ಬಂಡವಾಳಶಾಹಿಗಳಿಗೆ ಭೂಮಿ ನೀಡುವ ಸರ್ಕಾರ: ಭೂವಂಚಿತರಿಗೆ ಹಂಚಲು ಮುಂದಾಗುತ್ತಿಲ್ಲವೇಕೆ?

Date:

21ನೇ ಶತಮಾನದ ಮುಖ್ಯ ಚರ್ಚೆ ಹಾಗೂ ಹಕ್ಕಿನ ವಿಷಯವೆಂದರೆ ಭೂಮಿ. ಭೂಮಿಯ ಬೆಲೆ ಪ್ರತಿದಿನ ಗಗನಕ್ಕೇರುತ್ತಿರವಾಗಲೇ ಇತ್ತ ಭೂವಂಚಿತರು ಹೆಚ್ಚುತ್ತಲೇ ಇದ್ದಾರೆ. ದೊಡ್ಡ ದೊಡ್ಡ ಶ್ರೀಮಂತರಿಗೆ ಕಂಪೆನಿಗಳಿಗೆ ಏಕಸ್ವಾಮ್ಯತೆ ಸಾಧಿಸಲು ಸಾವಿರಾರು ಎಕರೆಗಳನ್ನು ಅಭಿವೃದ್ಧಿ ಹೆಸರಲ್ಲಿ ಒಂದೆರಡು ರೂಪಾಯಿ ಲೆಕ್ಕದಲ್ಲಿ ಅಥವಾ ಉಚಿತವಾಗಿಯೂ ನೀಡುವ ಸರ್ಕಾರಗಳು ದಶಕಗಳಿಂದಲೂ ಭೂಮಿಯಲ್ಲಿ ಉಳುಮೆ ಮಾಡುತ್ತಿರುವ ಬಗರ್ ಹುಕಂ ಸಾಗುವಳಿದಾರರಿಗೆ ಹಾಗೂ ಭೂಮಿ ಮತ್ತು ವಸತಿ ವಂಚಿತರಿಗೆ ಭೂಮಿ ಹಂಚಲು ಕ್ರಮ ಕೈಗೊಳ್ಳದೆ ವಿಳಂಬ ಮಾಡುತ್ತಿರುವುದು ಈ ನಾಡಿನ ಬಡವರಿಗೆ, ಭೂಮಿ ಮತ್ತು ವಸತಿ ರಹಿತರಿಗೆ ಸರ್ಕಾರ ಮಾಡಿದ ದ್ರೋಹವೆಂದೇ ಪರಿಗಣಿಸಲಾಗುತ್ತಿದೆ.

- Advertisement -

ಇತ್ತ ಚಿತ್ರದುರ್ಗದಲ್ಲಿ ಭೂರಹಿತರ, ಭೂಮಿ ವಸತಿ ರಹಿತರ ಹೋರಾಟ ಮತ್ತು ಬಗರ್ ಹುಕುಂ ಸಾಗುವಳಿದಾರರ ಹೋರಾಟ ಕಳೆದ ಹತ್ತು ದಿನಗಳಿಂದ ನಡೆಯುತ್ತಿದೆ. ಹಲವಾರು ದಶಕಗಳಿಂದ ಸಾಗುವಳಿ ಮಾಡುತ್ತಿರುವ ಸಣ್ಣ ಹಿಡುವಳಿ ರೈತರಿಗೆ ತುಂಡುಭೂಮಿಗಾಗಿ ಸಾಗುವಳಿ ಪತ್ರ ಹಾಗೂ ಹಕ್ಕು ಪತ್ರಕ್ಕಾಗಿ, ಹತ್ತಾರು ವರ್ಷಗಳಿಂದ ಕಂದಾಯ ಇಲಾಖೆಗೆ ಅರ್ಜಿ ಸಲ್ಲಿಸಿದ್ದು, ಈ ಕುರಿತು ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ. ಹತ್ತಾರು ವರ್ಷಗಳಿಂದ ದಶಕಗಳಿಂದಲೂ ಉಳುಮೆ ಮಾಡುತ್ತಿರುವ ಭೂ ರಹಿತರಿಗೆ ಭೂಮಿಯ ಮೇಲಿನ ಹಕ್ಕನ್ನು ನೀಡಲು ಸರ್ಕಾರ ನಿರಾಕರಿಸುತ್ತಿದೆ. ಈ ಕೂಡಲೇ ಸರ್ಕಾರ ಭೂಮಿ ಮೇಲಿನ ಅವರ ಭೂಮಿಗಳ ಮೇಲಿನ ಹಕ್ಕನ್ನು ನೀಡಬೇಕು ಹಾಗೂ ಕೆಲವೆಡೆ ಇರುವ ಸರ್ಕಾರಿ ಜಮೀನನ್ನು ಭೂರಹಿತರಿಗೆ ಹಂಚಬೇಕು ಎನ್ನುವುದು ಹೋರಾಟಗಾರರ ಒತ್ತಾಯವಾಗಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಡಾ. ಟಿ.ಎಸ್.‌ ಚನ್ನೇಶ್‌ ಸರಣಿ | ವೈದ್ಯಕೀಯ ನೊಬೆಲ್‌...

ನಮ್ಮ ಮೆದುಳು, ಭಾವನೆಗಳನ್ನು, ವರ್ತನೆಗಳನ್ನು ಮತ್ತು ದೈಹಿಕ ಕಾರ್ಯಗಳನ್ನು ಹೇಗೆ ನಿಯಂತ್ರಿಸುತ್ತದೆ ಎಂಬುದನ್ನು ಸಂಶೋಧನೆಯಿಂದ ಬಿಡಿಸಿಟ್ಟು 2026ರ ವೈದ್ಯಕೀಯ ನೊಬೆಲ್‌ ಪ್ರಶಸ್ತಿಗೆ ಪಾತ್ರರಾದ ಮೂವರು ಸಂಶೋಧಕರು ಮತ್ತು ಸಂಶೋಧನೆಯ ಸುತ್ತಲಿನ ವಿಶ್ಲೇಷಣಾತ್ಮಕ ಬರಹ ಈ...

ಪೊಲೀಸ್ ಸುಧಾರಣೆ | ಹೈಟೆಕ್ ಪೊಲೀಸಿಂಗ್ Vs ವಾಸ್ತವ:...

