ರೈತರ ಕಲ್ಯಾಣವೇ ರಾಷ್ಟ್ರದ ಕಲ್ಯಾಣ ಎಂದು ಸೇವೆ ಸಲ್ಲಿಸಿದವರು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ. ಸಿದ್ಧಾಂತದ ಮೂಲಕ ಜನರ ಸೇವೆ ಮಾಡಿ ರಾಜಕೀಯದಲ್ಲಿ ಸೇವೆ ಸಲ್ಲಿಸಿದ್ದಕ್ಕೆ ಉದಾಹರಣೆ ಯಡಿಯೂರಪ್ಪನವರಾಗಿದ್ದಾರೆ. ಬಗರ್ ಹುಕುಂ ಆಂದೋಲನದಲ್ಲಿ ಸಾವಿರಾರು ಕಿಲೋಮೀಟರ್ ಪಾದಯಾತ್ರೆ ನಡೆಸಿ ಭೂಮಿ ರಹಿತ ರೈತರ ನೆರವಿಗೆ ನಿಂತವರು ಯಡಿಯೂರಪ್ಪ” ಎಂದು ಕೇಂದ್ರ ಗೃಹ ಸಚಿವ ಅಮಿತ್ ಷಾ ಚಿತ್ರದುರ್ಗದಲ್ಲಿ ನಡೆದ ಯಡಿಯೂರಪ್ಪ ಅಭಿಮಾನೋತ್ಸವದಲ್ಲಿ ಅಭಿನಂದಿಸಿ ಶ್ಲಾಘಿಸಿದರು.

ನಾಡಿನ ವಿವಿಧ ಮಠಾಧೀಶರ ಸಾನ್ನಿಧ್ಯದಲ್ಲಿ ರಾಜ್ಯ ಬಿಜೆಪಿ ನಾಯಕರು, ರಾಷ್ಟ್ರ ನಾಯಕರು ಹಾಗೂ ಲಕ್ಷಾಂತರ ಮಂದಿ ಅಭಿಮಾನಿಗಳು ಸಮ್ಮುಖದಲ್ಲಿ ನಡೆದ ಚಿತ್ರದುರ್ಗ ನಗರದ ಹೊರಭಾಗದ ಮಾದಾರ ಚೆನ್ನಯ್ಯ ಪೀಠದ ಪಕ್ಕದ ಆವರಣದಲ್ಲಿ 50 ವರ್ಷಗಳ ಸಾರ್ಥಕ ರಾಜಕೀಯ ಸೇವೆ ಪೂರೈಸಿದ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಅಭಿಮಾನೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ
ಕೇಂದ್ರ ಗೃಹ ಸಚಿವ ಅಮಿತ್ ಷಾ ಇಂದು ಬಿಜೆಪಿಯ ಕಾರ್ಯಕರ್ತರಿಗೆ ಸಂತೋಷದ ದಿನ. ಇಂದು ಬಂಗಾಳದಲ್ಲಿ ಮೊದಲ ಬಾರಿಗೆ ಬಿಜೆಪಿಯ ಆಡಳಿತ ಮುಖ್ಯಮಂತ್ರಿ ಪ್ರತಿಜ್ಞಾ ವಿಧಿ ಸ್ವೀಕರಿಸಿದ್ದಾರೆ. ಇತ್ತ ಮಾನ್ಯ ಯಡಿಯೂರಪ್ಪ ರೈತರಿಗೆ ಜನರಿಗೆ ಐವತ್ತು ವರ್ಷಗಳ ಸೇವೆ ಸಲ್ಲಿಸಿದ ಅಭಿಮಾನೋತ್ಸವದ ಸಂಭ್ರಮ” ಎಂದು ಹರ್ಷ ವ್ಯಕ್ತಪಡಿಸಿದರು.

ಈ ನೆಲ ಸ್ವಾಮಿ ವಿವೇಕಾನಂದ, ರಾಮಕೃಷ್ಣ ಪರಮಹಂಸ, ಶ್ಯಾಂ ಪ್ರಸಾದ್ ಮುಖರ್ಜಿ ಯಂತಹವರ ಜನ್ಮ ನೀಡಿದ ಭೂಮಿ. ಚಿತ್ರದುರ್ಗವು ರಾಜಾ ಮದಕರಿ ನಾಯಕನ ವೀರ ಭೂಮಿ. ಹೈದರಾಲಿಯನ್ನು ಹಿಮ್ಮೆಟ್ಟಿಸಿದ ರಾಜ. ವೀರವನಿತೆ ಓಬವ್ವಳು ಕೂಡ ಹೈದರ್ ಸೈನಿಕರ ನಡೆಸಿದ ಹೋರಾಟ ಕೂಡ ಅಭಿಮಾನ ಸಲ್ಲಿಸುವಂಥದ್ದು. ಇವರಿಬ್ಬರಿಗೂ ಕೂಡ ನಾನು ತಲೆಬಾಗಿ ಗೌರವಪೂರ್ವಕ ನಮನಗಳನ್ನು ಸಲ್ಲಿಸುತ್ತೇನೆ” ಎಂದು ಸ್ಮರಿಸಿದರು.
