ಬಹುಜನ ಸಮಾಜ ಪಕ್ಷದ (ಬಿಎಸ್‌ಪಿ) ರಾಷ್ಟ್ರೀಯ ಸಂಚಾಲಕ ಹುದ್ದೆಯಿಂದ ಸೋದರಳಿಯ ಆಕಾಶ್ ಆನಂದ್ ಅವರನ್ನು ವಜಾಗೊಳಿಸಿದ ಕೇವಲ ಒಂದು ತಿಂಗಳ ನಂತರ, ಬಿಎಸ್‌ಪಿ ಮುಖ್ಯಸ್ಥೆ ಮಾಯಾವತಿ ಅವರು ಸೋಮವಾರ ಆತನನ್ನು ಮತ್ತೆ ಅದೇ ಹುದ್ದೆಗೆ ಮರುನೇಮಕ ಮಾಡಿದ್ದಾರೆ.
ಪ್ರಮುಖ ಜವಾಬ್ದಾರಿಗಳನ್ನು ನಿಭಾಯಿಸಲು ಆಕಾಶ್‌ಗೆ ಇನ್ನಷ್ಟು ‘ಪ್ರಬುದ್ಧತೆ’ಯ (Maturity) ಅಗತ್ಯವಿದೆ ಎಂದು ಹೇಳಿ ಕೇವಲ ಒಂದು ತಿಂಗಳ ಹಿಂದೆಯಷ್ಟೇ ಅವರನ್ನು ಕೆಳಗಿಳಿಸಲಾಗಿತ್ತು. ಇದೀಗ ಅವರ ಕಿರಿಯ ಸಹೋದರ ಇಶಾನ್ ಬದಲಿಗೆ ಆಕಾಶ್ ಮತ್ತೆ ಹುದ್ದೆಗೇರಿದ್ದಾರೆ. ಅಕ್ಟೋಬರ್ 2ರಂದು ಸಾಮಾಜಿಕ ಜಾಲತಾಣದಲ್ಲಿ ಮಾಯಾವತಿ ಅವರ ಬಳಿ ಆಕಾಶ್ ಸಾರ್ವಜನಿಕವಾಗಿ ಕ್ಷಮೆಯಾಚಿಸಿದ್ದರು. ಮಾಯಾವತಿಯವರನ್ನು ‘ಬುವಾ ಮಾ’ (ಸೋದರತ್ತೆ ಹಾಗೂ ತಾಯಿ ಸಮಾನ) ಎಂದು ಕರೆದಿದ್ದ ಆಕಾಶ್, ಪಕ್ಷದ ಸೇವೆ ಮಾಡಲು ತಮಗೆ ಎರಡನೇ ಅವಕಾಶ ನೀಡುವಂತೆ ಕೋರಿದ್ದರು. ಈ ಬೆಳವಣಿಗೆಯ ಬೆನ್ನಲ್ಲೇ ಮಾಯಾವತಿ ತಮ್ಮ ನಿರ್ಧಾರವನ್ನು ಬದಲಿಸಿದ್ದಾರೆ.
ಮಾಯಾವತಿ ಸ್ಪಷ್ಟನೆ ಏನು?