ಪೊಲೀಸ್‌ ಇಲಾಖೆಯನ್ನು ಆಧುನೀಕರಿಸಲು AI, ಸೈಬರ್‌ ತಂತ್ರಜ್ಞಾನ, ಡಿಜಿಟಲ್‌ ತನಿಖೆ, ಸಿಸಿಟಿವಿ, ಬಾಡಿ ಕ್ಯಾಮೆರಾ ಸೇರಿದಂತೆ ಹಲವು ತಂತ್ರಜ್ಞಾನಗಳು ಪ್ರವೇಶಿಸುತ್ತಿವೆ. ಆದರೆ ಹೈಟೆಕ್‌ ಆಗುತ್ತಿರುವ ಪೊಲೀಸ್‌ ವ್ಯವಸ್ಥೆ ಜನರ ಬದುಕಿಗೆ ಎಷ್ಟು ಹತ್ತಿರವಾಗುತ್ತಿದೆ?...

ಐದು ಭಾಷೆ, ಆರು ದಶಕ, ಅನಂತ ಪ್ರಯೋಗ: ಭಾರತೀಯ...

ಬದುಕಿನ ಕೊನೆಯ ಉಸಿರಿನವರೆಗೂ ಕೇವಲ ಸಿನಿಮಾವನ್ನೇ ಶ್ವಾಸವಾಗಿಸಿಕೊಂಡಿದ್ದ, 95ನೇ ವಯಸ್ಸಿನಲ್ಲೂ ಹೊಸ ಕಥೆಯ ಕನಸು ಕಾಣುತ್ತಿದ್ದ ಭಾರತೀಯ ಚಿತ್ರರಂಗದ ಅಪ್ರತಿಮ ದಾರ್ಶನಿಕ ಸಿಂಗೀತಂ ಶ್ರೀನಿವಾಸರಾವ್ ನಮ್ಮೊಂದಿಗಿಲ್ಲ. ಆರು ದಶಕಗಳ ಕಾಲ ತಮ್ಮ ಅನಂತ...

ಚಿತ್ರದುರ್ಗದಲ್ಲಿ ಸೇರಿದಂತೆ ಲಕ್ಷಾಂತರ ಅರ್ಜಿಗಳು 30-40 ವರ್ಷಗಳಿಂದಲೂ ರಾಜ್ಯದಲ್ಲಿ ಕಂದಾಯ ಇಲಾಖೆಯಲ್ಲಿ ಕೊಳೆಯುತ್ತಿವೆ. ಇವುಗಳ ಬಗ್ಗೆ ಸರ್ಕಾರ ಮತ್ತು ಸ್ಥಳೀಯ ಜಿಲ್ಲಾಡಳಿತ, ಕಂದಾಯ ಆಡಳಿತಗಳು ನಿರಾಸಕ್ತಿ ತೋರಿ, ‘ಭೂಮಿ ಲಭ್ಯವಿಲ್ಲ’ ಎಂದು ನಿರಾಕರಿಸುತ್ತ ಬಂದಿವೆ. ಆದರೆ ಹೋರಾಟಗಾರರು ಸಾಗುವಳಿ ನಡೆಸುತ್ತಿರುವ ಭೂಮಿಯ ಮೇಲಿನ ಸಾಗುವಳಿ ಹಕ್ಕನ್ನು ನೀಡಬೇಕೆಂದು ಅಗ್ರಹಿಸುತ್ತಿದ್ದಾರೆ. ಒಂದಡೆ ಭೂಮಿಯೇ ಇಲ್ಲವೆಂದು ಹೇಳುವ ಸರ್ಕಾರ ಭೂರಹಿತರು ದಶಕಗಳಿಂದಲೂ ಸಾಗುವಳಿ ಮಾಡುತ್ತಿರುವ ಭೂಮಿಯನ್ನು ಅವರಿಗೆ ನೀಡಲು ನಿರಾಸಕ್ತಿ ಅಥವಾ ತಿರಸ್ಕಾರ ಮಾಡುತ್ತಿರುವುದೇಕೆ?

ತಾವೇ ಸಾಗುವಳಿ ಮಾಡುತ್ತಿರುವ ಭೂಮಿಯನ್ನು ನೀಡಲು ನಿರಾಕರಿಸುತ್ತಿರುವ ಸರ್ಕಾರ ಭೂಮಿ ಇಲ್ಲವೆಂದು ಸ್ಥಳೀಯ ಅಧಿಕಾರಿಗಳ ಉಡಾಫೆಯ ಉತ್ತರವನ್ನು ನಂಬಿ ಹಿಂಬರಹ ನೀಡಿ ಅರ್ಜಿಗಳನ್ನು ವಿಲೇವಾರಿ ಮಾಡುತ್ತಿದೆ. ಭೂಮಿ ಇಲ್ಲ ಎನ್ನುವ ಸರ್ಕಾರಕ್ಕೆ ನಾವೇ ಭೂಮಿ ತೋರಿಸುತ್ತೇವೆ.‌ ಅದನ್ನು ಭೂರಹಿತರಿಗೆ ನೀಡಲಿ ಎನ್ನುವುದು ಹೋರಾಟಗಾರರ ಆಕ್ರೋಶದ ಮಾತುಗಳಾಗಿವೆ.

ಭೂಮಿ ವಂಚಿತರ ಹೋರಾಟ

ಸಹಸ್ರಾರು ವರ್ಷಗಳಿಂದ ಭೂಮಿಯ ಬಗೆಗಿನ ನಿರಂತರ ಹೋರಾಟಗಳು ನಡೆದುಕೊಂಡು ಬಂದಿವೆ. ಭೂಮಿ ಎನ್ನುವುದು ಕೇವಲ ಆಸ್ತಿ ಅಲ್ಲ; ಅದನ್ನು ಮನುಷ್ಯನ ಬದುಕು, ಸ್ವಾಭಿಮಾನ ಮತ್ತು ಭವಿಷ್ಯವನ್ನಾಗಿ ನೋಡಲಾಗುತ್ತದೆ. ಒಂದಂಗುಲ ಭೂಮಿ ಇದ್ದರೆ ಅವನು ತನ್ನ ಸ್ವಾಭಿಮಾನ, ಗೌರವದ ಬದುಕನ್ನು ಸಾಮಾನ್ಯವಾಗಿ ಕಾಣಲು ಸಾಧ್ಯವಾಗುತ್ತದೆ ಎನ್ನುವ ಪ್ರತೀತಿ ಇದೆ.‌ ಇದು ಮನುಷ್ಯನ ಗೌರವದ ಪ್ರಶ್ನೆಯಾಗಿದೆ. ಇಂತಹ ಗೌರವವನ್ನೇ ಪಡೆದುಕೊಳ್ಳದ ಭೂ ರಹಿತರು, ವಂಚಿತರು ರಾಜ್ಯದಲ್ಲಿ ಲಕ್ಷಾಂತರ ಮಂದಿ ಇದ್ದಾರೆ. ಇವರು ಹಲವಾರು ದಶಕಗಳಿಂದಲೂ ಹೋರಾಟ ನಡೆಸುತ್ತಲೇ ಬಂದಿದ್ದಾರೆ.

