ಕರ್ತವ್ಯ ನಿರ್ಲಕ್ಷ್ಯದ ಆರೋಪದ ಮೇಲೆ ಪೊಲೀಸ್ ಸಿಬ್ಬಂದಿಗಳನ್ನು ಸುಮಾರು 4 ಗಂಟೆಗಳ ಕಾಲ ಸುಡು ಬಿಸಿಲಿನಲ್ಲಿ ನಿಲ್ಲಿಸಿ ಶಿಕ್ಷಿಸಿರುವ ಘಟನೆ ಚಿತ್ರದುರ್ಗ ಜಿಲ್ಲೆಯ ಚಿಕ್ಕಜಾಜೂರು ಪೊಲೀಸ್ ಠಾಣೆಯಲ್ಲಿ ನಡೆದಿದೆ. ಘಟನೆಯು ಮಾನವ ಹಕ್ಕುಗಳ ಉಲ್ಲಂಘನೆಯಾಗಿದೆ ಎಂದು ವಿರೋಧ ವ್ಯಕ್ತವಾಗಿದೆ.
ಚಿಕ್ಕಜಾಜೂರು ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ 12 ಮಂದಿ ಸಿಬ್ಬಂದಿಯನ್ನು ಠಾಣೆಯ ಪಿಎಸ್‌ಐ ನೇತ್ರಾವತಿ ಬಿಸಿಲಿನಲ್ಲಿ ನಿಲ್ಲಿಸಿ, ಶಿಕ್ಷಿಸಿದ್ದಾರೆ. ಘಟನೆ ಏಪ್ರಿಲ್ 5ರಂದು ನಡೆದಿದ್ದು, ಇದೀಗ ಬೆಳಕಿಗೆ ಬಂದಿದೆ.
ನೇತ್ರಾವತಿ ಅವರು ತಮ್ಮ ಠಾಣೆಯ ಸಿಬ್ಬಂದಿಗಳು ಭಾರವಾದ ಬಂದೂಕುಗಳನ್ನು ಹೊರಿಸಿ, ಬಿಸಿಲು ತೀವ್ರವಾಗಿದ್ದ ಮಧ್ಯಾಹ್ನ 2 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಅಂಗಳದಲ್ಲಿ ನಿಲ್ಲಿಸಿದ್ದರು ಎಂದು ಆರೋಪಿಸಲಾಗಿದೆ.
ಸುದೀರ್ಘ ಕಾಲ ಬಿಸಿಲಿನಲ್ಲಿ ನಿಂತಿದ್ದರಿಂದ ಕೆಲವು ಸಿಬ್ಬಂದಿಗಳ ಆರೋಗ್ಯದಲ್ಲಿ ಏರುಪೇರಾಗಿದೆ. ತೀವ್ರ ಸುಸ್ತು ಮತ್ತು ಡಿಹೈಡ್ರೇಶನ್‌ನಿಂದ ಬಳಲಿದ ಸಿಬ್ಬಂದಿಯನ್ನು ತಕ್ಷಣವೇ ಹೊಳಲ್ಕೆರೆ ತಾಲೂಕು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ ಎಂದು ತಿಳಿದುಬಂದಿದೆ.
ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ನಂತರ, ನೊಂದ ಸಿಬ್ಬಂದಿಗಳು ಇಲಾಖೆಯ ಉನ್ನತ ಅಧಿಕಾರಿಗಳಿಗೆ ಪಿಎಸ್‌ಐ ಅವರ ವರ್ತನೆ ಮತ್ತು ತಮಗೆ ನೀಡಲಾದ ಅಮಾನವೀಯ ಶಿಕ್ಷೆಯ ಬಗ್ಗೆ ದೂರು ನೀಡಿದ್ದಾರೆ.
ಈ ಲೇಖನ ಓದಿದ್ದೀರಾ?: ಸಿಇಸಿ ವಿರುದ್ಧದ ಅವಿಶ್ವಾಸ; ಕಾರಣವಿಲ್ಲದೇ ನೋಟಿಸ್ ತಿರಸ್ಕಾರ ಕೂಡ ಪ್ರಜಾತಂತ್ರಕ್ಕೆ ಮಾರಕ!
ಈ ಘಟನೆಯ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (SP) ರಂಜಿತ್ ಕುಮಾರ್ ಬಂಡಾರು, “ಯಾವುದೇ ಸಿಬ್ಬಂದಿ ಕರ್ತವ್ಯದಲ್ಲಿ ನಿರ್ಲಕ್ಷ್ಯ ತೋರಿದರೆ ಅವರ ವಿರುದ್ಧ ಇಲಾಖಾ ನಿಯಮಾವಳಿಗಳ ಪ್ರಕಾರ ಶಿಸ್ತುಕ್ರಮ ಜರುಗಿಸಬಹುದು. ಅದನ್ನು ಬಿಟ್ಟು ಇಂತಹ ಶಿಕ್ಷೆ ನೀಡಿರುವುದು ಸರಿಯಲ್ಲ. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ಸಮಗ್ರ ತನಿಖೆಗಾಗಿ ಡಿವೈಎಸ್‌ಪಿ ನೇತೃತ್ವದಲ್ಲಿ ತಂಡ ರಚಿಸಲಾಗಿದೆ. ತನಿಖಾ ವರದಿ ಬಂದ ನಂತರ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು” ಎಂದಿದ್ದಾರೆ.



