಲ್ಲಿ ಸರ್ಕಾರಿ ಶಿಕ್ಷಕ ಹುದ್ದೆ ಪಡೆದ ವೃದ್ಧ

ಸರಿಯಾದ ಪ್ರಯತ್ನ ಮತ್ತು ಛಲವಿದ್ದರೆ ವಯಸ್ಸು ಕೇವಲ ಒಂದು ಸಂಖ್ಯೆಯಷ್ಟೇ ಎಂಬುದನ್ನು...

1,870 ಕೋಟಿ ರೂ. ದೇಣಿಗೆ ದಂಧೆ ಆರೋಪ: ಗುಜರಾತ್‌ನ 3 ರಾಜಕೀಯ ಪಕ್ಷಗಳ ಅಕ್ರಮ ಬಯಲು

ಗುಜರಾತ್‌ನಲ್ಲಿ ನೋಂದಾಯಿತವಾಗಿದ್ದ, ಆದರೆ ಮಾನ್ಯತೆ ಪಡೆಯದ ಮೂರು ರಾಜಕೀಯ ಪಕ್ಷಗಳು ಆದಾಯ...