ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಪ್ರಚಾರ ಅಬ್ಬರದಿಂದ ಸಾಗುತ್ತಿದೆ. ರಾಜ್ಯದ ಬಹುತೇಕ ಮಂತ್ರಿಗಳು, ಆಡಳಿತ ಮತ್ತು ವಿರೋಧ ಪಕ್ಷದ ಘಟಾನುಘಟಿ ನಾಯಕರು ತೀವ್ರ ಪ್ರಚಾರ ನಡೆಸುತ್ತಿದ್ದಾರೆ. ಆದರೆ ರಾಜ್ಯದ ಪ್ರಮುಖ ಸಮುದಾಯಗಳಲ್ಲಿ ಒಂದಾದ ವಾಲ್ಮೀಕಿ ಸಮುದಾಯದ ರಾಜ್ಯಮಟ್ಟದ ನಾಯಕರು ಪ್ರಚಾರ ಕಣದಲ್ಲಿ ಕಾಣಿಸದಿರುವುದು ಕುತೂಹಲಕ್ಕೆ ಕಾರಣವಾಗಿದೆ.
ಕಾಂಗ್ರೆಸ್ ಪಕ್ಷದಲ್ಲಿ ಸಿಎಂ ಸಿದ್ದರಾಮಯ್ಯನವರ ಆಪ್ತ ಅಹಿಂದ ನಾಯಕರಾಗಿ ಗುರುತಿಸಿಕೊಂಡ ಮಾಜಿ ಸಚಿವ ಕೆ ಎನ್ ರಾಜಣ್ಣ ಸೇರಿದಂತೆ ವಾಲ್ಮೀಕಿ ಸಮುದಾಯದ ಹಿರಿಯ ನಾಯಕರು ಈವರೆಗೆ ಪ್ರಚಾರದಲ್ಲಿ ಭಾಗವಹಿಸಿಲ್ಲ. ಬಿಜೆಪಿಯಲ್ಲೂ ಪರಿಸ್ಥಿತಿ ಭಿನ್ನವಾಗಿಲ್ಲ. ಬಿಜೆಪಿ ಅಭ್ಯರ್ಥಿ ವಾಲ್ಮೀಕಿ ಸಮುದಾಯದ ಶ್ರೀನಿವಾಸ್ ದಾಸ ಕರಿಯಪ್ಪ ಅವರಾಗಿದ್ದರೂ, ಸಮುದಾಯದ ರಾಜ್ಯಮಟ್ಟದ ನಾಯಕರು ಬಹಿರಂಗವಾಗಿ ಪ್ರಚಾರಕ್ಕೆ ಕಾಣಿಸಿಕೊಂಡಿಲ್ಲ.
ದಾವಣಗೆರೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಮರ್ಥ್ ಶಾಮನೂರು ಸೇರಿದಂತೆ ಒಟ್ಟು 25 ಅಭ್ಯರ್ಥಿಗಳು ಸ್ಪರ್ಧಿಸುತ್ತಿದ್ದಾರೆ. ಟಿಕೆಟ್ ಹಂಚಿಕೆಯ ವೇಳೆ ಅಲ್ಪಸಂಖ್ಯಾತರಿಗೆ ಟಿಕೆಟ್ ನೀಡಬೇಕೆಂಬ ಬೇಡಿಕೆ ಬಲವಾಗಿತ್ತು. ಪ್ರತಿಭಟನೆಗಳು ನಡೆದು, ಬಂಡಾಯ ಅಭ್ಯರ್ಥಿಗಳು ನಾಮಪತ್ರವನ್ನೂ ಸಲ್ಲಿಸಿದ್ದರು. ಇದೀಗ ಕೆಲವರನ್ನು ಮನವೊಲಿಸಲಾಗಿದ್ದರೂ, ಕೆಲವು ಬಂಡಾಯ ಅಭ್ಯರ್ಥಿಗಳು ಇನ್ನೂ ಕಣದಲ್ಲಿದ್ದಾರೆ.