1951ರ ಭೂಮಿಯ ಬಗೆಗಿನ ಕಾಗೋಡು ಸತ್ಯಾಗ್ರಹದಿಂದ ಮೊದಲುಗೊಂಡು, ರೈತ ಸಂಘದ ನೇತೃತ್ವದಲ್ಲಿ ನಡೆದ ಬಗರ್ ಹುಕುಂ ಚಳವಳಿ, ದೇವನೂರು ದಲಿತ ಭೂಮಿ ಹೋರಾಟ, ಅರಣ್ಯ ಭೂಮಿಯ ಹಕ್ಕಿನ ಮೇಲಿನ ಹೋರಾಟ ಸೇರಿದಂತೆ ಇತ್ತೀಚಿನವರೆಗಿನ ಭೂಮಿ ಮತ್ತು ವಸತಿರಹಿತರ ಹೋರಾಟದವರೆಗೆ ಅನೇಕ ಹೋರಾಟಗಳು ನಡೆದಿವೆ.

1951ರ ಶಾಂತವೇರಿ ಗೋಪಾಲಗೌಡರ ನೇತೃತ್ವದಲ್ಲಿ ನಡೆದ ಕಾಗೋಡು ಸತ್ಯಾಗ್ರಹ ಹೋರಾಟ ಭೂ ರಹಿತ ರೈತರ ಭೂಮಿ ಬಗೆಗಿನ ಬಹಳ ದೊಡ್ಡ ಹೋರಾಟಗಳಲ್ಲೊಂದಾಗಿತ್ತು. ಇದು ಜಮೀನ್ದಾರರ ವಿರುದ್ಧ ಭೂರಹಿತ ರೈತರ ಹಕ್ಕಿನ ʼಉಳುವವನಿಗೆ ಭೂಮಿʼ ಎಂಬ ಘೋಷಣೆಯೊಂದಿಗೆ
ಈ ಹೋರಾಟ ಕರ್ನಾಟಕದ ಭೂ ಸುಧಾರಣಾ ಚಳವಳಿಗೆ ಬಲ ನೀಡಿತು. ಮುಂದೆ ದೊಡ್ಡ ಭೂ ಸುಧಾರಣಾ ಕ್ರಾಂತಿಗೂ ಕಾರಣವಾಯಿತು. ಇಂಥದೊಂದು ಭೂಸುಧಾರಣಾ ಕ್ರಾಂತಿಗೆ ಅಂದು ಕಾರಣರಾದವರು ಹಿಂದುಳಿದ ವರ್ಗಗಳ ಹರಿಕಾರ ಎಂದೇ ಹೆಸರಾದ ಮಾಜಿ ಮುಖ್ಯಮಂತ್ರಿ ದೇವರಾಜ್ ಅರಸು. ಅಂದು ಸರ್ಕಾರವೇ ಕಾನೂನು ರಚಿಸಿ ಅದನ್ನು ಸಾಧ್ಯ ಮಾಡಿತು. ಆದರೆ ಆ ರೀತಿಯ ಬದ್ಧತೆ ಮತ್ತು ಭೂ ರಹಿತರ ಬಗೆಗಿನ ಕಾಳಜಿ ಈಗಿನ ಸರ್ಕಾರಗಳಿಗೆ ಇದೇಯೇ ಎನ್ನುವುದು ದೊಡ್ಡ ಪ್ರಶ್ನೆಯಾಗಿದೆ.

ಇದಲ್ಲದೆ ದೇವನೂರು ದಲಿತರ ಭೂಮಿ ಹಕ್ಕಿನ ಹೋರಾಟ ಅರಣ್ಯ ಭೂಮಿ ಹಕ್ಕಿನ ಹೋರಾಟಗಳು ಕೂಡ ರಾಜ್ಯದಲ್ಲಿ ನಡೆದಿದ್ದು, ರಾಜ್ಯದ ಬಹುತೇಕ ದಲಿತ ಸಮುದಾಯ ಭೂರಹಿತವಾಗಿದೆ. ಹಳ್ಳಿಗಳಲ್ಲಿರುವ, ಸರ್ಕಾರದ ಬಳಿ ಉಳಿದಿರುವ ಗೋಮಾಳ, ಖರಾಬು, ಸೇಂದಿವನ ಸೇರಿದಂತೆ ಇತರ ಭೂಮಿಯನ್ನು ದಲಿತ ಸಮುದಾಯದ ಭೂ ರಹಿತರಿಗೆ ಹಂಚಬೇಕು ಎನ್ನುವುದೇ ದೇವನೂರು ದಲಿತ ಭೂಮಿ ಹೋರಾಟದ ಮುಖ್ಯ ಭೂಮಿಕೆಯಾಗಿತ್ತು. ಈಗಲೂ ಕೂಡ ಕಳೆದ 40 ವರ್ಷಗಳಿಂದ ಹೋರಾಡುತ್ತಿರುವ ಬಗರ್ ಹುಕುಂ ಸಾಗುವಳಿದಾರರು, ಭೂಮಿ ಮತ್ತು ವಸತಿ ರಹಿತರು ಬಹುತೇಕ ದಲಿತರು, ಹಿಂದುಳಿದ ವರ್ಗದವರೇ ಆಗಿದ್ದು, ಅವರಿಗೆ ಈವರೆಗೂ ತುಂಡು ಭೂಮಿಯ ಹಂಚಿಕೆ ಸಾಧ್ಯವಾಗಿಲ್ಲ ಎನ್ನುವುದೇ ದೊಡ್ಡ ವಿಪರ್ಯಾಸ.