ಈ ಬಗ್ಗೆ ‘ಎಕ್ಸ್’ (X) ಖಾತೆಯಲ್ಲಿ ಸುದೀರ್ಘ ಪೋಸ್ಟ್ ಮಾಡಿರುವ ಮಾಯಾವತಿ, “ಇತ್ತೀಚಿನ ದಿನಗಳಲ್ಲಿ ಆಕಾಶ್‌ಗೆ ಸಂಬಂಧಿಸಿದ ಕೆಲವು ಕಾರಣಗಳಿಂದಾಗಿ ಪಕ್ಷದ ಸಂಘಟನೆಯಲ್ಲಿ ಹಲವು ಬಾರಿ ಅಗತ್ಯ ಬದಲಾವಣೆಗಳನ್ನು ಮಾಡಬೇಕಾಯಿತು. ಅಂತಿಮವಾಗಿ ಅವರ ಮಾವ ಅಶೋಕ್ ಸಿದ್ಧಾರ್ಥ್ ಕೂಡ ರಾಜಕೀಯದಿಂದ ನಿವೃತ್ತರಾಗಬೇಕಾದ ಅನಿವಾರ್ಯತೆ ಸೃಷ್ಟಿಯಾಗಿತ್ತು. ಅಂದಿನಿಂದ, ಆಕಾಶ್ ಅವರ ವ್ಯಕ್ತಿತ್ವ ಮತ್ತು ಕಾರ್ಯಶೈಲಿಯಲ್ಲಿ ಸಕಾರಾತ್ಮಕ ಬದಲಾವಣೆಗಳಾಗಿರುವುದನ್ನು ಜನರು ಗಮನಿಸುತ್ತಿದ್ದಾರೆ. ಆಕಾಶ್ ಇತ್ತೀಚೆಗೆ ಬರೆದ ಕ್ಷಮೆಯಾಚನೆಯ ಪೋಸ್ಟ್ ಇದಕ್ಕೆ ಸಾಕ್ಷಿಯಾಗಿದೆ” ಎಂದು ಹೇಳಿದ್ದಾರೆ.
This video cannot be played in your browser. Open the video directly
ಆಕಾಶ್‌ಗೆ ಅವರ ಹಿಂದಿನ ಜವಾಬ್ದಾರಿಗಳ ಜೊತೆಗೆ ಪಕ್ಷದಲ್ಲಿ ಕಾರ್ಯನಿರ್ವಹಿಸಲು ಮತ್ತೆ ಅವಕಾಶ ನೀಡಬೇಕು ಎಂದು ಪಕ್ಷದ ಬಹುತೇಕ ಕಾರ್ಯಕರ್ತರು ಒಲವು ತೋರಿದ್ದರು. ಇದಕ್ಕೆ ಆಕಾಶ್ ತಂದೆ ಹಾಗೂ ಕಿರಿಯ ಸಹೋದರ ಇಶಾನ್ ಕೂಡ ಸಮ್ಮತಿ ಸೂಚಿಸಿದ್ದಾರೆ ಎಂದು ಬಿಎಸ್‌ಪಿ ಮುಖ್ಯಸ್ಥೆ ತಿಳಿಸಿದ್ದಾರೆ. ಯಾವುದೇ ಹುದ್ದೆಯಿಲ್ಲದೆ ಸಾಮಾನ್ಯ ಕಾರ್ಯಕರ್ತನಾಗಿ ಪ್ರಾಮಾಣಿಕತೆಯಿಂದ ಪಕ್ಷದ ಕೆಲಸ ಮಾಡುವುದಾಗಿ ಇಶಾನ್ ಹೇಳಿದ್ದಾರೆ.
”ಇವೆಲ್ಲವನ್ನೂ ಪರಿಗಣಿಸಿ, ಆಕಾಶ್ ಆನಂದ್ ಅವರನ್ನು ಮತ್ತೆ ಬಿಎಸ್‌ಪಿಯ ರಾಷ್ಟ್ರೀಯ ಸಂಚಾಲಕರನ್ನಾಗಿ ಮರುನೇಮಿಸಲಾಗಿದೆ. ಅಶೋಕ್ ಸಿದ್ಧಾರ್ಥ್ ರಾಜಕೀಯ ನಿವೃತ್ತಿಯ ಬಳಿಕ ಪಕ್ಷದಲ್ಲಿ ಎಲ್ಲವೂ ಸುಗಮವಾಗಿ ಸಾಗಲಿದೆ ಮತ್ತು ಪದೇ ಪದೇ ಪಕ್ಷದ ಸಂಘಟನೆಯಲ್ಲಿ ಬದಲಾವಣೆ ಮಾಡುವ ಪರಿಸ್ಥಿತಿ ಬಾರದು ಎಂದು ಭಾವಿಸಿದ್ದೇನೆ. ಆದರೆ ಇದು ಆಕಾಶ್ ಆನಂದ್ ಅವರ ಕಾರ್ಯವೈಖರಿಯ ಮೇಲೂ ಗಣನೀಯವಾಗಿ ಅವಲಂಬಿತವಾಗಿದೆ” ಎಂದು ಮಾಯಾವತಿ ಎಚ್ಚರಿಕೆ ನೀಡಿದ್ದಾರೆ.