“ಯಡಿಯೂರಪ್ಪನವರ 50 ವರ್ಷಗಳ ಸಾರ್ವಜನಿಕ ಜೀವನ ಸಂಪೂರ್ಣ ಹೋರಾಟಗಳ ಜೀವನ. ಈ ರೀತಿಯ ಹೋರಾಟದ ಜೀವನದ ನಾಯಕರು ದಕ್ಷಿಣ ಭಾರತದಲ್ಲಿ ಬೇರೆ ಯಾವ ರಾಜ್ಯಗಳಲ್ಲೂ ಇಲ್ಲ. ನಾನು ಯಡಿಯೂರಪ್ಪನವರನ್ನು ಹತ್ತಿರದಿಂದ ಬಲ್ಲೆ. ಅವರ ಜೇಬಿನಲ್ಲಿ ಯಾವಾಗಲೂ ಒಂದು ಚಿಕ್ಕ ಡೈರಿ ಇಟ್ಟುಕೊಂಡಿರುತ್ತಾರೆ. ಯಾರೇ ಅವರ ಬಳಿ ಸಮಸ್ಯೆಗಳನ್ನು ಹೇಳಿದರೆ ಹೆಸರು ವಿವರ ಬರೆದುಕೊಂಡು ಕೆಲಸ ಮಾಡುತ್ತಾರೆ” ಎಂದು ತಿಳಿಸಿದರು.

“ದಕ್ಷಿಣ ಭಾರತದಲ್ಲಿ ಬಿಜೆಪಿಯ ಆಡಳಿತಕ್ಕೆ ಮುನ್ನುಡಿ ಬರೆದವರು. ಯಡಿಯೂರಪ್ಪ ಎನ್ನುವುದು ಸುವರ್ಣ ಅಕ್ಷರದಲ್ಲಿ ಬರೆದಿಡುವಂತದ್ದು. ಬಿಜೆಪಿಗೆ ದಕ್ಷಿಣ ಭಾರತದ ಬಾಗಿಲು ತೆರೆದವರು ಯಡಿಯೂರಪ್ಪ. ರೈತರ ಸಮಸ್ಯೆಗಳ ದನಿಯಾಗಿ ರೈತರ ಬಜೆಟ್ ಮಂಡಿಸಿ ಹೊಸ ಪರಂಪರೆ ಹುಟ್ಟು ಹಾಕಿದವರು” ಎಂದು ಪ್ರಶಂಸಿಸಿದರು.

ಕಾರ್ಯಕ್ರಮದ ಕೇಂದ್ರಬಿಂಧು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಮಾತನಾಡಿ “ನನ್ನನ್ನು ಅಭಿಯಾನದಲ್ಲಿ ತೇಲಿಸಿದ ನಿಮಗೆ ಅಭಿನಂದನೆಗಳು. ಇಂದು ನಾನು ರಾಜಕೀಯ ನಾಯಕನಾಗಿ ನಿಂತಿಲ್ಲ. ನಿಮ್ಮ ಮನೆ ಮಗನಾಗಿ, ಬಂಧುವಾಗಿ, ನಿಮ್ಮಲ್ಲಿ ಒಬ್ಬರಾಗಿ ನಾನು ಇಂದು ನಿಂತಿದ್ದೇನೆ. ಮದಕರಿ ನಾಯಕ, ಒನಕೆ ಓಬವ್ವ, ನಾಡಿನ ಶ್ರೇಷ್ಠ ಸಂತರು ಓಡಾಡಿದ ಪುಣ್ಯಭೂಮಿ ಚಿತ್ರದುರ್ಗದಲ್ಲಿ ಸೇರಿದ ಜನಸಾಗರದ ಮಧ್ಯೆ ನಾನು ನಿಂತಿರುವುದೇ ನನಗೆ ಅಭಿಮಾನದ ಕ್ಷಣ. ಇದಕ್ಕೆ ನಾನು ನಿಮಗೆ ಋಣಿಯಾಗಿದ್ದೇನೆ” ಎಂದು ಜನಸ್ತೋಮಕ್ಕೆ ಅಭಿನಂದಿಸಿದರು.