ಕಾಂಗ್ರೆಸ್ ಪರ ವೀರಶೈವ-ಲಿಂಗಾಯತ, ಕುರುಬ, ಮುಸ್ಲಿಂ ಮುಖಂಡರು ಸೇರಿದಂತೆ ಅನೇಕ ರಾಜ್ಯ-ರಾಷ್ಟ್ರಮಟ್ಟದ ನಾಯಕರು ಪ್ರಚಾರ ನಡೆಸುತ್ತಿದ್ದಾರೆ. ಸಿಎಂ ಸಿದ್ದರಾಮಯ್ಯ ನಾಲ್ಕು ಬಾರಿ ಆಗಮಿಸಿ ನಾಲ್ಕು ದಿನ ಪ್ರಚಾರ ಮಾಡಿದ್ದಾರೆ. ಡಿಸಿಎಂ ಡಿ.ಕೆ. ಶಿವಕುಮಾರ್ ಪ್ರತಿ ಎರಡು ದಿನಕ್ಕೊಮ್ಮೆ ಬಂದು ಸಭೆ-ಕಾರ್ಯಕ್ರಮಗಳನ್ನು ಯೋಜಿಸುತ್ತಿದ್ದಾರೆ. ಆದರೆ ಕ್ಷೇತ್ರದಲ್ಲಿ 20,000ಕ್ಕೂ ಹೆಚ್ಚು ಮತದಾರರನ್ನು ಹೊಂದಿರುವ ವಾಲ್ಮೀಕಿ ಸಮುದಾಯದ ಪ್ರಮುಖ ನಾಯಕರು ಇದುವರೆಗೆ ಕಾಣಿಸಿಕೊಳ್ಳದಿರುವುದಕ್ಕೆ ಕಾರಣವೇನು? ಕಾಂಗ್ರೆಸ್‌ಗೆ ವಾಲ್ಮೀಕಿ ಸಮುದಾಯದ ವೋಟುಗಳು ಬೇಡವೇ? ಎಂಬುದು ಸ್ಥಳೀಯ ವಾಲ್ಮೀಕಿ ಮುಖಂಡರಲ್ಲಿ ಅಚ್ಚರಿ ಹುಟ್ಟುಹಾಕಿದೆ.
ಕಾಂಗ್ರೆಸ್‌ನಲ್ಲಿ ಮುಸ್ಲಿಂ ಅಸಮಾಧಾನವನ್ನು ಎದುರಿಸಲು ಸಚಿವ ಜಮೀರ್ ಅಹ್ಮದ್ ಭಾನುವಾರ ಕೇರಳದಿಂದ ಬಂದು ಬೆಂಬಲ ವ್ಯಕ್ತಪಡಿಸಿದ್ದಾರೆ. ವಾಲ್ಮೀಕಿ ಸಮುದಾಯದ ಹಿರಿಯರು ರಾಜ್ಯಮಟ್ಟದ ನಾಯಕರಾದ ಕೆ.ಎನ್. ರಾಜಣ್ಣ, ಸತೀಶ್ ಜಾರಕಿಹೊಳಿ ಸೇರಿದಂತೆ ಪ್ರಬಲರು ಚುನಾವಣೆ ಘೋಷಣೆಯ ನಂತರ ಕ್ಷೇತ್ರಕ್ಕೆ ಭೇಟಿ ನೀಡಿಲ್ಲ. ಸತೀಶ್ ಜಾರಕಿಹೊಳಿ ಬಾಗಲಕೋಟೆ ಉಪಚುನಾವಣೆಯ ಉಸ್ತುವಾರಿ ವಹಿಸಿರುವುದು ಒಂದು ಕಾರಣವಾಗಿರಬಹುದು ಎಂದು ಹೇಳಲಾಗುತ್ತಿದೆ. ವಿಜಯನಗರ-ಬಳ್ಳಾರಿ ಜಿಲ್ಲೆಯ ವಾಲ್ಮೀಕಿ ನಾಯಕರೂ ಸಹ ಕಡಿಮೆ ಕಾಣಿಸಿಕೊಂಡಿದ್ದಾರೆ. ಸಂಸದ ತುಕಾರಾಂ, ಕಂಪ್ಲಿ ಗಣೇಶ್, ಕೂಡ್ಲಿಗಿ ಶಾಸಕ ಶ್ರೀನಿವಾಸ್ ಮುಂತಾದವರು ಪ್ರಚಾರದಲ್ಲಿ ಗೈರುಹಾಜರಾಗಿದ್ದಾರೆ.
ಮಾಜಿ ನಗರಸಭಾ ಅಧ್ಯಕ್ಷ ವೀರಣ್ಣ, ʼಪ್ರಚಾರದಲ್ಲಿ ಸ್ಥಳೀಯ ನಾಯಕರು ಇದ್ದಾರೆ. ಆದರೆ ರಾಜ್ಯದ ಹಿರಿಯರು ಕೂಡ ಗಮನಿಸಬೇಕುʼ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಬಿಜೆಪಿ ಅಭ್ಯರ್ಥಿ ವಾಲ್ಮೀಕಿ ಸಮುದಾಯಕ್ಕೆ ಸೇರಿದ್ದರಿಂದ ಮತಗಳು ಅತ್ತ ಹೋಗುತ್ತವೆ ಎಂಬ ಆತಂಕವೇ? ಹಾಗಾಗಿ ವಾಲ್ಮೀಕಿ ಸಮುದಾಯವನ್ನು ನಿರ್ಲಕ್ಷಿಸಲಾಗುತ್ತಿದೆಯೇ ಎಂಬ ಪ್ರಶ್ನೆ ಸ್ಥಳೀಯ ಸಮುದಾಯದಲ್ಲಿ ಮೂಡಿದೆ. ಅಲ್ಲದೆ ಬಿಜೆಪಿಯಲ್ಲಿಯೂ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಒಂದು ದಿನ ಕಾಣಿಸಿಕೊಂಡರು, ಮಾಜಿ ಉಪಮುಖ್ಯಮಂತ್ರಿ ಶ್ರೀರಾಮುಲು ಹೆಚ್ಚು ಕಾಣಿಸಿಕೊಳ್ಳಲಿಲ್ಲ.