ಚಿತ್ರದುರ್ಗದಲ್ಲಿ ನಡೆಯುತ್ತಿರುವ ಅನಿರ್ದಿಷ್ಟಾವಧಿಯ ಭೂ ರಹಿತರ ಹೋರಾಟಕ್ಕೆ ಅನೇಕ ರೀತಿಯ ಸಂಘ-ಸಂಸ್ಥೆಗಳು ಸೇರಿದಂತೆ ಬಹುತೇಕ ನಿರಂತರ ಬೆಂಬಲ ವ್ಯಕ್ತವಾಗುತ್ತಿದೆ. ಹೋರಾಟ ಹನ್ನೊಂದನೇ ದಿನಕ್ಕೆ ಕಾಲಿಟ್ಟಿದ್ದರೂ ಕೂಡ ಸರ್ಕಾರದ ಯಾವುದೇ ಜನಪ್ರತಿನಿಧಿಗಳಾಗಲಿ, ಅಧಿಕಾರಿಗಳಾಗಲೀ ಅವರಿಗೆ ಯಾವುದೇ ಭರವಸೆಯ ಕ್ರಮ ಕೈಗೊಂಡಿಲ್ಲವೆಂಬ ಆಕ್ರೋಶ ವ್ಯಕ್ತವಾಗಿದೆ.‌

ಹೋರಾಟದಲ್ಲಿ ಪಾಲ್ಗೊಂಡ ಚಿತ್ರದುರ್ಗ ಜಿಲ್ಲೆಯ ಬೆಟ್ಟದ ನಾಗೇನಹಳ್ಳಿಯ ಪಾಲಪ್ಪ ಮಾತನಾಡಿ, “ನನ್ನ ತಂದೆಯ ಕಾಲದಿಂದಲೂ ನಾವು ಸರ್ವೇ ನಂಬರ್ 129ರಲ್ಲಿ ಮೂರು ಎಕರೆ ಜಮೀನು ಉಳುಮೆ ಮಾಡುತಿದ್ದೇವೆ. ಈವರೆಗೂ ಹಲವಾರು ಬಾರಿ ಅರ್ಜಿ ಸಲ್ಲಿಸಿದರೂ ಸಾಗುವಳಿ ಹಕ್ಕುಪತ್ರ ಮಂಜೂರು ಮಾಡಿಲ್ಲ. ಕಚೇರಿಗಳಿಗೆ ಅಲೆದು ಅಲೆದು ಸಾಕಾಗಿದೆ. 50-60 ವರ್ಷಗಳಿಂದಲೂ ಉಳುಮೆ ಮಾಡುತ್ತಿರುವ ಹೊಲದ ಹಕ್ಕುಪತ್ರವನ್ನು ನೀಡುತ್ತಿಲ್ಲ” ಎಂದು ಅಳಲು ವ್ಯಕ್ತಪಡಿಸಿದ್ದಾರೆ.

ಭೂಮಿ ವಂಚಿತರ ಹೋರಾಟ 1

ಇದೇ ವೇಳೆ ಚಿತ್ರದುರ್ಗದಲ್ಲಿ ನಡೆಯುತ್ತಿರುವ ಹೋರಾಟಗಾರರು ಕಾಂಗ್ರೆಸ್ ಕಚೇರಿಗೆ ಮುತ್ತಿಗೆ ಹಾಕಿ, ಆಡಳಿತ ಪಕ್ಷದ ಪದಾಧಿಕಾರಿಗಳು ಹಾಗೂ ಪಕ್ಷ…. 10 ದಿನ ಕಳೆದಿದ್ದರೂ ಸರ್ಕಾರ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಜಿಲ್ಲೆಯಲ್ಲಿ ನಾಲ್ಕು ಜನ ಶಾಸಕರು ಮತ್ತು ಸರ್ಕಾರವಿದ್ದರೂ ಈವರೆಗೂ ನಮ್ಮ ಹೋರಾಟದ ಬಗ್ಗೆ ತುಟಿ ಬಿಚ್ಚಿಲ್ಲ. ಹೋರಾಟದ ಬಗ್ಗೆ ನಿಮ್ಮ ನಿಲುವೇನು? ಎಂಬುದನ್ನು ತಿಳಿಸಬೇಕು ಎಂದು ಆಗ್ರಹಿಸಿದ್ದಾರೆ.

2023ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪ್ರಚಾರದ ವೇಳೆ ಭೂಹೀನರಿಗೆ ಹಕ್ಕುಪತ್ರ, ಸಾಗುವಳಿದಾರರ ಸಮಸ್ಯೆಗೆ ಪರಿಹಾರ, ದಲಿತರು ಮತ್ತು ಹಿಂದುಳಿದವರಿಗೆ ಭೂಹಕ್ಕು ನೀಡುವುದು ಸೇರಿದಂತೆ ಇತ್ಯಾದಿ ವಿಷಯಗಳನ್ನು ಪ್ರಸ್ತಾಪಿಸಿತ್ತು. ಬಡ ಮತ್ತು ಹಿಂದುಳಿದ ಸಮುದಾಯಗಳಿಗೆ ಸಾಮಾಜಿಕ ನ್ಯಾಯ ಆಧಾರಿತ ಯೋಜನೆ, ಭೂಮಿ ಮತ್ತು ಹಕ್ಕು ದಾಖಲೆಗಳಿಗೆ ಸಂಬಂಧಿಸಿದ ಸುಧಾರಣೆಗಳ ಭರವಸೆ ನೀಡಿದ ಕಾಂಗ್ರೆಸ್ ಅಧಿಕಾರಕ್ಕೆ ಬಂದು ಮೂರು ವರ್ಷಗಳೇ ಕಳೆದರೂ ಈವರೆಗೂ ಬಗರ್ ಹುಕುಂ ಸಾಗುವಳಿದಾರರಿಗೆ ಹಾಗೂ ಭೂರಹಿತರಿಗೆ ಹಕ್ಕುಪತ್ರ ನೀಡಲು ಮೀನಾಮೇಷ ಎಣಿಸುತ್ತಿರುವುದೇಕೆ ಎನ್ನುವುದು ಹೋರಾಟಗಾರರ ಪ್ರಶ್ನೆಯಾಗಿದೆ.

“ಅನೇಕ ವರ್ಷಗಳಿಂದಲೂ ಹೋರಾಟ ಮಾಡುತ್ತ ಬಂದಿದ್ದರೂ, ಭೂಮಿಯ ಮೇಲಿನ ಸಾಗುವಳಿ ಹಕ್ಕುಪತ್ರ ನೀಡಿಲ್ಲ. ಹೊಟ್ಟೆಪಾಡಿಗಾಗಿ ತುಂಡುಭೂಮಿಯಲ್ಲಿ ವ್ಯವಸಾಯ ಮಾಡಿಕೊಂಡು ಜೀವನ ಮಾಡುತ್ತಿದ್ದು, ದಾಖಲೆ ಇಲ್ಲದಿದ್ದರೆ ಅಲ್ಲಿಂದ ಯಾವಾಗ ನಮ್ಮನ್ನ ಹೊರಹಾಕುತ್ತಾರೋ ಎನ್ನುವ ಭಯ ಪ್ರತಿದಿನವೂ ಕಾಡುತ್ತದೆ” ಎಂದು ಸಣ್ಣ ಬಗರ್ ಹುಕುಂ ಸಾಗುವಳಿದಾರರೊಬ್ಬರು ಆತಂಕ ವ್ಯಕ್ತಪಡಿಸಿದರು.