ಕಳೆದ ಒಂದು ತಿಂಗಳಲ್ಲಿ ಏನಾಗಿತ್ತು?
ಸೆಪ್ಟೆಂಬರ್ 3 ರಂದು, ಆಕಾಶ್‌ಗೆ ಪ್ರಬುದ್ಧತೆಯ ಕೊರತೆಯಿದೆ ಎಂದು ಹೇಳಿ ಪಕ್ಷದ ಹುದ್ದೆಗಳಿಂದ ಅವರನ್ನು ಮಾಯಾವತಿ ವಜಾಗೊಳಿಸಿದ್ದರು. ಒಂದು ವಾರದ ನಂತರ, ಬಿಎಸ್‌ಪಿ ಹಾಗೂ ಆಕಾಶ್ ಭವಿಷ್ಯದ ಹಿತದೃಷ್ಟಿಯಿಂದ ರಾಜಕೀಯದಿಂದ ನಿವೃತ್ತರಾಗುವಂತೆ ಆಕಾಶ್ ಮಾವ ಅಶೋಕ್ ಸಿದ್ಧಾರ್ಥ್ ಅವರಿಗೆ ಸೂಚಿಸಲಾಗಿತ್ತು. ಸೆಪ್ಟೆಂಬರ್ 12 ರಂದು, ಆಕಾಶ್ ಮತ್ತು ಇಶಾನ್ ಇಬ್ಬರಿಗೂ ಯಾವುದೇ ಹುದ್ದೆ ನೀಡುವುದಿಲ್ಲ ಎಂದು ಮಾಯಾವತಿ ತಮ್ಮ ‘ಅಂತಿಮ ನಿರ್ಧಾರ’ ಪ್ರಕಟಿಸಿದ್ದರು. ಆದರೆ, ಕೆಲವೇ ದಿನಗಳಲ್ಲಿ ನಿರ್ಧಾರ ಬದಲಿಸಿ ಇಶಾನ್‌ರನ್ನು ರಾಷ್ಟ್ರೀಯ ಸಂಚಾಲಕರನ್ನಾಗಿ ನೇಮಿಸಿದ್ದರು.
ಮೂಲಗಳ ಪ್ರಕಾರ, ಸೆಪ್ಟೆಂಬರ್ 29 ರಂದು ಲಕ್ನೋದಲ್ಲಿ ಮಾಯಾವತಿ ಅವರನ್ನು ಭೇಟಿಯಾಗಿದ್ದ ಆಕಾಶ್ ಕ್ಷಮೆಯಾಚಿಸಿದ್ದರು. ನಂತರ ಅಕ್ಟೋಬರ್ 2ರಂದು ಎಕ್ಸ್‌ನಲ್ಲಿ ಪೋಸ್ಟ್ ಹಾಕಿ ಸಾರ್ವಜನಿಕವಾಗಿ ಕ್ಷಮೆ ಕೇಳಿದ್ದರು. “ನನ್ನ ಮಾವನನ್ನು ವಜಾಗೊಳಿಸಿದ ನಿಮ್ಮ ನಿರ್ಧಾರವನ್ನು ಬೆಂಬಲಿಸುತ್ತೇನೆ. ಆ ಸಮಯದಲ್ಲಿ ನಾನು ಸಾಮಾಜಿಕ ಜಾಲತಾಣಗಳಿಂದ ದೂರವಿದ್ದ ಕಾರಣ, ನಿಮ್ಮ ಪೋಸ್ಟ್‌ಗೆ ಪ್ರತಿಕ್ರಿಯಿಸಲಾಗಿರಲಿಲ್ಲ. ನನ್ನ ಮೌನವನ್ನು ತಪ್ಪಾಗಿ ಅರ್ಥೈಸಿಕೊಳ್ಳಲಾಯಿತು. ಇದರಿಂದ ನಿಮಗೆ ನೋವಾಗಿದ್ದರೆ ಕ್ಷಮೆಯಾಚಿಸುತ್ತೇನೆ” ಎಂದು ಆಕಾಶ್ ಬರೆದುಕೊಂಡಿದ್ದರು.