“ಸ್ವತಂತ್ರ ಭಾರತದ ನಂತರ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ನಂತರ ಧೀಮಂತ ಗೃಹ ಪ್ರಧಾನಿಯಾದ ಅಮಿತ್ ಷಾ ನನ್ನನ್ನು ಅಭಿನಂದಿಸಲು ಆಗಮಿಸಿದ್ದಾರೆ. ದೇಶ ಮೊದಲು ಎಂದು ರಾಷ್ಟ್ರದ ಪ್ರಗತಿ ತರಲು ಪ್ರಧಾನಿಯವರೊಂದಿಗೆ ಹೆಗಲುಕೊಟ್ಟು ದುಡಿಯುತ್ತಿದ್ದಾರೆ. ಅವರಿಗೂ, ನನ್ನನ್ನು ಆಶೀರ್ವದಿಸಲು ಬಂದಿರುವ ನಾಡಿನ ಎಲ್ಲಾ ಹರಗುರುಚರ ಮಠಾಧೀಶರಿಗೂ ನಮಸ್ಕರಿಸುತ್ತಾ, ನನ್ನ ನೆಚ್ಚಿನ ಆರಾಧ್ಯ ಗುರುಗಳಾದ ಸಿದ್ಧಗಂಗೆಯ ಶ್ರೀ ಶಿವಕುಮಾರ ಶ್ರೀಗಳಿಗೆ ವಂದಿಸುತ್ತೇನೆ” ಎಂದು ತಿಳಿಸಿದರು
.ಈ ಸುದ್ದಿ ಓದಿ- ದಾವಣಗೆರೆ | ಮಕ್ಕಳಿಗೆ ಉಚಿತ ಆಧಾರ್ ಬಯೋಮೆಟ್ರಿಕ್ ಅಪ್‌ಡೇಟ್
“ನಾನು ಜನಸಾಮಾನ್ಯರ ಮಧ್ಯೆ ಹುಟ್ಟಿ ಬಂದವನು , ಸೆರೆಮನೆ, ಸಂಘರ್ಷ ಹೋರಾಟಗಳ ನಡುವೆ ಬೆಳೆದು ಬಂದವನು. ರೈತರ ಸಮಸ್ಯೆಗಳಿಗೆ ದೀನದಲಿತರ ಶೋಷಿತರ, ಮಹಿಳೆಯರ ಸಮಸ್ಯೆಗಳಿಗೆ ಪರಿಹಾರ ನೀಡಲು ಯತ್ನಿಸಿದ್ದೇನೆ. ರೈತರಿಗೆ ಪ್ರತ್ಯೇಕ ಕೃಷಿ ಬಜೆಟ್ ಮಂಡಿಸಿ ಅನ್ನದಾತನ ಕಣ್ಣೀರು ಒರೆಸಲು ಸಾಧ್ಯವಾದಷ್ಟು ಪ್ರಯತ್ನ ಮಾಡಿದ್ದೇನೆ. ಬಸವಣ್ಣನವರ ವಚನದಂತೆ ಜನ ನನ್ನನ್ನು ಇವನಾರವ ಎನ್ನದೇ ಇವ ನಮ್ಮವ, ಯಡಿಯೂರಪ್ಪ ನಮ್ಮವ ಎಂದು ಎಲ್ಲಾ ಜಾತಿ ಜನಾಂಗಗಳ ಜನ ನನಗೆ ಆಶೀರ್ವದಿಸಿದ್ದಾರೆ. 50 ವರ್ಷಗಳು ನನಗೆ ಪ್ರೀತಿ ನೀಡಿ ನನ್ನನ್ನು ಹರಸಿದ್ದೀರಿ. ನಿಮ್ಮ ಋಣವನ್ನು ನಾನು ಮರೆಯಲಾಗುವುದಿಲ್ಲ. ನಾನು ವಿರಮಿಸುವುದಿಲ್ಲ. ನನಗೆ ಶಕ್ತಿ ಇರುವ ತನಕ ದೇಶ ಜನ, ಪಕ್ಷ ಮತ್ತು ಸಂಘಟನೆಗಾಗಿ ದುಡಿಯುತ್ತೇನೆ” ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಹೋರಾಟ ಕುರಿತ ‘ಸದನ ಶಿಕಾರಿ’, ಕೆಂದಾವರೆ ಕಮಲ ಅರಳಿದ ಕಥೆ ಪುಸ್ತಕಗಳನ್ನು ಬಿಡುಗಡೆ ಮಾಡಲಾಯಿತು. ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಕಾರ್ಯಕ್ರಮದ ಮಧ್ಯೆ ಲವಲವಿಕೆಯಿಂದ ಮಠಾಧೀಶರ ಬಳಿ ತೆರಳಿ ವಂದನೆ ಸಲ್ಲಿಸುತ್ತಿದ್ದುದು ಕಂಡುಬಂದಿತು.