ಪ್ರತಿ ತಾಲೂಕು ಮಟ್ಟದಲ್ಲಿ ಶಾಸಕರನ್ನೊಳಗೊಂಡ ಬಗರ್ ಹುಕುಂ ಸಮಿತಿ ರಚಿಸಿ ಆ ಮೂಲಕ ತಾಲೂಕುವಾರು ಸಾಗುವಳಿದಾರರಿಗೆ ಹಕ್ಕುಪತ್ರ ನೀಡುವ ವ್ಯವಸ್ಥೆಯಿದೆ. ಆದರೆ ಇದನ್ನು ನಿರ್ವಹಿಸುವಲ್ಲಿ ಮೇಲುಸ್ತುವಾರಿ ವಹಿಸುವ ಉಪ ವಿಭಾಗಾಧಿಕಾರಿ ಹಾಗೂ ತಹಶೀಲ್ದಾರರು ಸೇರಿ ಕಂದಾಯ ಇಲಾಖೆಯ ಅಧಿಕಾರಿಗಳ ನಿರ್ವಹಣೆ ಕೊರತೆಯಿಂದಾಗಿ ಈ ಪರಿಸ್ಥಿತಿ ಏರ್ಪಟ್ಟಿದೆ ಎನ್ನುವ ಅನುಮಾನ ವ್ಯಕ್ತವಾಗಿದೆ. ಸರ್ಕಾರ ಬಂದಾಗಿನಿಂದ ಬಗರ್ ಹುಕುಂ ಸಮಿತಿಗಳು ಬಹುತೇಕ ತಾಲೂಕುಗಳಲ್ಲಿ ರಚನೆಯಾಗಿಲ್ಲ. ಈ ಬಗ್ಗೆ ಹಲವು ಆಕ್ರೋಶಗಳು ಕೇಳಿ ಬಂದಿದ್ದರೂ, ಸಮಿತಿ ರಚನೆಗೆ ಕ್ರಮಕ್ಕೆ ಸರ್ಕಾರ ಕ್ರಮ ಕೈಗೊಂಡಿಲ್ಲ.

1978ರಿಂದ ಬಗರ್ ಹುಕುಂ ಸಾಗುವಳಿದಾರರು ರಾಜ್ಯದಲ್ಲಿ ಸಾಗುವಳಿ ಪತ್ರಕ್ಕಾಗಿ ಅರ್ಜಿ ನಮೂನೆ 50, 53, 57ರಲ್ಲಿ ಅರ್ಜಿಗಳನ್ನು ಬೇರೆಬೇರೆ ಸಮಯಗಳಲ್ಲಿ ಸಲ್ಲಿಸಿದ್ದಾರೆ. ಕಳೆದ ವರ್ಷ ಅವುಗಳ ಪರಿಶೀಲನೆ ನಡೆಸಿರುವ ಸರ್ಕಾರ ಶೇಕಡಾ 99ರಷ್ಟು ಲಕ್ಷಾಂತರ ಸಂಖ್ಯೆಯ ಅರ್ಜಿಗಳನ್ನು ತಿರಸ್ಕರಿಸಿದೆ. ಇದಕ್ಕೆ ಸರ್ಕಾರ ಹಲವಡೆ ಭೂಮಿ ಇಲ್ಲ, ಇವರು ಭೂಮಿ ಸಾಗುವಳಿ ಮಾಡುತ್ತಿಲ್ಲ ಎನ್ನುವ ಉಡಾಫೆ ಉತ್ತರಗಳನ್ನು ನೀಡಿದ್ದು, ಮತ್ತೊಂದೆಡೆ ನಾವು ಯಾವುದೇ ಅರ್ಜಿಯನ್ನು ತಿರಸ್ಕಾರ ಮಾಡಿಲ್ಲವೆಂದು ತಿಳಿಸುತ್ತಿದೆ. ಆದರೆ ಅರ್ಜಿಯನ್ನು ವಿಲೇ ಮಾಡುವಲ್ಲಿ ತಿರಸ್ಕರಿಸಿರುವುದು ಬಗರ್ ಹುಕುಂ ಸಾಗುವಳಿದಾರರ ಮತ್ತು ಭೂ ರೈತ ಹೋರಾಟಗಾರರ ಕೆಂಗಣ್ಣಿಗೆ ಗುರಿಯಾಗಿದೆ.

“ಕಂದಾಯ ಇಲಾಖೆಯ ದಾಖಲೆಗಳಲ್ಲಿರುವಂತೆ ರಾಜ್ಯದಲ್ಲಿ 34 ಲಕ್ಷಕ್ಕೂ ಹೆಚ್ಚು ಅಧಿಕ ಬಗರ್ ಹುಕುಂ ಸಾಗುವಳಿ ಅರ್ಜಿ ಸಲ್ಲಿಕೆಯಾಗಿವೆ.‌ ಹೋರಾಟ ನಡೆಸಿರುವ ಚಿತ್ರದುರ್ಗ ಜಿಲ್ಲೆಯಲ್ಲಿ 1990-91ರಲ್ಲಿ ಫಾರಂ 50ರ ಅಡಿ 52,222 ಅರ್ಜಿಗಳ ಪೈಕಿ 19,964 ಸ್ವೀಕೃತಗೊಂಡು ಉಳಿದವನ್ನು ತಿರಸ್ಕರಿಸಲಾಗಿತ್ತು.‌ 1998-99ರಲ್ಲಿ ಫಾರಂ ನಂಬರ್ 53 ಅಡಿ 60,764 ಅರ್ಜಿ ಸಲ್ಲಿಕೆಯಾಗಿದ್ದು 9,120 ಸ್ವೀಕೃತಗೊಂಡು 51,000ಕ್ಕೂ ಹೆಚ್ಚು ಅರ್ಜಿಗಳನ್ನು ತಿರಸ್ಕರಿಸಲಾಗಿದೆ. 2003-04ರಲ್ಲಿ ಪಡೆದ ಫಾರಂ ನಂಬರ್ 57ರ ಆನ್‌ಲೈನ್‌ ಅರ್ಜಿಗಳಲ್ಲಿ 76,000ಕ್ಕೂ ಅಧಿಕ ಅರ್ಜಿಗಳು ಸಲ್ಲಿಕೆಯಾಗಿದ್ದು, ಇವುಗಳ ಬಗ್ಗೆ ಜಿಲ್ಲೆಯಲ್ಲಿ ಯಾವುದೇ ಕ್ರಮ ಕೈಗೊಂಡಿಲ್ಲ. ಅಲ್ಲದೆ ಎ ಮತ್ತು ಬಿ ಪಟ್ಟಿ ಎಂದು ವಿಂಗಡಿಸಲಾಗಿದ್ದು , ನಿಯಮಗಳು ಬೇರೆ ಬೇರೆಯಾಗಿವೆ. ಸಲ್ಲಿಕೆಯಾದ ಅರ್ಜಿಗಳಲ್ಲಿ 68ರಷ್ಟು ಅರ್ಜಿಗಳು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಭೂ ರಹಿತರಿಗೆ ಸೇರಿವೆ” ಎಂದು ಹೋರಾಟಗಾರ ಬೋರಯ್ಯ ಮಾಹಿತಿ ನೀಡಿದರು.‌