ಆಕಾಶ್-ಮಾಯಾವತಿ ಸಂಬಂಧದ ಏರಿಳಿತಗಳು
ಕಳೆದ ಎರಡು ವರ್ಷಗಳಲ್ಲಿ ಮಾಯಾವತಿ ಮತ್ತು ಆಕಾಶ್ ನಡುವಿನ ಸಂಬಂಧ ಹಲವು ತಿರುವುಗಳನ್ನು ಕಂಡಿದೆ. 2024ರ ಲೋಕಸಭಾ ಚುನಾವಣೆಗೂ ಮುನ್ನ ಆಕಾಶ್ ಅವರನ್ನು ತಮ್ಮ ರಾಜಕೀಯ ಉತ್ತರಾಧಿಕಾರಿ ಎಂದು ಮಾಯಾವತಿ ಬಿಂಬಿಸಿದ್ದರು. ಆದರೆ 2024ರ ಮೇ ತಿಂಗಳಲ್ಲಿ ಸೀತಾಪುರದಲ್ಲಿ ದ್ವೇಷ ಭಾಷಣ ಮಾಡಿದ ಆರೋಪದ ಮೇಲೆ ಆಕಾಶ್ ವಿರುದ್ಧ ಪ್ರಕರಣ ದಾಖಲಾದಾಗ, ಅವರನ್ನು ರಾಷ್ಟ್ರೀಯ ಸಂಯೋಜಕ ಹುದ್ದೆಯಿಂದ ವಜಾಗೊಳಿಸಿ, ಉತ್ತರಾಧಿಕಾರಿ ಘೋಷಣೆಯನ್ನೂ ಹಿಂಪಡೆದಿದ್ದರು.
ಆದರೆ, ಜೂನ್ 2024 ರಲ್ಲಿ ಮತ್ತೆ ಆಕಾಶ್‌ಗೆ ಮರುನೇಮಕ ಭಾಗ್ಯ ಒಲಿದಿತ್ತು. ಮಾರ್ಚ್ 2025 ರಲ್ಲಿ ಮತ್ತೆ ಆತನನ್ನು ಪಕ್ಷದಿಂದ ಉಚ್ಚಾಟಿಸಲಾಗಿತ್ತು. ಕೇವಲ ಎರಡು ತಿಂಗಳ ನಂತರ ಆ ನಿರ್ಧಾರವನ್ನು ಹಿಂಪಡೆದು ಮುಖ್ಯ ರಾಷ್ಟ್ರೀಯ ಸಂಯೋಜಕನನ್ನಾಗಿ ನೇಮಿಸಲಾಗಿತ್ತು. ಆಗಸ್ಟ್ 2025 ರಲ್ಲಿ ಅವರನ್ನು ರಾಷ್ಟ್ರೀಯ ಸಂಚಾಲಕ ಹುದ್ದೆಗೇರಿಸಲಾಗಿತ್ತು. ಇದೀಗ ವಜಾ ಮತ್ತು ಮರುನೇಮಕದ ಸರಣಿ ಮತ್ತೆ ಮುಂದುವರಿದಿದೆ.