ಇದನ್ನೂ ಓದಿದ್ದೀರಾ? ದಾವಣಗೆರೆ ಉಪಸಮರ: ಜಮೀರ್ ಸುದ್ದಿಗೋಷ್ಠಿ ಏಕತೆಯ ಪ್ರದರ್ಶನವೋ ಅಥವಾ ತಾತ್ಕಾಲಿಕ ಉಪಶಮನವೋ?
ಒಳಮೀಸಲಾತಿ ವರ್ಗೀಕರಣದಲ್ಲಿ ದಲಿತ ಸಮುದಾಯದ ಅಸಮಾಧಾನವೂ ಈ ಚುನಾವಣೆಯಲ್ಲಿ ಪ್ರಭಾವ ಬೀರಬಹುದು. ದಲಿತ ಎಡಗೈ ಸಮುದಾಯ ಕಾಂಗ್ರೆಸ್ ವಿರುದ್ಧ ಆಕ್ರೋಶಗೊಂಡಿದೆ ಎನ್ನಲಾಗಿದೆ.
ʼಪಕ್ಷಗಳು ಇತರ ಸಮುದಾಯಗಳ ನಾಯಕರನ್ನು ಕರೆಸಿ ಪ್ರಚಾರ ಮಾಡಿಸುತ್ತಿವೆ. ವಾಲ್ಮೀಕಿ ಸಮುದಾಯಕ್ಕೆ ಮಾತ್ರ ಪ್ರಾಶಸ್ತ್ಯ ನೀಡದಿರುವುದು ಏಕೆ?ʼ ಎಂಬ ಮಾತುಗಳು ಕೇಳಿಬರುತ್ತಿವೆ. ಈ ಹಿನ್ನೆಲೆಯಲ್ಲಿ ಕೆ ಎನ್ ರಾಜಣ್ಣ ಪ್ರತಿಕ್ರಿಯಿಸುತ್ತ “ನಾವು ಜಾತಿ ಆಧಾರದಲ್ಲಿ ರಾಜಕಾರಣ ಮಾಡುವುದಿಲ್ಲ. ನನ್ನನ್ನು ಬಾಗಲಕೋಟೆಗೆ ಹೋಗುವಂತೆ ನನಗೆ ಪಕ್ಷ ಹೇಳಿತ್ತು. ಅದರಂತೆ ಅಲ್ಲಿ ಕೆಲಸ ಮಾಡಿ ಬಂದಿದ್ದೇನೆ. ಪಕ್ಷ ಸೂಚಿಸಿದಲ್ಲಿ ದಾವಣಗೆರೆಗೂ ಹೋಗುತ್ತೇನೆ” ಎಂದು ಹೇಳಿದ್ದಾರೆ.
ಈ ಉಪಚುನಾವಣೆಯಲ್ಲಿ ಎರಡೂ ಪ್ರಮುಖ ಪಕ್ಷಗಳು ವಾಲ್ಮೀಕಿ ಸಮುದಾಯದಂತಹ ಪ್ರಮುಖ ವರ್ಗದ ಮತಗಳನ್ನು ಸರಿಯಾಗಿ ಗಣನೆಗೆ ತೆಗೆದುಕೊಳ್ಳದಿದ್ದರೆ, ಅದು ದೀರ್ಘಕಾಲೀನ ರಾಜಕೀಯ ಪರಿಣಾಮ ಬೀರಬಹುದು. ಸಮುದಾಯಗಳ ನಡುವಿನ ಸಮತೋಲನ ಮತ್ತು ಸಾಮಾಜಿಕ ನ್ಯಾಯದ ಮಾತುಗಳನ್ನು ಆಡುವ ಪಕ್ಷಗಳು ತಮ್ಮ ಕಾರ್ಯತಂತ್ರದಲ್ಲಿ ಎಲ್ಲಾ ವರ್ಗಗಳನ್ನು ಸಮಾನವಾಗಿ ಗಮನಿಸುವುದು ಅಗತ್ಯವಾಗಿದೆ. ಇಲ್ಲದಿದ್ದರೆ, ಈ ನಿರ್ಲಕ್ಷ್ಯವು ಮುಂದಿನ ಚುನಾವಣೆಗಳಲ್ಲಿ ಅನಪೇಕ್ಷಿತ ಫಲಿತಾಂಶಗಳಿಗೆ ಕಾರಣವಾಗಬಹುದು.

ವಿನಾಯಕ್ ಚಿಕ್ಕಂದವಾಡಿ
ದಾವಣಗೆರೆ, ಚಿತ್ರದುರ್ಗ ಜಿಲ್ಲಾ ಸಂಯೋಜಕರು