“ರಾಜ್ಯದಲ್ಲಿ ಹಲವಾರು ವರ್ಷಗಳಿಂದ ಬಗರ್ ಹುಕುಂ ಸಾಗುವಳಿದಾರರಿಗೆ ಸಾಗುವಳಿ ಪತ್ರ ನೀಡಲು ಕ್ರಮ ಕೈಗೊಳ್ಳುತ್ತಿಲ್ಲ. ಅನೇಕ ಹೊಸ ಕಾನೂನು ಕ್ರಮಗಳನ್ನು ತಂದು ಸಾಗುವಳಿದಾರರನ್ನು ಒಕ್ಕಲೆಬ್ಬಿಸುತ್ತಿದ್ದಾರೆ. ಫಾರಂ ನಂ-50, 53 ರಲ್ಲಿ ಅರ್ಜಿ ತಿರಸ್ಕೃತವಾದರೆ ಉಪವಿಭಾಗಾಧಿಕಾರಿಗಳಿಗೆ ಮೇಲ್ಮನವಿ ಹೋಗಬಹುದಿತ್ತು. ಆದರೆ ಫಾರಂ ನಂಬರ್ 57ರ ಪ್ರಕಾರ ಎ ಮತ್ತು ಬಿ ಎಂದು ಪಟ್ಟಿ ಮಾಡಿದ್ದು, ಇಲ್ಲಿ ತಿರಸ್ಕೃತಗೊಂಡರೆ ಉಚ್ಚ ನ್ಯಾಯಾಲಯ ಅಥವಾ ಕೆಎಟಿಗೆ ಮೇಲ್ಮನವಿ ಹೋಗಬೇಕು” ಎಂದು ಅಸಮಾಧಾನ ವ್ಯಕ್ತಪಡಿಸಿದರು.‌

ಉಪವಿಭಾಗಾಧಿಕಾರಿಗಳಿಗೇ ಮೇಲ್ಮನವಿ ಹೋಗಲು ಗೊತ್ತಿಲ್ಲದ ಅವಿದ್ಯಾವಂತ ಬಗರ್ ಹುಕುಂ ಸಾಗುವಳಿದಾರರು ಹಾಗೂ ದಲಿತರಿಗೆ ಹೈಕೋರ್ಟ್ ಅಥವಾ ಕೆಎಟಿಗೆ ಮೇಲ್ಮನವಿ ಹೋಗುವುದು ಕನಸಿನ ಮಾತಾಗಿದೆ.‌ ಈ ನಿಯಮಗಳಿಗೆ ಮಾರ್ಪಾಡು ತರಬೇಕು. ಜಿಲ್ಲಾಧಿಕಾರಿಗಳು ಈ ಕುರಿತು ಮಾಹಿತಿ ನೀಡಿದ್ದು ಯಾವುದೇ ಅರ್ಜಿಗಳನ್ನು ತಿರಸ್ಕರಿಸಿಲ್ಲ ಎಂದಿದ್ದಾರೆ. ಸರ್ಕಾರ ಹಾಗೂ ಕಂದಾಯ ಇಲಾಖೆ ಚಿತ್ರದುರ್ಗ ಸೇರಿದಂತೆ ರಾಜ್ಯದ ಎಲ್ಲಾ ಬಗರ್ ಹುಕುಂ ಸಾಗುವಳಿದಾರರಿಗೆ ಭೂರಹಿತರಿಗೆ ಹಕ್ಕುಪತ್ರ ನೀಡುವ ಭೂಮಿ ಹಂಚುವ ಕೆಲಸ ಮಾಡಬೇಕು” ಎಂದು ಆಗ್ರಹಿಸಿದರು.

ರಾಜ್ಯದಲ್ಲಿ 34 ಲಕ್ಷಕ್ಕೂ ಹೆಚ್ಚು ಅರ್ಜಿಗಳು ಬಾಕಿ ಇದ್ದು, ಇವುಗಳಲ್ಲಿ ಅತಿಹೆಚ್ಚು ಭೂರಹಿತ ದಲಿತರಿದ್ದಾರೆ ಇದ್ದಾರೆ. ರಾಜ್ಯದಲ್ಲಿ ಭೂಮಿ ಹೊಂದಿರುವ ದಲಿತರ ಪ್ರಮಾಣ ಶೇ. 9ರಷ್ಟಿದ್ದು ಇದನ್ನು ಹೆಚ್ಚಿಸಲು ಬಾಕಿ ಉಳಿದಿರುವ ಬಗರ್ ಹುಕುಂ ಸಾಗುವಳಿದಾರರಿಗೆ ಹಕ್ಕುಪತ್ರ ನೀಡಬೇಕು ಎನ್ನುವ ಆಗ್ರಹ ವ್ಯಕ್ತವಾಗಿದೆ.

ಸಮಿತಿಯ ರಾಜ್ಯ ಸಂಚಾಲಕ ಕುಮಾರ್ ಸಮತಳ ಮಾತನಾಡಿ, “ಹಲವು ಬಾರಿ ನೂರಾರು ಸಾಗುವಳಿದಾರರು ಹಗಲು ರಾತ್ರಿ ಲೆಕ್ಕಿಸದೇ ಹೋರಾಟ ಮಾಡುತ್ತಿದ್ದೇವೆ. ಸಾಗುವಳಿದಾರರ ವಿಷಯದಲ್ಲಿ ಕಾಂಗ್ರೆಸ್ ಸರ್ಕಾರ ನಿರ್ಲಕ್ಷ್ಯಧೋರಣೆ ತಳೆದಿದೆ. ನೀವು ಯಾರ ಹಿತಾಸಕ್ತಿಗಳ ಪರವಾಗಿದ್ದೀರಿ” ಎಂದು ಸರ್ಕಾರಕ್ಕೆ ಪ್ರಶ್ನಿಸಿದರು.