ಈ ಸುದ್ದಿ ಓದಿದ್ದೀರಾ? ಚಿತ್ರದುರ್ಗ | ಯಡಿಯೂರಪ್ಪ ಅಭಿಮಾನೋತ್ಸವ; ನಾಡಿನ ಮಠಾಧೀಶರು, ಅಭಿಮಾನಿಗಳು ಭಾಗಿ
ಕಾರ್ಯಕ್ರಮದಲ್ಲಿ, ಬಾಳೆಹೊನ್ನೂರಿನ ಪಂಚಪೀಠದ ರಂಭಾಪುರಿ ಶ್ರೀ, ಸುತ್ತೂರು ಶ್ರೀ ಶಿವರಾತ್ರಿ ದೇಶಿಕೇಂದ್ರ ಶ್ರೀ, ಮಾದಾರ ಚೆನ್ನಯ್ಯ ಗುರುಪೀಠದ ಮಾದಾರ ಚೆನ್ನಯ್ಯ ಶ್ರೀ, ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಶ್ರೀ, ಶ್ರೀಶೈಲ ಪೀಠದ ವಾಗೀಶ ಪಂಡಿತಾರಾಧ್ಯ ಶ್ರೀಗಳು, ಕಾಶಿ ಪೀಠದ ಶ್ರೀಗಳು, ಮುರುಘಾ ಮಠದ ಬಸವಕುಮಾರ ಶ್ರೀಗಳು, ವಚನಾನಂದಶ್ರೀ, ಕುಂಚಿಟಿಗ ಪೀಠದ ಶಾಂತವೀರ ಶ್ರೀ, ಕಾಗಿನೆಲೆ ಶಾಖಾ ಪೀಠದ ಪುರುಷೋತ್ತಮಾನಂದ ಪುರಿ ಶ್ರೀ, ಸಾಣೆಹಳ್ಳಿ ಪಂಡಿತಾರಾಧ್ಯ ಶ್ರೀಗಳು, ಸಿರಿಗೆರೆ ತರಳಬಾಳು ಮಠದ ಶಿವಮೂರ್ತಿ ಶಿವಾಚಾರ್ಯ ಶ್ರೀಗಳು, ದಿಂಗಾಲೇಶ್ವರ ಶ್ರೀಗಳು, ಕೇಂದ್ರ ಸಚಿವರಾದ ಸೋಮಣ್ಣ, ಸಂಸದರಾದ ಶೋಭಾ ಕರಂದ್ಲಾಜೆ, ಬಸವರಾಜ್ ಬೊಮ್ಮಾಯಿ ಗೋವಿಂದ್ ಕಾರಜೋಳ, ಪ್ರಹ್ಲಾದ್ ಜೋಷಿ, ಡಾ.ಮಂಜುನಾಥ್, ಶಾಸಕರಾದ ಎಂ ಚಂದ್ರಪ್ಪ, ಮುನಿರತ್ನ, ಶ್ರೀನಿವಾಸ್ ಪೂಜಾರಿ, ಅಶ್ವಥ್ ನಾರಾಯಣ, ಸೇರಿದಂತೆ ಬಿಎಸ್ ವೈ ಪುತ್ರರಾದ ಶಾಸಕ ಬಿವೈ ವಿಜಯೇಂದ್ರ ಸಂಸದ ಬಿ ವೈ ರಾಘವೇಂದ್ರ , ಪ್ರತಿಪಕ್ಷ ನಾಯಕ ಆರ್ ಅಶೋಕ್ ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ಮಾಜಿ ಸಂಸದ ಸಿದ್ದೇಶ್ವರ, ಮುಖಂಡರಾದ ಸದಾನಂದ ಗೌಡ, ಶ್ರೀರಾಮುಲು, ಸಿಟಿ ರವಿ, ತಿಪ್ಪಾರೆಡ್ಡಿ, ರೇಣುಕಾಚಾರ್ಯ ಜಗದೀಶ್ ಶೆಟ್ಟರ್ ಬಿಸಿ ಪಾಟೀಲ್ ಸೇರಿದಂತೆ ಲಕ್ಷಾಂತರ ಮಂದಿ ಭಾಗವಹಿಸಿದ್ದರು.