“ಬಗ‌ರ್ ಹುಕುಂ ಸಾಗುವಳಿದಾರರ ಸಮಸ್ಯೆಗೆ ಪರಿಹಾರವಾಗಿ ಒನ್‌ಟೈಮ್ ಸೆಟಲ್‌ಮೆಂಟ್ ಜಾರಿ ಮಾಡಬೇಕು. ವಿಲೇವಾರಿ ಹೆಸರಿನಲ್ಲಿ ತಿರಸ್ಕರಿಸಿರುವ ಅರ್ಜಿಗಳನ್ನು ಮರು ಪರಿಶೀಲಿಸಬೇಕು. ಅರಣ್ಯ ಕಾಯ್ದೆಯಡಿ ಅರಣ್ಯವಾಸಿಗಳಿಗೆ ಭೂಮಿ ಹಕ್ಕು ಕೊಡಬೇಕು ಎಂದು ಈಗಾಗಲೇ ಸರ್ಕಾರದ ಮುಂದೆ ಮನವಿ ಸಲ್ಲಿಸಿದ್ದೇವೆ. ಆದರೆ, ಸರ್ಕಾರದ ಕಡೆಯಿಂದ ಯಾವುದೇ ಸ್ಪಂದನೆ ಇಲ್ಲ” ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಇದನ್ನೂ ಓದಿದ್ದೀರಾ? ಪ್ರಜಾಪ್ರಭುತ್ವದ ಕಗ್ಗೊಲೆ: ಮತದಾನದ ಹಕ್ಕು ಮತ್ತು ಸ್ಥಳೀಯ ಆಡಳಿತ ಪ್ರತಿನಿಧಿತ್ವದ ಮೇಲೆ ದಾಳಿ

“ಸರ್ಕಾರ ಅನಗತ್ಯ ವಿಳಂಬ ಮಾಡದೇ ಭೂ ಕಂದಾಯ ಕಾನೂನಿಗೆ ತಿದ್ದುಪಡಿ ಮಾಡಿ ಬಡಜನರಿಗೆ ಭೂಮಿ ಹಕ್ಕು ಕೊಡಬೇಕು. ಸಾಗುವಳಿ ಚೀಟಿ ಹೊಂದಿರುವವರೆಲ್ಲರಿಗೂ ಪಹಣಿ ಒದಗಿಸಬೇಕು. ಅರ್ಜಿ ಸಲ್ಲಿಸಿರುವ ಸಾಗುವಳಿದಾರರನ್ನು ಯಾವ ಭೂಮಿಯಿಂದಲೂ ಒಕ್ಕಲೆಬ್ಬಿಸಬಾರದು” ಎಂದು ಆಗ್ರಹಿಸಿದರು.

ಬಿಹಾರದಲ್ಲಿ 2025ರಲ್ಲಿ ಅದಾನಿ ಕಂಪೆನಿ ವಿದ್ಯುತ್ ಯೋಜನೆಗೆ 1020 ಎಕರೆ, ಆಂಧ್ರದಲ್ಲಿ ಐಟಿ ಸೆಮಿಕಂಡಕ್ಟರ್ ಯೋಜನೆಗಾಗಿ ಸಾವಿರಾರು ಎಕರೆ, ಮಹಾರಾಷ್ಟ್ರದಲ್ಲಿ ಎಂಐಡಿಸಿ ಯೋಜನೆಯಡಿ ಕೈಗಾರಿಕೆ ಸ್ಥಾಪನೆಗೆ ಕೇವಲ ಒಂದು ರೂಪಾಯಿ ಪ್ರತಿ ಎಕರೆಗೆ ಟೋಕನ್ ಅಡಿಯಲ್ಲಿ ಭೂಮಿ ನೀಡಲಾಗಿದೆ ಎಂದು ಸುದ್ದಿಯಾಗಿತ್ತು. ಕರ್ನಾಟಕದಲ್ಲಿಯೂ ಕೂಡ ಹುಬ್ಬಳ್ಳಿಯ ಇನ್ಫೋಸಿಸ್ ಘಟಕಕ್ಕೆ ಮಾರುಕಟ್ಟೆ ಬೆಲೆಗಿಂತ ಶೇಕಡ 80ರಷ್ಟು ಕಡಿಮೆ ಹಣಕ್ಕೆ ಭೂಮಿ ನೀಡಲಾಗಿದೆ ಎನ್ನುವ ಆರೋಪ ಕೇಳಿಬಂದಿತ್ತು. ಸರ್ಕಾರಗಳು ತಮ್ಮಲ್ಲಿರುವ ಭೂಮಿಯನ್ನು ಗುರುತಿಸಿ ಕೈಗಾರಿಕೆಗಳಿಗೆ ಹಂಚಲು ಉದ್ಯೋಗ ಸೃಷ್ಟಿ, ಅಭಿವೃದ್ಧಿ ಹಾಗೂ ಹೂಡಿಕೆ ನೆಪವೊಡ್ಡಿ ಈ ರೀತಿಯ ಕ್ರಮಗಳನ್ನು ಕೈಗೊಳ್ಳುತ್ತವೆ. ಆದರೆ ಭೂ ರಹಿತರಿಗೆ ಭೂಮಿ ಹಂಚಲು ತಮ್ಮ ಬಳಿ ಭೂಮಿ ಇಲ್ಲವೆಂದು ತೋರಿಸಿಕೊಳ್ಳುತ್ತವೆ. ಹೀಗಾಗಿ ಹಲವು ರೈತ ಸಾಗುವಳಿದಾರರ ಪರ, ಭೂಮಿ ಮತ್ತು ವಸತಿ ರಹಿತರ ಪರವಾಗಿ ಹೋರಾಟ ಮಾಡುವ ಹೋರಾಟಗಾರರು ಹಾಗೂ ಸಂಘಟನೆಗಳು ʼರೈತನಿಗೆ ಭೂಮಿ ಸಿಗುವುದಿಲ್ಲ; ಆದರೆ ಕಂಪೆನಿಗಳಿಗೆ ಸಾವಿರಾರು ಎಕರೆ ಭೂಮಿ ರಿಯಾಯಿತಿ ದರದಲ್ಲಿ ಸಿಗುತ್ತದೆ ಯಾಕೆʼ ಎಂದು ಪ್ರಶ್ನಿಸಿದ್ದಾರೆ.

ರಾಜ್ಯದಲ್ಲಿ ದಲಿತ ಮತ್ತು ಹಿಂದುಳಿದ ವರ್ಗಗಳ ಭೂರಹಿತರು ಹೆಚ್ಚಾಗಿದ್ದಾರೆ. ರಾಜ್ಯದಲ್ಲಿ ಬಾಕಿ ಇರುವ 34 ಲಕ್ಷಕ್ಕೂ ಹೆಚ್ಚು ಅಧಿಕ ಅರ್ಜಿಗಳಲ್ಲಿ ಶೇ.68ರಿಂದ ಶೇ.74ರಷ್ಟು ದಲಿತರ ಅರ್ಜಿಗಳಿವೆ ಎನ್ನುವ ಮಾಹಿತಿ ಇದೆ. ಎಲ್ಲೆಡೆ ಜಿಲ್ಲಾ, ತಾಲೂಕು ಇಲಾಖೆಯ ಕಚೇರಿಗಳ ಮುಂದೆ ಸಾಗುವಳಿದಾರರ ಹೋರಾಟ ನಡೆಯುತ್ತಿದೆ. ಇದರ ಭಾಗವಾಗಿ ಚಿತ್ರದುರ್ಗದಲ್ಲಿ ನಡೆದಿದ್ದ ಬೃಹತ್ ಸಾಗುವಳಿದಾರರ ಹೋರಾಟ 11 ದಿನಕ್ಕೆ ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ. ಸಮಾಜವಾದಿ ಎಂದು ಹೇಳಿಕೊಳ್ಳುವ ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೇತೃತ್ವದ ರಾಜ್ಯ ಸರ್ಕಾರ ಮತ್ತು ಕಂದಾಯ ಇಲಾಖೆಗೆ ನಿಜವಾಗಿಯೂ ಭೂರಹಿತರ ಬಗ್ಗೆ ಕಳಕಳಿ ಇದ್ದರೆ ಬಾಕಿ ಉಳಿದಿರುವ ಬಗರ್ ಹುಕುಂ ಸಾಗುವಳಿದಾರರ ಭೂ ರಹಿತರ ಅರ್ಜಿಗಳಿಗೆ ಉತ್ತಮ ರೀತಿಯಲ್ಲಿ ಸ್ಪಂದಿಸಿ ಭೂಮಿಯ ಹಕ್ಕುಪತ್ರ ನೀಡುವ ಮೂಲಕ ಸಕಾರಾತ್ಮಕವಾಗಿ ಸ್ಪಂದಿಸಬೇಕಿದೆ. ಈ ಮೂಲಕ ಮತ್ತೊಂದು ಕರ್ನಾಟಕದ ಭೂ ಸುಧಾರಣೆಗೆ ಕ್ರಮ ಕೈಗೊಳ್ಳಬೇಕಿದೆ. ಇಂತಹ ಗಟ್ಟಿ ನಿರ್ಧಾರ ಕೈಗೊಂಡಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕಂದಾಯ ಸಚಿವರು ಮತ್ತೊಬ್ಬ ದೇವರಾಜ ಅರಸು ಎನಿಸಿಕೊಳ್ಳುವುದರಲ್ಲಿ ಸಂಶಯವಿಲ್ಲ.

WhatsApp Image 2025 11 17 at 5.21.38 PM
ವಿನಾಯಕ್ ಚಿಕ್ಕಂದವಾಡಿ
+ posts

ದಾವಣಗೆರೆ, ಚಿತ್ರದುರ್ಗ ಜಿಲ್ಲಾ ಸಂಯೋಜಕರು

ಪೋಸ್ಟ್ ಹಂಚಿಕೊಳ್ಳಿ:

ವಿನಾಯಕ್ ಚಿಕ್ಕಂದವಾಡಿ
ವಿನಾಯಕ್ ಚಿಕ್ಕಂದವಾಡಿ
ದಾವಣಗೆರೆ, ಚಿತ್ರದುರ್ಗ ಜಿಲ್ಲಾ ಸಂಯೋಜಕರು

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಭದ್ರಾವತಿಯ VISL ಎಜಿಎಂ ಗೋವಿಂದರಾಜು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ!

ಶಿವಮೊಗ್ಗ ಜಿಲ್ಲೆಯ ಭದ್ರಾವತಿಯಲ್ಲಿ ಬೆಚ್ಚಿಬೀಳಿಸುವ ಘಟನೆ ನಡೆದಿದ್ದು, VISL ಸಂಸ್ಥೆಯಲ್ಲಿ ಎಜಿಎಂ...

ಸುಪ್ರೀಂ ಕೋರ್ಟ್’ನ ನಕಲಿ ಆದೇಶ ಸೃಷ್ಟಿಸಿ ಜೀವಾವಧಿ ಕೈದಿ ಬಿಡುಗಡೆ: ಕಾರಾಗೃಹ ಡಿಐಜಿ ಸೋಮಶೇಖರ್ ಬಂಧನ

ನಕಲಿ ಸುಪ್ರೀಂ ಕೋರ್ಟ್ ಆದೇಶವನ್ನು ಬಳಸಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದ ಕೈದಿಯೊಬ್ಬನನ್ನು...

ಬೀದರ್‌ | ಅ.7ರಂದು ಆಣದೂರ ಆರೋಗ್ಯ ಕೇಂದ್ರದಲ್ಲಿ ಸಾಮೂಹಿಕ ರಕ್ತದಾನ ಶಿಬಿರ

ಬೀದರ್‌ ತಾಲೂಕಿನ ಆಣದೂರ ಪ್ರಾಥಮಿಕ ಆರೋಗ್ಯ ಕೇಂದ್ರದ ಆವರಣದಲ್ಲಿ ಅ.7ರಂದು ಬೆಳಿಗ್ಗೆ...

ಧಾರವಾಡ | ಪಶ್ಚಿಮ ಪದವೀಧರ ಕ್ಷೇತ್ರದಲ್ಲಿ ಕಾಂಗ್ರೆಸ್ ಶಕ್ತಿ ಪ್ರದರ್ಶನ

ಕರ್ನಾಟಕ ಪಶ್ಚಿಮ ಪದವೀಧರರ ಮತಕ್ಷೇತ್ರದ ವಿಧಾನ ಪರಿಷತ್ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿ...